ADVERTISEMENT

`ವೋಗ್' ವಯ್ಯಾರ

ಚೆಲುವಿನ ಚಿತ್ತಾರ

ಸುರೇಖಾ ಹೆಗಡೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST
`ವೋಗ್'     ವಯ್ಯಾರ
`ವೋಗ್' ವಯ್ಯಾರ   

ವಿಶಾಲವಾದ ವೇದಿಕೆ ಮುಂದೆ ನೃತ್ಯ ಮಾಡುತ್ತಿತ್ತು ಕಣ್ಣು ಕೋರೈಸುವ ಬೆಳಕು. ಆಗಾಗ ಹಿಂದಿನಿಂದ ಬರುತ್ತಿದ್ದ ಗೋಲಾಕಾರದ ಬೆಳಕು ವೇದಿಕೆ ಹತ್ತಿದವರನ್ನೇ ಗುರಿಯಾಗಿಸಿತ್ತು. ವೇದಿಕೆ ಮುಂಭಾಗದಲ್ಲಿ ಸುಳಿದು ಹೋಗುತ್ತಿದ್ದ ಬಣ್ಣಬಣ್ಣದ ತುಂಡುಡುಗೆ ತೊಟ್ಟ ಮಾನಿನಿಯರನ್ನು ನೋಡಿದರೆ ಬೇರಾವುದೋ ಲೋಕ ಪ್ರವೇಶಿಸಿದ ಅನುಭವ.

ಅಷ್ಟರಲ್ಲೇ ಜೋಡಿಗಳಿಬ್ಬರು ಕ್ಯಾಮರಾಮೆನ್‌ಗಳೊಂದಿಗೆ ಕಾದಾಡಲಾರಂಭಿಸಿದರು. `ವಿ ಕಾಂಟ್ ಸೀ ಎನಿಥಿಂಗ್' ಎಂದು ಹುಡುಗಿ ಅರಚುತ್ತಿದ್ದಂತೆ `ಎಲ್ಲವನ್ನೂ ಸರಿ ಮಾಡಿಸುತ್ತೇನೆ' ಎಂದು ಯುದ್ಧಕ್ಕೆ ನಿಂತವನಂತೆ ಮುಂದುವರಿದ ಹುಡುಗ. ತಕ್ಷಣವೇ ಮುಂದೆ ಇಬ್ಬರಿಗೂ ಜಾಗ ಸಿಕ್ಕಿತೆನ್ನಿ.

ಯಾವುದನ್ನೂ ಚಾಚೂ ತಪ್ಪದೆ ನೋಡಬೇಕು ಎಂದು ಅಲ್ಲಿ ನೆರೆದವರೆಲ್ಲ ಹವಣಿಸುತ್ತಿದ್ದಂತೆ ಇತ್ತು. ಫ್ಯಾಷನ್ ಟೆಕ್ನಾಲಜಿಯ ಪ್ರತಿಷ್ಠಿತ ಕಾಲೇಜ್ ವೋಗ್ ಆಯೋಜಿಸಿದ್ದ ಫ್ಯಾಷನ್ ಶೋ ಗಮ್ಮತ್ತು ಹಾಗಿತ್ತು. ವಿದ್ಯಾರ್ಥಿಗಳು, ಪಾಲಕರೇ ಹೆಚ್ಚಾಗಿ ಸೇರಿದ್ದ ವಿಶಾಲವಾದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಎಲ್ಲರೂ ಫ್ಯಾಷನ್ ಮಂತ್ರವನ್ನೇ ಜಪಿಸುತ್ತಿದ್ದರು.

ಸುಮಾರು ಒಂದೂವರೆ ಗಂಟೆ ನಂತರ ಪ್ರಾರಂಭವಾದ ಕಾರ್ಯಕ್ರಮಕ್ಕೆ ಕಾಲೇಜು ಸಂಸ್ಥಾಪಕ ಎಂ.ಎಂ.ಕರಿಯಪ್ಪ ಚಾಲನೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಚಿತ್ರ ನಿರ್ದೇಶಕಿ ರೂಪಾ ಅಯ್ಯರ್, ಕಲಾವಿದ ಎಸ್.ಜಿ.ವಾಸುದೇವ್ ಸಂಭ್ರಮಕ್ಕೆ ಸಾಕ್ಷಿಯಾದರು.

ನಂತರ ಪ್ರಾರಂಭವಾದ ಫ್ಯಾಷನ್ ಶೋ `ಬೆಲ್ಲೊಮೋಡಾ' ಎಲ್ಲರಲ್ಲೂ ಮಿಂಚಿನ ಸಂಚಾರ ಮೂಡಿಸಿತು. ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ವಿನ್ಯಾಸದ ಉಡುಗೆ, ಆಭರಣಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು.

ವಿದ್ಯಾರ್ಥಿನಿ ಮಧುರಾ ಗೌಡ ವಿನ್ಯಾಸದ ಬಿಳಿಯ ಉಡುಪು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. ಸಿಂಡ್ರೆಲಾ ಉಡುಗೆಯಿಂದ ಪ್ರೇರಣೆ ಪಡೆದು ಸಿದ್ಧಪಡಿಸಲಾದ ಈ ಉಡುಪುಗಳನ್ನು ರೂಪದರ್ಶಿಯರು ತೊಟ್ಟು ರ‌್ಯಾಂಪ್ ಮೇಲೆ ಕಾಲಿಟ್ಟಾಗ ಹೊಸ ವಾತಾವರಣವೇ ಸೃಷ್ಟಿಯಾಯಿತು. ಅದುವರೆಗೆ ಚೀರಾಟ, ಕೂಗಾಟಗಳೇ ಕೇಳುತ್ತಿದ್ದ ಭವನದಲ್ಲಿ ದಿವ್ಯ ಮೌನ.

ನೀಳವಾದ ಮೈಗಂಟಿದ ಆ ಉಡುಪನ್ನು ಧರಿಸಿ ಸಂಗೀತಕ್ಕೆ ಹೆಜ್ಜೆ ಇಡುತ್ತಿದ್ದ ಮಾಡೆಲ್‌ಗಳ ಮೈಮಾಟ, ಬಿಂಕ ಬಿಗುಮಾನದ ನಡಿಗೆ ಹಾಗೂ ಉಡುಪಿನ ವಿನ್ಯಾಸ ವೃತ್ತಿಪರತೆಗೆ ಸಾಕ್ಷಿಯಂತಿತ್ತು.

ಮತ್ತೊಬ್ಬ ವಿದ್ಯಾರ್ಥಿನಿ ಜೈತ್ರಾ ಅವರ `ವಿಂಟರ್ ಪ್ಯಾಲೇಸ್ ಬಾಲ್' ಸಂಗ್ರಹ ಇಷ್ಟವಾಯಿತು. ಗುಲಾಬಿ ಹಾಗೂ ಕಪ್ಪು ಬಣ್ಣದ ಬಟ್ಟೆಗಳನ್ನು ಬೆರೆಸಿ ವಿನ್ಯಾಸಗೊಳಿಸಿದ ಆ ಉಡುಪು ವಿಶೇಷವಾಗಿತ್ತು.

ಉದ್ದದ ಡ್ರೆಸ್‌ಗಳನ್ನು ಕಣ್ಣುತುಂಬಿಕೊಂಡಿದ್ದಾಯಿತು. ಆಮೇಲೆ ಹೊಸತನ ಬಿಂಬಿಸಿದ್ದು ನಾಗಸಿಂಧು ಅವರ `ಕಾಕಿ ವಾಕಿ ಡೂಡಾ' ಸಂಗ್ರಹ. ತೊಡೆಯವರೆಗಷ್ಟೇ ಚಾಚಿಕೊಂಡಿದ್ದ ಈ ದಿರಿಸು ರೂಪದರ್ಶಿಗಳ ನಡಿಗೆಗೆ ತಕ್ಕಂತೆ ಸ್ಪಂದಿಸುತ್ತಿದ್ದವು. ಅದಕ್ಕೆ ಹೊಂದುವ ಚಪ್ಪಲಿ, ಬ್ಯಾಗ್, ಟೋಪಿ ಧರಿಸಿ ರ‌್ಯಾಂಪ್‌ವಾಕ್ ಮಾಡುತ್ತಿದ್ದ ಅವರು ವಿದೇಶಿ ಸಂಸ್ಕೃತಿಯನ್ನು ಅನುಕರಿಸಿದ್ದರು. ಅವರು ಕುಳಿತು ಮಾಡುತ್ತಿದ್ದ ಅಭಿನಯ, ಹಾವಭಾವಗಳು ಮುದನೀಡಿದವು.

ಫ್ಯಾಷನ್ ಶೋಗೆ ವಿಭಿನ್ನತೆ ತಂದಿದ್ದು ಆಕಾಶ್ ಗಣಪತಿ ಅವರ `ಕಾನ್‌ಕೋಶನ್ ಟ್ವಿಸ್ಟ್' ಸಂಗ್ರಹ. ತಿಳಿ ನೀಲಿ, ಕಂದು ಮುಂತಾದ ಬಣ್ಣಗಳನ್ನು ಕಪ್ಪು ಬಣ್ಣದೊಂದಿಗೆ ಸೇರಿಸಿ ತಯಾರಿಸಿದ ಈ ಬಟ್ಟೆಗಳ ಹಿಂಭಾಗದಲ್ಲಿ ಅಳಿವಿನಂಚಿನಲ್ಲಿರುವ ಹಲ್ಲಿ, ಮೊಸಳೆ ಮುಂತಾದ ಪ್ರಾಣಿಗಳ ಚಿತ್ರವಿತ್ತು. ಸ್ಪೈಡರ್‌ಮ್ಯಾನ್ ಮುಂತಾದ ಹಾಲಿವುಡ್ ಸಿನಿಮಾಗಳಲ್ಲಿ ನಾಯಕ ನಟಿ ಧರಿಸುವ ಉಡುಪುಗಳ ನೆನಪಿಸುವ ವಿಶಿಷ್ಟ ದಿರಿಸೊಂದನ್ನು ಆಕಾಶ್ ಸಿದ್ಧಪಡಿಸಿದ್ದರು. ಕಣ್ಣಿಗೆ ಗಾಗಲ್ಸ್ ಹಾಕಿ, ಜಾಕೆಟ್ ಧರಿಸಿದ್ದ ರೂಪದರ್ಶಿಯ ಚೆಲುವು ಇಮ್ಮಡಿಗೊಂಡಿತ್ತು.

ಕೊನೆಯಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟ ವಸ್ತ್ರವಿನ್ಯಾಸಕ ಅತ್ಯಂತ ಗಂಭೀರವಾಗಿ ರೂಪದರ್ಶಿಗೆ ಏನೋ ಉಸುರಿದ. ಅದನ್ನು ಕೇಳಿಸಿಕೊಳ್ಳದಂತೆ ಬೆಕ್ಕಿನ ನಡಿಗೆ ಮುಂದುವರಿಸಿದ ಆಕೆಗೆ ಮತ್ತೊಮ್ಮೆ ಆದೇಶ. ವೇದಿಕೆಯಲ್ಲೇ ಆಕೆ ಜಾಕೆಟ್ ತೆಗೆದಳು, ಸೊಂಟವನ್ನು ಆವರಿಸಿದ್ದ ಉದ್ದದ ಬಟ್ಟೆಯನ್ನು ಆಕಾಶ್ ತೆಗೆದರು. ಅರ್ಧ ಎದೆಯ ಭಾಗ ಕಾಣುವಂತೆ ವಿನ್ಯಾಸ ಮಾಡಲಾಗಿದ್ದ ಮೈಗಂಟಿದ ದಿರಿಸು ಮಾತ್ರ ಕೊನೆಯಲ್ಲಿ ಉಳಿದದ್ದು!

ಇಡೀ ಕಾರ್ಯಕ್ರಮಕ್ಕೆ ಉಡುಪಿನ ವಿನ್ಯಾಸದ ಮೂಲಕ ಹೊಸ ಚಿಂತನೆ ಮೂಡಿಸಿದ್ದು ಮುದ್ದು ನಗೆಯ ಸರಳ ಹುಡುಗಿ ಹೇಮಾವತಿ ವಿನ್ಯಾಸಗೊಳಿಸಿದ `ರಿಯೂಸ್ ರಿಸೈಕಲ್' ಸಂಗ್ರಹ. ಪೇಪರ್‌ನಿಂದಲೇ ಚಿಕ್ಕ, ದೊಡ್ಡ ಹೂವುಗಳನ್ನು ತಯಾರಿಸಿ ನಿರ್ಮಿಸಲಾಗಿರುವ ಈ ಉಡುಪನ್ನು ತೊಟ್ಟು ರೂಪದರ್ಶಿ ರ‌್ಯಾಂಪ್ ಏರುತ್ತಿದ್ದಂತೆ ಪ್ರೇಕ್ಷಕವರ್ಗದಿಂದ ಚಪ್ಪಾಳೆಯ ಸುರಿಮಳೆ. ಕೇವಲ ಪೇಪರ್‌ನಿಂದಲೇ ವಿವಿಧ ವಿನ್ಯಾಸಗಳನ್ನು ಮಾಡಿ ಅದರ ಮೇಲೆ `ಗೋ ಗ್ರೀನ್, ಸೇವ್ ಅರ್ತ್' ಎಂಬ ಸಂದೇಶವನ್ನು ಬರೆದಿದ್ದರು. ಕಿವಿಯೋಲೆ, ಸರ, ಬಳೆ ಎಲ್ಲವನ್ನೂ ಪೇಪರ್‌ನಿಂದಲೇ ತಯಾರಿಸಿದ್ದುದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಂತಿತ್ತು.

ನಂತರ ವಿದ್ಯಾರ್ಥಿಗಳೇ ತಯಾರಿಸಿದ ಆಭರಣಗಳನ್ನು ಪ್ರದರ್ಶಿಸಲಾಯಿತು. ಫ್ಯಾಷನ್ ಬದುಕಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಮೆಚ್ಚುಗೆಯ ಕರತಾಡನ ವೇದಿಕೆಯಲ್ಲಿ ವ್ಯಕ್ತವಾಗುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.