ADVERTISEMENT

ವೈರಲ್‌ ಆಗಿದೆ ಭಟ್ಟರ ಹಾಡು!

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ವೈರಲ್‌ ಆಗಿದೆ ಭಟ್ಟರ ಹಾಡು!
ವೈರಲ್‌ ಆಗಿದೆ ಭಟ್ಟರ ಹಾಡು!   

ಅನಿಸಿಕೆಗಳನ್ನು ಹಾಡಾಗಿಸುವುದು ಸಿನಿಮಾ ನಿರ್ದೇಶಕ ಯೋಗರಾಜ ಭಟ್ಟರಿಗೆ ಕರತಲಾಮಲಕ. ಪ್ರಚಲಿತ ವಿದ್ಯಮಾನಗಳಿಗೆ ಹಾಡಿನ ಮೂಲಕ ಸ್ಪಂದಿಸುವುಧು ಅವರ ನೆಚ್ಚಿನ ಹವ್ಯಾಸ. ಈಗ ಇವರ ಸಾಹಿತ್ಯಕ್ಕೆ ಒಲಿದಿರುವುದು ಬಹುಚರ್ಚಿತ ಮತ್ತು ಬಹುತೇಕರಿಗೆ ಅರ್ಥವಾಗದ ‘ಜಿಎಸ್‌ಟಿ’.

ಭಟ್ರು ಜಿಎಸ್‌ಟಿ ಬಗ್ಗೆ ಬರೆದಿರುವ ಹಾಡು ಈಗ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಹರಿಕೃಷ್ಣ ಸಂಗೀತ ಸಂಯೋಜಿಸಿ ಅವರೇ ಹಾಡಿರುವ ಈ ಹಾಡಿಗೆ, ನಟರಾದ ಗಣೇಶ್ ಮತ್ತು ದುನಿಯಾ ವಿಜಯ್ ಕೂಡ ತಮ್ಮ ದನಿ ಸೇರಿಸಿದ್ದಾರೆ. ಹಾಡಿನ ರೆಕಾರ್ಡಿಂಗ್ ವಿಡಿಯೊ ಯೂಟ್ಯೂಬ್‌ನಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಭಟ್ಟರು ತಮ್ಮ ಎಂದಿನ ಉಡಾಫೆ ಶೈಲಿಯಲ್ಲಿ ಆರ್ಥಿಕ ಅಸಮಾನತೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರದ ಯೋಜನೆಗಳು ಬಡವನನ್ನು ಬಡವನ್ನಾಗಿಯಷ್ಟೆ ಉಳಿಸುತ್ತವೆ ಎಂಬುದನ್ನು ಭಟ್ಟರು ಹೇಳಿರುವ ರೀತಿಯೇ ಈ ಹಾಡನ್ನು ಜನಸಾಮಾನ್ಯರೂ ಮೆಚ್ಚುವಂತೆ ಮಾಡಿದೆ ಎನ್ನಬಹುದು. ನೋಟು ರದ್ದತಿ, ತೆರಿಗೆ ಪದ್ಧತಿಗಳನ್ನು ವಿಡಂಬನೆ ಮಾಡಿರುವ ಭಟ್ಟರು ಏನೇ ಆದರೂ ಕಾಳಧನಿಕರು ಆರಾಮವಾಗಿಯೇ ಇದ್ದಾರೆ, ಬಡವನ ಬೆನ್ನು ಇನ್ನಷ್ಟು ಬಾಗುತ್ತಿದೆ ಎಂದು ಕಿಡಿಕಾರಿದ್ದಾರೆ.ಲವಲವಿಕೆಯಿಂದ ಕೂಡಿರುವ ಹಾಡಿನ ರೆಕಾರ್ಡಿಂಗ್‌ ವಿಡಿಯೊದ ನಡುನಡುವೆ ಸೇರಿಸಲಾಗಿರುವ ಕಾರ್ಟೂನ್‌ಗಳು ಭಟ್ರು ಹಾಡಿನ ಮೂಲಕ ಹೇಳಹೊರಟಿರುವುದನ್ನು ಮನದಟ್ಟು ಮಾಡುತ್ತವೆ.

ADVERTISEMENT

ಸದಾ ಕ್ರಿಯಾಶೀಲವಾಗಿರುವ ಭಟ್ಟರು ಈ ಮುಂಚೆಯೂ ಈ ರೀತಿಯ ಹಾಡುಗಳನ್ನು ರಚಿಸಿದ್ದರು. ಗೆಳೆಯ ಸೂರಿ ಮದುವೆ, ಯಶ್‌-ರಾಧಿಕಾ ಮದುವೆ ಕುರಿತು ಭಟ್ರು ಹಾಡು ಬರೆದಿದ್ದರು. ಲೋಕಸಭೆ ಚುನಾವಣೆ, ಕಾವೇರಿ ಗಲಾಟೆ, ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗಳ ಬಗ್ಗೆ ಅವರು ರಚಿಸಿದ್ದ ಹಾಡು ವೈರಲ್ ಆಗಿದಿದ್ದುದು ಈಗ ಇತಿಹಾಸ.

ಕಡಿಮೆ ಅವಧಿಯಲ್ಲಿ ರಚಿಸಿ, ರೆಕಾರ್ಡಿಂಗ್ ಮಾಡಲಾದ ಜಿಎಸ್‌ಟಿ ಹಾಡು ಕಡಿಮೆ ಅವಧಿಯಲ್ಲೇ ಯೂಟ್ಯೂಬ್‌ನಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಜಿಎಸ್‌ಟಿ ಜಾರಿಯಾದ ದಿನವೇ ಬಿಡುಗಡೆಯಾದ ಈ ಹಾಡಿನ ವಿಡಿಯೊ ಮೂರೇ ದಿನದಲ್ಲಿ 2.26 ಲಕ್ಷ ವೀಕ್ಷಣೆ ಕಂಡಿದೆ.

ಸದ್ಯ ಗಣೇಶ್ ಅವರು ನಟಿಸಿರುವ ’ಮುಗುಳುನಗೆ’ ಸಿನಿಮಾ ನಿರ್ದೇಶಿಸಿ ಬಿಡುಗಡೆಯ ಪೂರ್ವತಯಾರಿಗಳಲ್ಲಿ ಬ್ಯುಸಿಯಾಗಿರುವ ಭಟ್ರಿಗೆ ಜಿಎಸ್‌ಟಿ ಹಾಡು ಹಿಟ್ ಆಗಿರುವುದು ಮುಗುಳ್ನಗೆ ಮೂಡಿಸಿದೆ.
ಹಾಡು ನೋಡಲು: bit.ly/2t86hzA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.