ADVERTISEMENT

ವೃದ್ಧರ ಪಾಲಿನ ‘ಧನ್ವಂತರಿ’

ರಮೇಶ ಕೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST
ವೃದ್ಧರ ಪಾಲಿನ ‘ಧನ್ವಂತರಿ’
ವೃದ್ಧರ ಪಾಲಿನ ‘ಧನ್ವಂತರಿ’   

ಮೊದಲ ಮಹಡಿಯಿಂದ ಮೆಟ್ಟಿಲು ಮೂಲಕ ನೆಲಮಹಡಿಗೆ ಬರುತ್ತಿದ್ದ ಅಜ್ಜ ಆಯತಪ್ಪಿ ಕೆಳಗೆ ಬಿದ್ದರು. ಆ ನೋವಿನಲ್ಲೂ ಆಸ್ಪತ್ರೆಗೆ ಕರೆ ಮಾಡಿದರು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್‌ ಬಂದೇ ಬಿಟ್ಟಿತು. ವೈದ್ಯರ ತಂಡ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿತು. ಆಪತ್ತಿನಿಂದ ಅವರನ್ನು ಈ ತಂಡ ಪಾರು ಮಾಡಿತು.

ಹೀಗೆ ಒಂಟಿಯಾಗಿದ್ದ ವೃದ್ಧರಿಗೆ ನೆರವು ನೀಡಿದ್ದು ಜಯನಗರದ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಯ ‘ಧನ್ವಂತರಿ’ ತಂಡ.
ಇಳಿಸಂಜೆಯಲ್ಲಿರುವ ವೃದ್ಧರಿಗೆ ಏಕಾಂಗಿತನ ಈ ನಗರದಲ್ಲಿ ಅನಿವಾರ್ಯ. ದುಡಿಮೆ ಸಂಬಂಧ ಪರ ಊರಿನಲ್ಲಿರುವ ಮಕ್ಕಳು ಅಥವಾ ಕೆಲಸಕ್ಕೆಂದು ದೂರದ ಪ್ರದೇಶಕ್ಕೆ ಹೋದಾಗ ಪೋಷಕರು ಇಡೀ ದಿನವನ್ನು ಒಂಟಿಯಾಗಿ ಕಳೆಯಲೇಬೇಕಾಗುತ್ತದೆ. 

ಇಂಥ ಸಂದರ್ಭದಲ್ಲಿ ಯಾವುದೇ ಆಕಸ್ಮಿಕಗಳು ಅಥವಾ ಅವಘಡಗಳು ಜರುಗಿದರೆ..? ಈ ಪ್ರಶ್ನೆಗೆ ಪರಿಹಾರವೆಂಬಂತೆ ನಗರದಲ್ಲಿ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರು, ಒಬ್ಬಂಟಿಗರಿಗಾಗಿ ಮನೆಗೆ ಹೋಗಿ ವೈದ್ಯಕೀಯ ಸೇವೆ ಸಲ್ಲಿಸುವ ‘ಧನ್ವಂತರಿ’ (ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ) ಎಂಬ ಸೇವೆಯನ್ನು ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಯು ಆರಂಭಿಸಿದೆ. 

2010ರ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಜನ್ಮದಿನದಂದು ಈ ಸೌಲಭ್ಯವನ್ನು ಆರಂಭಿಸಲಾಯಿತು. ಆರ್ಥಿಕವಾಗಿ ಹಿಂದುಳಿದ, ಹಿರಿಯ ನಾಗರಿಕರು ಹಾಗೂ ಒಬ್ಬಂಟಿಗರ ಕಾಳಜಿಯೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಯನ್ನು ಸೇವೆ ಉದ್ದೇಶದಿಂದಲೇ  ಆರಂಭಿಸಲಾಯಿತು. ಇಲ್ಲಿ ಹಿರಿಯ ನಾಗರಿಕರಿಗೆ ಶೇ15 ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆಯಿಂದ ಬಳಲುತ್ತಿರುವವರರು ಮನೆಯಲ್ಲಿ ಯಾರೂ ಇಲ್ಲದ ವೇಳೆ ತೊಂದರೆಗೊಳಗಾದರೆ ಅವರಿದ್ದಲ್ಲಿಗೇ ಹೋಗಿ ಚಿಕಿತ್ಸೆ ನೀಡುತ್ತದೆ ಧನ್ವಂತರಿ ತಂಡ. ನೋಂದಣಿಗೆ ರೂ 1ಸಾವಿರ ಪಾವತಿಸಬೇಕು. ಅಂದಿನಿಂದ ಧನ್ವಂತರಿ ಸೌಲಭ್ಯದ ಫಲಾನುಭವಿಗಳಾಗುತ್ತಿರಿ. ವೈದ್ಯಕೀಯ ಸಲಹೆ, ಇ.ಸಿ.ಜಿ., ರಕ್ತದೊತ್ತಡ ಪರೀಕ್ಷೆ, ಔಷಧಿ, ಫಿಜಿಯೋಥೆರಪಿ ಸೇರಿದಂತೆ ಹಲವು ಸೌಲಭ್ಯಗಳ ಮೂಲಕ ಈ ಧನ್ವಂತರಿ ಚಿಕಿತ್ಸೆಯಲ್ಲಿ ನಿಗಾವಹಿಸುತ್ತಾರೆ. ಚಿಕಿತ್ಸೆಗೆ ಅನುಗುಣವಾಗಿ ಹೆಚ್ಚೆನಿಸದ ಶುಲ್ಕವನ್ನು ಪಡೆಯುತ್ತಾರೆ.

ಆಕ್ಸಿಜನ್‌ ಸಿಲಿಂಡರ್‌, ಹಾಸಿಗೆ, ವಾಕರ್‌, ಗಾಲಿ ಕುರ್ಚಿ, ಎಲೆಕ್ಟ್ರಿಕ್‌ ಮೆಷಿನ್‌, ಬ್ಯಾಕ್‌ರೆಸ್ಟ್‌, ವಾಟರ್‌ ಬೆಡ್‌  ಹೀಗೆ ಆಸ್ಪತ್ರೆ ಉಪಕರಣಗಳು ಬಾಡಿಗೆಗೆ ಸಿಗುತ್ತವೆ. ‘ಅಶಕ್ತರು, ಬಡವರಿಗಾಗಿ ಇಂಥ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದು ಹೇಳುತ್ತಾರೆ  ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ ಉಪಾಧ್ಯಕ್ಷ ಜಿ. ಸುಬ್ಬಣ್ಣ.

ಈ ಯೋಜನೆ ಆಸ್ಪತ್ರೆಯಿಂದ ಐದು ಕಿಲೋ ಮೀಟರ್ ವ್ಯಾಪ್ತಿಯವರೆಗೂ ಇದೆ. ಇದುವರೆಗೂ 200 ಮಂದಿ ಧನ್ವಂತರಿ ಸೌಲಭ್ಯದ ಫಲಾನುಭವಿಗಳಾಗಿದ್ದಾರೆ. ತಿಂಗಳಿಗೆ 30ರಿಂದ 40 ಮಂದಿ ನೋಂದಣಿ ಮಾಡಿಸುತ್ತಿರುವುದು ಸೇವೆಯ ಅಗತ್ಯವನ್ನು ತಿಳಿಸುತ್ತದೆ.

‘ಧನ್ವಂತರಿ ತಂಡದಲ್ಲಿ ಒಬ್ಬ ವೈದ್ಯ, ಒಬ್ಬರು ನರ್ಸ್‌ ಹಾಗೂ ಮೆಲ್ವಿಚಾರಕರೊಬ್ಬರು ಇರುತ್ತಾರೆ. ಪ್ರತಿ ಬಾರಿಯೂ ಕನಿಷ್ಠ ಶುಲ್ಕವನ್ನು (ರೂ300 ಮೀರದ) ಪಡೆಯುತ್ತೇವೆ. ಅಲ್ಲದೇ ಅಪಾರ್ಟ್‌ಮೆಂಟ್‌ಗಳಲ್ಲಿ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸುತ್ತೇವೆ. ಅಲ್ಲಿ ಉಚಿತವಾಗಿ ತಪಾಸಣೆ ಮಾಡುವ ಜೊತೆಗೆ ಧನ್ವಂತರಿ ಯೋಜನೆಯ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಇದೊಂದು ಸೇವಾ ಮನೋಭಾವದಿಂದ ಆರಂಭಿಸಿದ ಯೋಜನೆ’ ಎನ್ನುತ್ತಾರೆ ಅವರು.

‘ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕರೆ ಸ್ವೀಕರಿಸಲಾಗುತ್ತದೆ. ತಮ್ಮ ಆಸ್ಪತ್ರೆಯಿಂದ ಐದು ಕಿ.ಲೋ ಮೀಟರ್‌ ವ್ಯಾಪ್ತಿಯಲ್ಲಿ ಈ ಸೌಲಭ್ಯವಿದೆ. ಸದಸ್ಯರ ಸಂಖ್ಯೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಈ ಸೇವೆಯನ್ನು ವಿವಿಧ ಪ್ರದೇಶಗಳಿಗೂ ವಿಸ್ತರಿಸುವ ಹಾಗೂ 24 ಗಂಟೆ ಸೇವೆ ಒದಗಿಸುವ ಯೋಜನೆ ಇದೆ’ ಎಂದು ಆಸ್ಪತ್ರೆ ಪ್ರಧಾನ ಕಾರ್ಯದರ್ಶಿ ಕೆ.ವಿ. ಉಪಾಧ್ಯಾಯ ಹೇಳುತ್ತಾರೆ.

ಸ್ಥಳ: ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ, ನಂ 523, 10ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, 5ನೇ ಬ್ಲಾಕ್‌, ಜಯನಗರ. ಮಾಹಿತಿಗೆ: 96634 74777, 98867 15304.

ವೃದ್ಧರಿಗೆ ಆಸರೆ
ಈ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ನನಗೆ ಸಕ್ಕರೆ ಕಾಯಿಲೆ ಇದೆ. ಹಾಗಾಗಿ ಹದಿನೈದು ದಿನಕ್ಕೊಮ್ಮೆ ಆಸ್ಪತ್ರೆಗೆ ಹೋಗಬೇಕು. ವಯಸ್ಸು 74. ಓಡಾಡುವುದು ಕಷ್ಟ. ಬೆನ್ನುನೋವು ಬೇರೆ ಕಾಡಿಸುತ್ತಿದೆ. ಹೀಗಾಗಿ ‘ಧನ್ವಂತರಿ’ಯಲ್ಲಿ ಹೆಸರು ನೋಂದಾಯಿಸಿದ್ದೇನೆ. ಕರೆ ಮಾಡಿದರೆ ಸಮಯಕ್ಕೆ ಸರಿಯಾಗಿ ವೈದ್ಯರು ಬರುತ್ತಾರೆ. ಈ ಯೋಜನೆ ವೃದ್ಧರ ಪಾಲಿಗೆ ಆಶಾದೀಪವಾಗಿದೆ.

–ಪದ್ಮಾಕ್ಷಿ, ಶಾಕಾಂಬರಿ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT