ಅಂದಿನ ಹುಣ್ಣಿಮೆ ಚಂದಿರ ಎಂದಿಗಿಂತ ರಂಗಾಗಿದ್ದ. ದಿನವಿಡೀ ರಂಗಿನ ಓಕುಳಿಯಾಡಿದ್ದ ಜನ ಹುಣ್ಣಿಮೆಯ ಮುಸ್ಸಂಜೆಯ ವೇಳೆಗೆ ಹೆಜ್ಜೆ ಹಾಕಿದ್ದು ಕಾಡುಮಲ್ಲೇಶ್ವರ ಬಯಲು ರಂಗಮಂದಿರದ ಕಡೆಗೆ. ಪ್ರತಿ ತಿಂಗಳೂ ಹುಣ್ಣಿಮೆಯ ದಿನ ರಂಗಮಂದಿರದಲ್ಲಿ ಸಂಗೀತದ ಮಾಧುರ್ಯ ಹೊನಲಾಗಿ ಹರಿಯುವಂತೆ ಈ ಬಾರಿ ಹೋಳಿಯಂದು ಇಲ್ಲಿ ಹಿಂದೂಸ್ತಾನಿ ಸಂಗೀತ ಕೇಳುಗರಿಗೆ ರಸದೌತಣ ಉಣಿಸಿತ್ತು. ಹೋಳಿಯ ರಂಗಿಗೆ ಸಂಗೀತದ ಗುಂಗು ಬೆಸೆದು ಅದ್ಭುತ ರಸಸಂಜೆ ಅದಾಗಿತ್ತು.
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಮ್ ಸಾರಥ್ಯದಲ್ಲಿ ನಡೆದ ‘ಹುಣ್ಣಿಮೆ ಹಾಡು’ ಕಾರ್ಯಕ್ರಮದಲ್ಲಿ ಈ ಸಲ ಉಸ್ತಾದ್ ಹುಮಾಯೂನ್ ಹರ್ಲಾಪುರ ಅವರ ಗಾಯನ ಸಂಗೀತ ರಸಿಕರ ಮನಸ್ಸನ್ನು ತಂಪುಗೊಳಿಸಿತ್ತು. ಪಂ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಉಸ್ತಾದ್ ಹುಮಾಯೂನ್ ಕೆಲವು ಅಪರೂಪದ ರಾಗಗಳನ್ನು ಹಾಡಿದರು. ಇವರಿಗೆ ಹಾರ್ಮೋನಿಯಂನಲ್ಲಿ ರವೀಂದ್ರ ಬಿ. ಮಳಗಿ, ತಬಲಾದಲ್ಲಿ ಗುರುಸಂಗಪ್ಪ ಹೂಗಾರ್, ಸಿತಾರ್‌ನಲ್ಲಿ ಪ್ರವೀಣ್ ಹೂಗಾರ್ ಮತ್ತು ಸ್ವರಮಂಡಲದಲ್ಲಿ ನಿಶಾದ್ ಹರ್ಲಾಪುರ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ರವಿ ಸಿ. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ‘ನೆಲ-ಜಲ, ಹಸಿರು ಸಂಸ್ಕೃತಿ ಉಳಿಸಿ’ ಎಂಬ ಮಹತ್ತರ ಧ್ಯೇಯವನ್ನು ಹೊತ್ತ ಕಾಡುಮಲ್ಲೇಶ್ವರ ಗೆಳೆಯರ ಬಳಗ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡದ್ದು ನೆರೆದಿದ್ದ ಜನರ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.