ADVERTISEMENT

ಸ್ವಾರಸ್ಯ ವಿಷಯಗಳ ವಿಜ್ಞಾನ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಸ್ವಾರಸ್ಯ ವಿಷಯಗಳ ವಿಜ್ಞಾನ ಸುಗ್ಗಿ
ಸ್ವಾರಸ್ಯ ವಿಷಯಗಳ ವಿಜ್ಞಾನ ಸುಗ್ಗಿ   

ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್, ವಿ.ವಿ.ಪುರಂನ ವಿಜ್ಞಾನ ವೇದಿಕೆಯಿಂದ, ಅತ್ಯಂತ ನಿರೀಕ್ಷಿತ ವರ್ಷದ ಕಾರ್ಯಕ್ರಮ, `ಸೈನ್ಸ್ ಕಾರ್ನಿವಲ್ - 2012~ ಅಭೂತಪೂರ್ವ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು.

ವಿದ್ಯಾರ್ಥಿಗಳಲ್ಲಿನ ಆಂತರಿಕ ಸ್ಥೈರ್ಯ ಗುರುತಿಸುವ ಮೂಲಕ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರಲ್ಲಿ ಅಡಗಿರುವ ಸುಪ್ತಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುವುದು ಈ ಕಾರ್ನಿವಲ್‌ನ ಧ್ಯೇಯವಾಗಿತ್ತು.

ಈ ಬಾರಿ 20 ಗುಂಪುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ವಿದ್ಯಾರ್ಥಿಗಳು ತಾವೇ ರಚಿಸಿದ ಪ್ರತಿಕೃತಿಯನ್ನು ಪ್ರದರ್ಶಿಸಿ ಪ್ರತಿಭೆ ಮೆರೆದರು. ಹಬ್ಬದ ವಾತಾವರಣವನ್ನು ಪಸರಿಸಲು ಕಾರ್ಯಕ್ರಮದ ಪ್ರಾರಂಭದಲ್ಲಿ ರಾಕ್ ಬ್ಯಾಂಡ್ ಸಂಗೀತವನ್ನು ಆಯೋಜಿಸಲಾಗಿತ್ತು. ಸೈನ್ಸ್- ರಂಗೋಲಿ, ಕೊಲಾಜ್‌ನಂತಹ ಕಾರ್ಯಕ್ರಮಗಳು ಈ ಕಾರ್ನಿವಲ್‌ಗೆ ಮತ್ತಷ್ಟು ರಂಗು ತುಂಬಿದವು.

ಪ್ರತಿಕೃತಿ ಪ್ರದರ್ಶನದಲ್ಲಿ ರುಬೆನ್ಸ್ ಟ್ಯೂಬ್, ಸ್ಪೇಸ್ ರೋವೆರ್ ಮತ್ತು ಹೈಡ್ರೋ ಎಲೆಕ್ಟ್ರಿಕ್ ಪವರ್ ವೀಕ್ಷಕರ ಗಮನ ಸೆಳೆದವು. ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿತ್ತು.

ರುಬೆನ್ಸ್ ಟ್ಯೂಬ್
`ರುಬೆನ್ಸ್ ಟ್ಯೂಬ್~ ಅನ್ನು ಸ್ಥಿರ ತರಂಗ ಜ್ವಾಲೆ ಟ್ಯೂಬ್ ಎಂದೂ ಕರೆಯಲಾಗುತ್ತದೆ. ಜರ್ಮನಿಯ ಖ್ಯಾತ ಭೌತಶಾಸ್ತ್ರಜ್ಞ ಹೆನ್ರಿಕ್ ರುಬೆನ್ಸ್ 1905ರಲ್ಲಿ ಇದನ್ನು ಆವಿಷ್ಕಾರ ಮಾಡಿದ. ಈ ಸಾಧನವು ಶಬ್ದತರಂಗ ಹಾಗೂ ಧ್ವನಿ ಒತ್ತಡದ ನಡುವಿನ ಸಂಬಂಧವನ್ನು ಪ್ರದರ್ಶಿಸುತ್ತದೆ. ಕೊಳವೆಯಿಂದ ತಯಾರಿಸಲಾಗಿರುವ ಈ ಸಾಧನ, ಇದರ ಒಂದು ಭಾಗದ ರಂಧ್ರವನ್ನು ಶಬ್ದತರಂಗ ಹೊರಡಿಸುವ ಸ್ಪೀಕರಿಗೆ ಹಾಗೂ ಮತ್ತೊಂದು ಭಾಗದ ರಂಧ್ರವನ್ನು ಬೆಂಕಿಯ ಜ್ವಾಲೆ ಉತ್ಪಾದಿಸಬಲ್ಲ ಅನಿಲ ಸಾಧನಕ್ಕೆ ಅಳವಡಿಸಲಾಗುತ್ತದೆ. ಅನಿಲದ ಸಹಾಯದಿಂದ ಜ್ವಾಲೆಗಳು ಹೊರಹೊಮ್ಮಿದಾಗ ಅದರ ಆವರ್ತನಕ್ಕೆ ತಕ್ಕಂತೆ ಶಬ್ದತರಂಗಗಳು ಸೃಷ್ಟಿಯಾಗುತ್ತವೆ. 

ಸ್ಪೇಸ್ ರೋವರ್
ಸ್ಪೇಸ್ ರೋವರ್ ಒಂದು ಬಾಹ್ಯಾಕಾಶ ಪರಿಶೋಧನ ವಾಹನವಾಗಿದ್ದು, ಗ್ರಹಗಳ ಇಲ್ಲವೆ ಖಗೋಳದ ಮೇಲ್ಮೈ ಮೇಲೆ ಸಂಚರಿಸಿ ಅವುಗಳ ಅಧ್ಯಯನ ಮಾಡಲು ಉಪಯೋಗಿಸಲಾಗುತ್ತದೆ. ಗ್ರಹಗಳ ಸುತ್ತಲೂ ಸಂಚರಿಸುವ ಈ ಸಾಧನ, ಅವುಗಳ ಸೂಕ್ಷ್ಮ ವೀಕ್ಷಣೆ ಹಾಗೂ ಭೌತಿಕ ಪ್ರಯೋಗಗಳನ್ನು ನಡೆಸಲು ಸಹಕಾರಿಯಾಗಿದೆ.

ಹೈಡ್ರೋ ಎಲೆಕ್ಟ್ರಿಕ್ ಪವರ್
ಹೈಡ್ರೋ ಎಲೆಕ್ಟ್ರಿಕ್ ಪವರ್ ಜನರೇಟರ್ ಮೂಲಕ, ಅಣೆಕಟ್ಟುಗಳಲ್ಲಿ ಶೇಖರವಾಗುವ ನದಿಯ ನೀರನ್ನು ವಿದ್ಯುತ್ತಾಗಿ ಪರಿವರ್ತಿಸುವ ಕ್ರಿಯೆಯನ್ನು ಕೂಡ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.