ADVERTISEMENT

ರಾಕ್ ಹಬ್ಬ...ಅಬ್ಬಬ್ಬಾ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಅಲ್ಲಿ ಹದಿಹರೆಯದ ಹನ್ನೆರೆಡು ತಂಡಗಳು ಜತೆ ಸೇರಿದ್ದವು. ಅವರ ಕೈಯಲ್ಲಿ ತರಹೇವಾರಿ ಸಂಗೀತ ಉಪಕರಣಗಳು. ಸಂಗೀತ ಬಿಟ್ಟು ಬೇರೇನೂ ಗೊತ್ತಿಲ್ಲ ಎಂಬಂಥ ಮುಖಭಾವ ಅವರದ್ದು. ಧರಿಸಿದ ಬಟ್ಟೆಯಲ್ಲೂ `ನೋ ಮ್ಯೂಸಿಕ್, ನೋ ಲೈಫ್~ ಎಂಬ ಸ್ಲೋಗನ್‌ಗಳು ಸಂಗೀತ ಪ್ರೀತಿಯನ್ನೇ ಬಿಂಬಿಸುತ್ತಿದ್ದವು.

ಇರುವ ಚಿಕ್ಕ ವೇದಿಕೆಯಲ್ಲಿ ತಮ್ಮ ಸಂಗೀತ ಉಪಕರಣಗಳನ್ನು ಹರವಿಕೊಂಡು ಜೋಡಿಸುತ್ತಿರುವ ಅವರ ಪರಿ ನೋಡುಗರಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಬಲಗೈ ಹೆಬ್ಬೆರಳನ್ನು ಮೇಲೆ ಮಾಡಿ, ಹಾಡಲು ತಯಾರು ಎಂಬಂತೆ ಕೈ ಬೆರಳ ಸಂಜ್ಞೆಗಳು ಅವರ ನಡುವೆ ದಾಟಿಕೊಂಡವು.

ನಿಧಾನವಾಗಿ ಶುರುವಾದ ಸಂಗೀತ ಸೇರಿದವರ ಎದೆಯ ಬಡಿತ ಕೂಡ ಕೇಳಿಸದಷ್ಟು ತಾರಕಕ್ಕೆ ಏರಿತು. `ನ್ಯೂ ಏಜ್~ ಎಂದು ಹಾಡುತ್ತಿರುವ ಹುಡುಗ ಅದರಲ್ಲಿಯೇ ತನ್ಮಯನಾದ ರೀತಿ, ಅವನಿಗೆ ಚಪ್ಪಾಳೆ ಮೂಲಕ ಸಹಕಾರ ನೀಡುವ ಸಹಚರರು ಆ ಸಂಜೆಗೆ ವಿಶಿಷ್ಟ ಮೆರುಗು.

ಈ ದೃಶ್ಯ ಕಂಡು ಬಂದಿದ್ದು ಕನ್ನಿಂಗ್‌ಹ್ಯಾಮ್ ರಸ್ತೆಯ ರಿಲಯನ್ಸ್ ಟೈಂ ಔಟ್‌ನಲ್ಲಿ. ರಾಕ್ ಫೆಸ್ಟ್ ಅಂಗವಾಗಿ ರಿಲಯೆನ್ಸ್ ಟೈಂ ಔಟ್ `ಬ್ಯಾಟಲ್ ಆಫ್ ದಿ ಬ್ಯಾಂಡ್~ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ನಗರದ ಹನ್ನೆರಡು ತಂಡಗಳು ಭಾಗವಹಿಸಿದ್ದವು.

ಯುವಜನಾಂಗ ಸಂಗೀತದತ್ತ ಒಲವು ಹರಿಸಬೇಕು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ರಿಲಯನ್ಸ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ತೀರ್ಪುಗಾರ ರಾಕ್ ಹಾಡುಗಾರ ರೋಹಿತ್ ಪ್ರತಿಯೊಬ್ಬರ ಹಾವಭಾವಗಳನ್ನು ಗುರುತಿಸಿ ಅಂಕ ನೀಡುತ್ತಿದ್ದರು. ಶೇಕಡಾ 50ರಷ್ಟು ಅಂಕ ತೀರ್ಪುಗಾರ ನೀಡಿದರೆ, ಉಳಿದದ್ದು ಫೇಸ್‌ಬುಕ್ ಮೂಲಕ ಜನರು ಮತ ನೀಡಬಹುದು. ಆದರೆ ಇದರ ಪರಿವೆಯೇ ಇಲ್ಲದೇ ಸಂಗೀತವೇ ಎಲ್ಲಾ ಎಂಬ ಭಾವದಿಂದ ಹಾಡುತ್ತಿದ್ದರು.

ಇನ್ನೂ ಸರಿಯಾಗಿ ಮೀಸೆ ಮೂಡದ ಹುಡುಗರು ಇರುವ ಚಿಗುರು ಮೀಸೆ, ಗಡ್ಡಕ್ಕೇ ಫ್ರೆಂಚ್ ಶೈಲಿ ನೀಡಿ ಕೈಯಲ್ಲೊಂದು ಗಿಟಾರ್ ಹಿಡಿದುಕೊಂಡು ತಲೆ ಅಡ್ಡಾಡಿಸುವ ಪರಿ ಕೆಲವರಲ್ಲಿ ನಗುವನ್ನೂ ಉಕ್ಕಿಸಿತು. ಹಾಡಿ ಸುಸ್ತಾದ ಅವರು ಹಣೆಯ ಮೇಲಿನ ಬೆವರಿನ ಸಾಲು ಒರೆಸಿಕೊಳ್ಳುತ್ತಾ ಮತ್ತೆ ಸಂಗೀತಕ್ಕೆ ಹಿಂದಿರುಗುತ್ತಿದ್ದ ಉತ್ಸಾಹ ಕಂಡು ನಕ್ಕವರೇ ಭೇಷ್ ಎಂದರು.

ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ಜುಲೈ 26ರಂದು ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದ ಒಂದು ತಂಡ ಮಂತ್ರಿಮಾಲ್‌ನಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಅಲ್ಲಿ ಗೆದ್ದವರು ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.