ADVERTISEMENT

ಸ್ವಸ್ತಿಯ ಉದಾತ್ತ ಕಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 19:30 IST
Last Updated 21 ನವೆಂಬರ್ 2011, 19:30 IST
ಸ್ವಸ್ತಿಯ ಉದಾತ್ತ ಕಲೆ
ಸ್ವಸ್ತಿಯ ಉದಾತ್ತ ಕಲೆ   

ಎಚ್‌ಸಿಜಿ ಆಸ್ಪತ್ರೆಯಲ್ಲಿರುವ ಸ್ವಸ್ತಿ ಆರ್ಟ್ ಗ್ಯಾಲರಿಯಲ್ಲಿ 30 ಖ್ಯಾತ ಕಲಾವಿದರ ಅಪರೂಪದ ಕಲಾಕೃತಿಗಳು `ಇಂಪ್ರೆಷನ್ಸ್~ ಹೆಸರಿನಡಿಯಲ್ಲಿ ಪ್ರದರ್ಶನಗೊಂಡಿವೆ.

ಕಲಾವಿದರ ಸೃಜನಶೀಲತೆಯ ಮೂಸೆಯಲ್ಲಿ ರಚಿತಗೊಂಡ ಅಪರೂಪದ ಕಲಾಕೃತಿಗಳು ಮನಸೆಳೆಯುತ್ತವೆ. ಇವರೆಲ್ಲ ವಡೋದರಾ, ಹೈದರಾಬಾದ್, ಅಹಮದಾಬಾದ್, ಜೈಪುರ್, ಮೈಸೂರು, ಪಶ್ಚಿಮ ಬಂಗಾಳ, ಚಂಡಿಗಡ, ಚೆನ್ನೈ ಮುಂತಾದ ಕಡೆಯವರು.

ಸ್ವಸ್ತಿ ಆರ್ಟ್ ಗ್ಯಾಲರಿ ಸಮಕಾಲೀನ ಕಲೆಯ ಬಗ್ಗೆ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಜತೆಗೆ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನಿಧಿ ಸಂಗ್ರಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ಇದರ ನಿರ್ದೇಶಕಿ ಭಾಗ್ಯ ಅಜಯ್‌ಕುಮಾರ್ ಅವರು ಎಚ್‌ಸಿಜಿ ಆಸ್ಪತ್ರೆಯ ಅಧ್ಯಕ್ಷ ಡಾ. ಅಜಯ್‌ಕುಮಾರ್ ಅವರ ಪತ್ನಿ. ಕಲಾವಿದೆ ಕೂಡ ಹೌದು. ಷಿಕಾಗೊದ ಸ್ಕೂಲ್ ಆಫ್ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಚಿತ್ರಕಲಾ ಪದವಿ ಪಡೆದಿದ್ದಾರೆ.

ಪ್ರಸ್ತುತ ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ (ಕಾವಾ) ಪ್ರಾಧ್ಯಾಪಕಿ.

ಗ್ಯಾಲರಿಯ ಅನೇಕ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ ಎಚ್‌ಸಿಜಿ ಫೌಂಡೇಷನ್. 2006ರಲ್ಲಿ ಸ್ಥಾಪನೆಗೊಂಡ ಈ ಪ್ರತಿಷ್ಠಾನವನ್ನು ಮುನ್ನಡೆಸುತ್ತಿದ್ದಾರೆ ಭಾಗ್ಯ ಮತ್ತು ಅಜಯ್‌ಕುಮಾರ್ ದಂಪತಿಯ ಮಗಳು ಈಗ ಅಂಜಲಿ. ಅಮೆರಿಕದಲ್ಲಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವ, ಆರ್ಥಿಕ ದುರ್ಬಲರ ಚಿಕಿತ್ಸೆಗೆ ಪ್ರತಿಷ್ಠಾನ ಸಹಾಯ ಮಾಡುತ್ತಿದೆ. ಇದುವರೆಗೆ 200ಕ್ಕೂ ಅಧಿಕ ರೋಗಿಗಳಿಗೆ ನೆರವು ನೀಡಿದೆ. ಪ್ರತಿಯೊಬ್ಬರಿಗೂ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕು ಎಂಬ ಸದುದ್ದೇಶವನ್ನು ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.

ಪ್ರದರ್ಶನದಲ್ಲಿ ಮಾರಾಟವಾಗುವ ಕಲಾಕೃತಿಗಳ ಶೇ 50 ಹಣ ಕಲಾವಿದರಿಗೆ ಹಾಗೂ ಇನ್ನುಳಿದ ಹಣ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಬಳಕೆಯಾಗುತ್ತದೆ.

ಸ್ಥಳ: ಸ್ವಸ್ತಿ ಆರ್ಟ್ ಗ್ಯಾಲರಿ, ಎಚ್‌ಸಿಜಿ ಆಸ್ಪತ್ರೆ ಆವರಣ, ಕಾಳಿಂಗರಾವ್ ರಸ್ತೆ (ಪಾಲಿಕೆ ಹಿಂಭಾಗ). ಪ್ರದರ್ಶನ ತಿಂಗಳ ಅಂತ್ಯದವರೆಗೂ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.