ADVERTISEMENT

ಸಂಗೀತ, ಸಾಹಿತ್ಯಗಳ ಸವ್ಯಸಾಚಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಸತ್ಯವತಿ
ಸತ್ಯವತಿ   

ಕನ್ನಡಿತಿ ಡಾ. ಟಿ.ಎಸ್. ಸತ್ಯವತಿ ಅವರು ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರಗಳಷ್ಟೇ ಅಲ್ಲ, ವಿದೇಶಗಳಲ್ಲೂ ಉಪನ್ಯಾಸ, ಸೋದಾಹರಣ ಭಾಷಣಗಳನ್ನು ನೀಡಿದ್ದಾರೆ. ಪಲ್ಲವಿ ಗಾಯನದ ರಸಾನುಭವ, ಅವಧಾನ ಪಲ್ಲವಿ, ಮಾನಸೋಲ್ಲಾಸ - ಹೀಗೆ ಸಂಗೀತ, ಸಂಸ್ಕೃತ, ಸಾಹಿತ್ಯಗಳ ಮೇಲೆ ಹತ್ತಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸತ್ಯವತಿ ಅವರ ಉಪನ್ಯಾಸ, ಪ್ರಾತ್ಯಕ್ಷಿಕೆಗಳು ನಡೆದಿವೆ.

ಗಾಯಕಿ, ಶಾಸ್ತ್ರಜ್ಞೆ, ಬೋಧಕಿ, ಬರಹಗಾರ್ತಿಯಾದ ಡಾ. ಟಿ.ಎಸ್. ಸತ್ಯವತಿ ಅವರಿಗೆ ಬರುವ ಭಾನುವಾರದಂದು (ಫೆ. 25) ನಗರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

ಸತ್ಯವತಿ ಅವರು ತಮ್ಮ 16ನೇ ವಯಸ್ಸಿನಲ್ಲಿ (ಕರ್ನಾಟಕ ಗಾನಕಲಾ ಪರಿಷತ್ತಿನಲ್ಲಿ) ಪ್ರಾರಂಭಿಸಿದ ಸಂಗೀತ ಕಛೇರಿಗಳಿಂದ ಅವರು ರಾಜ್ಯ-ರಾಷ್ಟ್ರಗಳ ಗಣ್ಯ ಸಭೆ-ಸಮ್ಮೇಳನಗಳಲ್ಲಿ ಹಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೆರಿಕ ಮುಂತಾದ ದೇಶಗಳಲ್ಲೂ ಹಾಡಿರುವ ಸತ್ಯವತಿ ಅವರ ಕೃತಿ ಭಂಡಾರವೂ ದೊಡ್ಡದೇ. ಕನ್ನಡ ಕೃತಿಗಳಿಂದಲೇ ಕಛೇರಿ ಮಾಡುವ ಸತ್ಯವತಿ, ಪು.ತಿ.ನ. ಅವರ ಗೀಗೆಗಳ ಪ್ರಸಾರದಲ್ಲೂ ಮುಂಚೂಣಿಯಲ್ಲಿದ್ದಾರೆ. ಕ್ಲಿಷ್ಟವಾದ ಅವಧಾನ ಪಲ್ಲವಿಯಂಥವೂ ಅವರ ಬತ್ತಳಿಕೆಯಲ್ಲಿದೆ.

ADVERTISEMENT

ತಮ್ಮ ಅಕ್ಕ ಟಿ.ಎಸ್. ವಸಂತ ಮಾಧವಿ ಅವರಿಂದ ಸಂಗೀತಾಭ್ಯಾಸ ಪ್ರಾರಂಭ ಮಾಡಿದ ಸತ್ಯವತಿ ಹಿರಿಯರಾದ ಡಾ. ಆರ್.ಕೆ. ಶ್ರೀಕಂಠನ್ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರು ಕೆ. ವೆಂಕಟರಾಂ ಅವರಲ್ಲಿ ಮೃದಂಗವನ್ನೂ ಅಭ್ಯಾಸ ಮಾಡಿದ್ದಾರೆ. ಸಂಗೀತ ಶಾಸ್ತ್ರದಲ್ಲಿ ಹಿರಿಯ ವಿಮರ್ಶಕರಾಗಿದ್ದ ಬಿ.ವಿ.ಕೆ. ಶಾಸ್ತ್ರಿಗಳು ಮಾರ್ಗದರ್ಶಕರಾದರು. ಜೊತೆಗೆ ಸಂಸ್ಕೃತದಲ್ಲಿ ಪಿ.ಎಚ್‍ಡಿ. ಮಾಡಿ ಡಾಕ್ಟರೇಟ್‌ ಪಡೆದಿದ್ದಾರೆ. ಬಸವೇಶ್ವರ ನಗರದ ವಿ.ವಿ.ಎಸ್. ಮಹಿಳಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿಯಾಗಿರುವ ಅವರು  ಕೆಲ ಪುಸ್ತಕಗಳನ್ನು ಬರೆದಿದ್ದಾರೆ.

ಸಂಗೀತ ನೃತ್ಯ ಅಕಾಡೆಮಿಯಿಂದ 'ಕರ್ನಾಟಕ ಕಲಾಶ್ರೀ', ಕರ್ನಾಟಕ ಗಾನಕಲಾ ಪರಿಷತ್ತಿನಿಂದ 'ಗಾನಕಲಾಶ್ರೀ' ಬಿರುದುಗಳಲ್ಲದೆ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಿಂದ 'ಆಚಾರ್ಯ ಪ್ರಶಸ್ತಿ'ಯೂ ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.