ADVERTISEMENT

ಸೃಜನಶೀಲ ಮನಸಿನಿಂದ ಒತ್ತಡ ದೂರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ರಂಗಕರ್ಮಿ ಮಾಲತಿ
ರಂಗಕರ್ಮಿ ಮಾಲತಿ   

– ನಿರೂಪಣೆ: ಸುಕೃತಾ

ಕೆಲಸದ ಹೊರೆ ಇದ್ದಾಗ ತಾನೇ ತಾನಾಗಿ ಒತ್ತಡ ಕಾಣಿಸಿಕೊಳ್ಳುತ್ತದೆ. ಒತ್ತಡ ಬರದ ಹಾಗೆ ಮಾಡಲು ಯಾವ ಮನುಷ್ಯನಿಗೂ ಸಾಧ್ಯವೇ ಇಲ್ಲ. ಇಂದಿನ ಪರಿಸ್ಥಿತಿಯಲ್ಲಂತೂ ಒತ್ತಡದ ಪ್ರಮಾಣ ಹೆಚ್ಚೇ ಎನ್ನಬಹುದು. ಮನೆಯಿಂದ ಹೊರಬಿದ್ದರೆ ಒಂದು ರೀತಿಯ ಸಮಸ್ಯೆ. ಮನೆಯ ಒಳಗಡೆ ಇನ್ನೊಂದು ರೀತಿ. ಜೊತೆಗೆ, ನಮ್ಮ ಮನಸ್ಸಿನೊಳಗೇ ಹುಟ್ಟುವ ಒತ್ತಡ ಮತ್ತೊಂದು ರೀತಿ. ಒಟ್ಟಿನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಒತ್ತಡ ಎದುರಿಸಬೇಕಾಗುತ್ತದೆ.

ಕೆಲವರದು ಗೊಂದಲ ಮಾಡಿಕೊಳ್ಳುವ ಮನಃಸ್ಥಿತಿ. ಕೆಲವರು ಬೇಗ ಆವೇಶಕ್ಕೆ ಒಳಗಾಗುತ್ತಾರೆ. ಕೆಲವರು ಶಾಂತವಾಗಿ ಎಲ್ಲವನ್ನೂ ಸುಧಾರಿಸಿಕೊಳ್ಳುತ್ತಾರೆ ಮತ್ತು ನಿಭಾಯಿಸುತ್ತಾರೆ. ನಾನು ಶಾಂತ ಮನಃಸ್ಥಿತಿಯವಳಾಗಿದ್ದರೂ, ಹಲವು ಕೆಲಸಗಳು ಒಟ್ಟಿಗೇ ಬಂದಾಗ ಒತ್ತಡ ಉಂಟಾಗುತ್ತದೆ. ಕೆಲವು ಸಲ ಯಾವ ಕೆಲಸ ಮಾಡೋದು ಎಂದು ತೋಚದೆ ಗೊಂದಲಕ್ಕೆ ಒಳಗಾಗುತ್ತೇನೆ.

ADVERTISEMENT

ಅದನ್ನು ನಿವಾರಿಸೋದು ಹೇಗೆ? ಇದಕ್ಕೆ ನನ್ನ ಮೊದಲ ಮದ್ದು ಕಾಫಿ. ಒತ್ತಡ ಎನಿಸಿದಾಗ ನಾನು ಹೆಚ್ಚಾಗಿ ಕಾಫಿ, ಟೀ ಕುಡಿಯುತ್ತೀನಿ. ಆದರೆ ಅಷ್ಟೇ ಸಾಲುವುದಿಲ್ಲ. ಅದರ ಜೊತೆಗೆ, ಬಂದ ಕೆಲಸಗಳನ್ನ ವಿಭಾಗಿಸಿ, ಒಂದಾದ ಮೇಲೆ ಒಂದನ್ನು ಸಮಾಧಾನಚಿತ್ತದಿಂದ ಮಾಡುವ ಮೂಲಕ ಒತ್ತಡ ನಿವಾರಿಸಿಕೊಳ್ಳುತ್ತೀನಿ. ಆಗ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗುತ್ತದೆ. 

ಒತ್ತಡ ನಿವಾರಣೆಗೆ ಯೋಚನೆ ಮತ್ತು ಯೋಜನೆ ಕೂಡ ಮುಖ್ಯ. ನಮ್ಮ ಬದುಕನ್ನು ಪ್ಲಾನ್ ಮಾಡಿಕೊಳ್ಳಬೇಕು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ಯೋಜನೆ ಇರಬೇಕು. ಯಾವ ಕೆಲಸ ಮೊದಲು, ಯಾವುದು ನಂತರ ಎನ್ನುವ ಅಂದಾಜು ಇದ್ದರೆ, ಒತ್ತಡ ಕಡಿಮೆ ಆಗುತ್ತದೆ.

ಒಳ್ಳೆಯ ಕೆಲಸ ಮಾಡಿದಾಗ, ಒಳ್ಳೆಯ ಪದ್ಯ, ಕಥೆ, ನಾಟಕ ಬರೆದಾಗ, ಒಳ್ಳೆಯ ಪುಸ್ತಕ ಓದಿದಾಗಲೂ ನನಗೆ ಒತ್ತಡ ನಿವಾರಣೆ ಆಗುತ್ತದೆ. ಹೆಚ್ಚು ಒತ್ತಡ ಅನ್ನಿಸಿದಾಗ ನಾನು ಪುಸ್ತಕ ಓದಲು ಅಣಿಯಾಗುತ್ತೇನೆ. ಇದರಿಂದ ಮನಸ್ಸು ಸೃಜನಶೀಲವಾಗುತ್ತದೆ. ಒತ್ತಡ ತನ್ನಿಂದ ತಾನೇ ನಿವಾರಣೆ ಆಗುತ್ತದೆ.

ಮೊನ್ನೆ ‘ಗಾಂಧೀ ಒಂದು ಬೆಳಕು’ ಎನ್ನುವ ನಾಟಕವನ್ನ ನಾನೇ ಬರೆದು, ನಿರ್ದೇಶನ ಕೂಡ ಮಾಡಿದೆ. ಆ ಹೊತ್ತಿನಲ್ಲಿ ಹೆಚ್ಚಿನ ನಟರು ಕೈಕೊಟ್ಟರು. ಹೊತ್ತಿಗೆ ಸರಿಯಾಗಿ ಬರದೇ ಇರೋದು, ತಾಲೀಮಿಗೆ ಬರದೇ ಇರೋದು ಮಾಡಿದರು. ಹವ್ಯಾಸಿ ರಂಗಭೂಮಿಯಲ್ಲಿ ಇವೆಲ್ಲ ಸಮಸ್ಯೆಗಳು ಇರುತ್ತವೆ. ನನಗೆ ಆಗ ಒತ್ತಡ ಕಾಡಿತು. ಇಡೀ ರಾತ್ರಿ ನಿದ್ದೆ ಬರಲಿಲ್ಲ. ಜೊತೆಗೆ, ಅದರಿಂದ ಹೊರಗೆ ಬರುವುದು ತಿಳಿಯಲಿಲ್ಲ. ಏನು ಮಾಡಬೇಕು ಎಂದು ಯೋಚನೆ ಮಾಡಿದೆ. ಕಾಫಿ ಕುಡಿದೆ, ಬಿಸಿನೀರು ಕುಡಿದೆ. ಹೀಗೆ ರಾತ್ರಿ ಇಡೀ ಕಳೆದೆ. ಆಮೇಲೆ, ಪಾತ್ರಧಾರಿಗಳಿಗೆ ಏನು ಹೇಳಬೇಕು ಅಂತ ಯೋಚನೆ ಮಾಡಿದೆ. ಮರುದಿನ ಹೋಗಿ, ನಾನು ಯೋಚಿಸಿದ್ದು, ನಿದ್ದೆಗೆಟ್ಟ ರಾತ್ರಿಗಳು ಎಲ್ಲವನ್ನೂ ವಿವರಿಸಿದೆ. ಹಾಗೆ ಹೇಳಿದ ನಂತರ ನಟರಲ್ಲಿ ನಿಷ್ಠೆ ಮೂಡಿತು. ಅವರು ಸಹಕರಿಸಿದರು. ನನ್ನ ಒತ್ತಡವೂ ದೂರಾಯಿತು. ಈಗ ಮೂರು ಶೋ ಆಗಿವೆ.

ಹಿಂದಿನ ಕಾಲದ ಒತ್ತಡ ಮತ್ತು ಈಗಿನ ಒತ್ತಡ, ಎರಡರ ಸ್ವರೂಪ ಬೇರೆ ಬೇರೆ ಆಗಿವೆ. ಹೆಣ್ಣುಮಕ್ಕಳನ್ನು ಉದಾಹರಣೆಯಾಗಿ ತೆಗೆದುಕೊಂಡಾಗ ಪರಿಸ್ಥಿತಿ ಅರಿವಾಗುತ್ತದೆ. ಹಿಂದೆ ಹೆಣ್ಣು ಕೇವಲ ಮನೆ, ಅಡುಗೆ, ತೋಟ ಕೆಲಸ... ಇಷ್ಟಕ್ಕೆ ಸೀಮಿತವಾಗಿದ್ದಳು. ಅವಳಿಗೆಆ ಒತ್ತಡಗಳನ್ನು ನಿಭಾಯಿಸಿದರೆ ಸಾಕಿತ್ತು. ಈಗ ಈ ಸೀಮಿತ ಚೌಕಟ್ಟನ್ನು ಮೀರಿದ್ದಾಳೆ. ಈಗ ವಿಜ್ಞಾನಿ ಆಗಿದ್ದಾಳೆ, ಬೇರೆ ಬೇರೆ ಕ್ಷೇತ್ರದಲ್ಲಿತನ್ನನ್ನು ತೊಡಗಿಸಿಕೊಂಡಿದ್ದಾಳೆ. ಈಗ ಆಕೆಗೆ ಎರಡರಷ್ಟು ಒತ್ತಡ ನಿಭಾಯಿಸಬೇಕಾಗಿದೆ. ಹೀಗೆ ಒತ್ತಡದ ಸ್ವರೂಪ ಬದಲಾಗಿದೆ. ನಾವು ಆತ್ಯಹತ್ಯೆಯಂತಹ ಸುದ್ದಿಗಳನ್ನು ಪ್ರತಿದಿನ ಕೇಳುತ್ತಾ ಇದ್ದೇವೆ. ಇದಕ್ಕೆ ಮೂಲ ಕಾರಣ ಒತ್ತಡ ಮತ್ತು ಅದರ ನಿರ್ವಹಣೆಯ ಬಗ್ಗೆ ಅರಿವು ಇಲ್ಲದೇ ಇರುವುದು. ಆದ್ದರಿಂದ, ಒತ್ತಡ ನಿರ್ವಹಣೆಯ ಬಗ್ಗೆ ನಮ್ಮ ವಿದ್ಯಾಭ್ಯಾಸದಲ್ಲಿ ಒಂದು ವಿಷಯ ಇಡಬೇಕು. ಸಣ್ಣವರಿದ್ದಾಗಿಂದಲೇ ಮಕ್ಕಳು ಇದರ ಬಗ್ಗೆ ಅರಿತಿರಬೇಕು. ವಿದ್ಯಾಭ್ಯಾಸದಲ್ಲಿ ಒತ್ತಡ ನಿರ್ವಹಣೆಯ ಪಾಠ ಇಂದಿನ ಜರೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.