ADVERTISEMENT

ಸ್ವರ್ಗದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 11:25 IST
Last Updated 13 ಜನವರಿ 2011, 11:25 IST
ಸ್ವರ್ಗದ ಸಂಭ್ರಮ
ಸ್ವರ್ಗದ ಸಂಭ್ರಮ   

ಹೊಸ ವರ್ಷದ ಸಂಭ್ರಮ ಮುಗಿಸಿದವರನ್ನು ಸ್ವಾಗತಿಸುವ ಹಬ್ಬ ಸಂಕ್ರಾಂತಿ. ಅಂದು ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ, ಸೂರ್ಯನು ತನ್ನ ದಿಕ್ಕನ್ನು ಬದಲಾಯಿಸುವ ಸಮಯ...ಭಾರತೀಯ ‘ಪಂಚಾಂಗ’ಗಳು ಹೇಳುವಂತ ಸೂರ್ಯನು ತನ್ನ ಪರಿಭ್ರಮಣ ಯಾತ್ರೆ (ಅಯನ)ಯಲ್ಲಿ ಹಾದಿಬದಲಾಯಿಸುವ ದಿನ ಇದು. ಭೂಮಿ ಕೇಂದ್ರವಾಗಿರಿಸಿದ ಲೆಕ್ಕಾಚಾರದಲ್ಲಿ ಭೂಮಧ್ಯ ರೇಖೆಯನ್ನು ಆಧಾರವಾಗಿರಿಸಿ ದಕ್ಷಿಣ ಗೋಲಾರ್ಧ ಭಾಗದಲ್ಲಿದ್ದ ಸೂರ್ಯ, ಉತ್ತರ ಗೋಲಾರ್ಧದ ಕಡೆಗೆ ಬಾಗುವ ‘ಪರ್ವ’ (ಸಂಧಿ)ಕಾಲ. ಇದನ್ನೇ  ‘ಕರ್ಕಾಟಕ ರಾಶಿ’ಯಿಂದ ‘ಮಕರ ರಾಶಿ’ಯತ್ತ ಸೂರ್ಯ ಸಂಕ್ರಮಿಸುವ ಕಾಲ- ಸಂಕ್ರಾಂತಿ ಅನ್ನುತ್ತಾರೆ.

ಸ್ವರ್ಗದ ಬಾಗಿಲು

ಮಕರ ಸಂಕ್ರಾಂತಿಯನ್ನು ಸ್ವರ್ಗದ ಬಾಗಿಲು ತೆರೆಯುವ ದಿನ ಎಂದು ಭಾರತೀಯರು ನಂಬುತ್ತಾರೆ. ಸ್ವರ್ಗ ಅನ್ನುವ ಪರಲೋಕದ ಕಲ್ಪನೆ ಹೇಗೊ -ಏನೊ ಗೊತ್ತಿಲ್ಲ. ಆದರೆ  ಸಂಕ್ರಾಂತಿಯ ಕಾಲ ಮಾತ್ರ ಭೂಮಿಯಲ್ಲೇ ಸ್ವರ್ಗ ಸೃಷ್ಟಿಯಾಗುತ್ತದೆ. ಪೈರಿನಿಂದ ಮಾಗಿದ ಸುಗ್ಗಿ ಕಾಲ, ಹೂ ತುಂಬಿ ಎಲ್ಲೆಲ್ಲೂ ವಸಂತನ ಆಗಮನಕ್ಕೆ ಸಜ್ಜಾಗಿ ಬೀಗಿದ ಇಳೆ, ಎಲ್ಲೆಲ್ಲೂ ಹೂವು-ಹಸಿರಿನ ವರ್ಣ ಚಿತ್ತಾರ ಇರುತ್ತದೆ.  ಹೊಸ ಜೀವನೋತ್ಸಾಹದಿಂದ ಹಾಡುವ ಹಕ್ಕಿಗಳು, ಜೀವರಾಶಿಗಳಲ್ಲಿ ಸಂಗೀತದ ಪಂಚಮ ನಾದ. ಚಳಿ-ಮಂಜುಹನಿಯಲ್ಲಿ ಮಿಂದೇಳುವ ಜನರಿಗೆ ಬೆಳಗು ಬೈಗಿನ ಸೂರ್ಯ ಕಿರಣದಲ್ಲಿಯೂ ಮನಸ್ಸಿಗೆ ಮುದನೀಡುವ ಅದೇನೊ ಅಮಲು.

ಹಳ್ಳಿ ನೋಟ
ಗ್ರಾಮೀಣ ಭಾಗದ ಜನರಿಗೆ ಇದು ಸುಗ್ಗಿಯ ಕಾಲ. ಹೊಲದಲ್ಲಿ ಬೆಳೆದ ಹೊಸ ಫಸಲನ್ನು ತಂದು ಪೂಜೆ ಮಾಡುತ್ತಾರೆ.ಇದರೊಂದಿಗೆ ರೈತಾಪಿ ಜನರು ತಾವು ವರ್ಷ ಪೂರ್ತಿ ದುಡಿಸುವ ಜಾನುವಾರುಗಳಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡುತ್ತಾರೆ.ಅವುಗಳ ಹೊಟ್ಟೆ ತುಂಬಿಸುತ್ತಾರೆ. ‘ಕಿಚ್ಚು ಹಾಯಿಸು’ವ ಅಗ್ನಿಪರೀಕ್ಷೆಯ ಪುಳಕ. ಹಳತನ್ನು ಕಳೆದು ಹೊಸತರತ್ತ ಸಂಕ್ರಮಣದ ಪರಿಶುದ್ಧ ಹೆಜ್ಜೆ ಇರಿಸುತ್ತಾರೆ. ನೋವು ಹಾನಿಗಳ ಸಂಕಟ ಮರೆತು ಹೊಸ ಗುರಿಯತ್ತ ಮನಸ್ಸು ಹುರಿಗೊಳಿಸುವ ಸಂಕೇತವೂ ಹೌದು.

ಹಬ್ಬದ ವೈಶಿಷ್ಟ್ಯ
ಆಗ ತಾನೇ ಚಳಿಗಾಲ ಮುಗಿದು ಬೇಸಿಗೆ ಪ್ರವೇಶಿಸುವ ಹೊಸ ಋತುಮಾನ. ಎಳ್ಳು ಬೆಲ್ಲ, ಸಕ್ಕರೆ (ಕೆಲವು ಕಡೆ ಇದನ್ನು ‘ತಿಳಗೂಳ’ ಎಂದೂ ಕರೆಯುತ್ತಾರೆ, ಕೆಲವೆಡೆ ಸಂಕ್ರಾಂತಿ ಕಾಳು ಎಂದೂ ಹೇಳುತ್ತಾರೆ.) ಅಚ್ಚು ಸವಿಯುವ  ಸಮಯ. ಸಿಹಿಯ ಆವರಣ, ಕಹಿ ಎಳ್ಳಿನ ಹೂರಣ ಹೊಸ ಜೀವನದ ಹೊಸ ದರ್ಶನ ನೀಡುತ್ತದೆ. ಗೃಹಿಣಿಯರು ದನದ ಕೊಟ್ಟಿಗೆಯನ್ನು ಶುದ್ಧಗೊಳಿಸಿ ರಂಗೋಲಿಯಿಂದ ಸಿಂಗರಿಸುತ್ತಾರೆ. ಜಾನುವಾರುಗಳನ್ನು ನಂದಿಯ ರೂಪದಲ್ಲಿ ನೋಡುತ್ತಾರೆ. ಅಂದು ತಮ್ಮ ದನ ಕರುಗಳಿಗೆ ಗೆಜ್ಜೆ, ಕೊಂಬುಗಳಿಗೆ  ರಿಬ್ಬನ್ನು, ಬಲೂನುಗಳ ಸಿಂಗಾರ. ಇದರೊಂದಿಗೆ ತರಹೇವಾರಿಯ ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸುತ್ತಾರೆ. ಹೊಸ ಅಕ್ಕಿಯಿಂದ ‘ಪೊಂಗಲ್’ ಮಾಡುವುದು ವಿಶೇಷ.

ಸಂಕ್ರತ ಅಮ್ಮನ ಗುಡಿಯ ಮುಂದೆ...
ಸಂಧ್ಯಾಕಾಲದಲ್ಲಿ  ಅಲಂಕರಿಸಿದ ಜಾನುವಾರುಗಳನ್ನು ಬಯಲಿನಲ್ಲಿ ಪಿರಮಿಡ್ ಶೈಲಿಯಲ್ಲಿ ಇಟ್ಟಿಗೆಯಿಂದ ಕಟ್ಟಿರುವ ಸಂಕ್ರಮ್ಮನ ಗುಡಿಯ ಮುಂದೆ ತರುತ್ತಾರೆ. ಅಲ್ಲಿಂದ ಗುಡಿಯ ಒಳ ನೋಡಿದರೆ ಎರಡು ಬಸವಗಳು ಇರುತ್ತವೆ. ‘ಸಂಕ್ರತ ಅಮ್ಮ’ ಎಂಬ ರಕ್ತ ದೇವತೆಯಿಂದ ರಕ್ಷಿಸಲು ಈ ಹಬ್ಬ ಆಚರಿಸಲಾಗುತ್ತದೆ. ಊರಿನ ಎಲ್ಲಾ ರೈತ ಜನರು  ಬಂದು ಪೂಜೆ ಮಾಡುತ್ತಾರೆ. ನಂತರ ದೇವಸ್ಥಾನದಲ್ಲಿ ಪೂಜೆಯ ಅರಿಶಿನ ಮಿಶ್ರಿತ ಅನ್ನವನ್ನು ಗೋವಿಗೆ ಕೊಡುತ್ತಾರೆ.

ಕಿಚ್ಚು ಹಾಯುವ ಬಸವಣ್ಣ..
ದನ ಕರು ಮಾತ್ರವಲ್ಲದೆ ಕುರಿ, ಎಮ್ಮೆಗಳನ್ನು ಕಿಚ್ಚು ಹಾಯಿಸುತ್ತಾರೆ. ಕಿಚ್ಚು ಹಾದರೆ ಅವುಗಳ ಮೈಮೇಲಿನ ಕ್ರಿಮಿ ಕೀಟಗಳು ನಾಶವಾಗುತ್ತವೆ.ಕಿಚ್ಚುಹಾಯಿಸಿ ಬಂದ ಜಾನುವಾರುಗಳನ್ನು ಮನೆಯ ಹೆಣ್ಣು ಮಕ್ಕಳು ಆರತಿ ಎತ್ತಿ ಸ್ವಾಗತಿಸುತ್ತಾರೆ. ನಂತರ ಪೊಂಗಲ್ ಅನ್ನು ನೈವೇದ್ಯ ರೂಪದಲ್ಲಿ ಕೊಡುತ್ತಾರೆ. ಅವು ನೈವೇದ್ಯ ಸ್ವೀಕರಿಸಿದ ನಂತರವೇ ಮನೆಯವರು ಊಟ ಮಾಡುವುದು ಇಲ್ಲಿನ ಪ್ರಾಣಿ ಸ್ನೇಹದ ಸಂದೇಶ.
ಎಳ್ಳು-ಬೆಲ್ಲ ಬೀರು
 ಮಕ್ಕಳು, ಮಹಿಳೆಯರು
ಎಳ್ಳು-ಬೆಲ್ಲ ಬೀರುತ್ತಾರೆ.
ನಮ್ಮ ಬದುಕಿನ ಸಿಹಿಯಲ್ಲಿ ನಿಮ್ಮದೂ ಪಾಲಿದೆ ಎಂಬುದಕ್ಕೆ ಸಂಕೇತವಾಗಿ ಒಬ್ಬರಿಗೊಬ್ಬರು ಎಳ್ಳು ಬೀರುವಾಗ ಆತ್ಮೀಯತೆ, ಪ್ರೀತಿ, ವಿಶ್ವಾಸ ತುಂಬಿ ತುಳುಕುತ್ತಿರುತ್ತದೆ.

ADVERTISEMENT

ಭಿಕ್ಷಂ ದೇಹಿ
ಅಂದು ಯಾರೇ ಮನೆಗೆ ಬಂದರೂ ಭಿಕ್ಷೆ ರೂಪದಲ್ಲಿ  ದವಸ ಧಾನ್ಯಗಳನ್ನು ನೀಡುತ್ತಾರೆ.ಯಾರನ್ನೂ ಬರಿಕೈಯಲ್ಲಿ ಕಳುಹಿಸುವುದಿಲ್ಲ. ಹಂಚಿ ತಿನ್ನುವ ಈ ಹಬ್ಬ ಒಂದು ರೀತಿ ಸಾಮರಸ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು  ತೋರಿಸುತ್ತದೆ.ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹೇಳುವ ಈ ಹಬ್ಬ ಎಲ್ಲರಿಗೂ ಒಳ್ಳೆಯದನ್ನೇ ನೀಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.