ADVERTISEMENT

ವಿಜ್ಞಾನೋತ್ಸವದಲ್ಲಿ...

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:40 IST
Last Updated 23 ಡಿಸೆಂಬರ್ 2013, 19:40 IST

ಬನಶಂಕರಿ 3ನೇ ಹಂತದಲ್ಲಿರುವ ಶ್ರೀಕೃಷ್ಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆವಿಷ್ಕಾರ ವಿಜ್ಞಾನೋತ್ಸವ   ಹಾಗೂ ಕಲಾ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.

ಮಕ್ಕಳು ತಮ್ಮ ಕೈಗೆ ಸುಲಭದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಪ್ರತಿನಿತ್ಯ ತಾವು ನೋಡಿ ಕಲಿಯುವ ವಸ್ತುಗಳ ರಚಿಸಿದರಂತೂ ಅವರಿಗೆ ಎಲ್ಲಿಲ್ಲದ ಆನಂದ.

ಟೆಲಿಸ್ಕೋಪ್‌ನಿಂದ ಏನು ಉಪಯೋಗ, ಪರಿಸರ ಕಾಳಜಿ ಹೇಗೆ ಸಾಧ್ಯ, ಭಾರತೀಯ ಸೈನ್ಯದ ಟ್ಯಾಂಕ್‌ಗಳು ಹಾಗೂ ಜೆಟ್ ವಿಮಾನಗಳು ಹೇಗಿರುತ್ತವೆ ಎನ್ನುವ ಹಾಗೂ ಇನ್ನಿತರೆ ವೈಜ್ಞಾನಿಕ ಸಂಗತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ವಿಜ್ಞಾನೋತ್ಸವದಲ್ಲಿ ವಿವರಿಸುತ್ತಿದ್ದರು. 

ವಿದ್ಯಾರ್ಥಿಗಳೇ ತಯಾರಿಸಿದ ಹಳ್ಳಿ ಸೊಗಡಿನ ಆಹಾರವೂ ಉತ್ಸವಕ್ಕೆ ಮತ್ತಷ್ಟು ಸೊಗಸು ತಂದಿತ್ತು. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಚಿಸಿದ್ದ ಪ್ರತಿಕೃತಿಗಳು ಗಮನ ಸೆಳೆದವು. 

ವಿಜ್ಞಾನೋತ್ಸವಕ್ಕೆ ಗಾಯಿತ್ರಿದೇವಿ ಚಾಲನೆ ನೀಡಿದರು. ‘ಇಂತಹ ಉತ್ಸವಗಳು ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತವೆ. ಅಲ್ಲದೆ, ವಿದ್ಯಾರ್ಥಿಗಳ ಸಂವಹನ ಕೌಶಲ್ಯವೃದ್ಧಿಗೂ ಪೂರಕ. ಮಕ್ಕಳು ರಚಿಸಿರುವ ಪ್ರತಿಕೃತಿಗಳು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ’ ಎನ್ನುತ್ತಾರೆ ಶ್ರೀಕೃಷ್ಣ ಇಂಟರ್‌ ನ್ಯಾಷನಲ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಎಂ. ರುಕ್ಮಾಂಗದ ನಾಯ್ಡು.

ತೂಗು ಸೇತುವೆ, ಆಟದ ಮೈದಾನ, ತರಕಾರಿಗಳಲ್ಲಿ ತಯಾರಿಸಿದ ಪ್ರಾಣಿ, ಮಾದರಿ ಮನೆಯ ಪ್ರತಿಕೃತಿಗಳು ಉತ್ಸವದ ಕೇಂದ್ರಬಿಂದುವಾಗಿದ್ದವು. ತಮ್ಮ ಮಕ್ಕಳು ಹಾಗೂ ಅವರ ಸಹಪಾಠಿಗಳು ತಯಾರಿಸಿದ  ಕಲಾ ವಸ್ತುಗಳನ್ನು ನೋಡಿ ಪೋಷಕರು ಆನಂದಿಸಿದರು. ಹಾಗೆಯೇ ಯಾವ ಮಕ್ಕಳು ಉತ್ತಮ ಪ್ರಾತ್ಯಕ್ಷಿಕೆ ನೀಡಿದರು ಎಂಬುದನ್ನೂ ನಮೂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.