ಈಗ ಮಕ್ಕಳಿಗೆ ಬೇಸಿಗೆ ರಜೆಯ ಸಂಭ್ರಮ. ಪರೀಕ್ಷೆ ಮುಗಿದ ಕೂಡಲೇ ರಜೆಯಲ್ಲಿ ಏನೇನು ಮಾಡಬೇಕು, ಎಲ್ಲೆಲ್ಲಿ ಹೋಗಬೇಕು ಎಂಬ ಕನಸುಗಳು ನನಸಾಗುವ ಕಾಲ. ಮಕ್ಕಳ ಆಸಕ್ತಿಯ ವಿಷಯಗಳನ್ನು ತಿಳಿದು ರಜೆಯಲ್ಲಿ ಅದಕ್ಕೆ ಪೂರಕವಾದಂತಹ ಶಿಬಿರ ಅಥವಾ ತರಗತಿಗಳಿಗೆ ಸೇರಿಸುವ ಸಮಯ.
ಹೌದು. ಇದನ್ನು ಅರಿತೇ ಸಂಘ ಸಂಸ್ಥೆಗಳು ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿವೆ. ಚಿತ್ರಕಲೆ, ನೃತ್ಯ, ವ್ಯಕ್ತಿತ್ವ ವಿಕಸನ, ನಾಟಕ ಸೇರಿದಂತೆ ವಿವಿಧ ವಿಷಯಗಳನ್ನು ಕಲಿಸುತ್ತದೆ. ಒಟ್ಟಾರೆ ಲಲಿತ ಕಲೆಗಳಿಗೆ, ಮನರಂಜನೆಗೆ ಆದ್ಯತೆ.
ಆದರೆ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದ ಶಿಬಿರಗಳ ಸಂಖ್ಯೆ ಕಡಿಮೆ. ಆ ಕೊರತೆಯನ್ನು ಕಳೆದ 44 ವರ್ಷಗಳಿಂದ ನೀಗಿಸುತ್ತ ಬಂದಿದೆ ಬೆಂಗಳೂರು ವಿಜ್ಞಾನ ವೇದಿಕೆ.
ಅದು ನಡೆಸುವ ಬೇಸಿಗೆ ವಿಜ್ಞಾನ ಶಿಬಿರದಲ್ಲಿ ಮಕ್ಕಳಿಗೆ ಬೇಸರವಾಗದಂತೆ, ರಂಜನೀಯವಾಗಿ ವಿಜ್ಞಾನದ ಬಗ್ಗೆ ತಿಳಿಸಿಕೊಡಲಾಗುತ್ತದೆ. 8ರಿಂದ 10ನೇ ತರಗತಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.
ಶುಕ್ರವಾರದಿಂದ ಮೇ 12 ರವರೆಗೆ ನಡೆಯುವ ಶಿಬಿರದಲ್ಲಿ ವಿಜ್ಞಾನ ಕ್ಷೇತ್ರದ ವಿದ್ವಾಂಸರಿಂದ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳೆಲ್ಲ ಇರುತ್ತವೆ. ವಿಜ್ಞಾನದ ಮಾದರಿ ತಯಾರಿಕೆಯನ್ನು ಮಕ್ಕಳಿಂದಲೇ ಮಾಡಿಸಲಾಗುತ್ತದೆ. ಅಲ್ಲದೇ, ಭಾರತೀಯ ವಿಜ್ಞಾನ ಸಂಸ್ಥೆ, ಎಚ್‌ಎಎಲ್, ನಿಮ್ಹಾನ್ಸ್ ಹಾಗು ರಾಮನ್ ಸಂಶೋಧನಾ ಸಂಸ್ಥೆಗಳಿಗೂ ಭೇಟಿ ನೀಡುವ ಅವಕಾಶ ಇರುತ್ತದೆ.
ಮಕ್ಕಳಲ್ಲಿ ಮೂಲ ವಿಜ್ಞಾನದ ಅಭಿರುಚಿ ಬೆಳೆಸುವುದು, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್ (ವಿದ್ಯುನ್ಮಾನ), ಕಂಪ್ಯೂಟರ್ ವಿಷಯದಲ್ಲಿನ ಬೆಳವಣಿಗೆಗಳನ್ನು ತಿಳಿಸುವುದುಈ ಶಿಬಿರದ ಮುಖ್ಯ ಉದ್ದೇಶ ಎನ್ನುತ್ತಾರೆ ವೇದಿಕೆಯ ಅಧ್ಯಕ್ಷ ಡಾ. ಎ.ಎಚ್. ರಾಮರಾವ್.
ಸ್ಥಳ: ಎಚ್ಚೆನ್ ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. ವಾರದಲ್ಲಿ 6 ದಿನ ಬೆಳಗ್ಗೆ 8.30 ರಿಂದ 11.30. ಮೊದಲು ಬಂದವರಿಗೆ ಆದ್ಯತೆ. ಮಾಹಿತಿಗೆ: 99003 20532.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.