ADVERTISEMENT

ಶಾಲೆ ರುಚಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ರುಚಿ ಖುಷಿ ಪಾಠ
ನಾನು ದೇಶದ ಪ್ರಖ್ಯಾತ ಶಿಕ್ಷಣ ಸಂಸ್ಥೆ ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ದಕ್ಷಿಣ ಇಲ್ಲಿನ ಶಿಕ್ಷಕಿ. `ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಶಿಕ್ಷಣ' ಎಂಬ ತತ್ತ್ವದಡಿ ಕಾರ್ಯ ನಿರ್ವಹಿಸುವ ನಮ್ಮ ಶಾಲೆಯಲ್ಲಿ ಪ್ರತಿ ವಾರಕ್ಕೊಂದು ದಿನದ ಒಂದು ಗಂಟೆಯ ಅವಧಿ ಹವ್ಯಾಸಗಳಿಗೇ ಮೀಸಲು. 5-8ನೇ ತರಗತಿಯ ಮಕ್ಕಳಿಗೆ ನಿಗದಿಪಡಿಸಿದ ದಿನ ಕೊನೆಯ ಎರಡು ಅವಧಿಗಳಲ್ಲಿ ಅಡುಗೆ, ರಂಗತರಬೇತಿ, ಸಾವಯವ ಕೃಷಿ ತರಬೇತಿ, ಕರಾಟೆ, ಕಲಾ ತರಬೇತಿ ಇವುಗಳಲ್ಲಿ ತಮ್ಮಿಷ್ಟದ ಹವ್ಯಾಸಕ್ಕೆ ಸೇರುವ ಅವಕಾಶ ಇದೆ.

ಹೆಚ್ಚಿನ ಮಕ್ಕಳ ಆಯ್ಕೆ `ಅಡುಗೆ ಕ್ಲಬ್' ಆಗಿದೆ. ಆ ದಿನದ ತಿಂಡಿ ತಯಾರಿಗೆ ಬೇಕಾಗುವ ಸಾಮಾನುಗಳನ್ನು ಹಿಂದಿನ ದಿನವೇ ತಿಳಿಸಲಾಗುತ್ತದೆ. ತರಗತಿಯಲ್ಲಿ ಮಕ್ಕಳು ತಮ್ಮ ಮನೆಯಿಂದ ತಂದ ಪರಿಕರಗಳನ್ನು ಉಪಯೋಗಿಸಿ ಒಲೆ ಉರಿಸದೇ ತಿಂಡಿ ತಯಾರಿಸುತ್ತಾರೆ. ಪರಸ್ಪರ ಹಂಚಿಕೊಂಡು, ತಾವೂ ತಿಂದು ಸಂತೋಷ ಪಡುತ್ತಾರೆ. ಶಿಕ್ಷಕರಿಗೂ ಹಂಚುತ್ತಾರೆ. ಮನೆಗೂ ಒಯ್ಯುತ್ತಾರೆ. 

ತರಕಾರಿ- ಮೊಳಕೆ ಕಾಳುಗಳ ಸಲಾಡ್, ಫ್ರೂಟ್ ಸಲಾಡ್, ರವೆ ಉಂಡೆ, ಖರ್ಜೂರದ ಉಂಡೆ, ಬ್ರೆಡ್ ಸ್ಯಾಂಡ್ವಿಚ್, ಪಾನಿ ಪುರಿ, ದಹಿ ಪುರಿ, ಭೇಲ್ ಪುರಿ, ಚಾಕೊಲೇಟ್ ಇತ್ಯಾದಿ ಸುಮಾರು ಇಪ್ಪತ್ತು ತರಹದ ತಿಂಡಿಗಳನ್ನು ಒಂದು ವರ್ಷದಲ್ಲಿ ಕಲಿಯುತ್ತಾರೆ.

ಈ ತರಗತಿಯಲ್ಲಿ ತಿಂಡಿ ತಯಾರಿ ಮಾತ್ರವಲ್ಲದೆ ಸ್ವಚ್ಛತೆ, ಆಹಾರವನ್ನು ವ್ಯರ್ಥಗೊಳಿಸದಿರುವುದು, ತಯಾರಿಸಿದ ಜಾಗವನ್ನು ಸ್ವಚ್ಛಗೊಳಿಸುವುದು, ಹಣ್ಣು- ತರಕಾರಿಗಳ ಹೆಸರುಗಳು, ಆಹಾರದಲ್ಲಿನ ಪೋಷಕಾಂಶಗಳ ವಿವರ ಮುಂತಾದ ವಿಚಾರಗಳನ್ನು ಮಕ್ಕಳು ಕಲಿಯುತ್ತಾರೆ.
-ವೇದಾ ಅಠಾವಳೆ, ಬೆಂಗಳೂರು

ನಗರದ ಶಾಲೆಗಳು ಹಾಗೂ ಆಹಾರಕ್ಕೆ ಇರುವ ನಂಟಿನ ಹಿನ್ನೆಲೆಯಲ್ಲಿ `ಮೆಟ್ರೊ' ಲೇಖನ ಮಾಲೆ ಪ್ರಕಟಿಸುತ್ತಿದೆ. ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ತಮ್ಮ ಸ್ವಾದಿಷ್ಟ, ಆಸಕ್ತಿಕರ ಅನುಭವಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬಹುದು.

ADVERTISEMENT

ಆಯ್ದ ಬರಹಗಳನ್ನು ಸಂದರ್ಭೋಚಿತವಾಗಿ ಪ್ರಕಟಿಸಲಾಗುವುದು. ಬರಹಕ್ಕೆ ಹೊಂದುವ, ಉತ್ತಮ ಗುಣಮಟ್ಟದ (ಕನಿಷ್ಠ 500 ಕಿಲೋ ಬೈಟ್ ಸೈಜ್) ಫೋಟೊ ಇದ್ದರೆ ಒಳ್ಳೆಯದು.

ನುಡಿ ಅಥವಾ ಬರಹ ಕನ್ನಡ ತಂತ್ರಾಂಶದಲ್ಲಿ ಬರೆಯುವವರು metropv@prajavani.co.in ಇ-ಮೇಲ್‌ಗೆ ಕಳುಹಿಸಿ. ಅಂಚೆ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಬರಹ ತಲುಪಿಸಬಹುದು: `ಶಾಲೆ ರುಚಿ ವಿಭಾಗ', ಮೆಟ್ರೊ, ಪ್ರಜಾವಾಣಿ, ನಂ. 75, ಎಂ.ಜಿ.ರಸ್ತೆ, ಬೆಂಗಳೂರು- 560 001.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.