ADVERTISEMENT

ಶಿವಬಾಲಯೋಗಿ ಟ್ರಸ್ಟ್‌ ಬೇಸಿಗೆ ಶಿಬಿರ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಶಿವಬಾಲಯೋಗಿ ಟ್ರಸ್ಟ್‌ ಬೇಸಿಗೆ ಶಿಬಿರ
ಶಿವಬಾಲಯೋಗಿ ಟ್ರಸ್ಟ್‌ ಬೇಸಿಗೆ ಶಿಬಿರ   

ನಗರ ಜೀವನದಲ್ಲಿ ಯೋಗ ಮತ್ತು ಧ್ಯಾನದೊಂದಿಗೆ ಭಕ್ತಿ ಮಾರ್ಗವನ್ನೂ ಮುಂಚೂಣಿಗೆ ತರಲು ಶಿವಬಾಲಯೋಗಿ ಮಹಾರಾಜ ಟ್ರಸ್ಟ್‌ ಇದೇ 17ರಿಂದ 20ರವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ.

ಕಳೆದ ವರ್ಷ ಈ ಪರಿಕಲ್ಪನೆಯನ್ನು ಪ್ರಯೋಗಕ್ಕೆ ತರಲಾಗಿತ್ತು. 8 ವರ್ಷ ಮೇಲ್ಪಟ್ಟವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಸ್ವಸ್ಥ ಬದುಕಿಗೆ ಕೇವಲ ಆರೋಗ್ಯ ಮಾತ್ರವಲ್ಲ, ಮಾನಸಿಕ ಸ್ವಾಸ್ಥ್ಯವೂ ಅತ್ಯಗತ್ಯ. ಮನಸು, ದೇಹ ಮತ್ತು ಆತ್ಮಗಳ ಏಕತ್ರ ಸೂತ್ರಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ.

ಮೂರುದಿನಗಳ ಶಿಬಿರದಲ್ಲಿ ಬೆಳಗಿನ ಹೊತ್ತು ಯೋಗ, ಧ್ಯಾನ ಮತ್ತು ಪ್ರಾಣಾಯಾಮಕ್ಕಾಗಿ ಮೀಸಲಿಡಲಾಗಿದೆ.  ಉಪಾಹಾರದ ನಂತರ ಸ್ವಾಮೀಜಿಗಳ ಬದುಕು, ಗುರಿ, ಸಾಧನೆಯ ಪರಿಚಯ ಮಾಡಿಕೊಡಲಾಗುತ್ತದೆ. ನಂತರದ ಅವಧಿಗಳಲ್ಲಿ ಅಧ್ಯಾತ್ಮದ, ಜೀವನ ಕಲೆಯ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನದವರೆಗೂ ಅರಿವಿನ ಬುತ್ತಿ ಹಂಚುವ ಈ ಕಾರ್ಯಕ್ರಮದಲ್ಲಿ ಬದುಕಿನ ಉದ್ದೇಶಕ್ಕೆ  ಬುದ್ಧಿಮಾರ್ಗವನ್ನು ಸೂಚಿಸುವ  ಉಪನ್ಯಾಸಗಳು ಇಲ್ಲಿವೆ.

ADVERTISEMENT

ನಂತರ ಅಹಮಿಕೆ ಮರೆಯಲು, ಎಲ್ಲವೂ ದೈವದತ್ತ, ದೇವನಿಂದಲೇ ಎಂದು ಸಂಪೂರ್ಣವಾಗಿ ಶರಣಾಗಲು ಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಿ ಮಾರ್ಗದ ಮುಖ್ಯ ಸೂಚಿಯಾಗಿರುವ ದಾಸವಾಣಿ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಭಕ್ತಿ ಗೀತೆ ಗಾಯನ, ಭಜನೆಗಳನ್ನು ಹೇಳಿಕೊಡಲಾಗುತ್ತದೆ.

ಭೌತಿಕ, ಬೌದ್ಧಿಕ ಹಾಗೂ ಅಧ್ಯಾತ್ಮಿಕ ಅರಿವು ಅನುಭವಗಳ ನಂತರ ನಮ್ಮ ಭಾವಶುದ್ಧಿಗೆ, ಭಾವಲೋಕದ ಸಿರಿಹೆಚ್ಚಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಒಟ್ಟಿನಲ್ಲಿ ನಮ್ಮನ್ನು ನಮ್ಮೊಂದಿಗೆ, ಜನರೊಂದಿಗೆ ಹಾಗೂ ದೇವರೊಂದಿಗೆ ಒಗ್ಗೂಡಿಸುವ ಈ ಬೇಸಿಗೆ ಶಿಬಿರಕ್ಕೆ ಈಗಾಗಲೇ 250 ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಪ್ರತಿಕ್ರಿಯೆ ನೋಡಿಯೇ ಈ ವರ್ಷವೂ ಆಯೋಜಿಸಲಾಗಿದೆ. ಈ ವರ್ಷ ಇನ್ನೂ ಹೆಚ್ಚಿನ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸದ್ಯಕ್ಕೆ ಜನರಿಗೆ ಅಗತ್ಯ ಇರುವುದು ಜೀವನವನ್ನು ಸ್ವೀಕರಿಸುವ ಮನೋಭಾವ. ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯ ಜೊತೆಗೆ ಎಲ್ಲಕ್ಕೂ ದೇವರ ಅನುಗ್ರಹವಿದೆ ಎಂಬ ಶರಣಾಗತಿಯ ಮನೋಭಾವ. ಅದನ್ನಿಲ್ಲಿ ನೀಡಲಾಗುತ್ತದೆ ಎಂದು ಟ್ರಸ್ಟ್‌ನ ಜಗದೀಶ್‌ ಅವರು ಹೇಳುತ್ತಾರೆ. ಬೆಂಗಳೂರು ಶಾಖೆಯ ಅಧ್ಯಕ್ಷ ಡಿ. ರಾಮ್‌ಬಾಬು ಅವರು ಈ ಶಿಬಿರವನ್ನು ನಿರ್ದೇಶಿಸಲಿದ್ದಾರೆ. ಶಿಬಿರದಲ್ಲಿ ವಿಶೇಷ ಉಪನ್ಯಾಸಕರು, ಕಲಾವಿದರು, ನೃತ್ಯಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು

ವಿಳಾಸ: ದಿ. ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಇಂಡಿಯನ್‌ ಕಲ್ಚರ್‌, ಶಿವಬಾಲಯೋಗಿ ಮಹಾರಾಜ ಟ್ರಸ್ಟ್‌, ಶಿವಬಾಲಯೋಗಿ ಮಹಾರಾಜ ಆಶರ್ರಮ ರಸ್ತೆ, ಜೆ.ಪಿ. ನಗರ ಬೆಂಗಳೂರು

ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಣಿಗೆ 080–26586243

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.