ADVERTISEMENT

ಸೂತಕದಲ್ಲಿ ಹಾಸ್ಯದ ಹೊನಲು

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಮಾನವನಿಗೆ ಅವಶ್ಯವಾದ ಆಹಾರ ಪದಾರ್ಥಗಳು ಕೈಗೆಟುಕದ ಸ್ಥಿತಿ, ಅನಿವಾರ್ಯವಾಗಿ ನಮಗೆ ಒಲ್ಲದ ವಸ್ತುಗಳಿಗೆ ನೂರು ಪಟ್ಟು ಹಣ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತಕ್ಕೂ, ನಮ್ಮ ದೇಶದ  ಸಾಮಾನ್ಯ ಪ್ರಜೆ ಉದ್ಯೋಗ ಕಳೆದುಕೊಳ್ಳುವುದಕ್ಕೂ ಏನು ಸಂಬಂಧ ಇಲ್ಲವೇ? ಇಂಥ ನೂರಾರು ಪ್ರಶ್ನೆಗಳನ್ನು ಮನಸ್ಸಿನಲ್ಲಿ ಮುದ್ರೆ ಒತ್ತುವ, ಶಕ್ತಿಯುತ ಸಂಭಾಷಣೆಗಳು, ಬಿಗಿಯಾದ ಕಥಾಹಂದರದ `ಋಣವೆಂಬ ಸೂತಕವು~ ನಾಟಕವನ್ನು ಸಿಂಚನ ತಂಡ ಮನೋಜ್ಞವಾಗಿ ಅಭಿನಯಿಸಿತು.

ಕಥಾ ವಸ್ತು ಎಷ್ಟೇ ಗಂಭೀರವಾಗಿದ್ದರೂ, ಬೇಸರ ತರಿಸದೇ ಹಾಸ್ಯ ವಿಡಂಬನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಎಂ.ಸಿ. ಆನಂದ್ ನಿರ್ದೇಶನ ಮಾಡಿದ್ದಾರೆ. ನಾಟಕ ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಂಡು, ಕ್ರೆಡಿಟ್ ಕಾರ್ಡಿನ ಜಾಲದಲ್ಲಿ ಸಿಲುಕಿ ಪರದಾಡುತ್ತಿರುವ ಸಮಯದಲ್ಲಿ ರಮಾ, ರಂಗಸ್ವಾಮಿ ದಂಪತಿ ನೆರವಿಗೆ ಬರುವವರೆಲ್ಲ ಅವರ ಋಣದ ಭಾರವನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೆಚ್ಚಿಸುತ್ತಾರೆ. ಹೀಗೆ ಕಥೆ ವಿಭಿನ್ನ ನೆಲೆಗಟ್ಟಿನಲ್ಲಿ ಸಾಗುತ್ತದೆ.

ಹಿರಿಯ ಕಲಾವಿದರಾದ ಎಸ್. ಶಿವರಾಂ, ಭಾರ್ಗವಿ ನಾರಾಯಣ, ಪುಷ್ಪಾ ಬೆಳವಾಡಿ, ರಜೇಶ್ ಭಗ್ನ ಹಾಗೂ ಅಭಿರುಚಿ ಚಂದ್ರು ಅವರು ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ ಪರಿ ರಂಗಾಸ್ತಕರಿಗೆ ಮುದ ನೀಡುವಂತಿತ್ತು. ಪ್ರಕಾಶ್ ಬೆಳವಾಡಿ ಅವರ ಬೆಳಕಿನ ವಿನ್ಯಾಸ, ಗಣೇಶ್ ಶೆಣೈ ಸಂಗೀತ ಸಹಕಾರ ನಾಟಕದ ಯಶಸ್ವಿಗೆ ಒಂದು ಮೆಟ್ಟಿಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.