ADVERTISEMENT

ಹಬ್ಬದ ಸೆಳತಾ ಗಂಡಂಗಿಂತಾ ಹೆಚ್ಚಾ?

ಶೈಲಜಾ ಹೂಗಾರ
Published 13 ಜನವರಿ 2011, 11:10 IST
Last Updated 13 ಜನವರಿ 2011, 11:10 IST

ಕಡೀ ತನಕಾ ಮುತ್ತೈದಿ ಆಗೇ ಇರಬೇಕ ಅನ್ನೂದು ಹೆಣ್ಮಕ್ಕಳ ಬೈಕಿ. ಮುತ್ತೈದಿತನ ಗಟ್ಟಿ ಇರಲಿ ಅಂತ ಹೆಣ್ಮಕ್ಕಳು ಭೋಗಿ ಆಚರಿಸ್ತಾರ ಉತ್ತರ ಕರ್ನಾಟಕದ ಕಡೆ. ಹೆಣ್ಮಕ್ಕಳು ಖುಷಿ ಖುಷಿಯಾಗಿ ಹೊಟ್ಟೀ ನೆತ್ತಿ ನೋಡಕೊಂಡ ಎವ್ವಾ ನನ ಗಂಡ ಚೋಲೊ ಇರಲೆ ಅನ್ನೂದ ಯಾಕಂದ್ರ ಅಂವಾ ಚೊಲೊ ಇದ್ರ ಇಕಿಗೇ ಚೊಲೊ. ಹಳೇದೊಂದ ಕತೀ ಐತಿ. ನಮ್ಮತ್ತಿ ಹೇಳೂದಿದ. ಒಂದೂರಾಗ ಒಬ್ಬ ಮುತ್ತೈದಿ. ಇದ ಸಂಕ್ರಾಂತಿ ಹಿಂದಿನ ದಿನಾ ಭೋಗಿ ಮಾಡೂ ಮದ್ಲ ಗಂಡನ್ನ ಜೀವ ಹೋತಂತ. ಆದ್ರೂ ಅಷ್ಟೊತ್ತನಕಾನರ ಮುತ್ತೈದಿತನ ಇರ್ಲಿ ಅಂತ ಅವನ್ನ ಮುಚ್ಚಿಟ್ಟ ಭೋಗಿ ಮಾಡಿದ್ಲಂತ ನೋಡ್ರಿ. ಗಟ್ಟಿಗಿತ್ತಿ ಹಿಂಗ ಮಾಡಿದ್ರ ಮತ್ತ ಬದಕತಾನ ಅನಕೊಂಡ್ಲೊ ಏನೊ ಅಥವಾ ಭೋಗಿ ಸೆಳತಾ ಗಂಡನಕಿಂತ ಹೆಚ್ಚಾಗಿ ಹೋತಾ? ಭೋಗಿ ಮಾಡೂದ ಹೆಂಗಂತ ಗೊತ್ತಾದ ಮ್ಯಾಲ ಇದ್ರೂ ಇರಬೇಕ ಬಿಡ ಅಂತ ನಿಮಗೂ ಅನಸ್ತೇತಿ.

 ಸಂಕ್ರಾಂತಿ ಹಿಂದಿನ ದಿನ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಣಮಕ್ಕಳ ಬೋಗಿ ಅಂತನೇ ಆಚರಿಸೋದು. ಅದನ್ನ ಬೆಂಗಳೂರ್ನಾಗಿರೊ ಉತ್ತರ ಕರ್ನಾಟಕದವ್ರೂ ಆಚರಿಸ್ತಾರ. ಅವತ್ತು ಹೆಣ್ಣುಮಕ್ಕಳೆಲ್ಲ ತಲೀ ಮ್ಯಾಲ ನೀರ ಹಾಕ್ಕೊಂಡು ಎಳೆ ಬಿಸಲು ಕಾಯಿಸ್ಕೋತ ಮಾಳಿಗೆ ಮ್ಯಾಲರ ಇಲ್ಲಾ ಕಟ್ಟಿ ಮ್ಯಾಲರ ಕುಂತಿರತಾರ. ಈಗಿನ್ನ, ಪ್ಯಾಟ್ಯಾಗ ಬಂದ ಸುಲಗಾಯಿ (ಕಡಲಿ ಅಂದರ, ಕಡಲೆ ಗಿಡದ ಹಸಿ ಕಡಲೆ ಕಾಳು) ಕೈಯಾಗ. ಸಿಪ್ಪಿ ಸುಲದು ಒಂದೊಂದ ತಿನಕೋತ ಕೂದಲಾ ಒಣಗಸ್ಕೋತಾರ. ಹೊಲದಿಂದ ತಂದ ಎಳೆ ಜ್ವಾಳದ ಹಸೇ ತೆನಿ ಸುಟ್ಟ ಸೀತನಿ ಬಿಡಿಸಿ ತಿನ್ನೂದರ ಮಜಾನ ಮಜಾ. ಜೊತಿಗಿ ಬಾರಿ ಹಣ್ಣು, ಪ್ಯಾರಲ ಹಣ್ಣು, ಇಲಾಚಿ ಹಣ್ಣು, ಕಬ್ಬು ಊರಾಗ ಸಿಗೂ ಎಲ್ಲಾ ಹೊಸ ಹಣ್ಣುಗೊಳ್ನ ತಿನಕೋತ ನಕ್ಕೋತ ಮಾತಾಡಕೊಂಡ ಹೊಸ ಸುಗ್ಗಿ ಖುಷಿ ಅನುಭವಿಸ್ತಾರ. 

ಅವತ್ತು ಊಟಕ್ಕೂ ಅಷ್ಟ; ಎಳ್ಳ ಹಚ್ಚಿದ ಕಟಕ ಸಜ್ಜಿ ರೊಟ್ಟಿ, ಜ್ವಾಳದ ರೊಟ್ಟಿ, ಹುಳಿ ಬಾನ, ಮಳಕಿ ಬರಿಸಿದ ಮಡಕಿ ಕಾಳ ಪಲ್ಲೆ, ಮುಳಗಾಯಿ ಪಲ್ಲೆ ಅಂತೂ ಇದ್ದ ಇರತಾವು. ಹಸೇ ಬಟಾಣಿ, ಕಡಲಿ, ಅವರೀಕಾಯಿ ಕಾಳ ಪಲ್ಲೆಗೆ ಕುದಸದನ ಒಗ್ಗರಣಿ ಕೊಟ್ಟರ ಹಾಲ ಹಾಲ ಎಳೇದಿದ್ದಾಗಿನ ರುಚೀನ ಬ್ಯಾರೆ. ಜೋಡಿ ಮದಲ ಮಾಡಿಟ್ಟ ಕರಿಂಡಿ, ಕೆಂಪಿಂಡಿ ಇಲ್ಲಾಂದರ ಹಣ್ಣ ಮೆಣಸಿನಕಾಯಿ ಚಟ್ನಿ, ಕೆಂಪು ಮೆಣಸಿನಕಾಯಿ ಚಟ್ನಿ ಜೋಡಿ ಉಳ್ಳಾಗಡ್ಡಿ ಕೂಡಿಸಿ ಕಲ್ಲಾಗ ಜಜ್ಜಿ ಒಳ್ಳೇ ಎಣ್ಣಿ ಕೂಡಿಸಿಟ್ಟರ ಅದ ಕಲ್ಲಾನ ಚಟ್ನಿ. ಒಳ್ಳಾಗ ಕುಟ್ಟಿದ ಶೇಂಗಾ ಚಟ್ನಿ, ಗುರಳ್ಳ್ ಚಟ್ನಿ, ಅಗಸಿ ಚಟ್ನಿನೂ ಇತ್ತಂದ್ರ ಅದರ ಜೋಡಿ ಹೆರತಿದ್ದ ಗಟ್ಟಿ ಮಸರ ಒಣಾ ರೊಟ್ಟಿ ಜೋಡಿ ಮಸ್ತ್ ಇರ್ತೇತಿ. ಇಷ್ಟಕ್ಕ ಎಲ್ಲಿ ಸಾಕಾಕ್ಕೇತಿ, ಬಾಜೂಕ ಒಂದ ಸಣ್ಣ ತಾಟಿನ್ಯಾಗ ಎಳೀ ಸೌತಿಕಾಯಿ, ತಪ್ಪಲಾ ಇರೂ ಎಳೇ ಉಳ್ಳಾಗಡ್ಡಿ, ಹಸೇ ಮೆಂತೆ ತಪ್ಪಲ, ಹಕ್ಕರಿಕಿ ಸೊಪ್ಪ ಇದ್ರ ಏನ ಹೇಳಲಿ...  

 ಮರದಿನಾ ಸಂಕ್ರಾಂತಿ. ಅವತ್ತಿಗೆ ಅಂತ ಶೇಂಗಾ ಹೋಳಿಗಿ ಮಾಡಿಟ್ಟಿರತಾರ. ಅದರಾಗ ಒಂದಷ್ಟು ಕರೇ ಎಳ್ಳ ಹುರದ ಕೂಡಿಸಿರ್ತಾರ. ಎಳ್ಳು ಬೆಲ್ಲ ಕೂಡಿದ್ದ ಡ್ರೈಸ್ವೀಟ್ ಅಂತೂ ರೆಡಿ ಇದ್ದಂಗಾತು. ಇನ್ನೂ ಒಂದ ಡ್ರೈಸ್ವೀಟ್ ಸಂಕ್ರಾಂತಿಗಂತನ ಸ್ಪೆಷಲ್ಲಾಗಿ ಮಾಡೂದ ‘ಮಾದಲಿ’. ಇದು ಒಂಥರಾ ಧರ್ಮಸ್ಥಳದ ಪ್ರಸಾದ ಇದ್ದಂಗ ಇರ್ತೇತಿ. ಗೋಧಿ ಹಿಟ್ಟ ಕಲಸಿ ದಪ್ಪಗ ಲಟ್ಟಸಗೊಂಡ ಎಣ್ಣಿ ಹಚ್ಚದ ಬೇಯಿಸಿಕೋತಾರ. ಇದನ್ನು ಬಿಸಿ ಇರೂವಾಗನ ದೊಡ್ಡ ಸಾಣಿಗಿ ಇಲ್ಲಾ ಹೆರಮಣಿ ಡಬ್ಬಾಕಿ ತಿಕ್ಕತಾರ. ಪುಡಿ ಪುಡಿ ಉದರ ಆದ ಮ್ಯಾಲ ಅದಕ್ಕ ಕೈಯಿಂದನ ಕುಟ್ಟಿದ ಹಸೇ ಬೆಲ್ಲಾ ಕೂಡಸಬೇಕ. ಇದಕ್ಕ ಪುಟಾಣಿ, ಹುರದ ಬಿಳೆ ಎಳ್ಳು, ಸ್ವಲ್ಪ ತೆವಿ ಮ್ಯಾಲ ಬೆಚ್ಚಗ ಮಾಡಿದ ಕಸಕಸಿ, ತುರದಿದ್ದ ಒಣಾ ಕೊಬ್ಬರಿ ಕೂಡಿಸಿಬಿಟ್ಟರ ಮಾದಲಿ ತಯಾರ. ಇದನ್ನು ಹಂಗನೂ ತಿಂತಾರ. ಇಲ್ಲಾ ಬಿಸೇ ಹಾಲು, ತುಪ್ಪಾ ಹಕ್ಕೊಂಡಾದ್ರೂ ತಿಂತಾರ.

ಅಲ್ಲೆಕೇರಿಗೋಗೂಣು ಬರ್ತೀರೇನ್ರಿ?
ಮಾಡವ್ರ ಹಬ್ಬ ಅಂತ ಹೂರಣದ ಹೋಳಿಗಿನೂ ಮಾಡತಾರ. ಅವತ್ತ ಯಾವ ದೇವ್ರಿಗೂ ಖಾಸ ಪೂಜಾ, ನೈವೇದ್ಯ ಬೇಕಾಗಿಲ್ಲ. ಅದಕ್ಕ, ಹೆಚ್ಚಾಗಿ ಎಲ್ಲಾ ಮದಲ ಮಾಡಿಟ್ಟ ಅಡಗೀನ ಹಬ್ಬದ ದಿನಾನು. ಚಾ ಬಿಟ್ಟರ ಪಲ್ಲೆ, ಅನ್ನಾ ಸಾರಿಗಷ್ಟ ಒಲೀ ಹಚ್ಚೂದ. ಯಾಕಂದ್ರ ಸಂಕ್ರಾಂತಿ ದಿನಾ ಹೊಳ್ಯಾಗ ಜಳಕಾ ಮಾಡಿದರ ಪುಣ್ಯಾ ಬರ್ತೇತಿ ಅಂತ ಊಟ ಕಟಗೊಂಡ ಊರ ಬಿಡೂದ ಹೆಚ್ಚ. ಹೊಳೀ ದಂಡಿ ಮ್ಯಾಲ ಯಾವ್ದರ ಗುಡಿ ಇದ್ರ ಅಲ್ಲೇ ಜಳಕಾ ಮಾಡಿ, ಕಟಗೊಂಡ ಹೋಗಿದ್ದನ್ನ ಎಲ್ಲಾರೂ ಕೂಡಿ ಊಟಾ ಮಾಡಿ ಬರೂದ ಬಾಳ.ಜಳಕಾ ಮಾಡೂ ಮದ್ಲ ಕರೇ ಎಳ್ಳ ಕುಟ್ಟಿ ಅದಕ್ಕ ಅರಶಣ ಪುಡಿ ಕಲಸಿ ಹಚಗೋತಾರ. ಒಣಾ ಮೈಗೆ ಒಂದಷ್ಟ ಸಮಾಧಾನ ಆಗತೇತಿ.

ಮುಂಜೇಲಿ ದೇವರ ಪೂಜಾ ಮಾಡಿ ಕುಸುರೆಳ್ಳ ತೋರಿಸಿರ್ತಾರ. ಸಂಜಿ ಮುಂದ ಅದ ಕುಸುರೆಳ್ಳು ಒಬ್ಬರಿಗೊಬ್ಬರ ಕೊಟ್ಟ ‘ಎಳ್ಳು ಬೆಲ್ಲ ತೊಗೊಂಡ ಎಳ್ಳೂ ಬೆಲ್ಲದಂಗಿರೂಣು’ ಅಂತ ಹೇಳ್ತಾರ. ಸಣ್ಣವರೆಲ್ಲಾ ದೊಡ್ಡವ್ರ ಕಾಲಿಗೆ ಬಿದ್ದು ಆಶೀರ್ವಾದ ಮಾಡಸ್ಕೋತಾರ.ಸಂಬಂಧಿಕರ ಜೋಡಿ ಇಲ್ಲಾ ಗೆಳ್ಯಾರು, ಗೆಳತ್ಯಾರು, ಅಚಿಕಡೆ ಇಚಿಕಡೆ ಮನಿಯೋರ ಜೋಡಿ ಯಾವಾಗರ ಜಗಳಾ ಸಿಟ್ಟು ಸೆಡವು ಆಗಿತ್ತಂದ್ರ ಇದ ನೆಪದಾಗ ಅವರ್ನ ಮಾತಾಡಿಸಿ ಎಳ್ಳ ಕೊಟ್ಟರ ಮುಗೀತ. ಹೆಂಗ ಮತ್ತ ಮಾತಾಡ್ಸೂದು ಅಂತ ಹಿಂದ ಮುಂದ ನೋಡೂವಂಗೇ ಇಲ್ಲ.  ಹಿಂದ ಆಗಿದ್ದೆಲ್ಲಾ ಮರತ ಮತ್ತ ಮದಲಿನಂಗ ಇರೂಣು ಅಂತ ಹೇಳಿದಂಗ ಇದು.

ಅದರ ಮರದಿನಾ ಕರಿ. ಬಾಳ ಕೆಟ್ಟ ದಿನಾ. ಶುಭ ಕಾರ್ಯ ಮಾಡೂದಿಲ್ಲ. ಕಮರ (ಎಣ್ಣೆ ಬಳಸಿದ ಪದಾರ್ಥ)ಅಡಗಿ ಮಾಡಿ ಉಣತಾರ.ದೋಸಾ ಮಾಡಿ ಮದಲ್ನೇ ದೋಸಾ ಚೊಚ್ಚಲ ಮಗನ ಬೆನ್ನ ಮ್ಯಾಲ ಮೂರ ಸಲಾ ಬಡದು ಮಾಳಿಗಿ ಮ್ಯಾಲ ಕಾಗಿ ತಿನ್ನಲಿ ಅಂತ ಒಗೀತಾರ. ಸಣ್ಣ ಮಕ್ಕಳಿಗೆ ಕರಿ ಎರದು ದೃಷ್ಟಿ ತಗೀತಾರ. ಮುತ್ತೈದ್ಯಾರು ಮಕ್ಕಳ್ನ ಮಣಿ ಮ್ಯಾಲ ಕುಂದರಿಸಿ, ಒಣಾ ಚುಮ್ಮರಿ, ಶೇಂಗಾ, ಕಡಲಿ, ಪುಟಾಣಿ,ಕಬ್ಬಿನ ಚೂರು, ಕೊಬ್ರಿ ಚೂರು ಬಾರಿ ಹಣ್ಣು, ಎಳ್ಳು, ಕುಸುರೆಳ್ಳು ಎಲ್ಲಾ ತಲಿ ಮ್ಯಾಲ ಸುರವಿ ಆರತಿ ಮಾಡತಾರ.  ಮುಂದಿಂದೆಲ್ಲಾ ಚೊಲೊ ದಿನಾ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.