ADVERTISEMENT

‘ಕೃಷಿ ಅಂಕುರ’

ಹೇಮಾ ವೆಂಕಟ್
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST
‘ಕೃಷಿ ಅಂಕುರ’
‘ಕೃಷಿ ಅಂಕುರ’   

‘ರೈತನೇ ದೇಶದ ಬೆನ್ನೆಲುಬು’ ಎಂಬ ನುಡಿ ಅರ್ಥ ಕಳೆದುಕೊಂಡ ಈ ದಿನಗಳಲ್ಲಿ ಮತ್ತೆ ರೈತರ ಮಕ್ಕಳು ಕೃಷಿಯೆಡೆಗೆ ಮುಖಮಾಡುವುದು ಕಲ್ಪನಾತೀತ. ಗ್ರಾಮೀಣ ಪ್ರದೇಶದ ಹೆಚ್ಚು ಓದಿದ ರೈತಮಕ್ಕಳು ನಗರಕ್ಕೆ ಬಂದು ಉದ್ಯೋಗಕ್ಕೆ ಸೇರಿದರೆ, ಹೆಚ್ಚು ಓದದವರೂ ನಗರಕ್ಕೆ ಬಂದು ಚಿಕ್ಕಪುಟ್ಟ ಕೆಲಸಗಳಲ್ಲಿ ಬದುಕು ಕಂಡುಕೊಳ್ಳುತ್ತಿದ್ದಾರೆ. ಇನ್ನು ಮಹಾನಗರದ ಸುತ್ತಮುತ್ತಲಿನ ಯುವಕರಂತೂ ಕೃಷಿ ಎಂದರೆ ಮಾರುದೂರ ಓಡುತ್ತಾರೆ.

ಆದರೆ, ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಪ್ರೌಢಶಾಲಾ ಮಕ್ಕಳಲ್ಲಿ ಕೃಷಿ ಜ್ಞಾನವನ್ನು ತುಂಬಲು ಪ್ರೇರಣೆ ನೀಡುತ್ತಿದೆ. ಕಳೆದ ಮೂರು ವರ್ಷಗಳಿಂದ ನಗರದ ಸುತ್ತಲಿನ ಒಂದೊಂದು ಶಾಲೆಯನ್ನು ದತ್ತು ಸ್ವೀಕರಿಸಿ ಅವರಿಗೆ ಸುಧಾರಿತ ಕೃಷಿ ವಿಧಾನದ ಬಗ್ಗೆ ಪಾಠ ಮಾಡುತ್ತಿದೆ. ಪ್ರತಿ ಬುಧವಾರ ಮಧ್ಯಾಹ್ನ 2ರಿಂದ 3ರ ಅವಧಿಯಲ್ಲಿ ತಜ್ಞರು ಕೃಷಿ ಪಾಠ ಮಾಡುತ್ತಾರೆ. ಶಾಲಾ ಆವರಣದಲ್ಲೇ ಸಸಿ ನೆಟ್ಟು ಪ್ರಾಯೋಗಿಕ ತರಗತಿಗಳನ್ನು ನಡೆಸುತ್ತಿದ್ದಾರೆ. ವರ್ಷದ ಕೊನೆಗೆ ಪರೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗುತ್ತಿದೆ. ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಕವಾಗಿ ಬಹುಮಾನವನ್ನೂ ನೀಡುತ್ತಿದೆ.

ಕಳೆದ ವರ್ಷ ಸೊಂಡೆಕೊಪ್ಪದ ಶ್ರೀ ಚೆನ್ನಕೇಶವ ಸ್ವಾಮಿ ಪ್ರೌಢಶಾಲೆಯಲ್ಲಿ ಕೃಷಿ ಅಂಕುರ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಈ ವರ್ಷ ಬೆಂಗಳೂರು ಪೂರ್ವ ತಾಲೂಕಿನ ಜ್ಯೋತಿಪುರದ ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ 95 ಮಕ್ಕಳಿಗೆ ಕಳೆದ ಜೂನ್‌ನಿಂದ ನವೆಂಬರ್‌ವರೆಗೆ ಒಟ್ಟು 18 ತರಗತಿಗಳನ್ನು ನಡೆಸಲಾಗಿದೆ. ಕೊನೆಯಲ್ಲಿ ಪರೀಕ್ಷೆ ನಡೆಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೌರಶಕ್ತಿ ಲ್ಯಾಟಿನ್‌ ಬಹುಮಾನವಾಗಿ ನೀಡಿದ್ದಾರೆ.



ತರಗತಿಯಲ್ಲಿ ಮಣ್ಣಿನ ಪರೀಕ್ಷೆ ಮಾಡುವುದು, ಮಣ್ಣಿನ ಆರೋಗ್ಯ ರಕ್ಷಣೆ, ಸಾವಯವ ಕೃಷಿ, ರಾಸಾಯನಿಕ ಗೊಬ್ಬರಗಳು, ನೀರಾವರಿ ವಿಧಾನಗಳು, ಏಕದಳ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳ ಬೇಸಾಯ ಕ್ರಮ, ಕೀಟ ಮತ್ತು ರೋಗಗಳ ಮಾಹಿತಿ, ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗ, ನಿವಾರಣಾ ಕ್ರಮಗಳು, ನೀರಿನ ಸಂರಕ್ಷಣೆ, ಮಣ್ಣಿನ ಸವಕಳಿ, ಹನಿ ನೀರಾವರಿ ಪದ್ಧತಿ, ಇಂಗುಗುಂಡಿಗಳು, ಸೌರಶಕ್ತಿ ಇಂಧನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಇದರ ಜೊತೆಗೆ ಕೃಷಿಯ ಉಪ ಕಸುಬುಗಳಾದ ಹೈನುಗಾರಿಕೆ, ಹಸುಗಳ ಕೃತಕ ಗರ್ಭಧಾರಣೆ, ಹಸುಗಳಿಗೆ ಬರುವ ಕಾಲುಬಾಯಿ ರೋಗ, ಚಪ್ಪೆ ರೋಗ, ಅವುಗಳ ನಿಯಂತ್ರಣ, ಕೋಳಿ, ಹಂದಿ, ಮೊಲ ಸಾಕಾಣಿಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ಮಕ್ಕಳು ಮುಂದೆ ಕೃಷಿಯಲ್ಲಿ ತೊಡಗಬಹುದು. ತನ್ನ ಪೋಷಕರಿಗೆ ಮಾರ್ಗದರ್ಶನ ನೀಡಬಹುದು ಎಂಬುದು ಸಂಸ್ಥೆಯ ಕಾಳಜಿ.

‘ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಮುಖ್ಯೋಪಾಧ್ಯಾಯರೊಂದಿಗೆ ಚರ್ಚಿಸಿ ವಿಷಯವನ್ನು ಆರಿಸಲಾಗುತ್ತದೆ. ಕೃಷಿ, ತೋಟಗಾರಿಕೆ, ವಿವಿಗಳಲ್ಲಿ ಸೇವಾನಿರತರು ಮತ್ತು ನಿವೃತ್ತ ತಜ್ಞರು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕೃಷಿ ಮಾಹಿತಿ ನೀಡಿರುತ್ತಾರೆ. ತರಕಾರಿ, ಹೂ, ತೆಂಗು, ಬಾಳೆ ಮುಂತಾದ ಬೆಳೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ’ ಎನ್ನುತ್ತಾರೆ, ಸಂಸ್ಥೆಯ ಸಹ ಅಧ್ಯಕ್ಷ ಚನ್ನಬಸವಯ್ಯ.



 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.