ADVERTISEMENT

ವಿಷಯ ವೈವಿಧ್ಯದ ಸಿನಿಮಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಭಾರತಿ ಗೌಡ
ಭಾರತಿ ಗೌಡ   

ಕಳೆದ ಒಂದು ವರ್ಷದಿಂದ ಒಂದೇ ಸ್ಥಳದಲ್ಲಿ ಸಿನಿಮಾ ಆಯೋಜಿಸುತ್ತಿದ್ದಾರೆ. ಇದು ಜನರ ಸಮಯವನ್ನೂ ಉಳಿಸುತ್ತದೆ. ಅಂದಹಾಗೆ ಮಂಗಳವಾರ ಹೆಚ್ಚು ಕಡಿಮೆ ಎಲ್ಲಾ ಸಿನಿಮಾಗಳು ತುಂಬಾ ಚೆನ್ನಾಗಿವೆ. ವಿಡಿಯೊ ಪಾರ್ಲರ್‌, ಪಾತಿರಕಾಲಂ, ಮಯೂರಾಕ್ಷಿ ನನ್ನ ಆಯ್ಕೆ. ಈ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಚೆನ್ನಾಗಿವೆ.

ವಿಡಿಯೊ ಪಾರ್ಲರ್‌

ಚಿತ್ರದ ನಾಯಕ ವಿಕ್ರಂ ಒಬ್ಬ ಚಲನಚಿತ್ರ ನಿರ್ಮಾಪಕ. ಚಿತ್ರ ಮಾಡಲು ಒಳ್ಳೆಯ ಕಥಾವಸ್ತುವಿಗಾಗಿ ಹುಡುಕಾಟ ನಡೆಸುತ್ತಿರುತ್ತಾನೆ. 20 ವರ್ಷಗಳ ಬಳಿಕ ಬಾಲ್ಯದ ಗೆಳೆಯನನ್ನು ಭೇಟಿಯಾಗಲು ಹಳ್ಳಿಗೆ ಹೋಗುತ್ತಾನೆ. ಅಲ್ಲಿರುವ ವಿಡಿಯೊ ಪಾರ್ಲರ್‌ ಸುತ್ತ ಅವನ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಕೊಳ್ಳುತ್ತದೆ. ಸಂತೋಷ, ದುಃಖ, ಮಾಲೀಕನ ಮಗಳೊಂದಿಗಿನ ಮಧುರ ಕ್ಷಣಗಳು, ಯಶಸ್ಸು, ಸೋಲು ಎಲ್ಲವೂ ಪುನರ್‌ ದರ್ಶನ ಮಾಡಿಸುತ್ತವೆ.

ADVERTISEMENT

ನಿ: ಪ್ರಸಾದ್‌ ನಾಮಜೋಶಿ. ಭಾಷೆ: ಮರಾಠಿ. ಪರದೆ– 11. ಸಮಯ: ಬೆಳಿಗ್ಗೆ 11.15

ಪಾತಿರಕಾಲಂ

ಕಥೆಯ ನಾಯಕಿ ಜೆಹನಾರ ಬರ್ಲಿನ್‌ನಲ್ಲಿ ಶಿಕ್ಷಣ ಪಡೆಯುತ್ತಾಳೆ. ದಶಕಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ತನ್ನ ತಂದೆಯನ್ನು ಹುಡುಕುವ ಸಲುವಾಗಿ ಕೇರಳದ ಹುಟ್ಟೂರಿಗೆ ಮರಳಿ ಬರುತ್ತಾಳೆ. ಮಾನವತಾವಾದಿಯಾಗಿದ್ದ ಆಕೆಯ ತಂದೆ ಹುಸೇನ್‌ ಕಣ್ಮರೆಯಾಗುವ ಕೊನೆಯ ಗಳಿಗೆಯವರೆಗೂ ಜೆಹನಾರಳ ಸಂಪರ್ಕದಲ್ಲಿದ್ದ. ಮರಳಿ ಬರುವ ಆಕೆ ಪೊಲೀಸರಿಗೆ ದೂರು ನೀಡುತ್ತಾಳೆ, ಹುಡುಕಿಕೊಡುವಂತೆ ವಕೀಲರ ಮೊರೆ ಹೋಗುತ್ತಾಳೆ. ಕೊನೆಗೆ ಆಕೆ ಹಾಗೂ ಆಕೆಯ ಪತ್ರಕರ್ತ ಸ್ನೇಹಿತ ಮಹೇಶ್‌ ಅಂತರ್ಜಾಲದಲ್ಲಿ ಹುಡುಕಾಟ ಪ್ರಾರಂಭಿಸುತ್ತಾರೆ. ಕಣ್ಮರೆಯಾಗುವುದಕ್ಕೂ ಮುಂಚೆ ಹುಸೇನ್‌ ಸಂದೇಶ ಕಳುಹಿಸುವಾಗ ಬಳಸುತ್ತಿದ್ದ ಹೆಸರುಗಳ ಜಾಡು ಹಿಡಿದು ಹುಡುಕಾಟ ಪ್ರಾರಂಭಿಸುತ್ತಾರೆ.

ನಿ: ಪ್ರಿಯನಂದನನ್‌. ಭಾಷೆ: ಮಲಯಾಳಂ, ಪರದೆ: 11. ಸಮಯ– ಮಧ್ಯಾಹ್ನ 3.45

ಮಯೂರಾಕ್ಷಿ

ಇತಿಹಾಸದ ಪ್ರೊಫೆಸರ್‌ ಸುಶೋವನ್‌ಗೆ ಈಗ 84 ವರ್ಷ. ಚಿತ್ತವೈಕಲ್ಯದಿಂದ ಬಳಲುತ್ತಿದ್ದಾರೆ. ಅವರ ಮಗ ಆರ್ಯನಿಲ್‌. ಆಗಾಗ ತಂದೆಯನ್ನು ಬಂದು ನೋಡಿಕೊಂಡು ಹೋಗುತ್ತಾನೆ. ತನ್ನನ್ನು ಈ ಮಟ್ಟಕ್ಕೆ ರೂಪಿಸಿದ ತಂದೆಯನ್ನು ಬಿಟ್ಟು ಆತ ಅಮೆರಿಕದಲ್ಲಿ ನೆಲೆಸಿದ್ದಾನೆ. ಅದಕ್ಕೆ ಕಾರಣವಿದೆ. ಜೀವನದಲ್ಲಿ ಆತನಿನ್ನೂ ನೆಲೆ ಕಂಡಿಲ್ಲ. ಮದುವೆಯಾಗಿ ವಿಚ್ಛೇದನವೂ ಆಗಿದೆ. ವಯಸ್ಸಾದವರಿ ಹಾಗೂ ವಿಧಿಯ ಆಟದ ಬಗೆಗೆ ಚಿಂತಿಸಿ ಆತ ಕೊನೆಗೂ ಒಂದು ಪರಿಹಾರ ಕಂಡು ಹಿಡಿಯುತ್ತಾನೆ. ತಂದೆ ಬಡಬಡಿಸುತ್ತಿದ್ದ ಮಯೂರಾಕ್ಷಿಯನ್ನು ಕರೆತಂದು ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುತ್ತಾನೆ.

ನಿ: ಅತನು ಘೋಷ್‌. ಭಾಷೆ: ಬಂಗಾಳಿ. ಪರದೆ: 9. ಸಮಯ: ಮಧ್ಯಾಹ್ನ 1.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.