ನಿಲ್ದಾಣದಲ್ಲಿ ನಿಂತ ಬಸ್‌ನ ಬಾಗಿಲು ತೆರೆದುಕೊಳ್ಳುವುದಕ್ಕೂ ಮುನ್ನ ಪಕ್ಕದ ಅಂಗಡಿಯಿಂದ ಕಾಫಿ ಬೀಜ ಪುಡಿಯಾಗುತ್ತಿರುವ ಸುವಾಸನೆಯನ್ನು ಹತ್ತಾರು ಪ್ರಯಾಣಿಕರು ಆಘ್ರಾಣಿಸಿದ್ದೇಕೆ? ದರ್ಶಿನಿಯಲ್ಲಿ ಕುದಿಯುತ್ತಿರುವ ಕಾಫಿ ಹೆಜ್ಜೆ ಮುಂದೊತ್ತದಂತೆ ತಡೆದದ್ದು ಹೇಗೆ? ಒಳಮನೆಯಲ್ಲಿ ಮೊಟ್ಟೆ ಆಮ್ಲೆಟ್ ಹೆಂಚಿನಲ್ಲಿ ಎಣ್ಣೆ ಪಸೆ ಬಿಟ್ಟುಕೊಂಡು ತಳಬಿಟ್ಟುಕೊಳ್ಳುತ್ತಿದ್ದರೆ ಬಾಯೆಲ್ಲಾ ಜಿಹ್ವಾರಸ ಝಿಲ್ಲನೆ ಚಿಮ್ಮಿಕೊಂಡ ಬಗೆಯೇ! ನೆರೆಮನೆಯ ಕುಂಡದಲ್ಲಿ ಬಿರಿಯುತ್ತಿರುವ ದುಂಡು ಮಲ್ಲಿಗೆಯ ಗಂಧಕ್ಕೆ ಸರಿರಾತ್ರಿಯಲ್ಲಿ ನಮ್ಮ ಮನೆಯ ಕದ ತೆರೆದುಕೊಟ್ಟವರು ಯಾರು? ಬೆಳ್ತಿಗೆ ಅಕ್ಕಿಯ ತೆಳುವಾದ ಹಿಟ್ಟಿನಿಂದ ಮಾಡುವ ನೀರುದೋಸೆ ಬೇಯುವಾಗ ಹೊಮ್ಮುವ ಪರಿಮಳ ಯಾರನ್ನಾದರೂ ‘ಟೆಂಪ್ಟ್’ ಮಾಡದೇ ಇದ್ದೀತೆ?
ಸುವಾಸನೆಯ ಸಾಮರ್ಥ್ಯವೇ ಹೀಗೆ. ಒಂದೊಂದು ‘ಅರೋಮಾ’ಗಳು ನಮ್ಮಲ್ಲಿ ಹೇಳದೆ ಕೇಳದೆಯೇ ನಮ್ಮನ್ನು ನಖಶಿಖಾಂತ ಆವರಿಸಿಕೊಂಡ ಬಗೆಗೆ ನಾವೇ ಬೆಚ್ಚುತ್ತೇವೆ, ಮೆಚ್ಚುತ್ತೇವೆ. ನಮ್ಮ ನಾಲಿಗೆ ರುಚಿಯನ್ನು ಆಸ್ವಾದಿಸುವುದಕ್ಕೂ ಮೊದಲೇ ಇಂದ್ರಿಯಗಳನ್ನು ಜಾಗೃತಗೊಳಿಸುವುದು ನಮ್ಮ ಆಘ್ರಾಣಿಸುವ ಶಕ್ತಿ ಅರ್ಥಾತ್ ಮೂಗು.
ಇಂದು, (ಮಾ.21) ವಿಶ್ವ ಸುಗಂಧ ದಿನ (ಫ್ರಾಗ್ರೆನ್ಸ್ ಡೇ). ಸುವಾಸನೆಗಳನ್ನು ಆಘ್ರಾಣಿಸಲು ಒಂದು ನೆಪ.
ಮೊದಲ ಮಳೆಗೆ ಮಣ್ಣುಬಿಟ್ಟುಕೊಳ್ಳುವ ಘಮಲಿನ ಸುಖಕ್ಕೆ ಇನ್ಯಾವುದು ಸಾಟಿ? ಹೆಜ್ಜೆಗೊಂದು ಸುವಾಸನೆಗೆ ನಮ್ಮ ಮೂಗು ನಮ್ಮನ್ನು ಸಾಕ್ಷಿಯಾಗಿಸುತ್ತದೆ. ಹಾಗೆ ನೋಡಿದರೆ ಈ ಸುವಾಸನೆ, ಸುಗಂಧದ ವಸ್ತುಗಳ ‘ಇತಿಹಾಸ’ದ ಜಾಡು ಋಗ್ವೇದ, ಯಜುರ್ವೇದದಿಂದಲೂ ಇದೆ. ಆದರೆ, ಪರ್ಫ್ಯೂಮ್ ಅನ್ನುವ ಪದ ಬಂದಿದ್ದು ಫ್ರಾನ್ಸ್‌ನಿಂದ.
ಅರೋಮಾ ಎಂಬುದು ಈಗ ಜೀವನಶೈಲಿ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ/ಚಿಕಿತ್ಸೆಗಳ ಮಾರುಕಟ್ಟೆಯ ಮೂಲಮಂತ್ರ. ಸುಗಂಧದ್ರವ್ಯ (ಪರ್ಫ್ಯೂಮ್) ಉತ್ಪಾದನಾ ಕ್ಷೇತ್ರವೂ ಈಗ ಬೃಹತ್ತಾಗಿ ಬೆಳೆದಿದೆ. ಕೇವಲ ಸುಗಂಧಕ್ಕಾಗಿ ಬಳಸುವ ಹರ್ಬಲ್/ಸಾವಯವ ಲೋಷನ್‌ಗಳ ಬೆಲೆ ಸಾವಿರ ರೂಪಾಯಿಯ ಆಸುಪಾಸಿನಲ್ಲಿದೆ. ಒಂದು ಬಿಂದುವಿನಷ್ಟು ತೆಗೆದುಕೊಂಡು ಮುಂಗೈಗೋ, ಕಿವಿಯ ಹಿಂಬದಿಗೋ ಸವರಿಕೊಂಡರೆ ಪ್ರತ್ಯೇಕವಾಗಿ ಸುಗಂಧದ್ರವ್ಯ ಬಳಸುವ ಅಗತ್ಯವೇ ಇರುವುದಿಲ್ಲ.
ಒಳಾಂಗಣ ವಿನ್ಯಾಸಕ್ಕೆ ಲಗ್ಗೆ
ಮನೆ/ಕಚೇರಿ/ ಹೋಟೆಲ್‌ಗಳ ಒಳಾಂಗಣವೆಂದರೆ ಸುಂದರವಾದ ನೆಲ, ನೆಲಹಾಸು, ವಿಶಾಲ ಕಿಟಕಿ ಮತ್ತು ಅಂದದ ಪರದೆ, ಕಲಾಕೃತಿಗಳು, ದೀಪಾಲಂಕಾರ ಎಂಬ ಸಿದ್ಧಮಾದರಿಯ ಚೌಕಟ್ಟು ಮೀರಿ ಈಗ ಸುವಾಸಿತ ಸಾಮಗ್ರಿಗಳಿಂದ ಅಲಂಕರಿಸುವುದು ಎಂಬ ಟ್ರೆಂಡ್ ಚಾಲ್ತಿಯಲ್ಲಿದೆ. ತಾರಾ ಹೋಟೆಲ್‌ನೊಳ ಪ್ರವೇಶಿಸುತ್ತಿದ್ದಂತೆ ಯಾವುದೋ ಒಂದು ಸುವಾಸನೆ ನಮ್ಮನ್ನು ಆಕ್ರಮಿಸಿಕೊಳ್ಳುತ್ತದೆ.
ಸರಳವಾಗಿ ವಿನ್ಯಾಸಗೊಂಡಿರುವ ಕಾರ್ಪೊರೇಟ್ ಕಚೇರಿಯ ಒಂದು ಮೂಲೆಯಲ್ಲಿ ಅಥವಾ ಮುಖ್ಯಸ್ಥರ ಮೇಜಿನಲ್ಲಿ ನಾಲ್ಕಾರು ಕಡ್ಡಿಗಳನ್ನು ಹೊತ್ತ ಸಣ್ಣದೊಂದು ಬಾಕ್ಸ್ ಇರುತ್ತದೆ. ತಿಂಗಳುಗಟ್ಟಲೆ ಆ ಪರಿಸರವನ್ನು ತಾಜಾತನ ಮತ್ತು ಸುವಾಸನೆಯಿಂದ ಆಪ್ಯಾಯಮಾನವಾಗಿಡುವ ಕಡ್ಡಿಗಳವು!
ಮೊದಲ ರಾತ್ರಿಗೆ ಮಂಚವನ್ನು ಹೂಗಳಿಂದ ಅಲಂಕರಿಸುವ ಜರೂರತ್ತು ಈಗಿಲ್ಲ. ಮದುಮಕ್ಕಳ ತಲೆದಿಂಬಿಗೆ ಸುವಾಸಿತ ಕವರ್ ಹಾಕಿಬಿಟ್ಟರೆ ಸಾಕು. ಇಲ್ಲವೇ ತಲೆ ಭಾಗದಲ್ಲಿ ಅರೋಮಾಟಿಕ್ ಕಡ್ಡಿಗಳನ್ನು ಇರಿಸಿದರೂ ಆಯಿತು. ಕೋಣೆಗೆ ವಿದ್ಯುದ್ದೀಪದ ಬೆಳಕಿಗಿಂತ ಕೆಲವೇ ಗಂಟೆ ಬೆಳಗಿ ಸುಮ್ಮನಾಗುವ ಮೋಂಬತ್ತಿಯೇ ಸಾಕು ಎನ್ನುವುದಾದರೆ ಸುವಾಸಿತ ಮೋಂಬತ್ತಿಗಳೂ ಇವೆಯಲ್ಲ? ಆಪ್ತೇಷ್ಟರಿಗೆ ಉಡುಗೊರೆ ಕೊಡಬೇಕು ಎಂದರೂ ಸುವಾಸಿತ ಸಾಮಗ್ರಿಗಳ ಉಡುಗೊರೆ ಪೊಟ್ಟಣವೇ ಲಭ್ಯ!
ಹೀಗೆ, ಸುವಾಸನೆ ಎನ್ನುವುದು ಹತ್ತಾರು ಆಯಾಮಗಳಲ್ಲಿ, ಆಯ್ಕೆಗಳಲ್ಲಿ ವಿಸ್ತರಿಸಿಕೊಂಡಿರುವ ಪರಿಯಿದು.
ಪದ ಪಂಚ್
‘ಸುವಾಸನೆ’ಗೆ ವಿರುದ್ಧ ಪದ ‘ದುರ್ವಾಸನೆ’ ಎಂಬುದು ಬೆಂಗಳೂರಿನಲ್ಲಿ ಶೇ 90 ಮಂದಿಗೆ ಗೊತ್ತೇ ಇಲ್ಲವೇನೊ? ಘಮ್ ಅಂತ ವಾಸನೆ ಬರ್ತಾ ಇದೆ ಅಂತ ಯಾರಾದ್ರೂ ಹೇಳಿದ್ರೆ ಅದು ಸುವಾಸನೆ ಎಂದೂ, ಕೆಟ್ಟ ವಾಸನೆ ಅಂತ ಹೇಳಿದ್ರೆ ದುರ್ವಾಸನೆ ಎಂದೂ ಅರ್ಥ ಮಾಡಿಕೊಳ್ಳಬೇಕು! ಬಿಸಿ ತುಪ್ಪ, ಒಗ್ಗರಣೆ, ಮಲ್ಲಿಗೆ, ಶ್ರೀಗಂಧದೆಣ್ಣೆ ಕೂಡಾ ಅವರಿಗೆ ‘ವಾಸನೆ’ಯಿಂದಲೇ ಕೂಡಿರುತ್ತದೆ. ಇನ್ನು, ಪರಿಮಳ ಎಂಬ ಪದವನ್ನು ಕರಾವಳಿ ಭಾಗದವರು ಮಾತ್ರ ಬಳಸುತ್ತಾರೆ! ‘ವಾಸನೆ’ಗೆ ಅವರು ಪರಿಮಳ ಅಂತಾರೆ ಕಣ್ರಿ ಎಂಬ ಕುಹಕ ಉಚಿತ!
ಫ್ರಾಗ್ರೆನ್ಸ್ ಎಂದು ಸಾರ್ವತ್ರಿಕವಾಗಿ ಕರೆಯಲಾಗುವ ಸುಗಂಧಗಳ ಬಗೆ ಹಲವು. ಇದೊಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹತ್ತಾರು ಆಯಾಮಗಳೂ ದಕ್ಕಿವೆ. ಇಷ್ಟಕ್ಕೂ ಈ ಸುಗಂಧ/ ಸುಗಂಧದ್ರವ್ಯ/ ಸುವಾಸಿತ ಸಾಮಗ್ರಿಗಳ ಬಳಕೆ ಹುಟ್ಟಿಕೊಂಡದ್ದು ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆ ಕಾಡುವುದು ಸಹಜ.
ಅದಕ್ಕೆ ಉತ್ತರ ಸಿಗಬೇಕಾದರೆ ಫ್ರಾನ್ಸ್‌ನ ದೊರೆ ಕಿಂಗ್ ಲೂತರ್16 ಅವರನ್ನು ನೆನಪಿಸಿಕೊಳ್ಳಬೇಕು. ದಕ್ಷಿಣ ಫ್ರಾನ್ಸ್‌ನಲ್ಲಿ ಫ್ಯಾಕ್ಟರಿಗಳಲ್ಲಿ ಬಳಸುತ್ತಿದ್ದ ಚರ್ಮದ ಕೈಗವಸುಗಳ ದುರ್ವಾಸನೆಯನ್ನು ತಡೆಗಟ್ಟಲು ಗಿಡಮೂಲಿಕೆಗಳ ತೈಲವನ್ನು ತಯಾರಿಸಿ ಬಳಸಲಾರಂಭಿಸಿದ್ದೇ ಸುಗಂಧದ್ರವ್ಯಗಳ ಹುಟ್ಟಿಕೊಳ್ಳಲು ಕಾರಣವಾಯಿತು ಎನ್ನಲಾಗುತ್ತದೆ. ಈ ರಾಜನಿಗೆ ಸುಗಂಧಗಳ ಮೇಲೆ ಎಷ್ಟು ವ್ಯಾಮೋಹವಿತ್ತೆಂದರೆ ಅವನ ಸಭೆ–ಕಿಂಗ್ಸ್ ಕೋರ್ಟ್–ಗೆ ಪರ್ಫ್ಯೂಮ್ ಕೋರ್ಟ್ ಎಂಬ ಅನ್ವರ್ಥನಾಮ ಇಂದಿಗೂ ಉಳಿದಿದೆ.
ದೇಸಿ ಗಂಧ
ಸುಗಂಧಿತ/ಸುವಾಸಿತ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಇತ್ತೀಚಿಗೆ ‘ಐರಿಸ್ ಅರೋಮಾ’ ಸುದ್ದಿ ಮಾಡುತ್ತಿದೆ. ಸೈಕಲ್
ಬ್ರಾಂಡ್ ಅಗರಬತ್ತಿಗಳ ಮೂಲಕ ಮನೆಮಾತಾಗಿದ್ದ ಮೈಸೂರಿನ ಎನ್‌ಆರ್ ಗ್ರೂಪ್‌ನ ಮತ್ತೊಂದು ಉದ್ಯಮರಿಪ್ಪಲ್ ಫ್ರಾಗ್ರೆನ್ಸ್ ಪ್ರೈವೇಟ್ ಲಿಮಿಟೆಡ್‌ನ ಬ್ರಾಂಡ್ ‘ಐರಿಸ್’. ಲಂಡನ್‌ನ ಪ್ಲೈಮೋತ್ ಯುನಿವರ್ಸಿಟಿಯಲ್ಲಿ ಬಿಸಿನೆಸ್ ಅಂಡ್ ಪರ್ಫ್ಯೂಮರಿಯಲ್ಲಿ ಪದವಿ ಪಡೆದ ಕಿರಣ್ ರಂಗ ಅವರು ‘ರಿಪ್ಪಲ್’ನ ಬ್ರಾಂಡ್ ಐರಿಸ್‌ನ ಎಲ್ಲಾ 50 ಬಗೆಯ ಫ್ರಾಗ್ರೆನ್ಸ್ ಉತ್ಪನ್ನಗಳನ್ನು ಸಿದ್ಧಪಡಿಸಿದವರು.
‘ಫ್ರಾಗ್ರೆನ್ಸ್ ಅನ್ನೋದು ಪರ್ಫ್ಯೂಮ್‌ಗಿಂತ ಪೂರ್ತಿ ಭಿನ್ನ. ಸುವಾಸಿತ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ
ಮೀಸಲಾಗಿರುವ ‘ಐರಿಸ್ ಅರೋಮಾ ಬುಟಿಕ್’ ಬೆಂಗಳೂರಿನಲ್ಲಿ 3 ಕಡೆ ಇದ್ದು 80 ರಿಟೇಲ್ ಮಳಿಗೆಗಳಲ್ಲೂ ಐರಿಸ್ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಫ್ರಾಗ್ರೆನ್ಸ್ ಉತ್ಪನ್ನಗಳು ಜೀವನಶೈಲಿಯ ಭಾಗವಾಗಿವೆ. ಮುಖ್ಯವಾಗಿ ಒಳಾಂಗಣ ವಿನ್ಯಾಸದ ಅವಿಭಾಜ್ಯ ಅಂಗವಾಗಿ ಅದು ಬಳಕೆಯಾಗುತ್ತಿದೆ. ಆರೇಳು ವರ್ಷಗಳಿಂದ ಬೆಲೆಯೂ 10 ಪಟ್ಟು ಹೆಚ್ಚಿದೆ’ ಎಂದು ಮಾರುಕಟ್ಟೆಯ ಚಿತ್ರಣವನ್ನು ಅವರು ವಿವರಿಸುತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.