ADVERTISEMENT

ಸಂಗೀತದ ಬಿರುಗಾಳಿಗೆ ತಲೆದೂಗಿದವರು

ಸತೀಶ ಬೆಳ್ಳಕ್ಕಿ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST
ಸಂಗೀತದ ಬಿರುಗಾಳಿಗೆ ತಲೆದೂಗಿದವರು
ಸಂಗೀತದ ಬಿರುಗಾಳಿಗೆ ತಲೆದೂಗಿದವರು   

ಸ್ವೀಡನ್ ಮೂಲದ ಒಪೆಥ್ ಮೆಟಲ್ ಬ್ಯಾಂಡ್ ನೀಡಿದ ಪ್ರದರ್ಶನಕ್ಕೆ ಯುವಜನತೆ ಹುಚ್ಚೆದ್ದು ಕುಣಿದರು. ಒಪೆಥ್ ತಂಡ ನೀಡಿದ ಎರಡನೇ ಆವೃತ್ತಿಯ ಕಾರ್ಯಕ್ರಮ ಇದು. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಹೆಸರು `ಸಮ್ಮರ್ ಸ್ಟಾರ್ಮ್~. ಅಂದರೆ, ಬೇಸಿಗೆಯಲ್ಲಿ ಬಿರುಗಾಳಿ ಎಂದರ್ಥ. ಇದನ್ನು ಆಯೋಜಿಸಿದ್ದು ಬೆಂಗಳೂರು ಮೂಲದ ಕಂಪೆನಿ ಓವರ್‌ಟ್ರೂ. ಕಿಂಗ್‌ಫಿಷರ್ ಸಹಯೋಗ ನೀಡಿತ್ತು.

`ಸಮ್ಮರ್ ಸ್ಟಾರ್ಮ್~ನಲ್ಲಿ ಈ ಕಲಾವಿದರು ತೋರಿದ ವರಸೆಗೆ ಭಾವೋನ್ಮಾದಕ್ಕೆ ಒಳಗಾದ ಅನೇಕ ರಾಕ್‌ಪ್ರಿಯರಿದ್ದರು. ಎರಡೂ ಕಾಲುಗಳನ್ನು ನೆಲದ ಮೇಲೆ ಭದ್ರವಾಗಿಟ್ಟುಕೊಂಡು, ಸೊಂಟವನ್ನು ಸ್ವಲ್ಪವೇ  ಭಾಗಿಸಿ, ಸಮೂಹಸನ್ನಿ ಹಿಡಿದವರಂತೆ ಎಲ್ಲರೂ ಕತ್ತನ್ನು ಮೇಲಿನಿಂದ ಕೆಳಕ್ಕೆ ತಿರುಗಿಸುತ್ತಿದ್ದ ಪರಿಯನ್ನು ನೋಡಲು ತುಂಬಾ ಮಜವೆನಿಸಿದರೂ, ಕುತ್ತಿಗೆ ಎಲ್ಲಿ ಕಿತ್ತು ಬೀಳುತ್ತದೆಯೋ ಎಂದೂ ಅನ್ನಿಸುತ್ತಿತ್ತು!
 
ಅಂದಹಾಗೆ ಬ್ಯಾಂಡ್‌ನ ಅಬ್ಬರಕ್ಕೆ ಅನುಗುಣವಾಗಿ ಈ ರೀತಿ ವರ್ತಿಸಲು ಒಂದು ಕಾರಣವೂ ಇದೆಯಂತೆ. ಸಂಗೀತ ಕೇಳುತ್ತಾ ನಮ್ಮಳಗಿನ ಒತ್ತಡ ಹಾಗೂ ಅಸಹನೆಯನ್ನು ಹೊರಹಾಕಲು ಇದೊಂದು ಹೊಸ ಮಾರ್ಗವಂತೆ. ರಾಕ್‌ಪ್ರಿಯರನ್ನು ಕಲಾವಿದರು ಯಾವ ಪರಿಯಲ್ಲಿ ಆವರಿಸಿಕೊಂಡಿದ್ದರು ಎಂಬುದನ್ನು ಇದು ಸೂಚಿಸುತ್ತಿತ್ತು.

ಮೆಟಲ್ ಬ್ಯಾಂಡ್‌ನ ಅಬ್ಬರಕ್ಕೆ ಯುವಕ ಯುವತಿಯರು ಇನ್ನಿಲ್ಲದ ಭಾವೋನ್ಮಾದ ವ್ಯಕ್ತಪಡಿಸುತ್ತಿದ್ದರು. ಮೈಖೆಲ್ ಆಕ್ರೆಫೆಲ್ಡ್‌ನ ಬೆರಳುಗಳು ಗಿಟಾರ್ ತಂತಿಗಳ ಮೇಲೆ ಚಾಕಚಕ್ಯತೆಯಿಂದ ಹರಿದಾಡುತ್ತಾ ಮನಸ್ಸನ್ನು ಉನ್ಮಾದಗೊಳಿಸುವ ಶಬ್ದ ತರಂಗ ಹೊರಡಿಸುತ್ತಿದ್ದರೆ, ಯುವಕ ಯುವತಿಯರ ಮನಸ್ಸು ಪರವಶಗೊಳ್ಳುತ್ತಿದ್ದವು.

ಯುವತಿಯೊಬ್ಬಳಂತೂ ಮೈಖೆಲ್‌ನನ್ನೇ ತನ್ನ ಮೈಗೆ ಆವಾಹನೆ ಮಾಡಿಕೊಂಡಿಕೊಂಡಿದ್ದೇನೆ ಎಂಬಂತೆ ಭಾವಿಸಿ, ತನ್ನ ಕೈನಲ್ಲಿಯೇ ಗಿಟಾರ್ ಇದೆ ಎಂಬಂತೆ ಮುಡಿಗೆ ಕಟ್ಟಿದ್ದ ಬ್ಯಾಂಡ್ ಕಿತ್ತೆಸೆದು ಖಾಲಿ ಕೈನಲ್ಲಿ ಗಿಟಾರ್ ನುಡಿಸುವಂತೆ ನಟಿಸುತ್ತಾ ಬೆರಗು ಮೂಡಿಸಿದಳು.
 
ಸೂಪರ್‌ಸ್ಟಾರ್ ರಜನಿಕಾಂತ್ ಬಾಬಾ ಸಿನಿಮಾದಲ್ಲಿ ತನ್ನ ಅಂಗೈನ ಹೆಬ್ಬೆರಳು, ಮಧ್ಯ ಹಾಗೂ ಉಂಗುರುದ ಬೆರಳನ್ನು ಮಡಚಿ ತೋರುಬೆರಳು ಹಾಗೂ ಕಿರುಬೆರಳನ್ನು ಮೇಲೆತ್ತಿ ಡೈಲಾಗ್ ಹೊಡೆಯುವ ರೀತಿಯಲ್ಲಿ ಎಲ್ಲರೂ ಕೈಯನ್ನೆತ್ತಿ ಬ್ಯಾಂಡ್‌ನವರಲ್ಲೂ ಪ್ರೋತ್ಸಾಹ ತುಂಬುತ್ತಿದ್ದರು.

`ಒಪೆಥ್~ ಬ್ಯಾಂಡ್‌ನಲ್ಲಿ ಸೃಜನಶೀಲ ಕಲಾವಿದರ ಒಂದು ದಂಡಿದೆ. ಇವರೆಲ್ಲರ ಸಂಗೀತಕ್ಕೆ ಆಕ್ರಮಣಕಾರಿ ಧೋರಣೆಯಿದೆ. ಅವರ ಪ್ರತಿ ಮಾತು, ಹೊಡಿಸುವ ಶಬ್ದ, ಹಾಕುವ ಬಟ್ಟೆ ಎಲ್ಲದರಲ್ಲೂ ಆಕ್ರಮಣಕಾರಿ ಅಂಶ ಬಿಂಬಿತವಾಗುತ್ತದಂತೆ. ಹಾಗೆಯೇ ಸಂಗೀತದ ಮೂಲಕ ಬೇರೆಯವರ ಮನಸ್ಸನ್ನು ಆಕ್ರಮಿಸಿಕೊಳ್ಳುವ ಕಲೆ ಕೂಡ ಇವರಿಗೆ ಸಿದ್ಧಿಸಿದೆ.
 
ಈ ಕಾರ್ಯಕ್ರಮಕ್ಕೊಂದು ಓಘ ತಂದುಕೊಟ್ಟಿದ್ದೇ ಈ ಅಂಶಗಳು. ಸೇರಿದ್ದ ರಾಕ್‌ಬ್ಯಾಂಡ್ ಪ್ರಿಯರಲ್ಲಿ ಧ್ಯಾನಸ್ಥಭಾವ ಮೂಡಿಸುವ ಹಾಗೂ ಮನಸ್ಸನ್ನು ಉದ್ರೇಕಗೊಳಿಸುವ ಕಾರ್ಯವನ್ನು ಈ ಕಲಾವಿದರು ಏಕಕಾಲದಲ್ಲಿ ಮಾಡಿದ ರೀತಿ ಬೆರಗು ಹುಟ್ಟಿಸಿತು.

ಅಂದಹಾಗೆ, ಒಪೆಥ್ ಬ್ಯಾಂಡ್‌ನಲ್ಲಿ ಮೈಖೆಲ್ ಆಕ್ರೆಫೆಲ್ಡ್ ಜತೆಗೆ ಮಾರ್ಟಿನ್ ಮೆಂಡಿಸ್, ಫ್ರೆಡ್ರಿಕ್ ಅಕೆಷನ್, ಮಾರ್ಟಿನ್ ಆಕ್ಸೆರಾಟ್ ಹಾಗೂ ಜೋಕಿಮ್ ಸ್ವಾಲ್‌ಬರ್ಗ್ ಇದ್ದಾರೆ. ಇವರು ಜನಪದ, ಶಾಸ್ತ್ರೀಯ ಹಾಗೂ ಜಾಸ್ ಸಂಗೀತವನ್ನು ಮಿಶ್ರಣ ಮಾಡಿ ನೀಡಿದ ಕಾರ್ಯಕ್ರಮ ಬ್ಯಾಂಡ್‌ಪ್ರಿಯರಿಗೆ ರಸದೌತಣ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.