ADVERTISEMENT

ಸೌಂದರ್ಯ ಸಮಯ

ಈರಪ್ಪ ಹಳಕಟ್ಟಿ
Published 3 ಸೆಪ್ಟೆಂಬರ್ 2013, 5:43 IST
Last Updated 3 ಸೆಪ್ಟೆಂಬರ್ 2013, 5:43 IST
ರೂಪದರ್ಶಿಗಳೊಂದಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ
ರೂಪದರ್ಶಿಗಳೊಂದಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ   

ಮುಗಿಲ ಮಾರಿಗೆ ರಾಗರತಿಯ ನಂಜು ಏರಿದ ಹೊತ್ತು. ಮಂದಾನಿಲದ ತಂಪು. ತೆರೆದ ಬಯಲೊಳು ತುಂಬಿದ್ದು ಮದಿರೆ ಮತ್ತು. ಹಿನ್ನೆಲೆಯಲ್ಲಿ ರಾಕ್ ಸಂಗೀತದ ನಾದದ ಅಲೆ. ನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್‌ನಲ್ಲಿ ಇತ್ತೀಚೆಗೆ ನಡೆದ ‘ಮೆಗಾಮಾರ್ಟ್ ಮೆಗಾ ಮಾಡೆಲ್ ಹಂಟ್13’ ಫ್ಯಾಷನ್ ಶೋನಲ್ಲಿ ಕಂಡುಬಂದ ದೃಶ್ಯಗಳಿವು.

‘ಫ್ಯಾಷನ್ ಗುರು’ ಪ್ರಸಾದ್ ಬಿದಪ್ಪ ಕಾಲಕಾಲಕ್ಕೆ ಹೊಸಮುಖಗಳನ್ನು ಪರಿಚಯಿಸುವ ಪರಿಪಾಠ ಇಟ್ಟುಕೊಂಡವರು. ಅವರು ಈ ಬಾರಿ ತಮ್ಮ ಅಸೋಸಿಯೆಟ್ಸ್ ಮತ್ತು ಮಾಡೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ಮೆಗಾಮಾರ್ಟ್ ಸಹಯೋಗದೊಂದಿಗೆ ‘ಮೆಗಾಮಾರ್ಟ್ ಮೆಗಾ ಮಾಡೆಲ್ ಹಂಟ್13’ ಶೀರ್ಷಿಕೆಯಡಿ ಹೊಸಮುಖಗಳನ್ನು ಹುಡುಕಲು 45 ದಿನಗಳ ಕಾರ್ಯವನ್ನು ಹಮ್ಮಿಕೊಂಡಿದ್ದರು.

ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ-, ಮುಂಬೈನಲ್ಲಿ ವಿವಿಧ ಮಾನದಂಡಗಳಿಂದ ಅಳೆದು ತೂಗಿ ಕೊನೆಗೆ 35 ಮಾಡೆಲಿಂಗ್ ಆಕಾಂಕ್ಷಿಗಳನ್ನು ಹೆಕ್ಕಿ ತೆಗೆದಿದ್ದರು. ಹೀಗೆ ಆಯ್ಕೆಗೊಂಡವರಿಗಾಗಿ ಕಾರ್ಯಾಗಾರವೊಂದನ್ನು ನಡೆಸಿದರು. ಅದರಲ್ಲಿ ದುಬೈನ ಕೊರಿಯೊಗ್ರಾಫರ್ ಕೆವಿನ್ ಆಲಿವರ್ ಅವರಿಂದ ಹೊಸ ವಿದ್ಯಾರ್ಥಿಗಳಿಗೆ ಫಿಟ್‌ನೆಸ್, ಚರ್ಮ–ಕೂದಲು ಅಂದಗೊಳಿಸುವುದು, ಡ್ಯಾನ್ಸ್, ಫೋಟೊಗ್ರಾಫಿಕ್ ಮಾಡೆಲಿಂಗ್, ಟಿ.ವಿ. ಮತ್ತು ರಂಗಭೂಮಿ ಜ್ಞಾನದ ಜತೆಗೆ ಮೇಕಪ್ ಕುರಿತ ಪಾಠಗಳನ್ನು ಹೇಳಿಸಿದ್ದರು.

ಮಾಡೆಲಿಂಗ್ ಪಠ್ಯಕ್ರಮವನ್ನು ಕಲಿತವರನ್ನು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಶೋ ಏರ್ಪಡಿಸಿದ್ದ ಪ್ರಸಾದ್  ಇದಕ್ಕೆ ನಿರ್ಣಾಯಕರನ್ನಾಗಿ ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್, ಖ್ಯಾತ ರೂಪದರ್ಶಿ ಕೆರೋಲ್ ಗ್ರೇಷಿಯಸ್‌, ಚಿತ್ರನಟಿ ರಾಗಿಣಿ ದ್ವಿವೇದಿ, ವಸ್ತ್ರ ವಿನ್ಯಾಸಕಿ ಸೀಮಾ ಮಲ್ಹೋತ್ರಾ, ವೈಟ್‌ಫೀಲ್ಡ್‌ನ ಮೇರಿಯಟ್ ಹೋಟೆಲ್‌ನ ಮ್ಯಾಥ್ಯೂ ಕೂಪರ್ ಅವರನ್ನು ಆಹ್ವಾನಿಸಿದ್ದರು. ತಮ್ಮ ಈ ಕಾರ್ಯಕ್ಕೆ ನೆರವು ನೀಡಿದ್ದ ಮೆಗಾಮಾರ್ಟ್‌ನ ಅಂತರರಾಷ್ಟ್ರೀಯ ಮಟ್ಟದ ಚಳಿಗಾಲದ ಸಂಗ್ರಹಗಳನ್ನು ಅನಾವರಣಗೊಳಿಸುವ ಹೊಣೆಯನ್ನು ಈ ಹೊಸ ಪ್ರತಿಭೆಗಳಿಗೆ ವಹಿಸಿದ್ದರು.

ಮಾನಿನಿಯರ ಸಾಂಗತ್ಯದಲ್ಲಿ ಮಧುಪಾನ ಸವಿಯುತ್ತ ಬೇಗ ಕವಿಯಲಿ ಇರುಳು ಎಂದು ಚಡಪಡಿಸುತ್ತಿದ್ದವರು, ವ್ಯಥೆಗಳ ಕಳೆಯಲು ಬಂದವರು ನಿಗದಿತ ಸಮಯಕ್ಕೆ ಶೋ ಪ್ರಾರಂಭವಾಗದೇ ಇದ್ದಾಗ ಚಡಪಡಿಸತೊಡಗಿದರು.    ಕತ್ತಲು ಕವಿದ ವೇದಿಕೆಯಿಂದ ಹೊಮ್ಮಿದ ‘ವೆಲ್‌ಕಮ್... ಲೇಡಿಸ್ ಅಂಡ್ ಜೆಂಟಲ್‌ಮೆನ್’ ಎಂಬ ಪ್ರಸಾದ್ ಧ್ವನಿ ನೆರೆದವರೆಲ್ಲ ‘ಹೋ’ಎಂದು ಚೀರಲು ಪ್ರೇರಣೆ ನೀಡಿತು. ಆಮೇಲೆ ಶುರುವಾಯಿತು ಹೊಸ ಪ್ರತಿಭೆಗಳ ಪರೀಕ್ಷೆ...

ಬಗೆಬಗೆ ಬಣ್ಣದ ದೀಪಗಳಿಂದ ಆವರಿಸಿದ ವೇದಿಕೆಯಲಿ ಕಾಣಿಸಿಕೊಂಡ ಪ್ರಸಾದ್ ತಮ್ಮ ಮಾಡೆಲ್ ಹಂಟ್ ಅನುಭವ, ಕಾರ್ಯಕ್ರಮದ ರೂಪುರೇಷೆಗಳನ್ನು ಹೇಳುತ್ತ, ಸಹಾಯ ನೀಡಿದವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತ, ನಿರ್ಣಾಯಕರನ್ನು ವೇದಿಕೆಗೆ ಆಹ್ವಾನಿಸಿದರು. ಕುತೂಹಲದಿಂದ ನಿರ್ಣಾಯಕರತ್ತ ನೋಟ ಬೀರಿದವರಿಗೆ ಮಧುರ್ ಭಂಡಾರ್ಕರ್ ಮೊದಲು ಕಾಣಲಿಲ್ಲ. ತಮ್ಮ ನೆಚ್ಚಿನ ನಿರ್ದೇಶಕನ ಅನುಪಸ್ಥಿತಿ ಅವರ ಅಭಿಮಾನಿಗಳಲ್ಲಿ ವ್ಯಥೆ ಹುಟ್ಟುಹಾಕಿತ್ತು.

ನಂತರ ನಿರ್ಣಾಯಕ ಘಟ್ಟವಾದ ಫ್ಯಾಷನ್ ಶೋ ಪ್ರಾರಂಭವಾಯಿತು. ಪೂರ್ವ ತಯಾರಿಯಂತೆ ಸರತಿಯಲ್ಲಿ ವೇದಿಕೆ ಏರುತ್ತಿದ್ದ ರೂಪದರ್ಶಿಯರ ಜಾತಕವನ್ನು ಪ್ರಸಾದ್ ಹಿನ್ನೆಲೆಯಲ್ಲಿ ಹೇಳುತ್ತಿದ್ದರು. ಮಾಡೆಲ್‌ಗಳು ಮಂದ ನಗಿ ಹಾಂಗ ಬೀರುತ್ತ ವಯ್ಯಾರದ ಮಾರ್ಜಾಲ ನಡಿಗೆಯಲ್ಲಿ ಜವ್ವನ ಪ್ರಮತ್ತ ಸೊಗೆನವಿಲಿನ ತೆರದಿ ಸುಳಿದು ಮಾಯವಾಗುತ್ತಿದ್ದರು. 

ಸ್ಥಳೀಯ ಪ್ರತಿಭೆಗಳು ವೇದಿಕೆ ಏರುತ್ತಿದ್ದಂತೆ ಚಪ್ಪಾಳೆಯ ಸದ್ದು ತುಸು ಹೆಚ್ಚೇ ಕೇಳಿಬರುತ್ತಿತ್ತು. ಒಂದಿಷ್ಟು ಹೊತ್ತು ಸೃಷ್ಟಿಯಾದ ಆ ಕಿನ್ನರ ಲೋಕದಲ್ಲಿ ಕನ್ನಿಕೆಯರ ನಡೆಗಳನ್ನು ಸೂಕ್ಷ್ಮಾವಲೋಕನ ಮಾಡುತ್ತಿದ್ದ ನಿರ್ಣಾಯಕರು ಅಂತಿಮ ತೀರ್ಪಿಗಾಗಿ ಚರ್ಚೆ ನಡೆಸಿದರು.

ಕಾರ್ಯಕ್ರಮದ ಅಂತಿಮ ಘಟ್ಟ. ಎಲ್ಲ ರೂಪದರ್ಶಿಯರು ಮೆಗಾಮಾರ್ಟ್‌ನ ಚಳಿಗಾಲದ ಸಂಗ್ರಹಗಳನ್ನು ಧರಿಸಿ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ನಶೆಯ ಬಿಸಿಯಲ್ಲಿ ಅಲ್ಲಿ ನೆರೆದಿದ್ದವರಿಗೆ ಕ್ಷಣಕಾಲ ಚಳಿಗಾಲದ ಅನುಭವ! ವಿಶಿಷ್ಟ ವಿನ್ಯಾಸದ, ಚಳಿಗಾಲದ ಉಡುಗೆ ತೊಟ್ಟು ನವಿಲು ನಾಚುವಂತೆ ನಡೆಯುತ್ತಿದ್ದ ರೂಪದರ್ಶಿಯರ ಮುಖದಲ್ಲಿ ಮಂದಹಾಸದ ಜತೆಗೆ ಏನನ್ನೋ ಜಯಿಸಿದ ಸಂತೃಪ್ತ ಭಾವ.

ಅಲ್ಲಿಯವರೆಗೆ ನೇಪಥ್ಯದಲ್ಲಿದ್ದು ಸೂತ್ರಧಾರನ ಕೆಲಸ ಮಾಡಿದ ಪ್ರಸಾದ್ ಅಂತಿಮವಾಗಿ ವೇದಿಕೆ ಏರಿ ಯುವ ಪ್ರತಿಭೆಗಳ ಫಲಿತಾಂಶವನ್ನು ಘೋಷಿಸುವುದರ ಜತೆಗೆ ವಿಶೇಷ ಆಹ್ವಾನಿತರು ಹಾಗೂ ನಿರ್ಣಾಯಕರಿಂದ ಯುವ ಮಾಡೆಲ್‌ಗಳ ಮುಡಿಗೆ ಕಿರೀಟ ತೊಡಿಸಿದರು.

ಅಂತಿಮ ವಿಜೇತರಿಗೆ ಕಿರೀಟ ತೋಡಿಸುವ ಗಳಿಗೆಯಲಿ ಚಮತ್ಕಾರ ನಡೆಯಿತು. ಅಲ್ಲಿಯವರೆಗೆ ತೆರೆಮರೆಯಲ್ಲಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣರಾಗಿದ್ದ ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆ ಪ್ರಾಪ್ತಿಯಾಯಿತು.

ನಂತರ ತಮ್ಮ ನೆಚ್ಚಿನ ನಿರ್ದೇಶಕ, ನಟಿ, ರೂಪದರ್ಶಿಯರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದ ಯುವ ಜನರನ್ನು ಬಿಟ್ಟು ವಿಶಾಲ ಬಯಲತ್ತ ಒಮ್ಮೆ ಕಣ್ಣು ಹಾಯಿಸಿದರೆ ಮೇಜುಗಳೆಲ್ಲಾ ಖಾಲಿ. ಅವುಗಳ ಮೇಲಿದ್ದ ಬಾಟಲಿಗಳೂ ಖಾಲಿ ಖಾಲಿ. ಸೌಂದರ್ಯಸಮಯಕ್ಕೆ ಸಾಕ್ಷಿಯಾದವರಿಗೆಲ್ಲಾ ತಮ್ಮ ಮನೆಗಳು ನೆನಪಾಗತೊಡಗಿದವೋ ಏನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.