ADVERTISEMENT

ಸಿಜಿಕೆ ನಾಟಕೋತ್ಸವದಲ್ಲಿ ‘ಅಸಹಿಷ್ಣುತೆ’ಯ ಚರ್ಚೆ

ಪ್ರಜಾವಾಣಿ ವಿಶೇಷ
Published 6 ಏಪ್ರಿಲ್ 2016, 19:32 IST
Last Updated 6 ಏಪ್ರಿಲ್ 2016, 19:32 IST
‘ಮತ್ತಿ’ ನಾಟಕದ ದೃಶ್ಯ
‘ಮತ್ತಿ’ ನಾಟಕದ ದೃಶ್ಯ   

ಕಲೆಯನ್ನು ಕೇವಲ ಮನರಂಜನೆ ಹಾಗೂ ಸೌಂದರ್ಯಾಭಿವ್ಯಕ್ತಿಗೆ ಮಾತ್ರ ಸೀಮಿತಗೊಳಿಸದೆ ರಂಗಭೂಮಿಯನ್ನು ಕಲೆ, ಮನರಂಜನೆಗಳೊಡನೆಯೇ ಜನರೊಂದಿಗಿನ ಸಂವಾದವಾಗಿಯೂ, ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುವ ವೇದಿಕೆಯಾಗಿಯೂ ಬಳಸಿಕೊಳ್ಳುವುದು ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವದ ಆಶಯ.

ಕನ್ನಡ ರಂಗಭೂಮಿಯನ್ನು ಜನಪರವಾಗಿಯೂ, ಸಮಾಜಮುಖಿಯಾಗಿಯೂ ರೂಪಿಸಿದ ಮಹಾನ್ ಮಾನವತಾವಾದಿ ಸಿ.ಜಿ.ಕೃಷ್ಣಸ್ವಾಮಿ. ಅವರು ಪ್ರತಿನಿಧಿಸುತ್ತಿದ್ದ ಆಶಯಗಳನ್ನು ಮುಂದಿನ ತಲೆಮಾರುಗಳಿಗೆ ಅರ್ಥಪೂರ್ಣವಾಗಿ ಪರಿಚಯಿಸುವ ನಿಟ್ಟಿನಲ್ಲಿ ‘ರಂಗ ನಿರಂತರ’ ಸಂಸ್ಥೆ ಕಳೆದ ಎರಡು ವರ್ಷಗಳಿಂದ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ರಂಗಹಬ್ಬವನ್ನು ನಡೆಸಿಕೊಂಡು ಬರುತ್ತಿದೆ.

ಈ ಬಾರಿ ಏಪ್ರಿಲ್ 8ರಿಂದ 14ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ‘ರಂಗ ನಿರಂತರ’ ಸಂಸ್ಥೆಯ ಶಶಿಧರ ಅಡಪ, ಗುಂಡಣ್ಣ, ಬಿ. ವಿಠಲ್ (ಅಪ್ಪಯ್ಯ), ಶಶಿಧರ ಭಾರಿಘಾಟ್, ಎಚ್‌.ಎಲ್‌. ಪುಷ್ಪಾ, ಸರ್ವೇಶ್, ಜಿ.ಪಿ.ಒ ಚಂದ್ರು, ಸೋಮಶೇಖರ್, ರಶ್ಮಿ ನಾಟಕೋತ್ಸವ ಸಂಘಟನೆಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷವೂ ವರ್ತಮಾನವನ್ನು ಬಾಧಿಸುತ್ತಿರುವ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ರಂಗಭೂಮಿಯ ಮೂಲಕ ಜನರ ಮುಂದಿಡುವ ಪ್ರಯತ್ನವನ್ನು ‘ರಂಗ ನಿರಂತರ’ ಮಾಡುತ್ತಿದೆ. ಈ ಬಾರಿ ‘ಅಸಹಿಷ್ಣುತೆ’ ವಿಷಯವಾಗಿ ನಾಟಕೋತ್ಸವ ನಡೆಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿರುವ ನಾಟಕೋತ್ಸವದ ನಿರ್ದೇಶಕರಾದ ಕೆ.ವೈ.ನಾರಾಯಣ ಸ್ವಾಮಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ನಾಟಕೋತ್ಸವಕ್ಕೆ ‘ಅಸಹಿಷ್ಣುತೆ’ ವಿಷಯವನ್ನು ಯಾಕೆ ಆರಿಸಿಕೊಂಡಿರಿ?
ಈ ವರ್ಷದ ರಂಗೋತ್ಸವವನ್ನು ‘ಸಹಿಷ್ಣುತೆ ಅಥವಾ ಸಹನೆಯ ನೆಲೆಗಳನ್ನು ಅರ್ಥೈಸುವ ವೇದಿಕೆಯನ್ನಾಗಿ ಮಾಡಲು ಉದ್ದೇಶಿಸಿದ್ದೇವೆ. ಕಳೆದ ಒಂದು ವರ್ಷದಿಂದ ನಮ್ಮ ದೇಶದಲ್ಲಿ ಅಸಹಿಷ್ಣುತೆ ಘಟನೆಗಳು ಹಾಗೂ ಚರ್ಚೆ ಸಾಮಾಜಿಕ ಜೀವನದಲ್ಲಿ ಬಿರುಸಾಗಿದೆ.

ಸಹಿಷ್ಣುತೆ ಪ್ರಕೃತಿ ಸಹಜವಾದ ಹೊಂದಾಣಿಕೆಯ ಮಾನವೀಯ ಒಪ್ಪಂದವಾಗಿರುವುದನ್ನು ನಮ್ಮ ಪೂರ್ವಿಕರಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದ ಮಹಾತ್ಮರು ಮನಗಾಣಿಸಿದ್ದಾರೆ. ಸಹಿಷ್ಣುತೆಯ ಅಂತಸ್ಥ ಸಾಮರ್ಥ್ಯವನ್ನು ಹಿಗ್ಗಿಸುವ, ಪರ ವಿಚಾರ, ಪರ ಧರ್ಮಗಳನ್ನು ಗೌರವಿಸಿ, ಆಲಿಸುವ ಅವಶ್ಯಕತೆಗಳನ್ನು ಉತ್ಸವದಲ್ಲಿ ಪ್ರೇಕ್ಷಕರ ಮುಂದೆ  ಮಂಡಿಸಲಾಗುವುದು.

* ಅಸಹಿಷ್ಣುತೆ ಬಗ್ಗೆ ಹೆಚ್ಚು ಮಾತನಾಡುತ್ತಾ ಈ ಸಮಾಜದ ಎರಡು ಪ್ರಬಲ ಗುಂಪು/ಕೋಮುಗಳ ಧೃವೀಕರಣವಾಗುತ್ತಿದೆ ಅನಿಸುವುದಿಲ್ಲವೇ?
ಸಹಿಷ್ಣುತೆ ಒಂದು ಮಾನವೀಯ ಒಪ್ಪಂದ. ನಿಸರ್ಗದಲ್ಲೂ ಇದ್ದಹಾಗೆ ನಮ್ಮಲ್ಲೂ ಇರಬೇಕಾಗಿತ್ತು. ಆದರೆ, ಮೂಲಭೂತವಾದ ಆಲೋಚನೆ ಹಾಗೂ ಕಳೆದ ಎರಡು ದಶಕಗಳಿಂದ ಬದುಕಿನ ವಲಯಗಳನ್ನು ಆವರಿಸಿಕೊಳ್ಳುತ್ತಿರುವ ಗೋಳೀಕರಣದ ಗುಪ್ತ ಕಾರ್ಯಸೂಚಿಗಳು ಹಾಗೂ ವರ್ಚುಯಲ್ ಅಭಿವೃದ್ಧಿಯ ಭ್ರಮೆಗಳು ನಮ್ಮ ವರ್ತಮಾನವನ್ನು ವಿರೂಪಗೊಳಿಸಿವೆ. 

ಜಾತಿ, ಸಿದ್ಧಾಂತ, ಹೆಣ್ಣುಗಂಡು, ನಗರ ಗ್ರಾಮೀಣ ಹೀಗೆ ಹಲವು ವಿಚಾರಗಳ ನಡುವೆ ಸಾಮರಸ್ಯವನ್ನು ಬೆಳೆಸುವ ಪ್ರಯತ್ನ, ಈ ಅಸಾಂಸ್ಕೃತಿಕ ನಡೆಗಳು ನಮ್ಮ ಸಂವೇದನೆಗಳಿಗೆ ಮಂಪರು ಬರಿಸಿರುವ ಕಾಲದಲ್ಲಿ ನಾವು ಸಹಿಷ್ಣುತೆಯ ಎಚ್ಚರ ಮೂಡಿಸುವ ಪ್ರಯತ್ನವನ್ನು ಮಾಡಲಿದ್ದೇವೆ.

* ಸೈದ್ಧಾಂತಿಕ ಜಗಳಗಳ ಮೇಲಾಟದ ನಡುವೆ ರಂಗ ಪ್ರಯೋಗದಿಂದ ಸಹಿಷ್ಣುತೆಯ ಎಚ್ಚರ ಮೂಡಿಸಬಲ್ಲಿರಾ?
ಅಸಹಿಷ್ಣುತೆಯನ್ನು ಗುರುತಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ, ಸಮಾನತೆ, ಸಹಬಾಳ್ವೆಯನ್ನು ಎಲ್ಲ ಮಾನವತಾವಾದಿಗಳು ಒಪ್ಪುತ್ತಾರೆ,  ನಮ್ಮದು ಅಟೆಮ್ಟ್ ಆಫ್ ಇಂಟ್ರಾಸ್ಪೆಕ್ಷನ್.

ನಾವು–ನೀವು ಅನ್ನೋದಲ್ಲ, ಆಲೋಚನಾ ಭಿನ್ನಾಭಿಪ್ರಾಯಗಳನ್ನು ಮೀರಿ ‘ನಾವೆಲ್ಲರೂ’ ಅನ್ನೋದು ನಮ್ಮ ಕಲ್ಪನೆ.  ಇಂದಿನ ಸಾಮಾಜಿಕ ಜಾಲತಾಣಗಳಲ್ಲಿನ ಬರವಣಿಗೆಯಲ್ಲಿ ಸಾಮಾಜಿಕ ಜವಾಬ್ದಾರಿ ಇಲ್ಲ. ಯಾರು ಯಾರನ್ನಾದರೂ ನೋಯಿಸಬಲ್ಲರು. ಆಡುವ ಮಾತಿನಲ್ಲಿ  ಹೊಣೆಗಾರಿಗೆ ಇಲ್ಲ ಸ್ವೇಚ್ಛೆಯ ಬರವಣಿಗೆ.  ಈ ಎಲ್ಲವುಗಳ ನಡುವೆ ಆತ್ಮಾವಲೋಕನವಿದು; ಹೊರಗಿನ ಪ್ರಯಾಣವಲ್ಲ,  ಒಳಗಿನ ಪ್ರಯಾಣ.

* ನಾಟಕ ಮಾಧ್ಯಮದ ವಾಚ್ಯದಿಂದಲೇ ‘ಅಸಹಿಷ್ಣುತೆ’ ರೂಪಕಗಳನ್ನು ಹೇಗೆ ಕಟ್ಟಿಕೊಡುತ್ತೀರಿ?
ಯಾವುದೇ ಥೀಮ್‌ ಇಟ್ಟುಕೊಂಡರೂ ರಂಗಭೂಮಿ ತಾನು ಮಾಡಬೇಕಾದ ಕೆಲಸವನ್ನು ಮಾಡುತ್ತದೆ.  ಅಸಹಿಷ್ಣುತೆಯಿಂದ ಹೇಗೆ ತೊಂದರೆಯಾಗುತ್ತದೆ, ಮಾನವೀಯ ಬಿಕ್ಕಟ್ಟು, ಅದು ಹುಟ್ಟುಹಾಕುವ ಹಿಂಸೆಯ ಸ್ವರೂಪವನ್ನು ನಾವು  ನಾಟಕಗಳ ಮೂಲಕ ಚರ್ಚಿಸುತ್ತೇವೆ. ನಾಟಕೋತ್ಸವದಲ್ಲಿ ನಾವು ‘ಅಸಹಿಷ್ಣುತೆ’ ಚರ್ಚಿಸುತ್ತೀವೆ, ನಾಟಕಗಳ ಮೂಲಕ ಅಲ್ಲ.

*‘ಅಸಹಿಷ್ಣುತೆ’ ಎಂಬ ಥೀಮ್‌ ಆಧಾರಿತ ರಂಗೋತ್ಸವದಿಂದ ಒಂದು ಬಗೆಯ ಪ್ರೇಕ್ಷಕ ವರ್ಗವನ್ನು ನೀವು ತಯಾರಿಸಿದಂತೆ ಆಗುವುದಿಲ್ಲವೇ?
ಆ ಎಚ್ಚರ, ತಿಳಿವಳಿಕೆ ನಮಗೆ ಇದೆ. ತಾತ್ವಿಕತೆಯನ್ನೇ ಆಧರಿಸಿ ಆಯ್ಕೆ ಮಾಡಿಕೊಂಡ ನಾಟಕಗಳಲ್ಲ ಇವು. ನಾಟಕಗಳು ಎತ್ತುವ ಮಾನವೀಯ ಪ್ರಶ್ನೆಗಳಿಗಾಗಿ ಮತ್ತು ರಂಗ ಭಾಷೆಯಲ್ಲಿ ಮೂಡಿಸುವ ಪ್ರಜ್ಞೆ, ಕಟ್ಟಿಕೊಡುತ್ತಿರುವ ರಂಗರೂಪಕ ಅನನ್ಯ ಅನುಭೂತಿ, ಥೀಮ್ ಅನ್ನೋದು ರೆಫರೆನ್ಸ್‌ ಅಷ್ಟೆ. ಇಲ್ಲಿ ನಾವು ಯಾವುದೇ ಘೋಷವಾಕ್ಯಕ್ಕೆ ಬದ್ಧರಾಗಿಲ್ಲ.

*‘ಅಸಹಿಷ್ಣುತೆ’ ಆಧಾರಿತ ಎನ್ನುವ ವಸ್ತುವಿನಿಂದ ನಾಟಕದಲ್ಲಿನ ಇತರ ಅಂತಃಸತ್ವಕ್ಕೆ ಅಪಚಾರವಾದಂತೆ, ಪ್ರೇಕ್ಷಕರ ಮನಸ್ಸು ಒಂದೆಡೆಗೆ ಕೇಂದ್ರಿಕೃತವಾದಂತೆ ಅಲ್ಲವೆ? ವಿಷಯಾಧಾರಿತ ಚೌಕಟ್ಟು ಹಾಕಿಕೊಟ್ಟರೆ ನಾಟಕದ ಉಳಿದ ಆಯಾಮಗಳು ದಕ್ಕದೇ ಹೋಗಬಹುದು. ಏನಂತೀರಿ?
ಥೀಮ್ ಯಾಕೆ ಬೇಕು ಅಂದರೆ, ಈ ಹೊತ್ತಿನಲ್ಲಿ ಮಾತಿನ ಅಪಮೌಲೀಕರಣವಾಗುತ್ತಿದೆ. ಹಿಂದೆ ಆಡಿದ ಮಾತಿಗೆ ನಿಲುವು ಇರುತ್ತಿತ್ತು. ಈಗ ಆಡುವ ಮಾತಿಗೆ ನಾನು ಎಷ್ಟು ಬಾಧ್ಯ ಎನ್ನುವುದು ಇಲ್ಲ.  ಜಾತಿ, ಹೆಣ್ಣುಮಕ್ಕಳ ವಿಚಾರ, ಲೈಂಗಿಕ ಅಲ್ಪಸಂಖ್ಯಾತರು, ಲವ್‌ ಜಿಹಾದ್, ರೈತರ ಆತ್ಮಹತ್ಯೆ ವಿಚಾರ ಇವುಗಳ ಬಗೆಗಿನ ನಮ್ಮ ಪ್ರತಿಕ್ರಿಯೆ ದುಃಖಕರವಾಗಿದೆ.

ನಮಗಿಂತ ಭಿನ್ನವಾಗಿ  ಆಲೋಚಿಸುವವರನ್ನು ಎಲಿಮಿನೇಟ್‌ ಮಾಡುತ್ತೀವಿ ಅನ್ನೋದು ಅಪಾಯಕಾರಿ, ನಾಗರಿಕ ಸಮಾಜ ಇಂತಹವುಗಳನ್ನು ಪ್ರಶ್ನಿಸಬೇಕು ಅಲ್ವ? ತಿದ್ದುವ ಆಸೆ ನಮಗಿಲ್ಲ. ಉತ್ತರ ಕಂಡುಕೊಳ್ಳುವ ಪ್ರಯತ್ನವಿದು. ಕಲಾವಿದ ಪ್ರೇಕ್ಷಕರೊಂದಿಗೆ ಸಾಂಸ್ಕೃತಿಕ ರೂಪಕಗಳನ್ನು ಬಳಸಿ ಮಾತನಾಡುತ್ತಾ ಹಲವು ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಾನೆ. ನೋಡುವವರ ಒಳಗೆ ಅಭಿಪ್ರಾಯ ಅಥವಾ ಪರಿಹಾರಗಳ ಹುಟ್ಟು ಬೇಕು ಎಂಬುವುದು ನಮ್ಮ ಆಶಯ. 

ADVERTISEMENT

ನಾಟಕೋತ್ಸವದ ವಿವರ
ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಸಹಿಷ್ಣುತೆಯ ಹಲವು ಆಯಾಮಗಳನ್ನು ಒಳಗೊಳ್ಳುವ 7 ಬೀದಿ ನಾಟಕಗಳು, 18 ಕವಯಿತ್ರಿಯರು ರಚಿಸಿರುವ ಕಾವ್ಯ ವಾಚನ ಹಾಗೂ ಗಾಯನ ಕಾರ್ಯಕ್ರಮವಿದೆ.

‘ಅಸಹಿಷ್ಣುತೆ’ ಕುರಿತು ಸ್ಮರಣ ಸಂಚಿಕೆ ಬಿಡುಗಡೆ, ಕನ್ನಡ ರಂಗಭೂಮಿ ನಡೆಸಿದ ಹೋರಾಟಗಳ ನೆನಪನ್ನು ನಿರೂಪಿಸುವ ‘ಮೆಟ್ಟಿಲ ಮೆಲಕು’ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರತಿದಿನ ಈ ಕಾರ್ಯಕ್ರಮಗಳು ಸಂಜೆ 4 ಗಂಟೆಗೆ ಆರಂಭಗೊಂಡು ರಾತ್ರಿ 9  ಗಂಟೆವರೆಗೆ ನಡೆಯಲಿವೆ. ಪ್ರದರ್ಶನಗೊಂಡ ನಾಟಕದ ಚರ್ಚೆಯನ್ನು ಮರುದಿನ ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು.

ಪ್ರದರ್ಶನವಾಗುವ ನಾಟಕಗಳು– ‘ಮತ್ತಿ’ (ಮಲಯಾಳಂ), ‘ಗಾಂಧಿನೇ ಕಹಾ ಥಾ’ (ಹಿಂದುಸ್ತಾನಿ), ‘ಸಹದೇವ’ (ಕನ್ನಡ), ‘ರಾವಣಲೀಲಾ’(ಹಿಂದಿ), ‘ಸಣ್ ತಿಮ್ಮಿ ಲವ್‌ ಪುರಾಣ’ (ಕನ್ನಡ), ‘ಚಾತ್ರಾ’ (ಅಸ್ಸಾಂ), ‘ಮುಕಾಂ ಡೆಹರೂ ಜಿಲ್ಲಾ ನಾಗೋರ್’ (ರಾಜಸ್ತಾನಿ ಹಿಂದಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.