ಆರೂವರೆಯ ಇಳಿಸಂಜೆಗೆ ಮಹಾತ್ಮ ಗಾಂಧಿ ರಸ್ತೆಗೆ ಎಂಟರಷ್ಟು ಕತ್ತಲು ತುಂಬಿತ್ತು ಮಳೆಮೋಡ. ಎರಡು ಗಂಟೆಯ ಹಾದಿಗೆ ಬಸ್ಸನ್ನು ನಂಬಿದರೆ ಸೋತಂತೆಯೇ ಎಂದು ಧಾವಂತದಿಂದಲೇ ಎಂ.ಜಿ. ರಸ್ತೆ ಪ್ರಿಪೇಯ್ಡ ಸೆಂಟರ್‌ನಲ್ಲಿ ಆಟೊ ಹತ್ತಿ ಕುಳಿತೆ. ಮಳೆ ಸುರಿಯುವುದಕ್ಕೂ ಮುನ್ನ ಮನೆ ಸೇರುವ ತವಕ. ಚಾಲಕರನ್ನು ಮಾತಿಗೆಳೆದು ವಿಶ್ವಾಸಕ್ಕೆ ತೆಗೆದುಕೊಂಡರೆ ನಮ್ಮ ತುರ್ತಿಗೆ ತಕ್ಕಂತೆ ಸಮೀಪದ ಹಾದಿಯಲ್ಲಿ, ವೇಗವಾಗಿ ಹೋಗುವಂತೆ ವಿನಂತಿಸುವುದು ಸುಲಭವಾಗುತ್ತದೆ ಎಂಬುದು ಅನುಭವ. ಹಾಗಾಗಿ ಆಟೊ ಅಂಕಲ್‌ನ ಸೀಟಿನ ಹಿಂಬದಿಯಲ್ಲಿದ್ದ ಚಾಲಕರ ವಿವರ ನೋಡಿಕೊಂಡು ಮಾತಿಗಿಳಿದೆ.
ಎಸ್. ರಮೇಶ್, ಕೆಎಚ್‌ಬಿ ಕಾಲೊನಿ, ಲಾಲ್‌ಬಾಗ್ ಸಿದ್ದಾಪುರ...
`ರಮೇಶ್ ಸರ್, ಎಷ್ಟು ವರ್ಷದಿಂದ ಆಟೊ ಓಡಿಸ್ತಿದ್ದೀರಿ? ತುಂಬಾ ಸೀನಿಯರ್ ಅನ್ಸುತ್ತೆ?~ ಅಂದೆ.
ಆಟೊ ಅಂಕಲ್ ಬಾಳಬಂಡಿಯ ಕಥೆಯೊಂದಿಗೆ ಒಂದಿಷ್ಟು ಅಚ್ಚರಿಗಳನ್ನೂ ಬಿಚ್ಚಿಟ್ಟರು....
`1973ರಲ್ಲಿ ಬೆಂಗಳೂರಿನ ರಸ್ತೆಗೆ ಆಟೊದೊಂದಿಗೆ ಇಳಿದವನು ನಾನು. ಹೇಗೋ ಇಷ್ಟು ವರ್ಷ ಬದುಕು ಸಾಗಿದೆ. ಹ್ಯಾಪಿಯಾಗಿದ್ದೇನೆ ತಾಯಿ. ಕಷ್ಟಪಟ್ಟು ದುಡಿದದ್ದಕ್ಕೆ ದೇವರು ಕೈಬಿಡಲಿಲ್ಲ. ಇನ್ನೇನು ಈ ಡಿಸೆಂಬರ್‌ಗೆ ರಿಟೈರ್ ಆಗ್ತೀನಮ್ಮ. ಆಮೇಲೆ... ಹ್ಹಹ್ಹಹ್ಹ...~
ಆಮೇಲೆ ಏನು? ಇಷ್ಟು ವರ್ಷ ದುಡಿದಿದ್ದೀರಿ. ಹಾಯಾಗಿರಿ ಅಂದೆ.
ನಿಮ್ಗೆ ರೇಕಿ ಗೊತ್ರಮ್ಮಾ? ಇನ್ನೊಬ್ರ ನೋವನ್ನು, ಕಾಯಿಲೆಯನ್ನು ವಾಸಿ ಮಾಡೋ ಟ್ರೀಟ್‌ಮೆಂಟು. ನಾವು ಅದ್ರಲ್ಲಿ ಟ್ರೇನಿಂಗ್ ತಗೊಂಡಿದ್ದೀವಿ. ಇಬ್ರು ಗಂಡು ಮಕ್ಳು ಓದಿದ್ದಾಗಿದೆ. ಸೊಸೆಯಂದ್ರೂ ತುಂಬಾ ಒಳ್ಳೇರು. ನಾನೂ ನನ್ನ ಹೆಂಡ್ರು ಆರೋಗ್ಯವಾಗಿದೀವಿ. ಅವ್ರಿಗೆ ಏನೇನು ಬೇಕೋ ಅದನ್ನೆಲ್ಲ ಮಾಡಿಕೊಟ್ಟಿದ್ದೀನಿ. ಇನ್ನೇನು ಆಗ್ಬೇಕು ಅಲ್ವರಾ? ಅದ್ಕೇ ರಿಟೈರ್ ಆಗೋಣ ಅಂತ...~
ಮಕ್ಕಳು ವೈದ್ಯರು, ಇಂಜಿನಿಯರು, ಎಂಬಿಎ, ಟೆಕ್ಕಿ, ಸ್ವಂತ ಮನೆ ಮಾಡ್ಕೊಂಡೆ, ಇನ್ನೊಂದು ಸೈಟು ಇದೆ ಇತ್ಯಾದಿ ಹೇಳುವ ಚಾಲಕರನ್ನು ಕಂಡಿದ್ದೆ. ಆದರೆ ಈ ಇಳಿವಯಸ್ಸಿನಲ್ಲಿ ವಿಭಿನ್ನ ಅಭಿರುಚಿಯನ್ನು ರೂಡಿಸಿಕೊಂಡದ್ದಕ್ಕೆ ಅವಾಕ್ಕಾದೆ.
`ಅಮ್ಮಾ ನೀವು ರೇಕಿ ನಂಬ್ತೀರೋ ಇಲ್ವೋ ನಾನಂತೂ ಸಕ್ಸಸ್ ಸ್ಟೋರಿ ಹೇಳ್ತೀನಿ ಕೇಳಿ. ನನ್ನ ಸಂಬಂಧಿಕರಿಗೇ ಟ್ರೀಟ್ಮೆಂಟ್ ಕೊಟ್ಟಿದ್ದೀನಿ. ಒಳ್ಳೆದಾದರೂ ಕೆಟ್ಟದಾದ್ರೂ ನಮ್ಮವರಿಗೇ ಆಗಲಿ, ಆಮೇಲೆ ಬೇರೆಯವರ ಮೇಲೆ ಪ್ರಯೋಗ ಮಾಡೋಣ ಅಂತ ಹಾಗೆ ಮಾಡಿದೆ. ನನ್ನ ಹತ್ತಿರದ ಸಂಬಂಧಿ. ಪಕ್ಷವಾತ (ಪಾರ್ಶ್ವವಾಯು) ಆಗಿ ಹಾಸಿಗೆ ಹಿಟ್ಕೊಂಡುಬಿಟ್ಟಿದ್ದ. ಮೂರು ತಿಂಗಳು ಟ್ರೀಟ್ಮೆಂಟ್ ಕೊಟ್ಟೆ. ಈಗ ಎಷ್ಟೋ ವಾಸಿಯಾಗಿದೆ. ಇನ್ನೊಬ್ರು ಕಿಡ್ನಿ ಸ್ಟೋನ್‌ನಿಂದ ಬಳಲುತ್ತಿದ್ದರು. ಡಯಾಲಿಸಿಸ್ ಮಾಡ್ಬೇಕು ಅಂದ್ರು ದೊಡ್ಡಾಸ್ಪತ್ರೇಲಿ. ಎಲ್ಲಿಂದಮ್ಮ ದುಡ್ಡು ತರೋದು? ಆದದ್ದಾಗಲಿ ಅಂತ ರೇಕಿ ಮಾಡ್ದೆ. ನಂಬ್ತೀರೊ ಬಿಡ್ತೀರೊ ಮೇಡಂ ಅದಾದ್ಮೇಲೆ ಟೆಸ್ಟ್ ಮಾಡಿಸಿದ್ವಿ. ಡಯಾಲಿಸಿಸ್ ಏನೂ ಬೇಡ ಅಂದ್ರು. ಅವ್ರಿಗೆ ನೋವೂ ಕಮ್ಮಿ ಆಗಿದೆ...
ಪೇಶೆಂಟ್‌ನ ಹಿಪ್ನಾಟಿಸಂ ಮಾಡ್ಕೊಂಡು ರೇಕಿ ಮಾಡ್ಬೇಕು. ಹಿಪ್ನಾಟಿಸಂ ಕೂಡಾ ಗುರುಗಳು ಕಲಿಸಿದ್ರು. ಡಿಸೆಂಬರ್ ಮೇಲೆ ಮನೇಲೇ ಮಾಡೋಣಾಂತ...
ರಮೇಶ್ ಸರ್, ನೀವು ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದೀರಿ. ನಾನು ನಿಮ್ಮ ಫೋಟೊ ತಗೋತೀನಿ ಅಂದೆ.
`ಅಯ್ಯಯ್ಯೋ ಫೋಟೊಗೀಟೊ ಏನೂ ಬೇಡ್ರವ್ವಾ ತಾಯಿ. ನೀವು ಪೇಪರ‌್ನೋರಾ? ಗೊತ್ತಾಗ್ಲಿಲ್ಲ. ನಮ್ಮ ಪಾಡಿಗೆ ನಾವು ಏನೋ ಕಲ್ತು ಮಾಡ್ಕೊಂಡು ಹೋಗ್ತೀವಮ್ಮ. ಪ್ರಚಾರ ಎಲ್ಲಾ ಬೇಡವ್ವಾ...~
ಇನ್ನೂರು ರೂಪಾಯಿ ಶುಲ್ಕ ಪಡೆದು ಆಟೊ ಅಂಕಲ್ ಆಟೊ ಸ್ಟಾರ್ಟ್ ಮಾಡಿದ್ರು. ಬೆವರು ಕುಡಿದು ಒದ್ದೆಯಾಗಿದ್ದ ಖಾಕಿ ಶರ್ಟು ಬಾಗಿದ ಬೆನ್ನಿಗೆ ಅಂಟಿಕೊಂಡಿತ್ತು. ತಲೆಯನ್ನು ಇನ್ನಷ್ಟು ದೊಡ್ಡದಾಗಿಸಿದ್ದ ಕೂದಲಿಗೆ ಬೆಳಗ್ಗಿನಿಂದಲೂ ಬಾಚಣಿಗೆ ಕಂಡಿರಲಿಲ್ಲವೇನೊ? ಆದರೆ ಸಾಧಿಸುವ ಛಲದ ಮುಂದೆ ಈ ಬಾಹ್ಯನೋಟಕ್ಕೇನು ಬೆಲೆ ಅಲ್ವೇ?
ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು. ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.