ADVERTISEMENT

ರ‌್ಯಾಂಪ್ ಮೇಲೆ ಭಾರತೀಯ ಪರಂಪರೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ರೂಪದರ್ಶಿಗಳೆಂದರೆ ತುಂಡುಡುಗೆ ತೊಟ್ಟು, ಮಾದಕ ನೋಟ ಬೀರುತ್ತಾ ಬರುವರು ಎಂದು ನಿರೀಕ್ಷಿಸಿದ್ದ ಮಂದಿಗೆ ಅಲ್ಲಿ ನಿರಾಸೆಯಾಗಿತ್ತು. ಇಳಿಬಿಟ್ಟ ಆಭರಣ ಖಚಿತ ನೀಳಜಡೆಯ ನಾಗವೇಣಿಯರು, ಸಾಂಪ್ರದಾಯಿಕ ತೊಡುಗೆಯಾದ ಹರಳುರಾಶಿ ಹೊದ್ದಿರುವ ಆಕರ್ಷಕ ಬಣ್ಣಗಳ ಲೆಹಂಗಾ ಧರಿಸಿದ್ದರು. ಈ ಹೊಳಪಿಗೆ ಸೆಡ್ಡು ಹೊಡೆಯುವಂತೆ, ದೊಡ್ಡ ದೊಡ್ಡ ಆಭರಣಗಳನ್ನು ತೊಟ್ಟು  ರ‌್ಯಾಂಪ್ ಮೇಲೆ ಕಾಲಿಟ್ಟ ಲಲನೆಯರು ಮೊದಲ ನೋಟಕ್ಕೆ ಎಲ್ಲರ ಚಿತ್ತ ಸೆಳೆದಿದ್ದರು.

ಇಂತಹ ವಿಶೇಷ ಫ್ಯಾಷನ್ ಶೋ ನಡೆದಿದ್ದು ನಗರದ ಚಾನ್ಸೆರಿ ಪೆವಿಲಿಯನ್ ಹೋಟೆಲ್‌ನಲ್ಲಿ. ಐಡ್ರೀಮ್ಸ ಫ್ಯಾಷನ್ ಸಂಸ್ಥೆ ಹಮ್ಮಿಕೊಂಡಿದ್ದ `ಭಾರತೀಯ ಪರಂಪರೆ' ಹೆಸರಿನ ಫ್ಯಾಷನ್ ಶೋ ಅದಾಗಿತ್ತು.

ಮಂದ ಬೆಳಕಲ್ಲಿ ಮಿರಮಿರನೆ ಹೊಳೆಯುತ್ತಿದ್ದ ಒಡವೆಗಳಂತೂ ರೂಪದರ್ಶಿಯರ ಚೆಲುವು ಕಂಡು ಮುಗುಳ್ನಗುವ ಮಿನುಗುಚುಕ್ಕಿಗಳಾಗಿದ್ದವು. ಒಂದಕ್ಕಿಂತ ಮತ್ತೊಂದು ಸುಂದರ ಎಂಬಂತೆ ಒಡವೆಗಳ ಸುತ್ತಲೇ  ನೆರೆದವರ ನೋಟ ಗಿರಕಿ ಹೊಡೆಯುತ್ತಿದ್ದವು. 

ಲೆಹಂಗಾ ತೊಟ್ಟು ಅಭ್ಯಾಸವೇ ಇಲ್ಲವೇನೋ ಎಂಬಂತೆ ಬುಡಕಟ್ಟು ಸಂಗೀತದ ಜೊತೆಗೆ ಎಡವುತ್ತಲೇ ವೇದಿಕೆಗೆ ಕಾಲಿಟ್ಟ ರೂಪದರ್ಶಿಯರು  ಮೃದುವಾದ ನಗು ಸೂಸುತ್ತಾ ಒಬ್ಬೊಬ್ಬರಾದ ಮೇಲೆ ಒಬ್ಬರಂತೆ ಕಾಣಿಸಿಕೊಳ್ಳುತ್ತಿದ್ದರು. ಎಲ್ಲರಲ್ಲೂ ಕಾಣುತ್ತಿದ್ದದ್ದು ಕಿವಿ ತುಂಬಾ ಆವರಿಸಿದ್ದ ಓಲೆ, ದೊಡ್ಡದಾಗಿ ಹೊಳೆಯುತ್ತಿದ್ದ ಬೈತಲೆ ಬೊಟ್ಟು. ಒಬ್ಬೊಬ್ಬರದ್ದೂ ವಿಭಿನ್ನ ವಿನ್ಯಾಸ. ಆ ವಿನ್ಯಾಸವನ್ನು ತೋರಲೆಂದೇ ಆ ಬದಿಯಿಂದ ಈ ಬದಿಗೆ ವಾಲುತ್ತಿದ್ದ ಅವರಿಗೆ ತಕ್ಕಂತೆ ಆಭರಣಗಳ ಪ್ರತಿಬಿಂಬ ವೇದಿಕೆ ತುಂಬಾ ಹೊಳಪು ತುಂಬಿತ್ತು.

ಥೇಟ್ ಮದುವಣಗಿತ್ತಿಯರಂತೆ ತುಸು ಬಿಂಕದಿಂದ ಹೆಜ್ಜೆ ಹಾಕುತ್ತಿದ್ದ ಅವರ ನೋಟ ಎಲ್ಲರ ಕಣ್ಣಲ್ಲೂ ಬೆರಗು ಮೂಡಿಸಿತ್ತು. ಸಾಂಪ್ರದಾಯಿಕ ಶೈಲಿಯ ಉಡುಪಾಗಿದ್ದರೂ ಪಾಶ್ಚಾತ್ಯ ಶೈಲಿಯೇ ಎದ್ದು ಕಾಣುತ್ತಿತ್ತು.

ಸೊಂಟದ ಮೇಲೆ ಕೈಯಿಟ್ಟು ಮಾರ್ಜಾಲ ನಡಿಗೆ ಹಾಕುತ್ತಿದ್ದ ಹುಡುಗಿಯರಿಗಿಂತ ನಾವೇ ಚೆಂದ ಎನ್ನುವಂತೆ ಇಬ್ಬರು ಹುಡುಗರು ಹರಳು ತುಂಬಿದ ಶೇರ್ವಾನಿ ತೊಟ್ಟು, ತೋಳಿಗೆ ಗರಿಯೇರಿಸಿಕೊಂಡು ಬಂದರೂ ಹುಡುಗಿಯರಷ್ಟು ಚಪ್ಪಾಳೆ ಅವರಿಗೆ ಸಿಗಲಿಲ್ಲ. ಆರು ಹುಡುಗಿಯರ ಬಿಂಕದ ನಡಿಗೆಗೆ ಈ ಹುಡುಗರ ಗಂಭೀರ ನಡಿಗೆ ಸಾಥಿಯಾಗಿತ್ತು. ಇದಿಷ್ಟೆ ಇರಬಹುದು ಎಂದು ಕೂತ ಜಾಗದಿಂದ ಇನ್ನೇನು ಏಳಬೇಕು, ಅಷ್ಟರಲ್ಲಾಗಲೇ ಇನ್ನೊಬ್ಬಳು ಸುಂದರಿ ಇಬ್ಬರು ಹುಡುಗರ ಮಧ್ಯೆ ಬೆಳಕಿನಂತೆ ಕಾಣಿಸಿಕೊಂಡಿದ್ದಳು.

ತಲೆ ಮೇಲೆ ಕಿರೀಟವನ್ನೇ ಹೋಲುವ ದೊಡ್ಡ ಹರಳಿನ ಆಭರಣ ತೊಟ್ಟು ಆಕೆ ವೇದಿಕೆ ಮೇಲೆ ನಿಂತದ್ದೇ, ಎಲ್ಲರ ಕಣ್ಣೂ ಅವಳತ್ತ ಬದಲಾಗಿತ್ತು. ಆಕೆ ಮಲೆಯಾಳಂ ನಟಿ ಪಾರ್ವತಿ ನಯ್ಯರ್. ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಪಾರ್ವತಿ ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟಿದ್ದೇ, ಎಲ್ಲರ ಬಾಯಲ್ಲೂ ವಾವ್ ಎನ್ನುವ ಉದ್ಗಾರ.

ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ, ಫ್ಯಾಷನ್ ಪ್ರಪಂಚ ಮತ್ತು ಆಭರಣ ವಿನ್ಯಾಸದಲ್ಲಿನ ಹಲವು ಬದಲಾವಣೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಐಡ್ರೀಮ್ಸ ಸಂಸ್ಥೆ `ಲೀಗ್ ಆಫ್ ಫ್ಯಾಷನ್' ಎಂಬ ಫ್ಯಾಷನ್ ಶೋ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ವಸ್ತ್ರ ಮತ್ತು ಆಭರಣ ವಿನ್ಯಾಸದ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದ ಭಾರತದ 45 ಕಾಲೇಜುಗಳ ಪೈಕಿ ಅಂತಿಮವಾಗಿ ಆರಿಸಲಾದ 8 ಮಂದಿಯ ಹೆಸರನ್ನು ಘೋಷಿಸಲೆಂದು ನಡೆಸಿದ್ದ ಪೂರ್ವ ಫ್ಯಾಷನ್ ಪ್ರದರ್ಶನ ಅದಾಗಿತ್ತು. ಐಡ್ರೀಮ್ಸ ಇವೆಂಟ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಇಲಿಯಾಸ್ ಅಕ್ತರ್, ವಿನ್ಯಾಸಕ, ನೃತ್ಯ ನಿರ್ದೇಶಕ ರಾಜೇಶ್ ಶೆಟ್ಟಿ, ಫ್ಯಾಷನ್ ಡಿಸೈನರ್ ರೇಷ್ಮಾಕುನ್ಹಿ ಇವರೆಲ್ಲರೂ ಜ್ಯೂರಿ ಸದಸ್ಯರಾಗಿ ಕಾರ್ಯಕ್ರಮಕ್ಕೆ ಕಳೆ ತಂದಿದ್ದರು.

ಈ ಲೀಗ್ ಆಫ್ ಫ್ಯಾಷನ್‌ನ ಅಂತಿಮ ಸುತ್ತು ಮುಂದಿನ ವರ್ಷ, 2013ರ ಜನವರಿ 25ರಂದು ನಡೆಯಲಿದೆ. ಅಂತಿಮ ಹಂತ ಇನ್ನೂ ರೋಚಕವಾಗಿರಲಿದ್ದು, ಆಭರಣ, ವಸ್ತ್ರ ಈ ಎರಡೂ ವಿಧಗಳಲ್ಲಿ ಮೊದಲನೆ ಸ್ಥಾನ ಪಡೆದವರಿಗೆ 1ಲಕ್ಷ ರೂಪಾಯಿ ಹಾಗೂ 50,000 ಮೌಲ್ಯದ ಚಿನ್ನ, 25 ಸಾವಿರ ಮೌಲ್ಯದ ಬೆಳ್ಳಿ ದೊರೆಯಲಿದೆ ಎಂದು ಉತ್ಸಾಹದಿಂದ ನುಡಿಯುತ್ತಿದ್ದರು ಐಡ್ರೀಮ್ಸ ಇವೆಂಟ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಇಲಿಯಾಸ್ ಅಕ್ತರ್.

ಇಷ್ಟೆಲ್ಲಾ ಮುಗಿಯುವ ವೇಳೆಗೆ ಮಾತಿಗೆ ಸಿಕ್ಕಿದ ಬೆಂಗಳೂರಿನ ರೂಪದರ್ಶಿ ಝುಹಾ, ಈ ಆಭರಣಗಳು ನನಗೆ ಕಳೆ ತಂದಿವೆ. ಈ ವಸ್ತ್ರವಂತೂ ಅಚ್ಚುಮೆಚ್ಚಾಗಿದೆ, ಇನ್ನೂ ಅಂತಿಮ ಹಂತ ಹೇಗಿರುತ್ತದೋ ಎಂಬ ಕಾತರ ತುಂಬಿದೆ ಎನ್ನುತ್ತ ಉತ್ಸಾಹದಿಂದ ಬೀಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.