ADVERTISEMENT

ಶರಾವತಿ: ಕಳೆದುಹೋದ ಕಥನ ಕಾರಣ

ಪದ್ಮನಾಭ ಭಟ್ಟ‌
Published 17 ಜೂನ್ 2018, 14:26 IST
Last Updated 17 ಜೂನ್ 2018, 14:26 IST
ಶರಾವತಿ: ಕಳೆದುಹೋದ ಕಥನ ಕಾರಣ
ಶರಾವತಿ: ಕಳೆದುಹೋದ ಕಥನ ಕಾರಣ   

ಜಲವಿದ್ಯುತ್ ಯೋಜನೆಗಳ ನೆಪದಲ್ಲಿ ಅಪಾರ ಕಾಡನ್ನೂ, ಆ ಕಾಡಿನೊಟ್ಟಿಗೆ ಕಳ್ಳುಬಳ್ಳಿ ಸಂಬಂಧ ಹೊಂದಿ ಬದುಕುತ್ತಿದ್ದ ಮನುಷ್ಯರ ಬದುಕನ್ನೂ ನಾಶಪಡಿಸಿದ ಹಲವು ಕಥೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ಸಿಗುತ್ತವೆ.

ಹೀಗೆ ಬದುಕು ಮುಳುಗಿಸಿಕೊಂಡವರ ಕಥೆಯನ್ನು ವಸ್ತುವನ್ನಾಗಿಸಿಕೊಂಡು ತಯಾರಾದ ಕಿರುಚಿತ್ರ ‘ಶರಾವತಿ’. ನಾ. ಡಿಸೋಜ ಅವರ ‘ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ’ ಎಂಬ ಕಥೆಯನ್ನು ಆಧರಿಸಿದ ಈ ಕಿರುಚಿತ್ರವನ್ನು ನಿರ್ದೇಶಿಸಿರುವುದು ಪ್ರಶಾಂತ ಸಾಗರ. ಚಿತ್ರಕಥೆ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನೂ ಅವರೇ ನಿರ್ವಹಿಸಿದ್ದಾರೆ.

ಲಿಂಗನಮಕ್ಕಿ ಡ್ಯಾಂ ಮತ್ತು ಜೋಗವನ್ನು ನೋಡಿಕೊಂಡು ಹೋಗಲು ಬಂದಿರುವ ಹವ್ಯಾಸಿ ಛಾಯಾಗ್ರಾಹಕನಿಗೆ ಶರಾವತಿ ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕೂತಿರುವ ಅಪರಿಚಿತ ವ್ಯಕ್ತಿ ಕಾಣಿಸುತ್ತಾನೆ. ಮಾತನಾಡಿಸಿದಾಗ ಅವನು ತನ್ನ ಕಥೆಯನ್ನು ಬಿಚ್ಚಿಡುತ್ತಾನೆ. ನೀರೇ ನೀರು ಆವರಿಸಿರುವ ಜಾಗದತ್ತ ತೋರಿಸುತ್ತ ‘ನರಸೀಗದ್ದೆ’ ಎಂಬ ಊರಿನ ಕಥೆ ಹೇಳುತ್ತಾನೆ. ಕಾಡನ್ನು ಕಡಿದು ಗದ್ದೆ ತೋಟ ಮಾಡಿ, ಕಟ್ಟಿದ ಊರದು, ನಳನಳಿಸುವ ಬೆಳೆಯನ್ನು ಕಂಡು ಊರ ಸಾಹುಕಾರರು ಕೇಳಿದಾಗಲೂ ಆ ಭೂಮಿಯನ್ನು ಕೊಡದೆ ನರಸಣ್ಣ ಉಳಿಸಿಕೊಂಡಿರುತ್ತಾನೆ. ಅವನಿಂದಲೇ ಆ ಜಾಗಕ್ಕೆ ನರಸೀಗದ್ದೆ ಎಂಬ ಹೆಸರೂ ಬಂದಿರುತ್ತದೆ. ಅಂಥ ಊರು ಸರ್ಕಾರದ ಅಣೆಕಟ್ಟು ಕಟ್ಟುವ ಯೋಜನೆಗೆ ಬಲಿಯಾಗಿ, ಊರು ಬಿಡುಬೇಕಾಗಿ ಬಂದು ಬದುಕು ಅತಂತ್ರಗೊಂಡ ಕಥೆಯನ್ನು ನರಸಣ್ಣ ಆವೇಶದಲ್ಲಿಯೇ ಹೇಳುತ್ತ ನದಿಯತ್ತ ನಡೆದುಕೊಂಡು ಹೋಗುತ್ತಾನೆ.

ADVERTISEMENT

ನೆಲವನ್ನು ನೆಚ್ಚಿಕೊಂಡಿದ್ದವರು ‘ಮುಳುಗಡೆ’ಯ ಕಾರಣಕ್ಕೆ ಊರು ಬಿಡಬೇಕಾಗಿ ಬಂದಾಗ ಅನುಭವಿಸುವ ಸಂಕಟ, ಬೇರು ಕಿತ್ತ ಗಿಡದ ನೋವಿನಂಥದ್ದು. ಅಂಥ ನೋವಿನ ಕಥೆಯನ್ನು ಹೇಳಲು ಹೊರಟಿರುವ ಕಿರುಚಿತ್ರ ಶರಾವತಿ. ಸಿನಿಮಾ ವ್ಯಾಮೋಹಿಯ ಪ್ರಾರಂಭದ ಹೆಜ್ಜೆ ಇದು ಎಂಬ ವಿನಾಯ್ತಿಯನ್ನು ಬಿಟ್ಟು ನೋಡಿದಾಗ ಹಲವು ತೊಡಕುಗಳು ಕಾಣಿಸುತ್ತ ಹೋಗುತ್ತವೆ.

ಈ ಕಿರುಚಿತ್ರದಲ್ಲಿ ಶರಾವತಿ ನದಿ ದಡದ ಮನಮೋಹಕ ದೃಶ್ಯಗಳಿವೆ. ಕಾಡಿನ ಝರಿ, ಕೆಂಬಣ್ಣದ ರಸ್ತೆ, ವಿಸ್ತಾರ ನೀರಿನ ಹರವು, ಹಸಿರು ಸಿರಿ ಎಲ್ಲವೂ ವಾವ್ ಅನಿಸುವ ಹಾಗಿದೆ. ಛಾಯಾಗ್ರಾಹಕ (ನಿರ್ದೇಶಕರೇ ಈ ಚಿತ್ರದ ಛಾಯಾಗ್ರಾಹಕರು) ನಿಸರ್ಗದ ಸೌಂದರ್ಯವನ್ನು  ಮೋಹಕವಾಗಿ ತೋರಿಸಲು ಪ್ರಯತ್ನಿಸಿರುವುದು ಪ್ರತಿಯೊಂದು ಫ್ರೇಮ್‌ನಲ್ಲಿಯೂ ಕಾಣಿಸುತ್ತದೆ. ಆದರೆ ಈ ‘ಚಂದವಾಗಿ ಕಾಣಿಸುವ ವ್ಯಾಮೋಹ’ವೇ ಈ ಚಿತ್ರದ ಉದ್ದೇಶಕ್ಕೆ ಮಾರಕವೂ ಆಗಿದೆ. ಮುಳುಗಡೆಯಲ್ಲಿ ನೆಲೆ ಕಳೆದುಕೊಂಡವರ ಬದುಕಿನ ಗಾಢ ನೋವು, ಆಧುನಿಕತೆಯ ಆಮಿಷಕ್ಕೆ ಬಲಿಯಾದವರ ದಟ್ಟ ವಿಷಾದ ಈ ಕಥೆಯ ಕೇಂದ್ರ. ಆದರೆ ತೆರೆಯ ಮೇಲೆ ಕಾಣುವ ವೈಮಾನಿಕ ವಿಹಂಗಮ ಹಸಿರು ದೃಶ್ಯಗಳಲ್ಲಿಯೇ ಮನಸ್ಸು ವಿರಮಿಸಿ ಕಥೆಯ ಆತ್ಮ ಪ್ರೇಕ್ಷಕನನ್ನು ತಟ್ಟದೆಯೇ ಹೋಗಿಬಿಡುತ್ತದೆ.

ದಂಡೆಯ ಮೇಲೆ ಕೂತ ನರಸಣ್ಣ ತನ್ನ ಬದುಕಿನ ಕಥೆಯನ್ನು ಹೇಳುವಾಗ ಅವನ ಮಾತುಗಳನ್ನೆಲ್ಲ ಕ್ಯಾಮೆರಾ ದೃಶ್ಯವಾಗಿಸಿ ತೋರಿಸುತ್ತ ಹೋಗುವುದೂ ಭಾವತನ್ಮಯತೆಗೆ ಧಕ್ಕೆಯಾಗುವಂತಿದೆ. ನಟನ ಅಭಿನಯ, ಧ್ವನಿಯ ಏರಿಳಿತದ ಮೂಲಕವೇ ಪ್ರೇಕ್ಷಕನ ಮನಸಲ್ಲಿ ಮೂಡಬೇಕಾಗಿದ್ದ ಚಿತ್ರಗಳೆಲ್ಲವನ್ನು ತೆರೆಯ ಮೇಲೆಯೇ ಸಾಕ್ಷಾತ್ ತೋರಿಸಹೊರಡುವುದು ನಿರ್ದೇಶಕನ ವಾಚಾಳಿ ಗುಣವನ್ನು ತೋರಿಸುತ್ತದಷ್ಟೆ.

ಹಾಗೆಯೇ ಕಂಬಳಿ ಹೊದ್ದು ಕೂತ ನರಸಣ್ಣನ ಭಾಷೆಯಲ್ಲಿನ ಪ್ರಾದೇಶಿಕ ಸೊಗಡು ಟೀ ಅಂಗಡಿಯವನ ಮಾತಿನಲ್ಲಿ ತೋರುವುದಿಲ್ಲ.  ಉತ್ತಮ ಗುಣಮಟ್ಟದ ಧ್ವನಿವಿನ್ಯಾಸ ಮತ್ತು ಹಿತಮಿತವಾದ ಹಿನ್ನೆಲೆ ಸಂಗೀತ ಈ ಕಿರುಚಿತ್ರದ ಒಂದು ಧನಾತ್ಮಕ ಅಂಶಗಳು.

ಒಟ್ಟಾರೆ, ಸುಂದರವಾದ ಶಿಲ್ಪವನ್ನು ರಚಿಸಬೇಕು ಎಂದುಕೊಂಡ ಶಿಲ್ಪಿಯೊಬ್ಬ ತಾಂತ್ರಿಕ ಸಂಗತಿಗಳ ಬಗ್ಗೆಯೇ ಅತಿಯಾಗಿ ತಲೆಕೆಡಿಸಿಕೊಂಡು ಆತ್ಮವನ್ನೇ ಮರೆತುಬಿಟ್ಟ ಹಾಗೆ ‘ಶರಾವತಿ’ ಕಿರುಚಿತ್ರ ತೋರುತ್ತದೆ. ಆದರೆ ಇದು ಆರಂಭಿಕ ಹೆಜ್ಜೆ ಆಗಿರುವುದರಿಂದ ಪ್ರಶಾಂತ ಅವರ ಮುಂದಿನ ಪ್ರಯತ್ನಗಳ ಬಗ್ಗೆ ಭರವಸೆಯನ್ನಂತೂ ಹುಟ್ಟಿಸುವ ಶಕ್ತಿ ಈ ಕಿರುಚಿತ್ರಕ್ಕಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.