ADVERTISEMENT

ಸಂಜೆಗತ್ತಲಲ್ಲಿ ಸೌಂದರ್ಯದ ಮಿಂಚು...

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST
ಸಂಜೆಗತ್ತಲಲ್ಲಿ ಸೌಂದರ್ಯದ ಮಿಂಚು...
ಸಂಜೆಗತ್ತಲಲ್ಲಿ ಸೌಂದರ್ಯದ ಮಿಂಚು...   

ಅಷ್ಟೂ ಹೊತ್ತು ಬಣ್ಣ ಬಣ್ಣದ ಬೆಳಕಿನಿಂದ ಜಗಮಗಿಸುತ್ತಿದ್ದ ಹಾಲ್‌ನಲ್ಲಿ ಥಟ್ಟನೆ ಕತ್ತಲು. ಅರೆಕ್ಷಣ ಇಂಪಾದ ಸಂಗೀತದ ಸುಧೆ. ಕ್ಷಣಗಳಲ್ಲೇ ಬೆಡಗಿಯರು ಬಿನ್ನಾಣ ತೋರಲು ಬೆಕ್ಕಿನ ನಡಿಗೆಯೊಂದಿಗೆ ವೇದಿಕೆಯ ಮೇಲೆ ಹೆಜ್ಜೆ ಇಟ್ಟರು. ಅಲಂಕಾರಕ್ಕೆಂದು ಸುತ್ತಲೂ ಇಟ್ಟಿದ್ದ ಹೂಗಳು ಸಹ ನಾಚುವಂತಿತ್ತು ಅವರ ಒನಪು ವೈಯಾರ.

ಇದೆಲ್ಲ ಕಂಡುಬಂದಿದ್ದು ಚೆಲುವಿನ ಜೊತೆಗೆ ಆಡಂಬರಕ್ಕೂ ಸಾಕ್ಷಿಯಾಗಿ ಕಂಗೊಳಿಸುತ್ತಿರುವ ತಾಜ್ ವೆಸ್ಟ್‌ಎಂಡ್‌ನಲ್ಲಿ. ಅದು ನ್ಯಾಚುರಲ್ ಯುನಿಸೆಕ್ಸ್ ಸೆಲೂನ್‌ನ 125ನೇ ಮಳಿಗೆ ಆರಂಭದ ರಸಗಳಿಗೆ ಸಾಕ್ಷಿಯಾದ ಕ್ಷಣ.

ರೂಪದರ್ಶಿಗಳು ರೂಪಂ ಸಿಲ್ಕ್‌ನ ಸಾಂಪ್ರದಾಯಿಕ ಶೈಲಿಯ ಸುಂದರ ಉಡುಗೆ ತೊಟ್ಟು ಕಾಲಿಟ್ಟಾಗ ನೆರದಿದ್ದವರ ಬಾಯಲ್ಲಿ ವಾವ್...!  ಎಂಬ ಉದ್ಗಾರ. ಜೊತೆಗೆ ನೋಡುಗರ ಕಣ್ಗಳಿಗೂ ತಂಪು. ಸಲೂನ್‌ನ್ನು ಅಂತರರಾಷ್ಟ್ರೀಯ `ಹೇರ್ ಕಲರ್ ಬ್ರ್ಯಾಂಡ್ ವೆಲ್ಲಾ~ ಪ್ರತಿನಿಧಿಸುವ ಪಿಆಂಡ್‌ಜಿ, ದೇಶಿಯ ವ್ಯವಸ್ಥಾಪಕ, ರಾಬ್ ಸಮೆಟ್ ಅವರು ದೀಪ ಬೆಳಗುವಿಕೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು.

ಇಂದು ಸೌಂದರ್ಯ ಕೇವಲ ಹೆಣ್ಣಿಗೆ ಮಾತ್ರ ಸೀಮಿತವಾದುದಲ್ಲ. ಆಧುನಿಕ ಜೀವನಶೈಲಿಯಲ್ಲಿ ಮಹಿಳೆಯರು ಹಾಗೂ ಪುರುಷರು ತಲೆಯಿಂದ ಹಿಡಿದು ಕಾಲಿನ ಬೆರಳು ತನಕ  `ಸ್ಟೈಲಿಷ್~ ಆಗಿ ಕಾಣಿಸಲು ಬಯಸುತ್ತಾರೆ.
 
ಹಾಗಾಗಿ ಇದು ಒಂದು ವರ್ಗದ ಜನರಿಗೆ ಉದ್ಯೋಗವನ್ನೂ ಸೃಷ್ಟಿಸಿದೆ ಎಂದರೂ ತಪ್ಪಿಲ್ಲ. ಇದನ್ನು ವೃತ್ತಿಯಾನ್ನಾಗಿ ಬದಲಾಯಿಸಿಕೊಂಡು ಇಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಸೆಲೂನ್ ಸಂಸ್ಥಾಪಕ ಸಿ.ಕೆ. ಕುಮಾರ್ ಅವರ ಮಾತು ಹೀಗೆ ಸಾಗಿತ್ತು...

ಇದು ಶುರುವಾಗಿದ್ದು 50,000 ಹೂಡಿಕೆಯಿಂದ. ಈಗ ಲಕ್ಷಗಟ್ಟಲೆ ದುಡಿಯುತ್ತಿದ್ದೇನೆ. ನಾನು ಸಲೂನ್ ಮಾಡುತ್ತೇನೆ ಎಂದಾಗ ನನ್ನ ತಾಯಿಯೇ ಬೇಡ ಎಂದು ಹೇಳಿದ್ದರು. ಇನ್ನೂ ವಿಪರ್ಯಾಸವೆಂದರೆ ನನಗೆ ಪೆಡಿಕ್ಯೂರ್, ಮೆನಿಕ್ಯೂರ್ ಬಗ್ಗೆ ಏನೂ ಗೊತ್ತಿರಲಿಲ್ಲ. ಈಗ ಮೂರು ವರ್ಷವಾಯಿತು. ನನಗೆ ಎಲ್ಲಾ ತಿಳಿದಿದೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದಾಗ ಅವರ ಮೊಗದಲ್ಲಿ ಸಂಭ್ರಮದ ಹೊನಲು.

ಬಿಸಿನೆಸ್‌ನಲ್ಲಿ ಲಾಭ, ನಷ್ಟ ಇರುವುದು ಸಹಜ. ನಾನು ಫ್ಯಾಷನ್ ಆಗಿ ಇದನ್ನು ಆಯ್ಕೆ ಮಾಡಿಕೊಂಡೆ. ನನ್ನ ಮಡದಿಯ ಸಹಾಯ ನನ್ನನ್ನು ಇಷ್ಟರ ಮಟ್ಟಿಗೆ ತಂದು ನ್ಲ್ಲಿಲಿಸಿದೆ. ಆದರೆ ನಾನು ಯಾವತ್ತೂ `ಥಿಂಕ್ ವಿನ್ ವಿನ್~ ಎಂಬ ಮಾತನ್ನು ನೆನಪು ಮಾಡಿಕೊಳ್ಳುತ್ತೇನೆ ಅದೇ ನನ್ನ ಯಶಸ್ಸಿನ ಗುಟ್ಟು ಎಂದು ಖುಷಿಯಿಂದ ಹೇಳಿದ ಕುಮಾರ್ ಮುಖದಲ್ಲಿ ಇನ್ನೂ ಸಾಧಿಸಬೇಕು ಎಂಬ ಹಂಬಲ ಕಾಣಿಸುತ್ತಿತ್ತು.

ನಿಧಾನವಾಗಿ ಮತ್ತೆ ಕತ್ತಲು ಆವರಿಸಿತು. ಈಗ ಯಾಕೆ ಲೈಟ್ ಆಫ್ ಮಾಡಿದರು ಎಂದು ಯೋಚಿಸುತ್ತಿರುವಾಗ ಪಾಶ್ಚಿಮಾತ್ಯ ಸಂಗೀತದ ಗಾಳಿ ಬೀಸತೊಡಗಿತು. ಮೊದಲು ಸೀರೆಯಲ್ಲಿ ಬಂದ ನಾರಿಯರ ಮೈಯನ್ನು ಈಗ ಫ್ಯಾಷನ್ ಉಡುಗೆ ಅಲಂಕರಿಸಿತ್ತು. ಹೂನಗೆ ತೇಲಿಬಿಟ್ಟು ಅವರು ಹೊರಟಾಗ ವೇದಿಕೆಯ ಬದಿಯಲ್ಲಿದ್ದ ಹೂ ಅಂದ ಕಳೆದುಕೊಂಡು ಬಾಡಿದಂತಿತ್ತು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.