ADVERTISEMENT

ಹೃದಯದ ಜಾಗೃತಿಗಾಗಿ ವಿಕ್ರಂ ವಾಕಥಾನ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಮಿಲ್ಲರ್ಸ್‌ ರಸ್ತೆಯಲ್ಲಿರುವ ವಿಕ್ರಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಶ್ವ ಹೃದಯ ದಿನದ ಅಂಗವಾಗಿ ಶನಿವಾರ ವಾಕಥಾನ್ ಮತ್ತು ಮಾನವ ಸರಪಳಿಯನ್ನು ಆಯೋಜಿಸಿತ್ತು.

ಬೆಳಿಗ್ಗೆ 7.30ಕ್ಕೆ ವಿಕ್ರಂ ಆಸ್ಪತ್ರೆಯಿಂದ ಆರಂಭಗೊಂಡ ವಾಕಥಾನ್ ಮಿಲ್ಲರ್ಸ್‌ ರಸ್ತೆ, ಅಲಿ ಅಸ್ಗರ್ ರಸ್ತೆ- ಇನ್‌ಫೆಂಟ್ರಿ ರಸ್ತೆ- ಡಾ.ಬಿ.ಆರ್ ಅಂಬೇಡ್ಕರ್ ವೀಧಿ- ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ಸಾಗಿ ಸೇಂಟ್ ಆ್ಯನ್ಸ್ ಕಾಲೇಜು ಮೈದಾನದಲ್ಲಿ ಹೃದಯದಾಕಾರದ ಮಾನವ ಸರಪಳಿ ನಿರ್ಮಿಸಿ `ನಿಮ್ಮ ಹೃದಯವನ್ನು ರಕ್ಷಿಸಿ~ ಎಂಬ ಸಂದೇಶ ನೀಡುವುದರೊಂದಿಗೆ ಮುಗಿಯಿತು.

ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ, ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಡಾ.ಎಂ.ಎ. ಸಲೀಂ, ಸಿನಿಮಾ ತಾರೆಯರಾದ ತಾರಾ ಮತ್ತು ಸೌಂದರ್ಯ, ಆಸ್ಪತ್ರೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ವಿಕ್ರಂ ಎಸ್.ಬಿ. ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.
 
ನೂರಾರು ವಿದ್ಯಾರ್ಥಿಗಳು, ತಾಂತ್ರಿಕರು, ಹಿರಿಯ ನಾಗರಿಕರು, ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಸಿನಿಮಾ ಕಲಾವಿದರು ಮತ್ತು ವಿಕ್ರಂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.

ವಿಕ್ರಂ ಆಸ್ಪತ್ರೆ ಹಿರಿಯ ಹೃದಯ ತಜ್ಞ ಡಾ.ಪಿ. ರಂಗನಾಥ್ ನಾಯಕ್ ಮಾತನಾಡಿ, `ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯಂತೆ ಭಾರತ ಹೃದಯಾಘಾತದ ರಾಜಧಾನಿ. ಭಾರತದಲ್ಲಿ ಹೃದ್ರೋಗ ಅತಿ ಹೆಚ್ಚು ಸಾವಿಗೆ ಕಾರಣವಾಗುತ್ತಿದೆ.

ಕಾರ್ಡಿಯೊ ವಾಸ್ಕ್ಯುಲರ್ ಕಾಯಿಲೆ (ಸಿವಿಡಿ) ಒಟ್ಟಾರೆ ಮರಣಪ್ರಮಾಣದಲ್ಲಿ ಮೂರನೇ ಒಂದರಷ್ಟು ಪಾಲು ಪಡೆದಿದೆ. ಇವತ್ತಿನ ಜೀವನಶೈಲಿ, ಮಾಲಿನ್ಯ ಇದಕ್ಕೆ ಕಾರಣ~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.