ADVERTISEMENT

ಲೋಲಾಕು ಜೀಕು

ಮೇರಿ ಜೋಸೆಫ್
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST
ಲೋಲಾಕು ಜೀಕು
ಲೋಲಾಕು ಜೀಕು   

ಅದೊಂದು ತುಂಬು ಸಮಾರಂಭ. ಬಾಲಿವುಡ್‌ನ ಅತಿರಥ ಮಹಾರಥರೆಲ್ಲಾ ನೆರೆದಿದ್ದರು. ಮಬ್ಬು ಬೆಳಕು. ಬಿಳಿ ಹೊದಿಕೆ ಹೊದ್ದ ಮೇಜಿನ ಎದುರಲ್ಲಿ `ಚಿರಯುವತಿ~ ಎಂಬ ಅಗ್ಗಳಿಕೆ ಪಡೆದ ರೇಖಾ ಒಬ್ಬರೇ ಕೂತಿದ್ದರು. ಅವರ ಕಿವಿಗಳಲ್ಲಿ ಅತ್ತಿಂದಿತ್ತ ಆಡುತ್ತಿದ್ದ ಲೋಲಾಕುಗಳು ಅವರ ಹಳೆಯ ಸಿನಿಮಾ ಕತೆಗಳಷ್ಟೇ ಆಕರ್ಷಕವಾಗಿದ್ದವು. ಅವನ್ನು ಕಂಡ ಸಲ್ಮಾನ್ ಖಾನ್, `ನಾನು ನಿಮ್ಮ ಪ್ರಾಯದವನೇ ಆಗಿದ್ದರೆ ಆ ಲೋಲಾಕುಗಳಲ್ಲಿ ಜೀಕುತ್ತಿದ್ದೆ~ ಎಂದು ರಸಿಕತೆಯಿಂದ ಹೇಳಿದಾಗ ರೇಖಾ ಕೆನ್ನೆ ಈ ವಯಸ್ಸಿನಲ್ಲೂ ಕೆಂಪಾಯಿತು.

ಲಲನೆಯ ಕಿವಿಗಳಲ್ಲಿ ಅತ್ತಿತ್ತ ಆಡುವ ಲೋಲಾಕುಗಳು ಪಡ್ಡೆಗಳ ಎದೆಬಡಿತ ಹೆಚ್ಚಿಸುವುದು ಸುಳ್ಳಲ್ಲ. ಅತ್ತಿತ್ತ ಜೀಕುವ ಲೋಲಾಕಿನಲ್ಲೇ ಕವಿಸಮಯ ಹುಟ್ಟಿರುವುದೂ ಇದೆ! ಹಾಗಾಗಿ ಲೋಲಾಕು ಜೀಕು ರಸಿಕರ ಕಂಗಳ ಸೆಳೆಯುವ ಸರಕು. ಸರಕೆಂದರೆ ತುಸು ಕಠೋರವಾಗಿ ಕೇಳಿಸುವಷ್ಟು ಕೋಮಲತೆಯನ್ನೂ ಅದು ಲಲನೆಯರ ಕಿವಿಗೆ ದಕ್ಕಿಸಿಕೊಟ್ಟೀತು.

ಬೀಸುವ ಗಾಳಿಗೆ ಪುಡಿಗೂದಲಿನ ಲಾಸ್ಯ. ಹೆಣ್ಣಿನ ಕದಲಿಕೆಗೆ ಲೋಲಾಕಿನ ಲಾಸ್ಯ. ಎಳನೀರಿನೊಳಗಿನ ಎಳೆ ಕಾಯಿಪದರದಂಥ ಕಿವಿಯನ್ನು ಗುರುತ್ವಾಕರ್ಷಣೆಗೆ ಜಗ್ಗುವ ಲೋಲಾಕುಗಳು ಹುಡುಗಿ ಭೂಮಿತೂಕದವಳು ಎಂಬುದರ ಸಂಕೇತವೇ? `ಮೂಗಿಗಿಂತ ಮೂಗುತಿ ಭಾರ~ ಎನ್ನುವುದು ಹಳೆ ಮಾತಾದರೆ `ಕಿವಿಗಿಂತ ಕಿವಿಯೋಲೆ ಭಾರವಲ್ಲ~ ಅನ್ನೋದು ಹೊಸಕಾಲದ ಅಲಂಕಾರಪ್ರಿಯರ ಹಮ್ಮು.

`ಭಯ್ಯಾ ಏ ಹ್ಯಾಂಗಿಂಗ್ ಕೊ ಕಿತನಾ ಹೈ?~ `ಇಸ್ ಮೆ ದೂಸರಾ ಕಲರ್ ದಿಖಾಯಿಯೆ~ , `ಯೆ ನಹಿ ಚಾಹಿಯೇ, ಇಸ್‌ಮೆ ಅಲಗ್ ವೆರೈಟಿ ಹೈ ಕ್ಯಾ?~ ಎಂಬ ಪ್ರಶ್ನೆಗಳ ಸುರಿಮಳೆಯೊಂದಿಗೆ ಯುವತಿಯರ ಕೈಗಳು ತಮಗಿಷ್ಟದ ಕಿವಿಯೋಲೆಗಳನ್ನು ತಡಕಾಡುತ್ತವೆ. ಬೀದಿ ಬದಿಯ ಚಾಟ್ಸ್‌ನಂತೆ ತರಹೇವಾರಿ ಕಿವಿಯೋಲೆ ಕೊಳ್ಳಲೂ ಮುಗಿಬೀಳುವ ಲಲನೆಯರು.  

 ಆ್ಯಕ್ಸೆಸರಿಗಳಿಗೂ ಹೆಣ್ಣುಮಕ್ಕಳಿಗೂ ಬಿಡಲಾಗದ ನಂಟು. ಅಂದದ ಡ್ರೆಸ್ ಖರೀದಿ ಮಾತ್ರ ಸಾಲದು, ಮ್ಯಾಚಿಂಗ್ ಬಳೆ, ಕಿವಿಯೋಲೆ, ಸರ ಎಲ್ಲವೂ ಬೇಕು. ಆಗಲೇ ಶಾಪಿಂಗ್ ಪರಿಪೂರ್ಣ. 

 ಈಗ ಫ್ಯಾಷನ್ ಲೋಕದಲ್ಲಿ ಟ್ರೆಂಡಿ ಆಭರಣ, ಡ್ರೆಸ್, ಚಪ್ಪಲಿ, ಬ್ಯಾಗ್ ಹಾಗೂ ಕಿವಿಯೋಲೆಗಳದ್ದೇ ಪಾರುಪತ್ಯ. ಅವೆಲ್ಲಾ ಬಹಳ ಹೈ ಫೈ. ಜತೆಗೆ ದುಬಾರಿ. ಹಾಗಾಗಿ ಬೀದಿ ಬದಿಯಲ್ಲಿನ ಕಡಿಮೆ ಬೆಲೆಯ ಕಿವಿಯೋಲೆಗಳಿಗೆ ಕೈಹಾಕುವ ಹುಡುಗಿಯರ ಸಂಖ್ಯೆ ಹೆಚ್ಚಾಗಿರುವುದು. 

 ಚೂಡಿದಾರ್, ಜೀನ್ಸ್, ಲೆಗ್ಗಿಂಗ್ಸ್... ಹೀಗೆ ಡ್ರೆಸ್ ಯಾವುದೇ ಇರಲಿ, ಅದಕ್ಕೊಪ್ಪುವ ಕಿವಿಯೋಲೆ ಇದ್ದರೆ ಸೌಂದರ್ಯಕ್ಕೆ ಮೆರುಗು. ನಗರದ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್, ಎಂಜಿ ರಸ್ತೆಯಿಂದ ಆರಂಭಿಸಿ ಬೀದಿಬೀದಿಗಳಲ್ಲೂ ಟ್ರೆಂಡಿ ಕಿವಿಯೋಲೆಗಳ ದರ್ಬಾರು ನಡೆಯುತ್ತದೆ. ಹಿತ್ತಾಳೆ, ಬ್ಲಾಕ್ ಮೆಟಲ್, ಪ್ಲಾಸ್ಟಿಕ್, ಟೆರ‌್ರಾಕೋಟಾದಿಂದ ಹಿಡಿದು ವಿವಿಧ ಮೆಟೀರಿಯಲ್‌ಗಳ ಈ ಕಿವಿಯೋಲೆಗಳು ಫ್ಯಾಷನ್‌ಗೆ ಹೊಸ ಅರ್ಥ ದಕ್ಕಿಸಿಕೊಟ್ಟಿವೆ. ಗುಂಪಿನಲ್ಲಿ ಎದ್ದು ಕಾಣಲು, ಧರಿಸಿದ ಡ್ರೆಸ್‌ಗೆ ಸರಿಯಾದ ಮ್ಯಾಚ್ ಬೇಕೆಂದರೆ ಇಂಥ ಕಿವಿಯೋಲೆಗಳೇ ಬೇಕು.

ಇದು ಸಾಲದು ಎಂಬಂತೆ ಮಹಾನಗರಿಯ ಎಲ್ಲೆಲ್ಲೂ ಈ ಕಿವಿಯೋಲೆಗಳದ್ದೇ ಭರ್ಜರಿ ಮಾರಾಟ. ಇವುಗಳ ಮಾರಾಟಕ್ಕೆ ಅಂಗಡಿಯೇ ಬೇಕೆಂದಿಲ್ಲ. ಬೀದಿ ಬದಿಯ ಸಣ್ಣ ಜಾಗ ಸಿಕ್ಕರೆ ಸಾಕು. ಅಲ್ಲಿಯೇ ಓಲೆಗಳನ್ನು ಅಂದವಾಗಿ ಪೇರಿಸಿಟ್ಟ ಸ್ಟಾಂಡ್‌ಗಳು.  ಸಣ್ಣ ಬಿಂದುವಿನಾಕಾರದಿಂದ ಹಿಡಿದು ವಿವಿಧ ವಿನ್ಯಾಸದ ಓಲೆಗಳು ಇದರಲ್ಲೇ ವಿರಾಜಮಾನ. ಮೊದಮೊದಲು ಕೇವಲ ವೃತ್ತಾಕಾರದ ವಿನ್ಯಾಸಗಳಿಗೆ ಮಾತ್ರ ಬೇಡಿಕೆ ಇತ್ತು. ಬರಬರುತ್ತಾ  ಆಯತ, ತ್ರಿಭುಜ.... ಹೀಗೆ ವಿನ್ಯಾಸಕ್ಕೆ ಸೀಮೆಯೇ ಇಲ್ಲ.

ಈಗಂತೂ ಹ್ಯಾಂಗಿಂಗ್‌ಗಳಿಗೆ ತುಂಬಾ ಡಿಮ್ಯಾಂಡ್. ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ಇವುಗಳ ವೆರೈಟಿ ನೋಡಿದರೆ ಒಮ್ಮೆ ದಂಗಾಗಬೇಕು. ಸರಳರೇಖೆ,  ಸಿಲಿಂಡರಿನ ಆಕಾರ, ತ್ರಿಭುಜಾಕೃತಿ, ಸುರುಳಿಯಾಕಾರ, ಪ್ರಶ್ನಾರ್ಥಕ ಚಿಹ್ನೆ, ಮಣಿಗಳು ಪೋಣಿಸಿದ ಜುಮುಕಿಗಳು... 

 ಅವೇನೇ ಇರಲಿ, ಗನ್ ಮೆಟಲ್‌ಗಳಿಂದ ತಯಾರಿಸಿದ ಓಲೆಗಳಿಗೇ ಹೆಚ್ಚು ಡಿಮ್ಯಾಂಡ್ ಎನ್ನುವುದು ಮಾರಾಟಗಾರರ ಅಭಿಪ್ರಾಯ ಕೂಡ. ಚೀನಾದಿಂದ ತಯಾರಾಗಿ ಬರುವ ಈ ಓಲೆಗಳು ಭಾರತೀಯ ಮಾರುಕಟ್ಟೆಯಲ್ಲೂ ಮೇಲುಗೈ ಸಾಧಿಸಿವೆ.  ವೆರೈಟಿ ಓಲೆಗಳ ಅಂದದ ಮುಂದೆ ಇದು ದೇಶೀ ಅದು ವಿದೇಶಿ ಎಂಬ ಭೇದಭಾವ ಯಾರಿಗೂ ತೋರದು, ನೋಡಲು ಟ್ರೆಂಡಿಯಾಗಿರಬೇಕು ಅದೇ ಮುಖ್ಯ.

ಇವುಗಳ ದರವೂ ಹೆಚ್ಚಲ್ಲ. ಐವತ್ತರಿಂದ ಆರಂಭವಾಗಿ ಇನ್ನೂರೈವತ್ತರವರೆಗೆ ಹೋದರೂ ಅದೇನು ದುಬಾರಿ ಅಲ್ಲ. ಗಗನಕ್ಕೇರುತ್ತಿರುವ ಚಿನ್ನದ ಬೆಲೆ ಮುಂದೆ ಇದೇನು ಮಹಾ?
 ಅಂಗಡಿಯಾತ ಎಷ್ಟೇ ಅನ್ನಲಿ ಅದಕ್ಕಿಂತ ಕಡಿಮೆ ದರಕ್ಕೆ ಚೌಕಾಸಿ ಮಾಡುವಲ್ಲಿ ಬೆಂಗಳೂರಿನ ಯುವತಿಯರನ್ನು ಮೀರಿಸುವವರೇ ಇಲ್ಲ. 150 ಎಂದರೆ `ಸೌ ಕೋ ದೇ ದೋ ಭಯ್ಯಾ~ ಎಂದು ಚೌಕಾಸಿಗಿಳಿದರೆ ಕೊನೆಗೆ ಅಂಗಡಿಯಾತನೂ ಮಣಿಯಲೇಬೇಕು.
ಹಿಂದೆ ದೇಶಗಳ ಗಡಿ ದಾಟುವ ನಾವಿಕರು ತಮ್ಮ ಪರ್ಯಟನಾ ಸಾಹಸದ ಸಂಕೇತವಾಗಿ ಕಿವಿಚುಚ್ಚಿಸಿಕೊಂಡು ಲೋಲಾಕು, ಓಲೆ ತೊಟ್ಟು ಬೀಗುತ್ತಿದ್ದರು. ರಾಜರ ಕರ್ಣಗಳಲ್ಲಿ ವಜ್ರ ಹೊಳೆದದ್ದೂ ಉಂಟು. ಈಗ ಹುಡುಗಿಯ ಕಿವಿಗಳಲ್ಲಿ ಲೋಲಾಕು ಜೀಕುತ್ತದೆ, ಓಲೆ ಮಿಂಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.