ADVERTISEMENT

ಹೊಸಬೆಳಕು- ಪುಸ್ತಕ ಮತ್ತು ಡಿವಿಡಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಯಾವುದೇ ಟಿವಿ ಕಾರ್ಯಕ್ರಮ ಪುಸ್ತಕ ರೂಪ ಪಡೆದುಕೊಳ್ಳುವುದು ಅದರ ಯಶಸ್ಸು ಮತ್ತು ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ. ಚಂದನ ವಾಹಿನಿಯಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 9.30 ರಿಂದ 10.30 ರವರೆಗೆ ಪ್ರಸಾರವಾಗುತ್ತಿರುವ `ಹೊಸ ಬೆಳಕು~ ಕಾರ್ಯಕ್ರಮಕ್ಕೆ ಇನ್ನೇನು ಒಂದು ವರ್ಷ ತುಂಬಲಿದೆ.

ಭಾರತದಲ್ಲಿ ವೇದಗಳ ಬಗ್ಗೆ ಪ್ರಸಾರವಾಗುತ್ತಿರುವ ಏಕೈಕ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಇದಕ್ಕಿದೆ. ವೇದ ವಿಜ್ಞಾನ ಮತ್ತು ಷೋಡಶ ಸಂಸ್ಕಾರಗಳನ್ನು ಕುರಿತು ವೈಜ್ಞಾನಿಕವಾದ ಅರ್ಥವನ್ನು ತಿಳಿಸಿಕೊಡುವ ಈ ಕಾರ್ಯಕ್ರಮವನ್ನು  ಪ್ರಸಿದ್ಧ ವಿದ್ವಾಂಸರೂ ವೇದಾಧ್ಯಾಯಿಯೂ ಆಗಿರುವ ಸುಧಾಕರ ಶರ್ಮ ಅವರು ನಡೆಸಿಕೊಡುತ್ತಾರೆ.

ಮೂಲ ವೇದಗಳನ್ನು ತೊರೆದು ಕಲ್ಪಿತ ಪುರಾಣ ಪುಣ್ಯ ಕಥೆಗಳನ್ನು ಆಶ್ರಯಿಸುವುದು ಬೇಡ, ವೇದ ಎಂದರೆ ಕೇವಲ ಸಂಸ್ಕೃತ ಮಂತ್ರಗಳಲ್ಲ, ಅದು ಸಾರ್ಥಕ ಬಾಳಿಗೆ ಋಷಿಮುನಿಗಳು ನೀಡಿರುವ ಜೀವನ ಸಂವಿಧಾನ ಎಂಬುದನ್ನು ಅವರು ಸಮರ್ಥವಾಗಿ ಪ್ರತಿಪಾದಿಸುತ್ತಿದ್ದು, ಕಾರ್ಯಕ್ರಮ ಬಹಳ ಜನಪ್ರಿಯವಾಗಿದೆ.

ADVERTISEMENT

ಬ್ರಾಂಜ್ ಕಮ್ಯುನಿಕೇಷನ್ಸ್ ಸಂಸ್ಥೆಯ ಪರವಾಗಿ ಎಸ್. ಸುರೇಶ್ ಇದನ್ನು ನಿರ್ಮಿಸಿದ್ದಾರೆ. ವಿನಯಾ ಪ್ರಸಾದ್ ನಿರೂಪಣೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನೇ ಆಧಾರವಾಗಿಟ್ಟುಕೊಂಡು `ಹೊಸ ಬೆಳಕು~ ಪುಸ್ತಕ ಮತ್ತು ಡಿವಿಡಿ ತಯಾರಿಸಲಾಗಿದೆ.

ಅ. 7 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಗವೀಪುರಂ- ಕೆಂಪೇಗೌಡ ನಗರದ ಉದಯಭಾನು ಕಲಾಸಂಘದಲ್ಲಿ ಶತಾಯುಷಿ ಮತ್ತು ವೇದವಾರಿಧಿ ಪಂಡಿತ ಸುಧಾಕರ ಚತುರ್ವೇದಿ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಮಹೇಶ್ ಜೋಷಿ `ವೇದ ವಿಜ್ಞಾನ~ ಡಿವಿಡಿಯನ್ನು ಮತ್ತು ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಎಸ್. ಸಂತಾನಮ್ ಅವರು ಷೋಡಶ ಸಂಸ್ಕಾರಗಳ ಡಿವಿಡಿಯನ್ನು ಬಿಡುಗಡೆ ಮಾಡಲಿದ್ದಾರೆ. ಸುಧಾಕರ ಶರ್ಮ ಉಪಸ್ಥಿತರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.