ADVERTISEMENT

ವಿಲಾಸಿ ವಿನ್ಯಾಸದ `ವೀವರ್ಸ್‌ ಸ್ಟುಡಿಯೊ'

ಪ್ರಜಾವಾಣಿ ವಿಶೇಷ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST
ವಿಲಾಸಿ ವಿನ್ಯಾಸದ `ವೀವರ್ಸ್‌ ಸ್ಟುಡಿಯೊ'
ವಿಲಾಸಿ ವಿನ್ಯಾಸದ `ವೀವರ್ಸ್‌ ಸ್ಟುಡಿಯೊ'   

ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿಯಿರುವ ನೂರಾಐದು ವರ್ಷ ಹಳೆಯ ಬಂಗಲೆಯ ಮಗ್ಗುಲಲ್ಲಿನ `ಬಸವ ಅಂಬರ'ದ ಆವರಣ ಪ್ರವೇಶಿಸುತ್ತಿದ್ದಂತೆ ವಸ್ತು ಸಂಗ್ರಹಾಲಯವೊಂದಕ್ಕೆ ಹೋದಂತಹ ಅನುಭವವಾಗವುದು ಸಹಜ. ನೂರಾರು ವರ್ಷ ಹಳೆಯ ಆ್ಯಂಟಿಕ್ ವಸ್ತುಗಳ, ಪರಿಕರಗಳ ಆಗರವದು. ಬೆಂಗಳೂರು ಮತ್ತು ದೇಶದೆಲ್ಲೆಡೆಯ ಪ್ರತಿಷ್ಠಿತ ವಸ್ತ್ರ ಮತ್ತು ವಸ್ತು ವಿನ್ಯಾಸಕರಿಗೆ `ಬಸವ ಅಂಬರ' ಬ್ರಾಂಡೆಡ್ ಮಾರಾಟ ತಾಣವೂ ಹೌದು.ದುಬಾರಿಯಾದರೂ ವಿಶಿಷ್ಟವಾದ ಉಡುಗೆ ತೊಡುಗೆಗಳನ್ನಷ್ಟೇ ತಮ್ಮ ಸಂಗ್ರಹಕ್ಕೆ ಸೇರ್ಪಡೆ ಮಾಡಬಯಸುವ ಒಂದು ಗ್ರಾಹಕವರ್ಗವೇ `ಬಸವ ಅಂಬರ' ಮಳಿಗೆಯೊಂದಿಗಿದೆ.

ಇದೀಗ ಮತ್ತೊಂದು ಪ್ರದರ್ಶನ, ಮಾರಾಟ ಅಲ್ಲಿ ನಡೆದಿದೆ. ಕೋಲ್ಕತ್ತಾದ `ವೀವರ್ಸ್‌ ಸ್ಟುಡಿಯೊ'ದ ಆಯ್ದ ಉಡುಗೆ ತೊಡುಗೆಗಳ ಸಂಗ್ರಹ ಭಾನುವಾರದವರೆಗೂ ಖರೀದಿಗೆ ಲಭ್ಯವಿದೆ.

`ವೀವರ್ಸ್‌ ಸ್ಟುಡಿಯೊ'ದ ಸೀರೆ, ಕುರ್ತಾ, ಸಲ್ವಾರ್ ಸೆಟ್, ದುಪಟ್ಟಾಗಳು ನುರಿತ, ಸಾಂಪ್ರದಾಯಿಕ ಕಸೂತಿಯ ವೈಭವಕ್ಕೆ ಕನ್ನಡಿ ಹಿಡಿಯುವಂತಿವೆ. ಕಾಂತಾ ಕಸೂತಿಯಿರುವ ಕೆಲವು ದುಪಟ್ಟಾಗಳು ಮತ್ತು ಸೀರೆಗಳಂತೂ ಆ ಕುಶಲಕರ್ಮಿಗಳದ್ದು ಪದಗಳಿಗೆ ನಿಲುಕದ ಕೌಶಲ್ಯ ಎಂಬುದನ್ನು ಸಾರುತ್ತವೆ. ಇಲ್ಲಿನ ಸಂಗ್ರಹ ಮತ್ತು ಅವುಗಳ ಹಿನ್ನೆಲೆ ಬಗ್ಗೆ `ವೀವರ್ಸ್‌ ಸ್ಟುಡಿಯೊ'ದ ಕೋಲ್ಕತ್ತಾದ ದರ್ಶನ್ ಸರ್ಕಾರ್ `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ.

`ವೀವರ್ಸ್‌ ಸ್ಟುಡಿಯೊ'ದ ವೈಶಿಷ್ಟ್ಯವೇನು?
ವಸ್ತ್ರೋದ್ಯಮ ಮತ್ತು ವಸ್ತ್ರ ವಿನ್ಯಾಸದಲ್ಲಿ ಸಾಂಪ್ರದಾಯಿಕತೆ, ಪರಂಪರೆ ಮತ್ತು ಆಧುನಿಕತೆಯನ್ನು ಒಂದೇ ದಾರದಲ್ಲಿ ಪೋಣಿಸುವ ಪ್ರಯತ್ನವನ್ನು `ವೀವರ್ಸ್‌ ಸ್ಟುಡಿಯೊ' ಮಾಡಿದೆ. ಇದು ನಿರಂತರ ಪ್ರಕ್ರಿಯೆಯೂ ಹೌದು.

ಇಂತಹುದೊಂದು ಪ್ರಕ್ರಿಯೆಗೆ ಪೂರಕವಾಗಿ ಅಧ್ಯಯನ, ಸಂಶೋಧನೆ ನಡೆಸಿದ್ದೆದೆಯೇ?
ಹೌದು. ಗ್ರಾಹಕರಿಗೆ ಅತ್ಯುತ್ತಮ ಮತ್ತು ಅತಿ ವಿಶಿಷ್ಟವಾದ ವಿನ್ಯಾಸವನ್ನು ಒದಗಿಸುವ ದೃಷ್ಟಿಯಿಂದ ಗಂಭೀರ ಪ್ರಯತ್ನ ಮಾಡಿದ್ದೇವೆ. ಈ ಅಧ್ಯಯನದಲ್ಲಿ ನೈಸರ್ಗಿಕ ಬಣ್ಣ, ವರ್ಣ ಸಂಯೋಜನೆ, ಕಚ್ಚಾವಸ್ತುವಿನ ಬಳಕೆಯ ಬಗ್ಗೆ ಮಾತ್ರವಲ್ಲದೆ ಎಲ್ಲಿ ಯಾವ ತಾಂತ್ರಿಕತೆಯನ್ನು ಬಳಸಬೇಕು ಎಂಬ ವಿಸ್ತೃತವಾದ ಅಧ್ಯಯನ ನಡೆಸಿದ್ದೇವೆ. ಜತೆಗೆ, ನೀಲವರ್ಣದ ಬಗ್ಗೆ ನಡೆದ ಸಂಶೋಧನೆ ನಮ್ಮ ಮತ್ತೊಂದು ಹೆಗ್ಗಳಿಕೆ. ಎಲ್ಲಾ ಬಣ್ಣಗಳಲ್ಲೂ ನೀಲಿಗಿರುವ ಬಹುಆಯಾಮ, ಇತರ ಬಣ್ಣಗಳಿಗಿಂತ ವಿಲೀನವಾಗುವ, ಸಂಯೋಜನೆಗೊಳ್ಳುವ ಸರಳಭಾವ ಇನ್ಯಾವುದೇ ಬಣ್ಣಕ್ಕಿಲ್ಲವೇನೊ? ಅದೊಂದು ಮೋಹಕ ಬಣ್ಣ. ಜಾಮದಾನಿ ಪ್ರಕಾರದಲ್ಲಂತೂ ನೀಲಿ ಇನ್ನಷ್ಟು ಶ್ರೀಮಂತವಾಗುತ್ತದೆ.

ಅಧ್ಯಯನಾಧರಿತವಾಗಿ ವಿನ್ಯಾಸಗೊಳಿಸುವ ನಿಮ್ಮ ವಸ್ತ್ರಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಇದೆಯೇ?
ಖಂಡಿತಾ ಇದೆ. ಕೋಲ್ಕತ್ತಾದಲ್ಲಿರುವ ನಮ್ಮ ಎಕ್ಸ್‌ಪೋರ್ಟ್ ಹೌಸ್ ಈ ಕೆಲಸಕ್ಕಾಗಿ ಮೀಸಲು. ಅಮೆರಿಕ, ಯೂರೋಪ್ ಮತ್ತು ಆಸ್ಟ್ರೇಲಿಯಾಕ್ಕೆ ನಮ್ಮ ವಿನ್ಯಾಸಗಳು ರಫ್ತು ಆಗುತ್ತವೆ. ಆದರೆ ಆನ್‌ಲೈನ್ ಶಾಪಿಂಗ್‌ಗೆ ಬೇಡಿಕೆಯಿದ್ದರೂ ಈ ಸೌಲಭ್ಯವನ್ನು ನಾವು ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಆರಂಭಿಸುವ ಸಾಧ್ಯತೆಯಿದೆ. ಇವೆಲ್ಲ ಸಾಧ್ಯವಾದದ್ದು ನಮ್ಮ ವಿನ್ಯಾಸದ ಗುಣಮಟ್ಟ ಮತ್ತು ವೈಶಿಷ್ಟ್ಯದಿಂದಾಗಿ.

`ವೀವರ್ಸ್‌ ಸ್ಟುಡಿಯೊ' ಸಂಗ್ರಹದಲ್ಲಿ ಸಾಂಪ್ರದಾಯಿಕ ಮತ್ತು ಪಾರಂಪರಿಕ ಕಸೂತಿಗಳನ್ನು ಹಾಕುವ `ಕುಶಲಕರ್ಮಿ'ಗಳದ್ದು ಬಹುದೊಡ್ಡ ಪಾಲು ಇದೆ ಅಲ್ವೇ?
ನಿಜ. ನಾವು ವಿನ್ಯಾಸ, ಕಲೆ, ತಂತ್ರಗಾರಿಕೆ ಬಗ್ಗೆ ಅಕಾಡಮಿಕ್ ಆಗಿ ಕಲಿತವರು. ಆದರೆ ಅಂತಹ ಹಿನ್ನೆಲೆಯಿಲ್ಲದಿದ್ದರೂ ಸಾಂಪ್ರದಾಯಿಕ ಮತ್ತು ಪಾರಂಪರಿಕವಾಗಿ ದಕ್ಕಿದ ಕಸೂತಿ ಎಂಬ ಕಲೆ ನಮ್ಮ ವಸ್ತ್ರ ಮತ್ತು ವಿನ್ಯಾಸವನ್ನು ಇನ್ನಷ್ಟು ವೈಭವಯುತವಾಗಿ ಕಾಣಿಸುತ್ತವೆ.

ಬೆಂಗಳೂರಿನ ಪ್ರದರ್ಶನದ ಬಗ್ಗೆ...
ಬೆಂಗಳೂರಿನಲ್ಲಿ ಕೆಲವು ವರ್ಷಗಳ ನಂತರ ನಡೆದಿರುವ ಪ್ರದರ್ಶನ, ಮಾರಾಟವಿದು. ನುರಿತ ಕೈಗಳಿಂದ ತಯಾರಾದ ವಸ್ತ್ರ ಮತ್ತು ವಿನ್ಯಾಸಕ್ಕಾಗಿಯೇ ಕಾದು ಕೂರುವ ಒಂದು ವಿಶೇಷ ಗ್ರಾಹಕ ವರ್ಗ ಈ ನಗರದಲ್ಲಿದೆ. ತಮ್ಮ ಖರೀದಿ ಮತ್ತು ಸಂಗ್ರಹದ ಬಗ್ಗೆ ಪರಿಜ್ಞಾನವಿರುವ ಅಪರೂಪದ ಗ್ರಾಹಕವರ್ಗವಿದು.

ಪ್ರದರ್ಶನದಲ್ಲಿರುವ ಬಹುತೇಕ ವಸ್ತ್ರಗಳು ಕಚ್ಚಾ ರೇಷ್ಮೆ (ರಾ ಸಿಲ್ಕ್) ಮತ್ತು ಟಸ್ಸಾರ್‌ನಲ್ಲಿರುವ ಕಾರಣ ಹಗುರವಾಗಿವೆ. ಜಾಮದಾನಿ ಸೀರೆ ಹಾಗೂ ದುಪಟ್ಟಾಗಳು ಸಹಜವಾಗಿಯೇ `ತೂಕ'ದ್ದಾಗಿವೆ. ತಿಳಿಬಣ್ಣವೇ ಇರಲಿ, ಗಾಢವರ್ಣವೇ ಇರಲಿ ಪರಸ್ಪರ ತದ್ವಿರುದ್ಧ (ವೈದೃಶ್ಯ)ವಾದ ವರ್ಣಸಂಯೋಜನೆಯಿಂದಾಗಿ ಚಿತ್ತಾಕರ್ಷಕವಾಗಿವೆ.

ಈ ಮಾತು ಕುರ್ತಾಗಳಿಗೂ ಅನ್ವಯವಾಗುತ್ತದೆ. ವಿಶೇಷ ಸಮಾರಂಭಗಳಿಗೆ ಧರಿಸುವ ಭರ್ಜರಿ ಸೀರೆ/ ಸಲ್ವಾರ್‌ಗಳಿಗೆ ಒಪ್ಪುವಂತಹ ಪುಟ್ಟ ಕೈಚೀಲಗಳ ಸಂಗ್ರಹವೂ ಇಲ್ಲಿದೆ. ಮನೆಯ ವಿಲಾಸಿ ನೋಟವನ್ನು ಹೆಚ್ಚಿಸುವ ಕುಷನ್‌ಗಳು, ಪರದೆಗಳೂ ಇಲ್ಲಿವೆ. ಇದರೊಂದಿಗೆ ಆ್ಯಂಟಿಕ್ ಆಭರಣಗಳೂ ಗ್ರಾಹಕರಿಗೆ ಮೆಚ್ಚುಗೆಯಾಗುತ್ತದೆ ಎಂಬ ವಿಶ್ವಾಸ ನಮ್ಮದು.
ಪ್ರದರ್ಶನ, ಮಾರಾಟದ ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ. ಬಸವ ಅಂಬರದ ಸಂಪರ್ಕಕ್ಕೆ: 2656 1940/6546 1856)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.