ADVERTISEMENT

‘ಕಾಸ್ಮೊಡರ್ಮ’ಗೆ ಜಾಗತಿಕ ಪ್ರಶಸ್ತಿ

ಪ್ರಜಾವಾಣಿ ವಿಶೇಷ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST
ಡಾ.ಚೈತ್ರಾ ಆನಂದ್
ಡಾ.ಚೈತ್ರಾ ಆನಂದ್   

ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವಾಗಿರುವ ಸೌಂದರ್ಯ ರಕ್ಷಣೆ ಮತ್ತು ‘ದುರಸ್ತಿ’ ಕ್ಷೇತ್ರ ಎಸ್ತೆಟಿಕ್ ಸೈನ್ಸ್ ಎಂಬ ಹೊಸ ಸೌಂದರ್ಯಮೀಮಾಂಸೆಯನ್ನು ಬರೆಯುತ್ತಿದೆ ಎಂದರೆ ತಪ್ಪಾಗದು.  ಸೌಂದರ್ಯ ಚಿಕಿತ್ಸೆಗಳು, ಕಾಸ್ಮೆಟಿಕ್ ಸರ್ಜರಿಗಳು ವ್ಯಕ್ತಿಗೆ ಹೊಸ ರೂಪ ಕೊಡುವ, ಕುರೂಪವನ್ನು ಸುರೂಪವಾಗಿಸುವ ಮೂಲಕ ನೊಂದವರ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯುತ್ತಿವೆ. ಸೌಂದರ್ಯ ಕ್ಷೇತ್ರದಲ್ಲಿ ಎಸ್ತೆಟಿಕ್ ಸೈನ್ಸ್‌ನ ಪರಿಣತಿಯೊಂದಿಗೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡುವ ನುರಿತ ಕೈಗಳು ವಿದೇಶಕ್ಕೆ ಹೋಗಿ ಅಲ್ಲಿ ತಜ್ಞರನ್ನು ಸಜ್ಜುಗೊಳಿಸುವ ಹೊಸ ಬೆಳವಣಿಗೆಯೂ ಸದ್ದಿಲ್ಲದೆ ನಡೆಯುತ್ತಿದೆ.

ಇಷ್ಟಾದರೂ ‘ಭಾರತೀಯರು ಎಸ್ತೆಟಿಕ್ ಸೈನ್ಸ್‌ನಂತಹ ಸೂಕ್ಷ್ಮ ಮತ್ತು ಸಂಕೀರ್ಣ ವಿಷಯವನ್ನು ನಿಭಾಯಿಸುವಷ್ಟು ಪರಿಣತರಲ್ಲ’ ಎಂಬ ಪೂರ್ವಗ್ರಹದ ನೋಟ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇನ್ನೂ ಇದೆ.

ಇಂತಹ ಕೀಳು ಭಾವನೆಯನ್ನು ಹುಟ್ಟುಹಾಕಿದವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆಯನ್ನು ಮಾಡುವ ಮೂಲಕ ಎಸ್ತೆಟಿಕ್ ಸೈನ್ಸ್ ಕ್ಷೇತ್ರವನ್ನು ನಿಬ್ಬೆರಗಾಗಿಸಿದ್ದಾರೆ ನಗರದ ಕಾಸ್ಮೆಟಿಕ್ ಡರ್ಮೆಟಾಲಜಿಸ್ಟ್ ಒಬ್ಬರು.
ಲ್ಯಾವೆಲ್ಲೆ ರಸ್ತೆಯಲ್ಲಿರುವ  ‘ಕಾಸ್ಮೊಡರ್ಮ ಸ್ಕಿನ್ ಅಂಡ್ ಹೇರ್ ಕ್ಲಿನಿಕ್’ನ ಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ.ಚೈತ್ರಾ ಆನಂದ್ ಅವರು ಇಂತಹುದೊಂದು ಅಪರೂಪದ ಸಾಧನೆ ಮಾಡಿದ್ದಾರೆ.

ಎಸ್ತೆಟಿಕ್ ಸಿನಿಮಾ- ಜಾಗತಿಕ ಪ್ರಶಸ್ತಿ
ಸಿನಿಮಾ, ಫ್ಯಾಷನ್ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದವರಿಗೆ ಕಾನ್ ಚಿತ್ರೋತ್ಸವದ ವೇದಿಕೆ ಅಂತಿಮ ನಿಲ್ದಾಣ. ತಮಗೆ ಅಲ್ಲೊಂದು ಪುರಸ್ಕಾರ, ಗುರುತಿಸುವಿಕೆ ದಕ್ಕಿದರೆ ಧನ್ಯೋಸ್ಮಿ ಅನ್ನುವಂತಹ ಭಾವ. ಇದೀಗ ಅದೇ ಕಾನ್‌ನಲ್ಲಿ ‘ಎಸ್ತೆಟಿಕ್ ಫಿಲ್ಮ್ ಫೆಸ್ಟಿವಲ್’ ಕೂಡ ಶುರುವಾಗಿದೆ. ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ ಅತಿ ಅಪರೂಪದ ಪ್ರಕರಣಗಳನ್ನು ಸಾಕ್ಷ್ಯಚಿತ್ರಗಳಾಗಿಸಿ ಈ ವೇದಿಕೆಯಲ್ಲಿ ಪ್ರದರ್ಶಿಸುವ ಅವಕಾಶ ಎಸ್ತೆಟಿಕ್ ಕ್ಷೇತ್ರದ ಪರಿಣತರಿಗೆ ಈಗ ಲಭಿಸಿದೆ.

ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಡಾ.ಚೈತ್ರಾ ತಮ್ಮ ‘ಕಾಸ್ಮೊಡರ್ಮ’ ಕ್ಲಿನಿಕ್‌ನಲ್ಲಿ ಕೈಗೊಂಡ ಲೇಸರ್ ಚಿಕಿತ್ಸೆಯೊಂದನ್ನು ಸಾಕ್ಷ್ಯಚಿತ್ರವಾಗಿಸಿ ಪ್ರದರ್ಶಿಸಿದರು. ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮುಖ ವಿರೂಪಗೊಂಡ, ಜೆ.ಪಿ.ನಗರದ ಉಮಾಶಂಕರ್ ಎಂಬ ಅರ್ಚಕರೊಬ್ಬರನ್ನು ಲೇಸರ್ ಚಿಕಿತ್ಸೆಯ ಮೂಲಕ ಮತ್ತೆ ಸಹಜ ಸ್ಥಿತಿಗೆ ತಂದ ಪ್ರಕರಣವನ್ನೇ ಸಾಕ್ಷ್ಯಚಿತ್ರವಾಗಿಸಿದ್ದರು ಡಾ.ಚೈತ್ರಾ.

‘ಏಷ್ಯಾ ಖಂಡದಿಂದ ವೈದ್ಯೆಯೊಬ್ಬಳು ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು. ನಾನೇ ಕೈಗೊಂಡ ಕೇಸ್ ಹಿಸ್ಟರಿಯನ್ನು ಚಿತ್ರಕತೆಯಾಗಿಸಿ ಸಿನೆಮಾಟೊಗ್ರಫಿಯ ಚೌಕಟ್ಟಿಗೆ ತಂದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಿರುವುದು ಒಂದು ಹೆಮ್ಮೆಯಾದರೆ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವುದು ಮತ್ತೊಂದು ಹೆಮ್ಮೆ’ ಎನ್ನುತ್ತಾರೆ ಡಾ.ಚೈತ್ರಾ.

‘‘ರಸ್ತೆ ಅಪಘಾತದಲ್ಲಿ ಉಮಾಶಂಕರ್ ಗುರುತುಹಿಡಿಯಲಾರದ ಸ್ಥಿತಿ ತಲುಪಿದ್ದರು. ನಮ್ಮ ಕ್ಲಿನಿಕ್‌ಗೆ ಬಂದು ಪ್ಲಾಸ್ಟಿಕ್ ಸರ್ಜರಿ ಬಗ್ಗೆ ವಿಚಾರಿಸಿದಾಗ, ಪ್ಲಾಸ್ಟಿಕ್ ಸರ್ಜರಿಯಲ್ಲಿ ಕಲೆ ಉಳಿಯುತ್ತದೆ. ಆದರೆ ಲೇಸರ್ ಚಿಕಿತ್ಸೆಯಲ್ಲಿ ಸಣ್ಣ ಗುರುತೂ ಉಳಿಯುವುದಿಲ್ಲ ಎಂದು ಹೇಳಿದೆ. ಲೇಸರ್ ಚಿಕಿತ್ಸೆಯಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂಬ ತಪ್ಪು ಕಲ್ಪನೆ ಎಲ್ಲರಂತೆ ಅವರಿಗೂ ಇತ್ತು. ಅವರಲ್ಲಿ ಆತ್ಮವಿಶ್ವಾಸ ತುಂಬಿದ್ದಲ್ಲದೆ ಅವರ ಮನೆಮಂದಿಗೂ ಚಿಕಿತ್ಸೆಯ ಬಗ್ಗೆ ಸವಿವರವಾಗಿ ತಿಳಿಸಿದ ಮೇಲೆ ಮುಂದುವರಿದೆವು.

ಇದು ನಾನು ಕೈಗೊಂಡ ಅಪರೂಪದ ಮತ್ತು ಸವಾಲಿನ ಪ್ರಕರಣವಾದ್ದರಿಂದ ಇದನ್ನು ಚಿತ್ರೀಕರಿಸಲು ನಿರ್ಧರಿಸಿದೆ. ನಮ್ಮಲ್ಲೇ ಕೆಲಸ ಮಾಡುವ ಡಾ.ರಾಸ್ಯಾ ಒಟ್ಟು ಪ್ರಕ್ರಿಯೆಯಲ್ಲಿ ನನ್ನ ಜತೆಗೂಡಿದರು. ಅಭಿನವ್ ಕಮಲ್ ಹಾಗೂ ಜ್ಯೋತಿರಾಮ್ ಬರ್ಮನ್ ನಿರ್ದೇಶನದ ಜವಾಬ್ದಾರಿ ಹೊತ್ತರು. ಕಾಸ್ಮೊಡರ್ಮ ಮತ್ತು ಟೆನ್ ಮೋಶನ್ ಆರ್ಟ್ಸ್ ಸಹಯೋಗದಲ್ಲಿ ಸಾಕ್ಷ್ಯಚಿತ್ರ ಸಿದ್ಧವಾಯಿತು. ‘ಫ್ರಾಕ್ಷನಲ್ ಲೇಸರ್ಸ್‌ ರಿಸರ್ಫೇಸಿಂಗ್ ಟು ರಿಮಾಡೆಲ್ ಆ್ಯಕ್ಸಿಡೆಂಡ್ ಸ್ಕಾರ್ಸ್‌ ಇನ್ ಕಾಸ್ಮೆಟಿಕ್ ಮೆಡಿಸಿನ್’ ಶೀರ್ಷಿಕೆಯಲ್ಲಿ ಪ್ರದರ್ಶನಗೊಂಡಿತು’’ ಎಂದು ತಮ್ಮ ಪಯಣವನ್ನು ವಿವರಿಸುತ್ತಾರೆ ಅವರು.

ಒಂಬತ್ತು ಹಂತಗಳಲ್ಲಿ ನಡೆದ ಈ ಚಿಕಿತ್ಸೆಗೆ 65 ಸಾವಿರ ರೂಪಾಯಿ ವೆಚ್ಚ ತಗುಲಿತ್ತು. ಆದರೆ ಆರ್ಥಿಕವಾಗಿ ತೊಂದರೆ ಎದುರಿಸುತ್ತಿದ್ದ ಉಮಾಶಂಕರ್ ಅವರು ಅಲ್ಪ ಮೊತ್ತವನ್ನಷ್ಟೇ ಪಾವತಿಸಲು ಸಾಧ್ಯವಾದದ್ದು. ಆಗ ನಮಗೂ ಈ ಸ್ಪರ್ಧೆಯ ಅರಿವಿರಲಿಲ್ಲ. ಈ ಚಿಕಿತ್ಸೆಯ ನಂತರ ಉಮಾಶಂಕರ್ ಮತ್ತೆ ಅದೇ ದೇವಸ್ಥಾನದಲ್ಲಿ ಅರ್ಚಕರಾಗಿ ಮುಂದುವರಿದಿರುವುದು ಈ ಪ್ರಶಸ್ತಿಗಿಂತಲೂ ದೊಡ್ಡ ತೃಪ್ತಿ ನೀಡಿದೆ ಎನ್ನುತ್ತಾರೆ ಡಾ.ಚೈತ್ರಾ.

ಆಯ್ಕೆ ಸಮಿತಿಯ ಅಚ್ಚರಿ
ಭಾರತದಲ್ಲಿ ಎಸ್ತೆಟಿಕ್ ಸೈನ್ಸ್‌ನಲ್ಲಿ ಪಳಗಿದ ವೈದ್ಯರಿಲ್ಲ ಎಂದು ಅಸಡ್ಡೆಯ ಮಾತನಾಡುತ್ತಿದ್ದ ಈ ಚಿತ್ರೋತ್ಸವದ ಜೂರಿಗಳು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ತಕ್ಷಣ ಡಾ.ಚೈತ್ರಾ ಅವರಿಗೆ ಕರೆ ಮಾಡಿ  ಅಭಿನಂದಿಸಿದ್ದಲ್ಲದೆ ತಮ್ಮಲ್ಲಿ ಭಾರತೀಯರ ಬಗ್ಗೆ ಇದ್ದ ತಪ್ಪು ಭಾವನೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡರಂತೆ.

‘ಈ ಪ್ರಶಸ್ತಿ ಎಸ್ತೆಟಿಕ್ ಸೈನ್ಸ್ ಕ್ಷೇತ್ರದಲ್ಲಿ ದುಡಿಯುತ್ತಿರುವ ವೈದ್ಯರಿಗೆ, ಪರಿಣತರಿಗೆ ಸಂದ ಗೌರವ. 20 ಸಾಕ್ಷ್ಯಚಿತ್ರಗಳಲ್ಲಿ ಅಗ್ರಸ್ಥಾನದಲ್ಲಿ ನಮ್ಮ ನೈಜಕತೆ ಗೆದ್ದಿರುವುದು ನಿಜಕ್ಕೂ ಸಂತಸ ತಂದಿದೆ. ಇದಾದ ಬಳಿಕ ಅಂತರರಾಷ್ಟ್ರೀಯ ಮಟ್ಟದಿಂದ ಕರೆಗಳು, ಸಂದೇಶಗಳು ಬರುತ್ತಲೇ ಇವೆ’ ಎಂದು ಚೈತ್ರಾ ಹೇಳುತ್ತಾರೆ.
ಡಾ.ಚೈತ್ರಾ ಸಂಪರ್ಕಕ್ಕೆ: 99000 13538/ info@kosmoderma.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT