
ಆಟವೆಂದರೆ ಹಾಗೆ, ಇಡೀ ಲೋಕವನ್ನು ಮರೆಸಿ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವ ಶಕ್ತಿ ಅದಕ್ಕಿದೆ. ಅದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನುಳ್ಳ ಕ್ರೀಡೆಯೆಂದರೆ ಫುಟ್‌ಬಾಲ್. ಈ ಆಟವನ್ನು ಕಂಪ್ಯೂಟರೀಕರಣಗೊಳಿಸಿದ ನಂತರ ಗಂಟೆಗಟ್ಟಲೆ ಪ್ಲೇ ಸ್ಟೇಷನ್‌ಗಳಲ್ಲಿ ಈ ಗೇಮ್‌ಗಳನ್ನು ನೋಡಿ ಆಡುತ್ತಾ ಆನಂದಿಸುವ ಮಂದಿಯೂ ಈಗೀಗ ಹೆಚ್ಚಿದ್ದಾರೆ.
ಕಂಪ್ಯೂಟರ್ ಮೂಲಕ ಫುಟ್‌ಬಾಲ್ ಆಡುವ ಬದಲು ತಾವೇ ಖುದ್ದಾಗಿ ಆಡುವಂತೆ ಭಾಸವಾದರೆ ಇನ್ನೂ ಚೆಂದ. ಇದು ಫುಟ್‌ಬಾಲ್ ಪ್ರೇಮಿಗಳಿಗೆ ಇನ್ನೂ ಸಂತಸದ ಸಂಗತಿ. ಇಂತಹ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ ಆಚಾರ್ಯ ಇನ್ಸ್‌ಟಿಟ್ಯೂಟ್‌ನ ತಾಂತ್ರಿಕ ವಿದ್ಯಾರ್ಥಿಗಳು.
ನಗರದ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್‌ನ ಮೆಕಾಟ್ರೋನಿಕ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿ ಪಿತು ಹಜಾರಿಕಾ ಮತ್ತು ಸಹಪಾಠಿಗಳಾದ ವಿರಾಜ್ ಪಟೇಲ್, ಯಲ್ಲಪ್ಪ ಕಡುಚಿ ಮತ್ತು ವಿಪಿನ್ ಒಟ್ಟುಗೂಡಿ ಫುಟ್‌ಬಾಲ್ ಆಟದ ರೋಬೊ ಅಭಿವೃದ್ಧಿಪಡಿಸಿದ್ದಾರೆ. ಕಾಲೇಜಿನ `ಫೋರಂ ಕಾರ್ಯಕ್ರಮ~ದ ಅಂಗವಾಗಿ ಈ ಯಂತ್ರದ ಮಾದರಿಯನ್ನು ಹೊರತಂದಿದ್ದಾರೆ.
ಈ ಮಾದರಿಯಲ್ಲಿ ಮನುಷ್ಯರು ನಿಯಂತ್ರಿಸಬಹುದಾದ ಮೂರು ರೋಬೋಗಳು ಆಟಗಾರರಂತೆ ಕಾರ್ಯ ನಿರ್ವಹಿಸುತ್ತವೆ. ಪ್ರತಿಯೊಂದು ತಂಡಕ್ಕೂ ಮೂರು ರೋಬೊಗಳನ್ನು ನೀಡಲಾಗಿರುತ್ತದೆ.
ಗೋಲ್ ಕೀಪರ್, ಪ್ರತಿಸ್ಪರ್ಧಿ ಮತ್ತು ಸ್ಟ್ರೈಕರ್ ಎಂಬ ಮೂರು ರೋಬೊಗಳಿರುತ್ತವೆ. ಪ್ರತಿಯೊಂದನ್ನೂ ವಿಶೇಷ ಕಾರ್ಯಕ್ಷಮತೆಯೊಂದಿಗೆ ರೂಪಿಸಲಾಗಿದೆ. ಮಿಕ್ಕೆಲ್ಲಾ ರೋಬೊಗಳಿಗಿಂತ ಗೋಲ್‌ಕೀಪರ್ ರೋಬೊ ಅತಿ ವೇಗವಾಗಿ ಚಲಿಸಬಲ್ಲದು.
ಪ್ರತಿಸ್ಪರ್ಧಿ ರೋಬೊ ಶಕ್ತಿಯುತವಾದದ್ದು. ಸ್ಟ್ರೈಕರ್ ಅತಿ ವೇಗದಲ್ಲಿ ಚೆಂಡನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. 150 ಪಿಎಂಪಿ ಮತ್ತು 12 ವೋಲ್ಟ್ಸ್ ಮೋಟಾರನ್ನು ಈ ರೋಬೊ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗಿದೆ. ಕೆಲವು ವೈರ್‌ಗಳನ್ನು ಹೊಂದಿದ್ದು, ಸಾಮಾನ್ಯ ವೋಲ್ಟೇಜ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
`ಸ್ವಯಂಚಾಲಿತ ಯಂತ್ರವನ್ನು ತಯಾರಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಕಂಪ್ಯೂಟರ್‌ನಲ್ಲಿ ಆಟವನ್ನು ಆಡುವ ಬದಲು ನಿಜವಾಗಿಯೂ ಆಡಿದಂತಹ ಅನುಭವ ನೀಡುವುದು ನಮ್ಮ ಆದ್ಯತೆ. ರೋಬೊಗಳನ್ನು ನಿಯಂತ್ರಿಸುವುದು ಅತಿ ಸುಲಭ. ಇದರಿಂದ ಮನರಂಜನೆ ಪಡೆಯುವ ಮಾರ್ಗವನ್ನು ತಿಳಿಯಬೇಕಷ್ಟೆ~ ಎನ್ನುವುದು ಪಿತು ಹಜಾರಿಕಾ ಅಭಿಪ್ರಾಯ.
`ಈ ಮಾದರಿಯನ್ನು ಕೇವಲ ಸ್ಪರ್ಧೆಗೆಂದು ತಯಾರಿಸಿಲ್ಲ. ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾರ್ಯಾಗಾರ. ಕೆಲವೇ ದಿನಗಳಲ್ಲಿ ಅವರೂ ರೋಬೊ ಮುಂದುವರಿದ ಭಾಗವಾಗಿ ವೈರ್‌ಲೆಸ್ ರೋಬೊಗಳನ್ನು ಪರಿಚಯಿಸಲಿದ್ದಾರೆ.
ಇದು ರಿಚಾರ್ಜೆಬಲ್ ಬ್ಯಾಟರಿಯಿಂದ ಚಲಿಸಬಹುದಾಗಿದ್ದು, ರೋಬೊ 2 ಸಾಕರ್ ಡಿಜಿಟಲ್ ಡಿಸ್ಪ್ಲೇ ಸ್ಕೋರ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಹಾರ್ನ್ ಹೊಂದಿರಲಿರುವುದು ವಿಶೇಷ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.