ADVERTISEMENT

ಸೀಟು ಮತ್ತು ಸೀಟಿ

ಬಸ್ ಕತೆ

ಸಂತೋಷ್ ಇಗ್ನೇಷಿಯಸ್
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಕೆಎಸ್‌ಆರ್‌ಟಿಸಿ ಕೆಂಪು ಬಸ್ಸುಗಳನ್ನು ನೋಡುವಾಗಲೆಲ್ಲ ಪದೇ ಪದೇ ನೆನಪಾಗುವ ಆ ಘಟನೆ ಘಟಿಸಿ ಸುಮಾರು 20 ವರ್ಷ ಕಳೆದಿರಬಹುದು. ನಾನು ಆಗ ಪುಟ್ಟ ಹುಡುಗ. ಕನಕಪುರ ಬಸ್ ಸ್ಯಾಂಡಿನಲ್ಲಿ ನಾನು ನನ್ನ ತಂದೆ ತಾಯಿ ಬೆಂಗಳೂರಿನ ಬಸ್ಸಿಗಾಗಿ ಕಾಯುತ್ತಾ ಕೂತಿದ್ದೆವು. ಆಗೆಲ್ಲ ಈಗಿನಂತೆ ಗಳಿಗೆಗೊಂದು ಬಸ್ಸು ಇರಲಿಲ್ಲ. ಬಸ್ಸುಗಳು ಕಡಿಮೆ ಇದ್ದುದ್ದರಿಂದ ಪ್ರಯಾಣಿಕರು ಬಸ್ಸು ಬಂದೊಡನೆಯೇ ಸೀಟುಗಳನ್ನು ಕಾಯ್ದಿರಿಸಲು ನಾ ಮುಂದು ತಾ ಮುಂದು ಎಂದು ಮುತ್ತಿಕೊಳ್ಳುತ್ತಿದ್ದರು. ಕಂಡಕ್ಟರ್ ಬಾಗಿಲು ತೆರೆಯುವುದೇ ತಡ ಒಳಗಿದ್ದ ಪ್ರಯಾಣಿಕರು ಕೆಳಗಿಯುವುದನ್ನೂ ಕಾಯದೆ ಅವರ ಮಧ್ಯೆಯೆ ಜಾಗ ಮಾಡಿಕೊಂಡು ಹೋಗಿ ಸೀಟು ಗಿಟ್ಟಿಸಿಕೊಳ್ಳುವುದೇ ಅವರ ಆವತ್ತಿನ ಬಹುದೊಡ್ಡ ಕೆಲಸ. ಇನ್ನೂ ಕೆಲವರು ತಮ್ಮಲಿದ್ದ ಟವಲ್, ಕರವಸ್ತ್ರ, ತಿಂಡಿ ಪೊಟ್ಟಣಗಳು ಇತ್ಯಾದಿ ಇತ್ಯಾದಿಗಳನ್ನು ಕಿಟಕಿಯ ಮೂಲಕವೇ ಸೀಟಿನ ಮೇಲೆಸೆದು ಆ ಜಾಗವನ್ನು ಮೀಸಲಿಡುತ್ತಿದ್ದರು.

ಅಂದೂ ಬಸ್ಸಿಗಾಗಿ ಜನಜಂಗುಳಿ ಬಹಳ ಹೊತ್ತಿನಿಂದ ಕಾದಿತ್ತು. ತಡವಾಗಿಯಾದರೂ ಬಸ್ ಬಂತು. ಬಂದದ್ದೇ ಎಲ್ಲರೂ ಬಸ್ಸನ್ನು ಸುತ್ತುವರೆದು ಟವಲ್, ಕರವಸ್ತ್ರ, ಬ್ಯಾಗು, ಪೊಟ್ಟಣಗಳನ್ನು ಕಿಟಕಿಯ ಮೂಲಕ ತೂರಿಸಿ ಸೀಟನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಭರಾಟೆಯಲ್ಲಿದ್ದರು. ನಮ್ಮ ತಂದೆಯವರೂ ಸೀಟು ಹಿಡಿಯುವ ಪೇಚಾಟದಲ್ಲಿದ್ದರು. ಯಾವ ಸೀಟು ನೋಡಿದರೂ ಒಬ್ಬರಲ್ಲ ಒಬ್ಬರ ವಸ್ತುಗಳು ಕುಳಿತುಬಿಟ್ಟಿದ್ದವು. ಗಾಬರಿಯಾದ ನಮ್ಮ ತಂದೆ ಅನಾಮತ್ತಾಗಿ ನನ್ನನ್ನು ಎತ್ತಿ ಕಿಟಕಿಯಲ್ಲಿ ತೂರಿ, ಒಂದು ಸೀಟು ಹಿಡಿದುಕೋ ಅಂದದ್ದೇ ನಾನು ನುಸುಳಿ ಖಾಲಿ ಕಂಡ ಒಂದು ಸೀಟಿನಲ್ಲಿ ಕುಳಿತುಕೊಂಡು ದೊಡ್ಡ ಸಾಧನೆ ಮಾಡಿದವನಂತೆ ಬೀಗಿದೆ. ಧಾವಿಸಿ ಬರುತ್ತಿದ್ದ ಜನರಿಗೆ ‘ಮನೆಯವರು ಬರ್ತಾರೆ’ ‘ಮನೆಯವರು ಬರ್ತಾರೆ’ ಎಂದು ಸಬೂಬು ಹೇಳಿ ಸಾಗಹಾಕುತ್ತಲೇ ಇದ್ದೆ.

ಜನ ಬರುತ್ತಲೇ ಇದ್ದರು. ಬಸ್ಸು ತುಂಬುತ್ತಾ ಹೋಯಿತು. ನನ್ನ ಸೀಟೊಂದು ಬಿಟ್ಟು ಎಲ್ಲ ಭರ್ತಿ. ನಾನು ಆ ಸೀಟಿನ ತುದಿಯಲ್ಲಿ ಕೈ ಕಾಲುಗಳಿಂದ ಅಡ್ಡ ಹಾಕಿ ಯಾರೂ ನುಸುಳದಂತೆ ಭದ್ರವಾಗಿ ಸ್ಥಳವನ್ನು ಕಾಪಾಡುತ್ತಿದ್ದೆ. ಜನ ಬಂದರು, ತುಂಬಿದರು ತುಳುಕಿದರು. ನಮ್ಮ ತಂದೆತಾಯಿ ಮಾತ್ರ ಪತ್ತೆಯೇ ಇಲ್ಲ. ಡ್ರೈವರ್ ಬಸ್ಸನ್ನು ಬುರ್ ಬುರ್ ಅನ್ನಿಸತೊಡಗಿದ. ಅಷ್ಟು ಹೊತ್ತಿನವರೆಗೂ ಸೀಟು ಹಿಡಿದಿದ್ದ ಹಮ್ಮು ಕ್ರಮೇಣ ಡಿಮ್ಮು ಆಯಿತು. ಸೀಟಿನ ಅಪಹರಣಕ್ಕಾಗಿ ಕಾಯ್ದಿದ್ದ ಜನ ಗುಮ್ಮನಂತೆ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು. ನನಗೋ ಎದೆಯಲ್ಲಿ ಢವಢವ, ಅಪರಿಚಿತ ಊರು, ಕಳೆದೇ ಹೋದನೇನೊ ಎಂಬ ಅಳುಕಿನಲ್ಲಿ ಕಣ್ಣ ತುಂಬ ನೀರು.

ಬಾಲ ಸುಟ್ಟ ಬೆಕ್ಕಿನಂತೆ ಸೀಟಿನ ಸುತ್ತ ಮುತ್ತ ಇಣುಕುತ್ತಿದ್ದನ್ನು ಗಮನಿಸಿದ ಕಂಡಕ್ಟರ್ ಯಾರ್ರೀ ಈ ಹುಡುಗನ ಕಡೆಯೋರು ಎಂದು ಒಂದೆರಡು ಬಾರಿ ಕೂಗು ಹಾಕಿದರು. ಈ ಹುಡುಗನ ಕಡೆಯವರು ಯಾರೂ ಬಾರದಿದ್ದರೂ ಇಷ್ಟು ಸಮಯದವರೆಗೂ ಸೀಟು ಬಿಟ್ಟುಕೊಡದೆ ಜಂಬ ತೋರಿಸಿದ್ದಾನೆಂದು ಹೇಳಿ ಸುತ್ತಲಿದ್ದ ಜನ ಡ್ರೈವರನ್ನು  ಹೊರಡುವಂತೆ ಪುಸಲಾಯಿಸುತ್ತಿದ್ದರು. ಡ್ರೈವರ್ ಹೊರಡಲು ಅನುವಾಗುವಾಗ ಕಂಡಕ್ಟರ್ ಸೀಟಿ ಹೊಡೆದು ಬಸ್ ನಿಲ್ಲಿಸುತ್ತಿದ್ದರು. ಇದು ಹೀಗೇ ಸುಮಾರು ಹೊತ್ತು ನಡೆಯಿತು ಮತ್ತು ಕಂಡಕ್ಟರ್ ಬಸ್ಸಿನ ಆಜುಬಾಜು ವಿಚಾರಿಸುತ್ತಲೇ ಇದ್ದರು. ಅದಾಗಲೇ ಬಸ್ಸು ಐದು ನಿಮಿಷಗಳ ಕಾಲ ತಡವಾಗಿತ್ತು. ಒಂದು ರೀತಿ ಅವರಿಬ್ಬರ ಮನಸ್ತಾಪಕ್ಕೇನಾದರೂ ಕಾರಣನಾದೆನೊ ಎಂಬ ಭಯವೂ ನನಗಾಯ್ತು.

ಇನ್ನೇನು ನನ್ನ ಕತೆ ಮುಗಿಯಿತು ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ನನ್ನ ತಂದೆಯ ದನಿ ಕೇಳಿಬಂತು. ಬಸ್ಸಿನ ಹೊರಗಡೆಯಿಂದ ಕಿಟಕಿ ಕಿಟಕಿಗಳಲ್ಲಿ ನನ್ನ ಹೆಸರು ಕೂಗುತ್ತಾ ಹುಡುಕುತ್ತಿದ್ದುದು ನೋಡಿ ಸಲ್ಪ ಸಮಾಧಾನ ಮತ್ತು ಕೋಪ ಒಟ್ಟೊಟ್ಟಿಗೆ ಆಯಿತು. ಅದಾಗಲೆ ಮತ್ತೊಂದು ಬಸ್ಸು ಬಂದಿದ್ದು ಅಲ್ಲೂ ಸೀಟು ಗಿಟ್ಟಿಸಿಕೊಂಡಿದ್ದಾಗಿ ಹೇಳಿ ಯಾವ ಕಿಟಕಿಯಿಂದ ನನ್ನನ್ನು ಒಳತೂರಿಸಿದ್ದರೋ ಅದೇ ಕಿಟಕಿಯಿಂದಲೇ ಹೊರಗೆಳೆದು ಕರೆದೊಯ್ದರು. ಚಿಕ್ಕ ಹುಡುಗನಲ್ಲವೇ ನನಗಾಗಿದ್ದ ಆಘಾತವನ್ನು ಹೇಳಿಕೊಳ್ಳಲಾಗಲಿಲ್ಲ.

ಆದರೆ ಈ ಘಟನೆ ನೆನಪಾದಾಗಲೆಲ್ಲ ಆ ಕಂಡಕ್ಟರ್ ಬಗ್ಗೆ ವಿಶೇಷವಾದ ಗೌರವ ಮೂಡುತ್ತದೆ. ಅವರು ಸ್ವಲ್ಪ ತಾಳ್ಮೆವಹಿಸಿದ್ದರಿಂದ ನಾನು ಮತ್ತೆ ತಂದೆಯ ಕೈ ಸೇರುವಂತಾಯಿತು. ಕಂಡಕ್ಟರುಗಳು ಪ್ರತಿದಿನವೂ ಬಸ್ಸಿನಲ್ಲಾಗುವ ನೂಕುನುಗ್ಗಲಿನಂಥ ಸಂದರ್ಭಗಳಲ್ಲೂ ಮಾನವೀಯತೆ ಮೆರೆದ ಅವರ ತಾಳ್ಮೆಯಿಂದೇ ಅವರು ಸ್ಮರಣೀಯರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.