
ಫಳಫಳಿಸುವ ಗಾಜಿನ ಲೋಟದ ಅರ್ಧಭಾಗವನ್ನು ಶುಗರ್‌ಲೆಸ್ ಕಾಫಿ ಆವರಿಸಿಕೊಂಡಿತ್ತು. ಇನ್ನರ್ಧಭಾಗದಲ್ಲಿ ಚಾಕೊಲೇಟ್ ಫ್ಲೇವರ್ ಐಸ್‌ಕ್ರೀಮ್‌ನ ಬುರುಗು. ಕಾಫಿಯ ಹೆಸರು ನೊಚ್ಚಿಲೊಟೊ.
ಗಾಜಿನ ಲೋಟದ ಮೇಲ್ಭಾಗದಲ್ಲಿದ್ದ ಐಸ್‌ಕ್ರೀಮನ್ನು ಶುಗರ್‌ಲೆಸ್ ಕಾಫಿಯೊಟ್ಟಿಗೆ ಸೇರಿಸಿ ಚಮಚೆಯಲ್ಲಿ ತೆಗೆದು ತಿನ್ನುತ್ತಿದ್ದರೆ ನಾಲಗೆಯಲ್ಲಿ ನೀರು. ಕಾಫಿ ಹಾಗೂ ಐಸ್‌ಕ್ರೀಮ್‌ನ ಸ್ವಾದ ಹೊಟ್ಟೆಯೊಳಗಿಳಿದಂತೆ ಹಿತಾನುಭವ. `ಲವಾಸ್ಸಾ ಎಸ್ಪ್ರೆಷನ್ ಸಿಗ್ನೇಚರ್ ಕಾಫಿ ಶಾಪ್~ನ ಕಾಫಿಯ ರುಚಿ ಅಂತಹುದು.
ಇಟಲಿಯಲ್ಲಿ ಜನಪ್ರಿಯಗೊಂಡಿರುವ ಹಾಗೂ ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ `ಲವಾಜ್ಹ~ ನಗರದಲ್ಲಿ ತನ್ನ ಸಿಗ್ನೇಚರ್ ಕಾಫಿ ಶಾಪ್ `ಲವಾಜ್ಹ ಎಸ್ಪ್ರೆಷನ್~ ಆರಂಭಿಸಿದೆ.
ವಿಲಾಸಿ ಲೀಲಾ ಪ್ಯಾಲೇಸ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ `ಲವಾಜ್ಹ~ ಈಗ ಉದ್ಯಾನ ನಗರಿಗೆ ಹೊಸ ರುಚಿ ಪರಿಚಯಿಸಲು ಅಣಿಗೊಂಡಿದೆ. ಇದು ಕಾಫಿ ರುಚಿಯ ಜತೆ ಜತೆಗೆ ಇಟಲಿಯ ತಿಂಡಿ ತಿನಿಸುಗಳ ಫುಡ್ ಕಲ್ಚರ್‌ನ್ನು ಕೂಡ ಪರಿಚಯಿಸುವ ಉಮೇದಿನಲ್ಲಿದೆ. ಅಂದಹಾಗೆ ಲವಾಜ್ಹ ದೇಶದಲ್ಲಿ ತೆರೆದಿರುವ ಎರಡನೇ ಮಳಿಗೆ.
ಮೊದಲ ಮಳಿಗೆ ದೆಹಲಿಯಲ್ಲಿ ಆರಂಭಗೊಂಡಿತ್ತು. ಜಾಗತಿಕವಾಗಿ ಲವಾಜ್ಹ ಎಸ್ಪ್ರೆಷನ್ ಬಾರ್ಸಿಲೋನಾ, ಲಂಡನ್, ಡಬ್ಲಿನ್, ಸೋಲ್, ಷಿಕಾಗೊ, ಬೀಜಿಂಗ್ ಮತ್ತು ಶಾಂಘೈ ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ 30 ಮಳಿಗೆಗಳನ್ನು ಹೊಂದಿದೆ.
`ಬಹು ಸಂಸ್ಕೃತಿ ಹಾಗೂ ವೈವಿಧ್ಯಮಯ ಜನರಿರುವ ಬೆಂಗಳೂರು ನಗರಿಯಲ್ಲಿ ಸಿಗ್ನೇಚರ್ ಕಾಫಿ ಮಳಿಗೆ ಆರಂಭಿಸುವುದು ನಮಗೆ ಖುಷಿಯ ಸಂಗತಿ. ಏಕೆಂದರೆ ಇಲ್ಲಿ ಅಪಾರ ಕಾಫಿ ಪ್ರಿಯರು ಇದ್ದಾರೆ. ವಿಶ್ವದಾದ್ಯಂತ `ಲವಾಜ್ಹ ಎಸ್ಪ್ರೆಷನ್~ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಅದೇ ಯಶಸ್ಸು ಇಲ್ಲಿಯೂ ಪುನರಾವರ್ತನೆಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ದೇಶದ ಎಲ್ಲ ಪ್ರಮುಖ ಮಹಾ ನಗರಗಳಲ್ಲಿ `ಲವಾಜ್ಹ ಎಸ್ಪ್ರೆಷನ್~ ಮಳಿಗೆ ಆರಂಭಿಸುವ ಮೂಲಕ ಭಾರತದಲ್ಲಿ ಲವಾಜ್ಹ ಬ್ರಾಂಡ್ ಜನಪ್ರಿಯಗೊಳಿಸಲಾಗುವುದು.
ಇಟಲಿಯ ಖಾದ್ಯ ಮತ್ತು ಪೇಯಗಳ ನಿಜವಾದ ರುಚಿಯ ಅನುಭವ ಪಡೆಯಲು ಲವಾಜ್ಹ ಸಿಗ್ನೇಚರ್ ಪಾಯಿಂಟ್~ ಎನ್ನುತ್ತಾರೆ ಲವಾಜ್ಹ ಏಷ್ಯಾ ಮತ್ತು ಫೆಸಿಫಿಕ್ ವಲಯದ ನಿರ್ದೇಶಕ ಅಟ್ಟಿಲಿಯೊ ಕ್ಯಾಪೌನೊ.
`ಕಾಫಿ ಉದ್ಯಮದಲ್ಲಿ 110 ವರ್ಷಗಳ ಅಪಾರ ಅನುಭವ ಆಧರಿಸಿ ರೂಪಿಸಲಾದ `ಲವಾಜ್ಹ ಎಸ್ಪ್ರೆಷನ್~ ಮಳಿಗೆಯಲ್ಲಿ ಇಟಲಿಯ ನಿಜವಾದ ಕಾಫಿ ಸ್ವಾದ ಒದಗಿಸುವುದರ ಜತೆಗೆ, ವೈವಿಧ್ಯಮಯ ಶ್ರೇಣಿಯ ತಂಪು ಪಾನೀಯಗಳು ಮತ್ತು ತಿಂಡಿ ತಿನಿಸುಗಳೂ ದೊರೆಯಲಿವೆ. ಬೆಂಗಳೂರು ನಗರಿ ದಕ್ಷಿಣ ಭಾರತದ ಹೃದಯ ಇದ್ದಂತೆ. ಇಲ್ಲಿ ಹಲವಾರು ಐಟಿ ಸಂಸ್ಥೆಗಳು ತಮ್ಮ ಕ್ಯಾಂಪಸ್ ಆರಂಭಿಸಿವೆ.
ವಿಭಿನ್ನ ಸಂಸ್ಕೃತಿಯ ಜನರೂ ಇಲ್ಲಿ ನೆಲೆಸಿದ್ದಾರೆ. ಇಂತಹ ವಿಶಿಷ್ಟ ನಗರಿಯಲ್ಲಿ `ಲವಾಜ್ಹ ಎಸ್ಪ್ರೆಷನ್~ ತನ್ನ ಸಿಗ್ನೇಚರ್ ಕೆಫೆ ಆರಂಭಿಸಿದೆ. ಬೆಂಗಳೂರಿನ ಗ್ರಾಹಕರು ನಮ್ಮ ಕೊಡುಗೆಗಳನ್ನು ಖಂಡಿತವಾಗಿಯೂ ಆಸ್ವಾದಿಸುತ್ತಾರೆ~ ಎಂಬುದು ಲವಾಜ್ಹ ದಕ್ಷಿಣ ಏಷ್ಯಾದ ನಿರ್ದೇಶಕ ಶಿವಶಂಕರ್ ಅವರ ಅಭಿಪ್ರಾಯ.
ಲೀಲಾ ಗ್ಯಾಲೇರಿಯಾದ ಕಾರಿಡಾರ್‌ನಲ್ಲಿರುವ ಲವಾಜ್ಹ ಎಸ್ಪ್ರೆಷನ್‌ನಲ್ಲಿ ಕುಳಿತು ಕಾಫಿ ಗುಟುಕರಿಸುವುದು ಕೂಡ ಒಂದು ಖುಷಿಯ ಸಂಗತಿ. ವಿಶಾಲವಾದ ಕೆಫೆಯಲ್ಲಿರುವ ಗಾಢವರ್ಣದ ಕೆಂಪು ಕುರ್ಚಿಯ ಮೇಲೆ ಕುಳಿತು ಕಾಫಿ ಜತೆಗೆ ಪಾಸ್ತಾ, ಬರ್ಗರ್, ಟ್ರೀಟ್ಸ್ ಅಂಡ್ ಚಾಕೋ, ಡೆಸೆರ್ಟ್ಸ್, ಪಿಜ್ಜಾ, ಸ್ಯಾಂಡ್‌ವಿಚ್ ಸವಿಯುವುದರ ಮಜವೇ ಬೇರೆ. ನಿಮ್ಮ ಸ್ನೇಹಿತರ ಜತೆಗೂಡಿ ಒಮ್ಮೆ ಲವಾಜ್ಹ ರುಚಿ ಆಸ್ವಾದಿಸಲು ಅಡ್ಡಿಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.