ADVERTISEMENT

‘ಹಾಲು ತುಪ್ಪ’ದಲ್ಲಿ ಒಳ್ಳೆಯ ಸಂದೇಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
‘ಹಾಲು ತುಪ್ಪ’ದಲ್ಲಿ ಒಳ್ಳೆಯ ಸಂದೇಶ
‘ಹಾಲು ತುಪ್ಪ’ದಲ್ಲಿ ಒಳ್ಳೆಯ ಸಂದೇಶ   

ಹಳ್ಳಿಗಳಲ್ಲಿ ಹಾಲು ತುಪ್ಪ ಚೆನ್ನಾಗಿರುವ ಮನೆ ಎಂದರೆ ಅದು ಜೀವನ ಸಮೃದ್ಧಿಯ ಸಂಕೇತ. ಅನುದಿನವೂ ಬಳಕೆಯಾಗುವ ಪದಾರ್ಥಗಳು ಅವು. ಇದನ್ನೆ ಹೆಸರಾಗಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಶಶಾಂಕ್‌ರಾಜ್‌. ನಿರ್ದೇಶನದ ಜತೆ ಕಥೆ, ಚಿತ್ರಕಥೆಯ ಜವಾವ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಸಿನಿಮಾದ ಶೀರ್ಷಿಕೆಯನ್ನು ಒಳ್ಳೆಯ ಮತ್ತು ಕೆಟ್ಟ ಅರ್ಥಗಳೆರಡರಲ್ಲಿಯೂ ಗ್ರಹಿಸಬಹುದು. ಆದರೆ ಸಿನಿಮಾದಲ್ಲಿ ಪಾಸಿಟಿವ್‌ ಅಂಶಗಳೇ ಹೆಚ್ಚಿವೆ. ಗಡ್ಡಪ್ಪ ನಾಟಿವೈದ್ಯರಾಗಿ, ಸೆಂಚುರಿಗೌಡರು ನ್ಯಾಯ ಪಂಚಾಯಿತಿ ಮುಖ್ಯಸ್ಥರಾಗಿ ಅಭಿನಯಿಸಿದ್ದಾರೆ. ಸಂಭಾಷಣೆಗಳು ಅಶ್ಲೀಲವಾಗಿಲ್ಲ. ಈ ಹಿರಿಯ ನಟರ ಮೂಲಕ ಒಂದು ಒಳ್ಳೆಯ ಸಂದೇಶ ಹೇಳಿದ್ದೇವೆ’ ಎಂದರು ನಿರ್ದೇಶಕರು.

ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಹಾಡುಗಳನ್ನು ಬಿಡುಗಡೆ ಮಾಡಿದರು. ‘ಕೆಲವು ಸಿನಿಮಾಗಳಲ್ಲಿ ಈ ಇಬ್ಬರು ಹಿರಿಯ ವಯಸ್ಸಿನ ಕಲಾವಿದರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅವರನ್ನು ಕ್ಯಾಬರೆ ನೃತ್ಯದಲ್ಲಿ ತೋರಿಸಿದ್ದು ಬೇಸರ ತಂದಿದೆ. ಈ ಕಲಾವಿದರ ಮೇಲೆ ಜನರು ಗೌರವ ಹೊಂದಿದ್ದಾರೆ. ಅದಕ್ಕೆ ಮಸಿ ಬಳಿಯಬೇಡಿ’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

ಗಡ್ಡಪ್ಪನ ಮೊಮ್ಮಗನಾಗಿ ನಾಯಕ ಪವನ್ ನಟಿಸಿದ್ದಾರೆ. ನಾಯಕಿಯರಾದ ಸಂಹಿತಾ ವಿನಯಾ ಪಾತ್ರದ ಪರಿಚಯ ಮಾಡಿಕೊಟ್ಟರು. ಆರು ಹಾಡುಗಳಿಗೆ ಸಾಹಿತ್ಯ ಬರೆದು ಹಾಗೂ ಸಂಗೀತ ಸಂಯೋಜಿಸಿರುವುದು ಇಂದ್ರಸೇನ. ದೊಡ್ಮನೆ ವೆಂಕಟೇಶ್ ಹಣ ಹೂಡಿರುವ ಈ ಚಿತ್ರ ಇದೇ ತಿಂಗಳಲ್ಲಿ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.