ADVERTISEMENT

ಸಿಎಂಆರ್‌ನಲ್ಲಿ ಪಾಟೀ ಸವಾಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಸಿಎಂಆರ್‌ನಲ್ಲಿ ಪಾಟೀ ಸವಾಲು
ಸಿಎಂಆರ್‌ನಲ್ಲಿ ಪಾಟೀ ಸವಾಲು   

ಸಿಎಂಆರ್ ಕಾನೂನು ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಪಾಟೀ ಸವಾಲು ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕೋರ್ಟ್ ಕಲಾಪದ ಪರಿಚಯ ಮತ್ತು ವಕೀಲಿ ವೃತ್ತಿಯ ನೈಪುಣ್ಯ ಹೆಚ್ಚಿಸಿಕೊಳ್ಳಲು ಇದು ಅವಕಾಶ ಒದಗಿಸಿತು. ಕೋರ್ಟ್‌ನಲ್ಲಿ ಸಾಕ್ಷಿಯೊಬ್ಬನನ್ನು ಪ್ರಶ್ನಿಸಬೇಕಾದ ಸಂದರ್ಭದಲ್ಲಿ ಮಾಡಿಕೊಳ್ಳಬೇಕಾದ ತಯಾರಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಇದು ವೇದಿಕೆ ಕಲ್ಪಿಸಿತ್ತು.

ವಿವಿಧ ಕಾಲೇಜುಗಳ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಆಕ್ಸ್‌ಫರ್ಡ್ ಲಾ ಕಾಲೇಜ್ ಮತ್ತು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ತಂಡ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದವು. ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯೂನಿವರ್ಸಿಟಿಯ ಪ್ರತೀಕ್ ಮಿಶ್ರಾ ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿಗೆ ಭಾಜನರಾದರು.ವಿಜೇತರುಗಳಿಗೆ 50 ಸಾವಿರ ರೂಪಾಯಿಗೂ ಅಧಿಕ ನಗದು ಬಹುಮಾನ ದೊರೆಯಿತು.


 ರಾಜ್ಯ ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೌಳಿ, ಪ್ರಾಸಿಕ್ಯೂಷನ್ ಮಾಜಿ ನಿರ್ದೇಶಕ ಸದಾಶಿವಮೂರ್ತಿ ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸಮಾರೋಪದಲ್ಲಿ ಅತಿಥಿಯಾಗಿದ್ದ ಮಾಜಿ ಪೊಲೀಸ್ ಕಮೀಷನರ್ ಎಲ್.ರೇವಣಸಿದ್ಧಯ್ಯ, ಸುಲಭವಾಗಿ ಸರಳವಾಗಿ ಹಣ ಗಳಿಸುವ ಉದ್ದೇಶ ಬಿಟ್ಟು ಶ್ರಮವಹಿಸಿ ಅಭ್ಯಾಸ ಮಾಡಲು ಸಲಹೆ ನೀಡಿದರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಪಾಟೀ ಸವಾಲಿನ ಕಲೆಯನ್ನು  ವಿವರಿಸಿದರು. ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ.ಜೆ.ಎಸ್. ಪಾಟೀಲ್, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸ ರೆಡ್ಡಿ, ಸಿಎಂಆರ್ ಸಮೂಹದ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಸಿಎಂಆರ್ ಜ್ಞಾನಧಾರಾ ಟ್ರಸ್ಟ್ ಅಧ್ಯಕ್ಷೆ ಡಾ.ಸಬಿತಾ ರಾಮಮೂರ್ತಿ ಮತ್ತಿತರರು ಹಾಜರಿದ್ದರು.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT