ADVERTISEMENT

ಸಮೋಸಾ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 19:30 IST
Last Updated 24 ಆಗಸ್ಟ್ 2011, 19:30 IST
ಸಮೋಸಾ ಸುಗ್ಗಿ
ಸಮೋಸಾ ಸುಗ್ಗಿ   

ಈಗ ರಂಜಾನ್ ಮಾಸ. ಮುಸ್ಲಿಂ ಧರ್ಮಾನುಯಾಯಿಗಳಿಗೆ ಉಪವಾಸ ವ್ರತ. ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯಾಸ್ತದ ನಂತರವೇ ಆಹಾರ ಸೇವನೆ. ಸಂಜೆ ಉಪವಾಸ ಮುಗಿಸುವಾಗ ಸಾಮಾನ್ಯವಾಗಿ ಖರ್ಜೂರ, ಡ್ರೈಫ್ರುಟ್‌ಗಳಲ್ಲದೇ ಸಮೋಸಾ ಸೇವಿಸುವುದು ವಾಡಿಕೆಯಾಗಿ ಬೆಳೆದುಬಂದಿದೆ.

 ಹೀಗಾಗಿಯೇ ರಂಜಾನ್ ಮಾಸದಲ್ಲಿ ಸಮೋಸಾಗಳಿಗೆ ವಿಪರೀತ ಬೇಡಿಕೆ. ನಮಾಜ್ ಮುಗಿಸಿ ಹೊರಬರುವವರಿಗಾಗಿ ಬಹುತೇಕ ಎಲ್ಲ ಮಸೀದಿಗಳ ಮುಂದೆ, ಸಮೀಪ ಇರುವ ಅಂಗಡಿಗಳಲ್ಲಿ ಸಮೋಸಾ ಎದ್ದು ಕಾಣುತ್ತದೆ. ತಿಂಡಿ ತಯಾರಕರಿಗಂತೂ ಇದೊಂದು ತಿಂಗಳು ಬಿಡುವಿಲ್ಲದ ಕೆಲಸ. ಬಗೆಬಗೆಯ ಶಾಖಾಹಾರಿ ಮತ್ತು ಮಾಂಸಾಹಾರಿ ಸಮೋಸಾಗಳನ್ನೇ ಮಾಡಿ ವರ್ಷದ ಬದುಕು ಕಂಡುಕೊಳ್ಳುವ ಜನ ಸಾಕಷ್ಟಿದ್ದಾರೆ.

ಕೆಲವು ಕಡೆ ಮನೆಮಂದಿಯೆಲ್ಲ ಸೇರಿ ದಿನವೊಂದಕ್ಕೆ 7-8 ಸಾವಿರ ಸಮೋಸಾ ಮಾಡುತ್ತಾರೆ. ಅಷ್ಟೂ ಕೆಲವೇ ತಾಸಿನಲ್ಲಿ ಖರ್ಚಾಗುತ್ತವೆ.

ಉದಾಹರಣೆಗೆ ಬಸವನಗುಡಿ ಆರ್.ವಿ.ರಸ್ತೆ ವಿಜಯಾ ಕಾಲೇಜಿನ ಎದುರು ಇರುವ (ಸೋನಾಟ ಸಾಫ್ಟ್‌ವೇರ್ ಎದುರು) ಸೈಯದ್ ಅಹಮದ್ ಕುಟುಂಬ. ರಂಜಾನ್ ಮಾಸ ಶುರುವಾದರೆ ಈ ಕುಟುಂಬದವರಿಗೆಲ್ಲ ದಿನವಿಡೀ ಕೆಲಸ.

ನಸುಕಿನಿಂದಲೇ ಆರಂಭ: ಮನೆ ಮಂದಿಯೆಲ್ಲಾ ಸೇರಿ 9 ಜನ ಇದ್ದಾರೆ. ಸಮೋಸಾ ಮಾಡಲು ನಸುಕಿನ ಜಾವ 2.30ಕ್ಕೆ ಸಿದ್ಧರಾಗುತ್ತಾರೆ. ಮಧ್ಯಾಹ್ನ 12.30ರ ವರೆಗೂ ನಿರಂತರವಾಗಿ ಇದೇ ಕೆಲಸ. ಸುಮಾರು 30 ವರ್ಷಗಳಿಂದ ಈ ವೃತ್ತಿಯಲ್ಲಿದ್ದಾರೆ.

ಇದು ರಂಜಾನ್ ಮುಗಿಯುವವರೆಗೆ ಮಾತ್ರ. ನಂತರ ತಮ್ಮ ಮಾಮೂಲು ಉದ್ಯೋಗದಲ್ಲಿ (ತರಕಾರಿ ವ್ಯಾಪಾರ, ಮೆಕ್ಯಾನಿಕ್ ಇತ್ಯಾದಿ) ತೊಡಗುತ್ತಾರೆ.
 ನಮ್ಮಲ್ಲಿ ರುಚಿ- ಶುಚಿಗೆ ಆದ್ಯತೆ. ದಿನವಿಡೀ ಉಪವಾಸವಿರುವ ಸಮುದಾಯದ ಬಾಂಧವರಿಗಾಗಿ ಸಮೋಸಾ ಮಾಡಲಾಗುತ್ತದೆ. ಅದಕ್ಕಾಗಿಯೇ ಆರೋಗ್ಯಕ್ಕೆ ಹಾನಿಯಾಗದಂತೆ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತೇವೆ. ಸಾಕಷ್ಟು ಜಾಗರೂಕತೆ ವಹಿಸುತ್ತೇವೆ ಎನ್ನುತ್ತಾರೆ ಈ ಕುಟುಂಬದ ಸದಸ್ಯ ಮೆಹಬೂಬ್ ಪಾಷಾ.
ಹೆಚ್ಚು ಬೇಡಿಕೆ: ಇಲ್ಲಿನ ರುಚಿಯಾದ ಸಮೋಸಾಗಳಿಗೆ ಭಾರೀ ಬೇಡಿಕೆ ಇದೆ. ಶುದ್ಧ ನಂದಿನಿ ತುಪ್ಪ ಬಳಸಿ ಮಸಾಲೆ ಸಿದ್ಧ ಮಾಡಲಾಗುತ್ತದೆ. ನಂತರ ಗುಣಮಟ್ಟದ ಎಣ್ಣೆಯಿಂದ ರುಚಿ ರುಚಿಯಾಗಿ ಕರಿಯಲಾಗುತ್ತದೆ. ಸಸ್ಯಾಹಾರಿ ಸಮೋಸಾ ಒಂದರ ಬೆಲೆ ರೂ 6. ಖೀಮಾ (ಮಟನ್) ಸಮೋಸಾಗೆ 9 ರೂಪಾಯಿಗಳು. ಬೆಲೆ ದುಬಾರಿಯಾದರೂ ರುಚಿಗೆ ಮೋಸವಿಲ್ಲ. ಹೀಗಾಗಿಯೇ ನಗರದ ವಿವಿಧೆಡೆಯಿಂದ ಜನ ಬಂದು ಸಮೋಸಾ ಕೊಳ್ಳಲು ಸಾಲಿನಲ್ಲಿ ಮುಗಿ ಬೀಳುತ್ತಾರೆ.

ಸಾಮಾನ್ಯವಾಗಿ ಸಮೋಸಾದಲ್ಲಿ ಆಲೂಗಡ್ಡೆ ಇರಲೇ ಬೇಕು. ಆದರೆ ಇಲ್ಲಿ ವೆಜ್ ಸಮೋಸಾಗೆ ಬಟಾಣಿ, ಈರುಳ್ಳಿ ಮಾತ್ರ ಬಳಸಲಾಗುತ್ತದೆ. ಆಲೂಗಡ್ಡೆ ಹಾಕಿದರೆ ಗ್ಯಾಸ್ಟ್ರಿಕ್ ಆಗುತ್ತದೆ. ಹಾಗಾಗಿ ಅದನ್ನು ಉಪಯೋಗಿಸುವುದಿಲ್ಲ ಎನ್ನುತಾರೆ ಸೈಯದ್ ಅಹಮದ್.

ಬರೋಬ್ಬರಿ 4 ಸಾವಿರ: ದಿನವೊಂದಕ್ಕೆ 4 ಸಾವಿರ ಸಮೋಸಾಗಳು ಮಾರಾಟವಾಗುತ್ತವೆ. ಮಧ್ಯಾಹ್ನ 12.30ಕ್ಕೆ ಆರಂಭವಾದರೆ ಸಂಜೆ 5 ರೊಳಗೆ ಎಲ್ಲಾ ಖಾಲಿ. ಬಸವನಗುಡಿ ಮತ್ತು ಸುತ್ತ ಮುತ್ತ 8-10 ಅಂಗಡಿಗಳಿದ್ದರೂ, ಜನ ಮಾತ್ರ ಇಲ್ಲಿಗೇ ಬಂದು ಸಮೋಸಾ ಕೊಳ್ಳುತ್ತಾರೆ. ಅಚ್ಚರಿ ಎಂದರೆ ದೂರದ ಚಿಂತಾಮಣಿ, ರಾಮನಗರದಿಂದಲೂ ಜನರು ಬಂದು ಕೊಂಡೊಯ್ಯುತ್ತಾರೆ.

16 ವರ್ಷಗಳಿಂದ ಇಲ್ಲಿಯೇ ಸಮೋಸಾ ತಿನ್ನುತ್ತಿದ್ದೇನೆ. ರಂಜಾನ್ ವೇಳೆ ಸಮೋಸಾ ಸೇವಿಸುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಹಾಗಾಗಿ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದು, `ಸಮೋಸಾ ಇಲ್ಲದೇ ಉಪವಾಸ ಮುರಿಯುವ ಪದ್ಧತಿಯೇ ನಮ್ಮಲ್ಲಿಲ್ಲ~ ಎನ್ನುತ್ತಾರೆ ಎಂಜಿನಿಯರಿಂಗ್ ವಿದ್ಯಾರ್ಥಿ ಇನಾಮ್.
ಇನ್ನೇನು ರಂಜಾನ್ ಮಾಸ ಮುಗಿಯುವ ಸಮಯ ಹತ್ತಿರವಾಗುತ್ತಿದೆ. ರುಚಿಯಾದ ಸಮೋಸಾ ಸವಿಯಬೇಕಾದರೆ ಇತ್ತ ನೀವೂ ಒಮ್ಮೆ ಭೇಟಿ ಕೊಡಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT