ADVERTISEMENT

ಸ್ಪಾ ಬೆಳಕಲ್ಲಿ ರವಿ ಚಟಾಕಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ಸ್ಪಾ ಬೆಳಕಲ್ಲಿ ರವಿ ಚಟಾಕಿ
ಸ್ಪಾ ಬೆಳಕಲ್ಲಿ ರವಿ ಚಟಾಕಿ   

ಪಂಚರಂಗಿ

ಜಿಟಿಜಿಟಿ ಜಿನುಗುವ ಮಳೆ ಸಂಜೆಯ ವೇಳೆಯಲ್ಲಿ ತಣ್ಣನೆ ಹವೆ ಮೂಡಿಸಿದ್ದರೂ ಕಾದು ಕುಳಿತವರ ಮುಖದಲ್ಲಿ ಆ ವಾತಾವರಣದ ಸೊಬಗನ್ನು ಆಸ್ವಾದಿಸುವ ಕಳೆ ಇರಲಿಲ್ಲ. ಗಂಟೆಗಟ್ಟಲೆ ಚಡಪಡಿಸುತ್ತಿದ್ದ ಅವರ ಮುಖಗಳು ದೊಡ್ಡ ಗೆಲುವೊಂದು ಸಿಕ್ಕಂತೆ ಸಂಭ್ರಮದಿಂದ ಅರಳಿದವು. ಹೀಗೆ ಕಾದು ಕುಳಿತಿದ್ದವರು ನಿರೀಕ್ಷಿಸುತ್ತಿದ್ದದ್ದು ಮೂವರು `ಸ್ಟಾರ್~ಗಳ ಆಗಮನವನ್ನು.

ಅದು `ಗೋಲ್ಡ್‌ಫಿಂಚ್~ ಹೋಟೆಲ್‌ನಲ್ಲಿ ಆಯೋಜಿಸಿದ್ದ ಲಿಯಾನಾ ಸ್ಪಾ ಮತ್ತು ಸಲೂನ್‌ಗಳ ಉದ್ಘಾಟನಾ ಕಾರ್ಯಕ್ರಮ. ಕ್ರೇಜಿಸ್ಟಾರ್ ರವಿಚಂದ್ರನ್, ಯಶ್ ಮತ್ತು ನಟಿ ಪೂಜಾ ಗಾಂಧಿ ಅತಿಥಿಗಳು. ಸಿನಿಮಾ ತಾರೆಯರು ಕಾರ್ಯಕ್ರಮಗಳಿಗೆ ತಡವಾಗಿ ಬರುವುದು ಮಾಮೂಲು. ರವಿಚಂದ್ರನ್ ಮತ್ತು ಯಶ್ ತಡವಾಗಿ ಬಂದವರು ಕ್ಯಾಮೆರಾಗಳಿಗೆ ಸ್ವಲ್ಪ ಹೊತ್ತು ಮುಖವೊಡ್ಡಿ ನಿಂತರು.

ದಂಡುಪಾಳ್ಯ ಚಿತ್ರಕ್ಕಾಗಿ `ಗಾಂಧಿನಗರ~ಕ್ಕೆ ತೆರಳಿದ್ದ ಪೂಜಾ ಗಾಂಧಿ ದರ್ಶನ ಕೊಡುವ ವೇಳೆಗೆ ಮತ್ತೊಂದು ಹದಿನೈದು ನಿಮಿಷ ಕಳೆದಿತ್ತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ತಮ್ಮದೇ ಹೊಸ ಜಗತ್ತು ಸೃಷ್ಟಿಸಿಕೊಂಡಿರುತ್ತವೆ. ಅದ್ದೂರಿ ಯಾಗಿದ್ದರೂ ಕಾರ್ಯಕ್ರಮ ಕನ್ನಡಮಯವಾಗಿದ್ದು ವಿಶೇಷ.

ರವಿಚಂದ್ರನ್ ಇದ್ದಮೇಲೆ ಅಲ್ಲಿ ನಗುವಿನ ಚಟಾಕಿ ಇರಲೇಬೇಕು. `ದಂಡುಪಾಳ್ಯಕ್ಕೆ ಹೋಗಿ ಪೂಜಾಗಾಂಧಿ ಏಟು ತಿಂದು ಬಂದಿದ್ದಾರೆ. ಅವರಿಗೇ ಸ್ಪಾದ ಅಗತ್ಯ ಹೆಚ್ಚಾಗಿದೆ~ ಎಂದು ಅವರು ಕೀಟಲೆ ಮಾಡಿದರು. ಅವರ ಆಗಮನದಿಂದ `ದಂಡುಪಾಳ್ಯ~ದಂತೆ ಸ್ಪಾ ಕೂಡ ಸೂಪರ್ ಹಿಟ್ ಆಗಲಿ ಎಂದು ಮತ್ತಷ್ಟು ನಗುಹರಿಸಿದರು.

ಇಂದಿನ ಕೆಲಸದ ಒತ್ತಡದಲ್ಲಿ ಸಾಮಾನ್ಯ ಜನರಿಗೂ ಸ್ಪಾ ಅಗತ್ಯವಿದೆ ಎಂದರು ಯಶ್. ಗೋಲ್ಡ್‌ಫಿಂಚ್ ಹೋಟೆಲ್ ಕುರಿತು ಅವರು ಮೆಚ್ಚುಗೆ ಮಾತುಗಳನ್ನಾಡಿದರು.
ಈ ಹೋಟೆಲ್ ತಮ್ಮ ಮನೆಯಿದ್ದಂತೆ ಎನ್ನುವುದು ಪೂಜಾ ಗಾಂಧಿ ಮಾತು. ಸ್ಪಾಗೋಸ್ಕರ ಇನ್ನು ತಾವು ಇಲ್ಲಿಗೇ ಬಂದು, ಬಿಲ್ ಕೂಡ ಕೊಟ್ಟು ಹೋಗುವುದಾಗಿ ನಕ್ಕರು.

ಗೋಲ್ಡ್‌ಫಿಂಚ್ ಸಮೂಹದ ಮಾಲೀಕ ಕೆ. ಪ್ರಕಾಶ್ ಶೆಟ್ಟಿ ಮುಂದಿನ ಕಾರ್ಯಯೋಜನೆಗಳ ಸ್ವರೂಪವನ್ನು ಬಿಚ್ಚಿಟ್ಟರು. ಗೋಲ್ಡ್‌ಫಿಂಚ್ ಹೋಟೆಲ್‌ಗಳಲ್ಲಿ ಮೊದಲ ಬಾರಿಗೆ ಸ್ಪಾ ಆರಂಭಗೊಂಡಿದೆ. ಇದು ಮಂಗಳೂರಿನಲ್ಲಿರುವ ಹೋಟೆಲ್‌ನಲ್ಲಿಯೂ ಪ್ರಾರಂಭಗೊಳ್ಳಲಿದೆ. ಅಲ್ಲದೆ ಹೆಬ್ಬಾಳ, ಗೋವಾಗಳಲ್ಲಿ ಪಂಚತಾರಾ ಹೋಟೆಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

ಥಾಯ್ಲೆಂಡ್‌ನಿಂದ ಕರೆಸಲಾದ ಸ್ಪಾ ಪರಿಣತರು ಇಲ್ಲಿ ಸೇವೆ ಸಲ್ಲಿಸಲಿದ್ದಾರೆ. ಹೇರ್ ಕಟಿಂಗ್, ಬಾಡಿ ಥೆರಪಿ ಮತ್ತು ಮಸಾಜ್, ಫೇಷಿಯಲ್ ಟ್ರೀಟ್‌ಮೆಂಟ್ ಮುಂತಾದ ಸೌಕರ್ಯಗಳು ಇಲ್ಲಿನ ಸ್ಪಾನಲ್ಲಿ ಲಭ್ಯ ಎಂದು ಅವರು ಹೇಳಿದರು. ಗೋಲ್ಡ್‌ಫಿಂಚ್ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಗೌರವ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT