ADVERTISEMENT

ಹಂಚು, ತಿನ್ನು... ಇದು ರಂಜಾನು

ರೋಹಿಣಿ ಮುಂಡಾಜೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

`ಬೇರೆ ಕಡೆ ಬಿರಿಯಾನಿ ಬೇಯುತ್ತಿದ್ದರೆ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು. ಕುರಿಯ ಚರ್ಮ ಮಾರಲು 30 ಕಿ.ಮೀ. ಸೈಕಲ್ ತುಳೀತಿದ್ದೆ. ಬರೋ ದುಡ್ಡಲ್ಲಿ ಅರ್ಧ ಕೆಜಿ ನುಚ್ಚು ಖರೀದಿಸಿ ಸಂಜೆಯೊಳಗೆ ಮನೆ ಸೇರಿದ್ರೆ ಉಪವಾಸ ಮುಗಿಸಿ ಅದನ್ನು ಗಂಜಿ ಮಾಡಿ ಕುಡಿಯಬಹುದು. ಜಡಿಮಳೆ, ಗಾಳಿಗೆ ಸೈಕಲ್ ತುಳೀಲಾರದೆಯೋ, ಚರ್ಮ ಮಾರಲಾಗದೆಯೋ ತಡವಾದರೆ ಮಕ್ಕಳು ಮತ್ತು ಪತ್ನಿಗೆ ಉಪವಾಸ ಮರುದಿನ ಬೆಳಗ್ಗಿನವರೆಗೂ ಮುಂದುವರೀತಿತ್ತು~ ಎಂದರು 70ರ ಮೊಹಮ್ಮದ್ ಇಸ್ಮಾಯಿಲ್.

ಕೋಣನಕುಂಟೆ-ಅಂಜನಾಪುರ ಮಾರ್ಗದಲ್ಲಿರುವ ಹರಿನಗರದ ತಮ್ಮ ಮನೆಗೆ ಮುಸ್ಲಿಮೇತರ ಬಂಧುಗಳು ರಂಜಾನ್ ಸಂಜೆಗೆ ಆಗಮಿಸಿದ ಸಂಭ್ರಮದಲ್ಲಿದ್ದ ಅವರು ದಶಕದ ಹಿಂದಿನ ಬದುಕಿನ ಪುಟಗಳ ಬಗ್ಗೆ ವಿಷಾದದಿಂದ ಮಾತನಾಡುತ್ತಿದ್ದರು.

ಒಳಮನೆಯಲ್ಲಿ ಚಿಕನ್ ಬಿರಿಯಾನಿ ಮಾಡಿ ಕೆಳಗಿಳಿಸಿದ ಸೊಸೆ ಸಿದ್ದಿಕಿ ಬಾನು, ಅದರ ಘಮ ಆಘ್ರಾಣಿಸಬಾರದಲ್ಲ ಅಂತ ಮೂಗಿಗೂ ಸ್ಕಾರ್ಫ್ ಬಿಗಿದುಕೊಂಡಿದ್ದರು.

ಮೊಹಮ್ಮದ್ ಇಸ್ಮಾಯಿಲ್ ಕುಟುಂಬ ಈಗ ಕುರಿ ಚರ್ಮ ಮಾರಿ ಬರುವ ನುಚ್ಚಿಗಾಗಿ ಕಾಯುತ್ತಿಲ್ಲ. ಬದಲಿಗೆ, ದಶಕದಿಂದಲೂ ಕನಿಷ್ಠ 25 ಕುಟುಂಬಗಳಿಗೆ ರಂಜಾನ್ ಭೋಜನಕ್ಕೆ ಕೂಳು-ಕಾಳು, ಬಿರಿಯಾನಿ ಒದಗಿಸುವಷ್ಟು ಬಡ್ತಿ ಹೊಂದಿದೆ.

`ನಾವು ಅನುಭವಿಸಿದ ಬಡತನ, ರಂಜಾನ್ ಮಾಸದಲ್ಲಿ ಹಸಿವಿನಿಂದ ಒಬ್ಬೊಬ್ಬರೂ ಒದ್ದಾಡಿದ ನೆನಪು ಪ್ರತಿ ರಂಜಾನ್‌ನಲ್ಲಿ ಕಾಡುತ್ತದೆ. ಅದಕ್ಕೆ ರಂಜಾನ್ ಉದ್ದಕ್ಕೂ ನಮ್ಮಂತೆಯೇ ಅವರೂ ತಿಂದು ಸಂತೃಪ್ತರಾಗಲಿ ಎಂದು ಕೈಲಾದಷ್ಟು ದಾನ ಮಾಡುತ್ತೇವೆ~ ಎನ್ನುತ್ತಾರೆ ಅವರ ಮಗ ಜಬಿ.

ಮಾತು ಸಾಗಿದಂತೆ ಸಿದ್ದಿಕಿಬಾನು ಹಾಲ್‌ನಲ್ಲಿ ಕೆಂಪು ಬಟ್ಟೆ ಹಾಸಿ ದೊಡ್ಡ ತಟ್ಟೆಯೊಂದನ್ನು ಇಟ್ಟರು. ಖರ್ಜೂರ, ಸಮೋಸ, ಪಫ್ಸ್, ಬಿಸ್ಕತ್ತು, ಬಾಳೆಹಣ್ಣು, ಪರಂಗಿ, ಕಲ್ಲಂಗಡಿ, ಖರ್ಬೂಜ, ಸಿಹಿತಿಂಡಿಗಳು ಹೀಗೆ ಹತ್ತಾರು ತಿನಿಸುಗಳು ತಟ್ಟೆಗಳನ್ನಲಂಕರಿಸಿದವು. ಪಕ್ಕದಲ್ಲೇ ತಂಬಿಗೆಯಲ್ಲಿ ನೀರು ಮತ್ತು ಸ್ಟೀಲ್ ಸಿಂಕ್ ಬಂದು ಕುಳಿತವು.

ತಾಯಿ ಸಲೀಮಾಬಿ ಇನ್ನೂ ತಲೆನೋವು, ಜ್ವರದ ಬೇಗೆಯಲ್ಲಿದ್ದರೂ ಜಪ ನಿರಂತರವಾಗಿ ಸಾಗಿತ್ತು. ಉಪವಾಸಕ್ಕೆ ಬ್ರೇಕ್ ಹಾಕುವ ನಮಾಜ್‌ಗೆ ಎಲ್ಲರೊಂದಿಗೆ ಸಿದ್ಧರಾದರು.

ಆಗತಾನೆ ಕೋಳಿ ಫಾರಂ ಮುಚ್ಚಿ ನಮಾಜ್‌ಗೆ ಸಜ್ಜಾಗಿ ಬಂದ ಜಬಿ ಸಹೋದರ ಜಫ್ರುಲ್ಲಾ ಮತ್ತು ಮೆಹಬೂಬ್ ಸಹ ಸೇರಿಕೊಂಡರು.

“ಲಾಹಿಲ್ಲಾಹಿಲ್ಲಾ... ದಿನದಲ್ಲಿ ತಿಳಿಯದೆ ಮಾಡಿರಬಹುದಾದ ಯಾವುದೇ ಪ್ರಮಾದಗಳನ್ನು ಕ್ಷಮಿಸು ತಂದೆ, ನಾವೆಲ್ಲ ನಿನ್ನ ಮಕ್ಕಳು ನಮ್ಮನ್ನು ಮಾತ್ರವಲ್ಲ, ನೆರೆಕರೆಯವರನ್ನು, ಬಂಧುಗಳನ್ನೂ ಕ್ಷೇಮವಾಗಿರಿಸು...” ಪ್ರಾರ್ಥನೆ ಮುಂದುವರಿಯಿತು. ಮೊಹಮ್ಮದ್ ಇಸ್ಮಾಯಿಲ್ ಅವರ ಸಹೋದರನ ಕುಟುಂಬವೂ ಅಂದು ಅಲ್ಲೇ ನಮಾಜ್ ಮಾಡಿ ಮುಗಿಸಿತು.

ಅದೇ ದೊಡ್ಡ ತಟ್ಟೆಯಿಂದ ಎಲ್ಲರಿಗೂ ಸಲೀಮಾಬಿ ದೊಡ್ಡ ಪಾತ್ರೆಯಲ್ಲಿದ್ದ ಹಾಲಿನ ಸಾಂಪ್ರದಾಯಿಕ ಶರಬತ್ತು ಕೊಟ್ಟರೆ ಸೊಸೆಯಂದಿರು ಆಧುನಿಕ ಶರಬತ್ತು (ಕೋಲಾ) ಲೋಟಗಳನ್ನು ಪ್ರತಿಯೊಬ್ಬರ ಕೈಗಿಟ್ಟರು. ಮೊದಲಿಗೆ ಖಾಲಿಯಾದದ್ದು ಖರ್ಜೂರ ತಟ್ಟೆ.

ರಂಜಾನ್‌ನ ಹೀರೊ ಖರ್ಜೂರ! ತಮಗಿಷ್ಟವಾದ ತಿನಿಸುಗಳನ್ನು ನಿಧಾನವಾಗಿ ತಿಂದವರೇ ನೀರು ಕುಡಿದು ಸುಧಾರಿಸಿಕೊಂಡರು. ಮತ್ತೊಮ್ಮೆ ದೇವರಿಗೆ ನಮಸ್ಕರಿಸಿ ಊಟಕ್ಕೆ ಸಜ್ಜಾಯಿತು ಕುಟುಂಬ.

ಬಿರಿಯಾನಿ, ಅನ್ನ, ಸಾರು, ಮಜ್ಜಿಗೆ, ಇನ್ನೂ ಒಂದಷ್ಟು...

ಈಗ ಸಲೀಮಾಬಿ ಮಾತಿನ ಚುಂಗು ಹಿಡಿದರು. “ನಾಳೆ ನಮ್ಮ ಮಸೀದಿಗೆ 200 ಕೆಜಿ ಕೋಳಿ ಮಾಂಸದ ಬಿರಿಯಾನಿ ಕಳುಹಿಸುತ್ತೇವೆ. `ನಿನ್ನ ಗಳಿಕೆಯ ಅರ್ಧ ಪಾಲನ್ನು ರಂಜಾನ್ ಮಾಸದಲ್ಲಿ ನಿನಗಿಂತ ಬಡವರಿಗೆ ದಾನ ಮಾಡು~ ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ನಮಗೆ ಪರಮ ಬಡತನವಿದ್ದಾಗ ನಾನೆಂದೂ ನನ್ನ ಮಕ್ಕಳನ್ನು ನೆರೆಮನೆಗೆ ಹೋಗಗೊಡಲಿಲ್ಲ. ನಮ್ಮಲ್ಲೇನಿದೆಯೋ ಅದನ್ನಷ್ಟೇ ತಿಂದು ತೃಪ್ತರಾಗೋಣ ಅನ್ನೋ ಸ್ವಾಭಿಮಾನ. ದೇವರೇ ನೀನಾಗಿ ಕೊಡೋವರೆಗೂ ನಾನು ಅನ್ನಕ್ಕಾಗಿ ಬೇರೆ ಮನೆಗೆ ಹೋಗಲಾರೆ. ನಮಗೆ ಕೊಡು ಆಗ ನಾವು ಕೊಡುತ್ತೇವೆ ಎಂಬ ದೃಢನಿರ್ಧಾರ ಮಾಡಿದ್ದೆ.

ನೋಡಿ ದೇವರು ಈಗ ಕೊಟ್ಟಿದ್ದಾರೆ. ಅವರೆಂದೂ ಕೈಬಿಡುವುದಿಲ್ಲ” ಎಂದವರೇ ಮತ್ತೆ ಅಲ್ಲಾಹುವಿಗೆ ನಮಸ್ಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.