ಶೆರಟಾನ್ ಹೋಟೆಲ್ ಒಳಾಂಗಣದಲ್ಲಿ ಹೊಂಬಣ್ಣದ ಬೆಳಕು. ಹಿನ್ನೆಲೆಯಲ್ಲಿ ಸಂಗೀತ. ಕೃತಕ ಕಾರಂಜಿಯಲ್ಲಿ ಚಿಮ್ಮುನೀರು. ಕೊಠಡಿಯೊಳಗೆ ತಂಗಾಳಿ. ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತಿದ್ದ ಹೊತ್ತಲ್ಲೇ ಇದ್ದಕ್ಕಿದ್ದಂತೆ ಹೊಂಬಣ್ಣದ ಬೆಳಕು ಸ್ವಲ್ಪ ಸ್ವಲ್ಪವೇ ಮಸುಕಾಗತೊಡಗಿತು.
ಅಲ್ಲಿ ಹಾಲ್ನೊರೆಯಂತಹ ಬೆಳಕೊಂದು ವ್ಯಾಪಿಸತೊಡಗಿತು. ಆ ಬೆಳಕಿನ ಪ್ರಭಾವಳಿಯಲ್ಲಿ ಕನಸಿನ ಕನ್ಯೆ ಹೇಮಾಮಾಲಿನಿ ಹಂಸವೇಣಿಯಂತೆ ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ, ಬಳುಕುತ್ತಾ ಬಂದರು; ಪೂರ್ಣಚಂದ್ರನ ಬೆಳಕೇ ನಡೆದುಕೊಂಡು ಬಂದಿತೇನೋ ಎಂಬಂತೆ.
ಅಂದಹಾಗೆ, ಮಲಬಾರ್ ಗೋಲ್ಡ್ ರಾಜಾಜಿನಗರದಲ್ಲಿ ತೆರೆದಿರುವ ಮೂರನೇ ಮಳಿಗೆ ಉದ್ಘಾಟಿಸುವ ಸಲುವಾಗಿ ನಟಿ ಹೇಮಾಮಾಲಿನಿ ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಹೇಮಾ ತಮ್ಮ ಆಭರಣ ಪ್ರೀತಿ, ಚೆಲುವಿನ ರಹಸ್ಯ, ಬೆಂಗಳೂರಿನ ಮೇಲಿರುವ ಅಕ್ಕರೆ, ನೃತ್ಯ ಮತ್ತು ಸಿನಿಮಾ ಎಲ್ಲವುದರ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅದನ್ನು ಅವರ ಮಾತುಗಳಲ್ಲೇ ಕೇಳಿ...
`ಹೇಮಾ ಅಂದ್ರೆ ಚಿನ್ನ. ನನ್ನ ಹೆಸರಿನಲ್ಲೇ ಚಿನ್ನವಿದೆ. ನನಗೆ ಎಲ್ಲ ರೀತಿಯ ಆಭರಣಗಳು ಇಷ್ಟ. ನಾನು ಸೀರೆ ಉಟ್ಟಾಗ ಅದಕ್ಕೆ ಒಪ್ಪುವಂತಹ ಚಿನ್ನ ಅಥವಾ ವಜ್ರದ ಆಭರಣಗಳನ್ನು ಹಾಕಿಕೊಳ್ಳುತ್ತೇನೆ. ಮದುವೆಗೆ ಹಾಗೂ ಇನ್ನಿತರ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ನಾನು ಚಿನ್ನದ ಆಭರಣಗಳನ್ನು ಮಾತ್ರ ತೊಟ್ಟುಕೊಳ್ಳುತ್ತೇನೆ. ಕಾಸ್ ಮಾಲೆ, ಮಾವಿನ ಕುಸುರಿಯುಳ್ಳ ಚಿನ್ನದ ಆಭರಣಗಳನ್ನು ಕಾಂಜೀವರಂ ಸೀರೆ ಜತೆ ಹಾಕಿಕೊಂಡಾಗ ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ~.
ಎಲ್ಲೇ ಹೋದರೂ ಜನ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಕೇಳುತ್ತಾರೆ. ಎಲ್ಲರೂ ಈಗಲೂ ನನ್ನನ್ನು ಡ್ರೀಂಗರ್ಲ್ ಎಂದು ಕರೆಯುತ್ತಾರೆ. ಹೋದ ಕಡೆಯಲ್ಲೆಲ್ಲಾ ಈ ಕಮೆಂಟ್ ಕೇಳಿದಾಗ ನನ್ನ ಮನಸ್ಸು ಕೂಡ ಅರಳುತ್ತದೆ.
ನಾನೇನೂ ಅಪ್ರತಿಮ ಚೆಲುವೆಯಲ್ಲ. ಆದರೂ ನನ್ನನ್ನು ಕನಸಿನ ಕನ್ಯೆ ಎಂದು ನನ್ನ ಅಭಿಮಾನಿಗಳು ಆರಾಧಿಸುತ್ತಾರೆ. ಆದರೆ ನಂಗೀಗ ವಯಸ್ಸು 64. ನನ್ನ ಮಗಳು ಇನ್ನೇನು ಹಸೆಮಣೆ ಏರುವ ಹೊಸ್ತಿಲಲ್ಲಿ ಇದ್ದಾಳೆ. ಹಾಗಾಗಿ ನಂಗೆ ಈಗಲೂ ಡ್ರೀಮ್ ಗರ್ಲ್ ಅಂತ ಕರೆಯಿಸಿಕೊಳ್ಳುವುದಕ್ಕೆ ಕೊಂಚ ಮುಜುಗರ ಅನಿಸುತ್ತದೆ.
ನಾನು ತಮಿಳು ಅಯ್ಯಂಗಾರ್ ಬ್ರಾಹ್ಮಣರ ಕುಟುಂಬದವಳು. ಹಾಗಾಗಿ ಪಕ್ಕಾ ಸಸ್ಯಾಹಾರಿ. ನಿತ್ಯ ಯೋಗ ಮಾಡುತ್ತೇನೆ. ಹಾಗೆಯೇ ದೇಹವನ್ನು ವ್ಯಾಯಾಮದ ಮೂಲಕ ದಂಡಿಸುತ್ತೇನೆ. ಕೆಲವೊಮ್ಮೆ ಜಿಮ್‌ನಲ್ಲಿ ತೂಕ ಕೂಡ ಎತ್ತುವುದುಂಟು. ಬೆಂಗಳೂರು ಅಂದ್ರೆ ನಂಗೆ ತುಂಬಾ ಇಷ್ಟ. ನನ್ನ ಅನೇಕ ಚಿತ್ರಗಳ ಚಿತ್ರೀಕರಣ ಇಲ್ಲಿಯೇ ನಡೆದಿದೆ.
ಜತೆಗೆ ಬೆಂಗಳೂರಿನ ಬೆನ್ನಿಗೆ ಅಂಟಿಕೊಂಡಂತೆ ಇರುವ ರಾಮನಗರ, ಮೈಸೂರು ಹೀಗೆ ಕರ್ನಾಟಕದ ಹಲವು ಪ್ರದೇಶಗಳ ಪರಿಚಯ ಕೂಡ ಉಂಟು. ಆಗೆಲ್ಲಾ ನಾನು ಇಲ್ಲಿನ ತಂಪು ಹವಾಗುಣ, ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಮನಸೋತಿದ್ದೇನೆ. ಬಹಳ ಹಿಂದೆ ನಾನು ಬೆಂಗಳೂರಿನಲ್ಲಿ ಒಂದು ಫಾರ್ಮ್ ಹೌಸ್ ಕೊಂಡುಕೊಂಡಿದ್ದೆ. ಆಗ ಇಲ್ಲಿಗೆ ಬಂದು ಕೆಲವು ದಿನ ತಂಗುತ್ತಿದ್ದೆ.
ಈಗ ಫಾರ್ಮ್ ಹೌಸ್ ಇಲ್ಲದೇ ಇರಬಹುದು, ಆದರೂ ನಾನು ಬೆಂಗಳೂರನ್ನು ತುಂಬಾ ಇಷ್ಟಪಡುತ್ತೇನೆ. ಬೆಂಗಳೂರು ತುಂಬಾ ಸುಂದರ ನಗರಿ.
ನೃತ್ಯ ಹಾಗೂ ಸಿನಿಮಾ ಎಂದರೆ ನನಗಿಷ್ಟ. ಅದರಲ್ಲೂ ನನಗೆ ನೃತ್ಯವೆಂದರೆ ಪಂಚ ಪ್ರಾಣ. ಯಾಕಂದ್ರೆ ನೃತ್ಯ ಜನರ ಜತೆಗೆ ನನ್ನನ್ನು ನೇರವಾಗಿ ಸಂಪರ್ಕಿಸುತ್ತದೆ. ನಾನು ಹಲವು ವರ್ಷ ಈ ಎರಡು ಕ್ಷೇತ್ರದಲ್ಲೂ ಸಮಾನವಾಗಿ ತೊಡಗಿಸಿಕೊಂಡೆ.
ಎರಡು ಕುದುರೆಗಳ ಮೇಲೆ ಕುಳಿತು ಮಜಭೂತಾಗಿ ಸವಾರಿ ಮಾಡಿದ ಅನುಭವ ಕೂಡ ನನ್ನದಾಯಿತು.
ಮಲಬಾರ್ ಗೋಲ್ಡ್‌ನಲ್ಲಿ ಶುದ್ಧ ಹಾಲ್‌ಮಾರ್ಕ್ ಚಿನ್ನವನ್ನೇ ಮಾರಾಟ ಮಾಡುತ್ತಾರೆ. ಇಲ್ಲಿ ಕಣ್ಮನ ಸೆಳೆಯುವ ಚಿನ್ನ ಹಾಗೂ ವಜ್ರದ ಆಭರಣಗಳ ದೊಡ್ಡ ಸಂಗ್ರಹವಿದೆ. ಬ್ಯೂಟಿ ಮೀಟ್ಸ್ ಕ್ವಾಲಿಟಿ ಎಂಬ ಕ್ಯಾಚಿ ಟ್ಯಾಗ್‌ಲೈನ್‌ನೊಂದಿಗೆ ಚಿನ್ನ ಮತ್ತು ವಜ್ರಾಭರಣಗಳನ್ನು ಮಾರಾಟ ಮಾಡುವ ಮಲಬಾರ್ ಗೋಲ್ಡ್‌ಗೆ ನಾನು ರಾಯಭಾರಿ ಆಗಿದ್ದು ಇದೇ ಕಾರಣಕ್ಕೆ.
ನಮ್ಮ ದೇಶದ್ಲ್ಲಲಿ ಅಲ್ಲದೇ ಅರಬ್ ರಾಷ್ಟ್ರಗಳಿಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಮಲಬಾರ್ ಗೋಲ್ಡ್ ರಾಯಭಾರಿ ಆಗಿರುವುದು ನನಗೆ ಖುಷಿ ಕೊಟ್ಟಿದೆ. ಅಂದಹಾಗೆ ನನ್ನ ಮಗಳ ಮದುವೆಗೆ ನಾನು ಮಲಬಾರ್ ಗೋಲ್ಡ್‌ನಲ್ಲಿಯೇ ಚಿನ್ನ ಖರೀದಿ ಮಾಡಿದ್ದೇನೆ~.
ಮಾತಿನ ನಡುವೆ ಹೇಮಾ ಬೆಳದಿಂಗಳಂತಹ ನಗು ಚೆಲ್ಲುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.