ADVERTISEMENT

ಶವದ ಮನೆಯವರ ಮನ...

ಕೆ.ಓಂಕಾರ ಮೂರ್ತಿ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಶವದ ಮನೆಯವರ ಮನ...
ಶವದ ಮನೆಯವರ ಮನ...   

`ನಾನು ಶವಗಳೊಂದಿಗೆ ಪಿಸು ಮಾತನಾಡುತ್ತೇನೆ. ಅವುಗಳನ್ನು ತಬ್ಬಿಕೊಳ್ಳುತ್ತೇನೆ, ಪಕ್ಕದಲ್ಲೇ ಮಲಗುತ್ತೇನೆ. ಶವಗಳ ಭಾವನೆ ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವನದ ಅರ್ಧ ಭಾಗವನ್ನು ಶವಾಗಾರದಲ್ಲಿಯೇ ಕಳೆದಿದ್ದೇನೆ. 20 ಸಾವಿರಕ್ಕೂ ಅಧಿಕ ಹೆಣಗಳನ್ನು ಕಂಡಿದ್ದೇನೆ~

- ಒಂದೇ ಉಸಿರಿಗೆ ಹೇಳಿ ಮೌನಕ್ಕೆ ಜಾರಿದ ಆ ವ್ಯಕ್ತಿಯ ಕಣ್ಣುಗಳಲ್ಲಿದ್ದದ್ದು ಕರ್ತವ್ಯನಿಷ್ಠೆ ಹಾಗೂ ವೃತ್ತಿಯೆಡೆಗಿನ ಗಾಢ ಪ್ರೀತಿ. 58ರ ಹರೆಯದ ಈ ವ್ಯಕ್ತಿಗೆ ಪ್ರೀತಿ, ಬೆಳಕು ದಕ್ಕಿರುವುದು ಶವಾಗಾರದಲ್ಲಿ!

ವಿಕ್ಟೋರಿಯಾ ಆಸ್ಪತ್ರೆಯ ಮಾರ್ಚರಿ ಚೇಂಬರ್‌ನಲ್ಲಿ!ಇವರ ದೇಹದ ಪ್ರತಿ ಕಣಗಳಿಗೂ ಸಾವಿರಾರು ಹೆಣಗಳ ಕಥೆ ಗೊತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕೊಯ್ದು ವಾಪಸ್ ಕಳುಹಿಸುವಾಗ ಕಣ್ಣೀರು ಹರಿಸ್ದ್ದಿದಿದೆ. ದುಃಖ ತಡೆಯಲಾರದೆ ಶವಾಗಾರದ ಆವರಣದಲ್ಲಿ ಮೂರ್ಛೆ ಹೋದ, ಮೃತರ ಸಂಬಂಧಿಕರನ್ನು ಉಪಚರಿಸಿದ್ದಾರೆ. ಅದೆಷ್ಟೊ ರಾತ್ರಿಗಳನ್ನು ಈ ಶವಾಗಾರದಲ್ಲೇ ಕಳೆದದ್ದೂ ಇದೆ.

ಇದು, ಪಿ.ಮುನಿರಾಮಯ್ಯ ಎಂಬ ಶವಾಗಾರ ಸಿಬ್ಬಂದಿಯ ಕಥೆ.ವಿಕ್ಟೋರಿಯಾ ಆಸ್ಪತ್ರೆ ಹಿಂಬದಿಯ ಒಂದು ಮೂಲೆಯಲ್ಲಿ ಅನಾಥವಾಗಿರುವಂತೆ ಕಾಣುವ ಶವಾಗಾರದ ವಾತಾವರಣವೇ ಅಂಥ್ದ್ದದು. ಕೆಲವರಿಗೆ ಭಯ, ದುಗುಡ ಮತ್ತು ನರಕ. ಇನ್ನು ಕೆಲವರಿಗೆ ಅಚ್ಚರಿ, ಕುತೂಹಲದ ಲೋಕ.

ಒಳಗೆ ಅರೆ ಕತ್ತಲು, ವಿಚಿತ್ರ ವಾಸನೆ, ನಿಶ್ಶಬ್ದದಲ್ಲಿ ಕೇಳುವುದು ನೊಣದ ಹಾರಾಟ, ನಲ್ಲಿಯಲ್ಲಿ ತೊಟ್ಟಿಕ್ಕುವ ನೀರಿನ ಹನಿಗಳ ಸದ್ದಷ್ಟೇ ಕೇಳುವುದು. ಶವದ ಮನೆಯತ್ತ ಭಯದಿಂದಲೇ ಅತ್ತ ಕಣ್ಣರಳಿಸಿ ನೋಡುವ ಜೀವಗಳು, ಆ್ಯಂಬುಲೆನ್ಸ್ ಸ್ದ್ದದು, ಕುಟುಂಬದವರ ಆರ್ತನಾದ, ಚೀರಾಟ... ಒಮ್ಮೆ ಆ ದೃಶ್ಯ ಮನ ಹೊಕ್ಕರೆ ಸಾಕು ಮತ್ತೆ ಮತ್ತೆ ನೆನಪಾಗಿ ಭಯ ಹುಟ್ಟಿಸುತ್ತದೆ.

ಅಕ್ಕಪಕ್ಕದ ಮನೆಯಲ್ಲಿ ಯಾರು ಮೃತಪಟ್ಟರೂ ಭಯದಿಂದ ಆ ಕಡೆ ತಿರುಗಿಯೂ ನೋಡದವರು ಇದ್ದಾರೆ. ಮತ್ತದೇ ದಾರಿಯಲ್ಲಿ ಬರಬೇಕಾದರೆ ಎದೆ ನಗಾರಿಯಾಗುತ್ತದೆ. ಆದರೆ 20 ಸಾವಿರಕ್ಕೂ ಅಧಿಕ ಹೆಣಗಳನ್ನು ಕೊಯ್ದು ಮರಣೋತ್ತರ ಪರೀಕ್ಷೆಗೆ ನೆರವಾಗಿರುವ ಈ ಮುನಿರಾಮಯ್ಯ, ಶವಾಗಾರಕ್ಕೆ ಹೆಚ್ಚು ಹೆಣಗಳು ಬಂದಾಗ ಮನೆಗೂ ಹೋಗದೆ 2-3 ದಿನ ಇಲ್ಲೇ ಉಳಿದುಕೊಳ್ಳುವುದಿದೆಯಂತೆ.

`ನಾನು ಸಾವಿರಾರು ಹೆಣಗಳನ್ನು ಮುಟ್ಟಿದ್ದೇನೆ, ಕೊಯ್ದಿದ್ದೇನೆ. ಪುಟ್ಟ ಮಕ್ಕಳು, ಅನಾಥರು, ನೇಣು ಹಾಕಿಕೊಂಡು ಸತ್ತವರು, ವಿಷ ಕುಡಿದವರು, ಅಪಘಾತದಲ್ಲಿ ಮೃತಪಟ್ಟವರು, ಕೊಲೆಯಾದವರನ್ನು ಇಲ್ಲಿಗೆ ತೆಗೆದುಕೊಂಡು ಬರುತ್ತಾರೆ. ಕೊಳೆತ ಶವಗಳನ್ನೂ ಅಸಹ್ಯಪಟ್ಟುಗೊಳ್ಳದೇ ನಿಷ್ಠೆಯಿಂದ ಕೊಯ್ಯುತ್ತೇನೆ. ಏಕೆಂದರೆ ಇದು ನನಗೆ ದೇವರು ಕೊಟ್ಟ ಕೆಲಸ~ ಎನ್ನುತ್ತಾರೆ ಮುನಿರಾಮಯ್ಯ.

ಮುನಿರಾಮಯ್ಯ 32 ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಏಳನೇ ತರಗತಿವರೆಗೆ. ಒಬ್ಬ ಮಗ ಎಲ್‌ಎಲ್‌ಬಿ, ಇನ್ನೊಬ್ಬ ಪದವಿ ಮಾಡಿದ್ದಾನೆ. ವಾರ್ಡ್ ಅಟೆಂಡರ್ ಆಗಿ ನೌಕರಿಗೆ ಸೇರಿ ಆಸ್ಪತ್ರೆಯ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ನಿವೃತ್ತಿಯಾಗಲು ಇನ್ನೇನು ಎರಡು ವರ್ಷಗಳಿವೆ.

ಪೊಲೀಸ್ ಕೇಸ್‌ಗೆ ಸಂಬಂಧಿಸಿದ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಇಲ್ಲಿಗೆ ತೆಗೆದುಕೊಂಡು ಬರುತ್ತಾರೆ. ವೈದ್ಯರ ಮಾರ್ಗದರ್ಶನದಲ್ಲಿ ಅವುಗಳನ್ನು ಇವರು ಕೊಯ್ಯುತ್ತಾರೆ.

ಮರು ಮರಣೋತ್ತರ ಪರೀಕ್ಷೆಗಾಗಿ ಹೂತಿದ್ದ ಹೆಣಗಳನ್ನು ಹಲವು ತಿಂಗಳ ಬಳಿಕ ಹೊರತೆಗೆದು ಮತ್ತೆ ಪರೀಕ್ಷೆ ಮಾಡ್ದ್ದಿದಿದೆ. ತಿಂಗಳುಗಟ್ಟಲೆ ಕೊಳೆತು ಹುಳುಗಳು ಹರಿದಾಡುತ್ತಿರುವ ಶವಗಳನ್ನು ಅಸಹ್ಯಪಟ್ಟುಕೊಳ್ಳದೇ ಪರೀಕ್ಷಿಸಲು ಅನುವು ಮಾಡಿದ್ದಾರೆ. ದಿನಕ್ಕೆ 20-30 ಶವಗಳು ಬರುತ್ತವೆ.

ಶವಾಗಾರದ ಕೆಲಸ ಮುಗಿಸಿ ಮನೆ ಸೇರುವ ಮುನಿರಾಮಯ್ಯ ಅರ್ಧ ಗಂಟೆ ಹಾರ್ಮೋನಿಯಂ ನುಡಿಸುತ್ತಾರೆ. `ಶವಾಗಾರವೇ ನಮ್ಮ ಪ್ರಪಂಚವಾಗಿದೆ. ಹಾಗಾಗಿ ಸ್ವಲ್ಪ ಹೊತ್ತಾದರೂ ಆ ಮೂಡಿನಿಂದ ಹೊರಬರಬೇಕು ಎಂಬ ಕಾರಣಕ್ಕೆ ದಿನಾ ನಾನು ಹಾರ್ಮೋನಿಯಂ ನುಡಿಸುತ್ತೇನೆ. ತಬಲಾ ಬಾರಿಸುತ್ತೇನೆ.
 
ಇದು ಮನಸ್ಸಿಗೆ ಕೊಂಚ ನೆಮ್ಮದಿ ತರುತ್ತದೆ. ಆದರೂ ಮತ್ತದೇ ನೆನಪು... ಮಾರ್ಚರಿ ಚೇಂಬರ್~ ಎನ್ನುತ್ತಾರೆ.ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಏಕಕಾಲಕ್ಕೆ 48 ಶವಗಳನ್ನು ರಕ್ಷಿಸಿಡುವ ವ್ಯವಸ್ಥೆ ಇದೆ. ಆರು ಕೊಠಡಿಗಳ ಎಂಟು ಶೀತಲ ಪೆಟ್ಟಿಗೆಗಳಲ್ಲಿ ಈ ಶವಗಳನ್ನು ಇಡುತ್ತಾರೆ. ಒಂದು ಪೆಟ್ಟಿಗೆಯಲ್ಲಿ ಆರು ಶವಗಳನ್ನು ಇಡಬಹುದು.
 
ಒಟ್ಟು ಆರು ಮಂದಿ ಈ ಆಸ್ಪತ್ರೆ ಶವಾಗಾರದಲ್ಲಿ ಕೆಲಸ ಮಾಡುತ್ತಾರೆ. ಮುನಿರಾಮಯ್ಯ, ಎನ್.ರಾಧಾಕೃಷ್ಣ, ಎಚ್.ಎ. ಅಬಿದುಲ್ಲಾ `ಡಿ~ ದರ್ಜೆ ನೌಕರರು. ಸುಂದರ್, ರಾಮಾಂಜಿ, ಸಿ.ಎನ್. ನಾಗರಾಜ್ ದಿನಗೂಲಿ ನೌಕರರು. ಇನ್ನೂ ತಮ್ಮ ಕೆಲಸ ಕಾಯಂಗೊಂಡಿಲ್ಲ ಎಂಬ ನೋವು ಇವರದು. 

ಇದು ಎರಡನೇ ಮನೆ: ರಾಧಾಕೃಷ್ಣ
ರಾಧಾಕೃಷ್ಣ ಜನಿಸಿದ್ದು ಇದೇ ಆಸ್ಪತ್ರೆಯಲ್ಲಿ. ಜನಿಸಿ ಕೆಲವೇ ತಿಂಗಳಲ್ಲಿ ಇದೇ ಶವಾಗಾರದಲ್ಲಿ ಅಂಬೆಗಾಲಿಟ್ಟು ತಿರುಗಾಡಿಕೊಂಡಿದ್ದ ರಾಧಾಕೃಷ್ಣ ಈಗ ಇ್ಲ್ಲಲಿನ ಕೆಲಸಗಾರ. ಏಕೆಂದರೆ ಇವರ ತಂದೆ ಎನ್. ನರಸಿಂಹಲು ಕೂಡ ಇದೇ ಶವಾಗಾರದಲ್ಲಿ ಕೆಲಸ ಮಾಡಿ ಕೊಂಡಿದ್ದವರು. ತಾಯಿ ಚಿನ್ನಮ್ಮ ಇದೇ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದವರು.

`ಚಿಕ್ಕ ಹುಡುಗನಾಗಿದ್ದಾಗ ನಾನು ಈ ಶವಾಗಾರದಲ್ಲಿ ರಾತ್ರಿ ತಂದೆಯೊಂದಿಗೆ ಮಲಗುತ್ತಿದ್ದೆ. ಇದು ನಮ್ಮ ಕುಟುಂಬಕ್ಕೆ ಊಟ ನೀಡಿದ ಮನೆ. ಹಾಗಾಗಿ ಇದು ನಮ್ಮ ಪಾಲಿಗೆ ಎರಡನೇ ಮನೆ~ ಎಂದು ಹೇಳುತ್ತಾರೆ ರಾಧಾಕೃಷ್ಣ.

ಅವರೀಗ ಶವಾಗಾರದ ಪಕ್ಕದಲ್ಲೇ ಇರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗಳು ಪಿಯುಸಿ ಓದುತ್ತಿದ್ದಾಳೆ. ಮಗ ಪುಟ್ಟ ಉದ್ಯೋಗದಲ್ಲಿದ್ದಾನೆ.ನಾನು ಹೆಣ ಕೊಯ್ಯುವವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಅದರಲ್ಲಿ ಯಾವುದೇ ಮುಜುಗರವಿಲ್ಲ. ಆದರೆ ಇಡೀ ಕುಟುಂಬ ಇಷ್ಟು ವರ್ಷ ಕೆಲಸ ಮಾಡಿದರೂ ಬಡತನ ಮಾತ್ರ ನೀಗಿಲ್ಲ. ನಮ್ಮ ಜೀವನವೇನೊ ಮುಗಿಯುತ್ತಾ ಬಂದಿದೆ. ಆದರೆ ನಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕು. ಅವರಿಗೆ ಒಳ್ಳೆಯ ಉದ್ಯೋಗ ಸಿಗಬೇಕು. ಅವರು ಇದೇ ರೀತಿ ಇರಬೇಕೇ?~ ಎಂದು ರಾಧಾಕೃಷ್ಣ ಪ್ರಶ್ನಿಸುತ್ತಾರೆ.

`ಇಡೀ ಸಮಾಜ ನಮ್ಮನ್ನು ಕೆಟ್ಟದಾಗಿ ನೋಡುತ್ತದೆ. ಒಮ್ಮೆ ನಾನು ಹೋಟೆಲ್‌ಗೆ ಟೀ ಕುಡಿಯಲು ಹೋಗಿದ್ದೆ. ಆಗ ಅದೇ ಬೆಂಚ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ನಾನು ಹೆಣ ಕೊಯ್ಯುವವನು ಎಂದು ಗೊತ್ತಾಯಿತು. ದೂರ ಕೂರು ಎಂದು ಎಲ್ಲರ ಮುಂದೆ ಗದರಿದ. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಬಸ್ಸಿನಲ್ಲೂ ಅಷ್ಟೆ. ಸೀಟಿನಲ್ಲಿ ಕುಳಿತಿದ್ದವರು ನಮ್ಮನ್ನು ನೋಡಿ ಎದ್ದು ಹೋಗುತ್ತಾರೆ. ಹೇಗಿದೆ ನೋಡಿ ನಮ್ಮ ಜೀವನ~ ಎಂದು ಅವರು ತಮ್ಮ ದುಃಖವನ್ನು ಹರಿಬಿಟ್ಟರು.

ಶವಾಗಾರದ ವಾಸನೆ ವಿಚಿತ್ರವಾದುದು. ಅದರೊಳಗೆ ಒಮ್ಮೆ ಹೊಕ್ಕರೆ ಮೂರು ದಿನಗಳಾದರೂ ವಾಸನೆ ಹೋಗುವುದಿಲ್ಲ. ಇನ್ನೂ ದಿನವಿಡೀ ಇಲ್ಲಿಯೇ ಕೆಲಸ ಮಾಡುವ ಇವರ ಪಾಡು ಹೇಳತೀರದು.

ಗೇಲಿ ಮಾತು... ಕಲಿಕೆಗೆ ಕುತ್ತು!
`ಸರ್, ನನ್ನ ಮಗ ಪಾಷಾ ಶಾಲೆ ಹೋದಾಗಲೆಲ್ಲಾ ಮಕ್ಕಳು `ಶವ ಬಂತು~ ಎಂದು ಮೂದಲಿಸುತ್ತಾರೆ ಅಂತ ದಿನಾ ಅಳುತ್ತಿದ್ದ. ಆತನ ಮನಸ್ಸಿನ ಮೇಲೆ ಆ ಘಟನೆ ತುಂಬಾ ಪರಿಣಾಮ ಬೀರಿದೆ. ಈಗ ಖಿನ್ನನಾಗಿದ್ದಾನೆ. ಏನೂ ಕೆಲಸ ಮಾಡುವುದಿಲ್ಲ. ಶಾಲೆಗೂ ಹೋಗುವುದಿಲ್ಲ~ ಎಂದು ಕಣ್ಣೀರಿಟ್ಟಿದ್ದು ಅಬೀದುಲ್ಲಾ.  ವಿಕ್ಟೋರಿಯಾದ ಶವಾಗಾರದಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

`ನನ್ನ ಕೆಲಸದ ಮೇಲೆ ನನಗೆ ಪ್ರೀತಿ ಇದೆ. ಆದರೆ ನಮ್ಮ ಮೇಲೆ ಬೇರೆಯವರಿಗೆ ಪ್ರೀತಿ ಇಲ್ಲ. ಸಮಾಜ ನಮಗೆ ನೀಡುವ ಗೌರವ ಇದೇನಾ? ಶವಾಗಾರದ ಕೆಲಸ ಬಿಟ್ಟರೆ ಬೇರೆ ಕಡೆ ನಮಗೆ ಬದುಕಲು ಸಾಧ್ಯವೇ ಇಲ್ಲ ಎಂದು ಅವರು ತಿಳಿದುಕೊಂಡಿರಬಹುದು~ ಎಂದು ಆಕ್ರೋಶದಿಂದ ನುಡಿಯುತ್ತಾರೆ.

`ಸದ್ಯ ಯಾವುದೇ ಹೆಣ ಬಂದಿಲ್ಲ. ಬನ್ನಿ ಕಾಫಿ ಕುಡಿಯೋಣ~ ಎಂದು ಸಹೋದ್ಯೋಗಿಗಳನ್ನು ಕರೆದರು ಮುನಿರಾಮಯ್ಯ. ಅವರ ಮಾತು ಮುಗಿಯುವಷ್ಟರಲ್ಲಿ ವಿಚಿತ್ರ ಸದ್ದು ಮಾಡುತ್ತಾ ಆ್ಯಂಬುಲೆನ್ಸ್‌ವೊಂದು ಶವಾಗಾರದ ಆವರಣದಲ್ಲಿ ಬಂದು ನಿಂತೇ ಬಿಟ್ಟಿತು. ಉಳಿದಿದ್ದ ಅರ್ಧ ಕಾಫಿಯನ್ನು ಹೊರ ಚೆಲ್ಲಿದ ಮುನಿರಾಮಯ್ಯ ಕೈಗೆ ಗ್ಲೌಸ್ ತೊಟ್ಟು ಕೆಲಸಕ್ಕೆ ಸಿದ್ಧರಾದರು...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.