ADVERTISEMENT

ಸೂಕ್ಷ್ಮ ಕಲೆಯ ಮೋಡಿ

ಪವಿತ್ರ ಶೆಟ್ಟಿ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST
ಸೂಕ್ಷ್ಮ ಕಲೆಯ ಮೋಡಿ
ಸೂಕ್ಷ್ಮ ಕಲೆಯ ಮೋಡಿ   

ಶಾಲೆಯಲ್ಲಿ ಶಿಕ್ಷಕಿ ಕರಿ ಹಲಗೆಯ ಮೇಲೆ ಬರೆದು ಬಿಸಾಡಿದ ಸೀಮೆಸುಣ್ಣದ ಜಾಗ ಕಸದ ಡಬ್ಬಿಗೆ ಸೀಮಿತವಾಗುತ್ತದೆ. ಇಲ್ಲ ಅಂದರೆ, ಆ ಚಿಕ್ಕ ಚಾಕ್‌ಪೀಸ್ ತೆಗೆದುಕೊಂಡು ಮಕ್ಕಳು ಆಟವಾಡಲು ಶುರು ಮಾಡುತ್ತಾರೆ. ಅದರಲ್ಲಿಯೇ ಸೂಕ್ಷ್ಮ ಕಲೆ ಮೂಡಿದರೆ ಅದನ್ನು ನೋಡುವುದೇ ಸೊಗಸು.

ಯಾವುದೇ ಕಲಾ ತರಗತಿಗೆ ಹೋಗದೆ ಸ್ವಪ್ರಯತ್ನದಿಂದ ಕಲೆಯನ್ನು ಒಲಿಸಿಕೊಂಡವರು ಮಾಲೆ ರಮೇಶ್. ಬಾಲ್ಯದಲ್ಲಿನ ಕಲೆಯ ಗೀಳು ಇಂದು ವೃತ್ತಿಯಾಗಿ ಅವರ ಕೈ ಹಿಡಿದಿದೆ.

`ಕಂಪೆನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. ಬೆನ್ನುನೋವಿನ ಕಾರಣ ಕೆಲಸ ಬಿಡಬೇಕಾಯಿತು. ನಂತರ ನನ್ನದೇ ಒಂದು ಕಿರಾಣಿ ಅಂಗಡಿ ಇಟ್ಟುಕೊಂಡೆ. ಬಿಡುವಿನ ವೇಳೆಯಲ್ಲಿ ಅಕ್ಕಿ ಮೇಲೆ, ಗಸೆಗಸೆ ಮೇಲೆ ಬರೆಯುವುದನ್ನು ಅಭ್ಯಾಸ ಮಾಡಿಕೊಂಡೆ.

ಯಾವುದಾದರೂ ಒಂದು ವಿದ್ಯೆಯನ್ನು ಕಲಿಯುತ್ತಾ ಹೋಗಬೇಕು. ಆಮೇಲೆ ಅದರಲ್ಲಿ ಆಸಕ್ತಿ ಬೆಳೆಯುತ್ತದೆ. ಹೊಟ್ಟೆಪಾಡು ನನ್ನನ್ನು ಕಂಗೆಡಿಸಿಬಿಟ್ಟಿತು. ಆದರೆ ಕೈಯಲ್ಲಿದ್ದ ಸೂಜಿ, ಚಾಕ್‌ಪೀಸ್ ಯಾಕೋ ಮನಸ್ಸನ್ನು ಬೇರೆ ಯಾವ ಕ್ಷೇತ್ರದತ್ತ ಹೋಗಲು ಬಿಡಲಿಲ್ಲ~ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಮೇಶ್.

ಅಕ್ಕಿಕಾಳು, ಸಾಸಿವೆ ಕಾಳು, ಎಳ್ಳಿನ ಮೇಲೆ ಅತೀ ಸೂಕ್ಷ್ಮ ಚಿತ್ರಕಲೆ ಬಿಡಿಸುತ್ತಾರೆ. ಪುಟಾಣಿ ಕಾಳಿನ ಮೇಲೆ ಆಕರ್ಷಕವಾಗಿ ಮೂಡಿಬಂದಿರುವ ಪುಟ್ಟ ಆಕಾರದ ಶಿವಲಿಂಗ, ಎಳ್ಳಿನ ಮೇಲಿನ ಇಂಡಿಯಾ, ಚಾಕ್‌ಪೀಸ್ ಮೇಲೆ ಭರತನಾಟ್ಯ ಕಲಾವಿದೆಯ ಕೆತ್ತನೆ, ಪೆನ್ಸಿಲ್ ಲೆಡ್ ಮೇಲೆ ಆನೆ, ಅಕ್ಕಿಕಾಳಿನ ಮೇಲೆ ಆಂಗ್ಲ ಭಾಷೆಯ `ಎ~ ಯಿಂದ `ಝಡ್~ವರೆಗಿನ ಇಪ್ಪತ್ತಾರು ಅಕ್ಷರಗಳನ್ನು ಸೂಕ್ಷ್ಮವಾಗಿ ಮೂಡಿಸಿದ್ದಾರೆ. ಇವರ ಕಲೆಯ ಬೆರಗು ನೋಡುಗರನ್ನು ಆಕರ್ಷಿಸುತ್ತದೆ.

ತಮ್ಮ ಬಳಿ ಇರುವ ವಸ್ತುಗಳನ್ನೇ ಬಳಸಿಕೊಂಡು ಅದರಲ್ಲಿ ಕಲೆಯನ್ನು ಅಭಿವ್ಯಕ್ತಿಪಡಿಸುವ ಇವರದ್ದು ಇನ್ನೂ ಕಲಿಯಬೇಕು, ಸಾಧನೆ ಮಾಡಬೇಕೆಂಬ ಹಂಬಲ. ಚಿಕ್ಕ ಚಿಕ್ಕ ವಸ್ತುವಿನ ಮೇಲೆ ಇವರು ಬಿಡಿಸಿರುವ ಚಿತ್ರವನ್ನು ನೋಡಲು ಬರಿಗಣ್ಣಿನಿಂದ ಆಗದು, ಮಸೂರವೇ ಬೇಕು.

ಚಾಕ್‌ಪೀಸ್‌ನಲ್ಲಿ ಸೂಜಿಯಿಂದ ಕೆತ್ತಿದ ಸರಪಳಿ ಕಬ್ಬಿಣದ ಸರಪಳಿಯೇನೋ ಎಂಬಷ್ಟು ನೈಜವಾಗಿ ಕಾಣಿಸುತ್ತದೆ. ಮೈಗೆ ಬಳಸುವ ಸಾಬೂನಿನಲ್ಲೂ ಇವರ ಕಲೆ ಅರಳಿದೆ. ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಮೂಡಿಬಂದ ಗಣೇಶ, ರಾಘವೇಂದ್ರ ಸ್ವಾಮಿಗಳ ರಚನೆಗಳು ಯಾವ ಶೋ ಪೀಸ್‌ಗೂ ಕಡಿಮೆ ಇಲ್ಲ.

ಪತ್ರಗಳ ಮೇಲೆ ಸುನಾಮಿ ದುರಂತವನ್ನು ಮಾರ್ಮಿಕವಾಗಿ ಅಭಿವ್ಯಕ್ತಪಡಿಸಿದ್ದಾರೆ. ಠಿಠ್ಠ್ಞಞಜಿ ಶಬ್ದ ಬಳಸಿ ಅಲೆಗಳ ಅಬ್ಬರ, ಆ ಅಬ್ಬರದ ಹೊಡೆತಕ್ಕೆ ತತ್ತರಿಸಿ ಹೋದ ಮಾನವನ ಬದುಕಿನ ಚಿತ್ರಣವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಪಾಪರೆಡ್ಡಿಪಾಳ್ಯದಲ್ಲಿರುವ ಬಿ.ಜಿ. ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಇವರು ಮಕ್ಕಳ ಕೈಯಲ್ಲಿ ಕಲೆಯ ಚಿಗುರನ್ನು ಅರಳಿಸುತ್ತಿದ್ದಾರೆ. ಇದೊಂದು ಹೊಸ ಕಲೆ. ಇಲ್ಲಿವರೆಗೆ ಇದನ್ನು ಕಲಿತು ಸಾಧನೆ ಮಾಡಿದವರು ಇದ್ದಾರೆ ಆದರೆ ಕಲಿಸಿ ಕೊಡುವವರು ಇಲ್ಲ. ಹಾಗಾಗಿ ಆಸಕ್ತಿ ಇದ್ದವರಿಗೆ ಕಲಿಸಲು ನಾನು ಸದಾ ಸಿದ್ಧ ಎಂದು ನಗು ಸೂಸುತ್ತಾರೆ.
ದೂರವಾಣಿ: 9886060775.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.