ADVERTISEMENT

‘ಪ್ಯೂರ್ ವೆಜಿಟೇರಿಯನ್’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ವೈವಿಧ್ಯಮಯ ಸಸ್ಯಾಹಾರ ಪದಾರ್ಥಗಳ ತಯಾರಿ ಕ್ರಮವನ್ನು ಪರಿಚಯಿಸುತ್ತಲೇ, ದಕ್ಷಿಣ ಭಾರತದ ಸಸ್ಯಾಹಾರಿ ಜೀವನ ಸಂಸ್ಕೃತಿ ಬೆಳೆದುಬಂದ ಬಗೆಯನ್ನೂ ದಾಖಲಿಸುವ ‘ಪ್ಯೂರ್ ವೆಜಿಟೇರಿಯನ್’ ಕೃತಿಯನ್ನು ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಟಿವಿಎಸ್ ಸಮೂಹದ ಸದಸ್ಯೆ ಪ್ರೇಮಾ ಶ್ರೀನಿವಾಸನ್ ಬರೆದ ಈ ಕೃತಿಯನ್ನು ಹೊರತಂದಿರುವ ವೆಸ್ಟ್‌ಲ್ಯಾಂಡ್ ಪ್ರಕಾಶಕರಾದ ಗೌತಮ್ ಪದ್ಮನಾಭನ್ ಬಿಡುಗಡೆ ಮಾಡಿದರು. ಪುಸ್ತಕದ ಪ್ರತಿ ಅಧ್ಯಾಯದಲ್ಲೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಆಹಾರ ಸಂಸ್ಕೃತಿ, ಸಂಪ್ರದಾಯ, ಅಡುಗೆ ಕ್ರಮಗಳನ್ನು ಸ್ಪಷ್ಟವಾಗಿ ಪರಿಚಯಿಸಲಾಗಿದೆ.

ಅಲ್ಲದೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ರೂಢಿಗಳು, ನಂಬಿಕೆಗಳು ಹೇಗೆ ಒಂದು ಜನಾಂಗದ, ಸಮುದಾಯದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಹಾಗೂ ಆಹಾರ ಸೇವಿಸುವ ಕ್ರಮದಲ್ಲಿ ಹಾಸುಹೊಕ್ಕಾಗಿವೆ ಎಂಬುದರತ್ತಲೂ ಪುಸ್ತಕ ಓದುಗರ ಗಮನ ಸೆಳೆಯುತ್ತದೆ.

ಒಂದು ದಶಕಕ್ಕೂ ಅಧಿಕ ಕಾಲದ ಸಂಶೋಧನೆ, ಅಧ್ಯಯನ ಮತ್ತು ಸಿದ್ಧತೆಯ ಫಲವೇ ಈ ‘ಪ್ಯೂರ್ ವೆಜಿಟೇರಿಯನ್’ ಕೃತಿ. ಇದು ಕೇವಲ ಆಹಾರ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ಸಂಗ್ರಹಿಸಿ ಮಾಹಿತಿ ದಾಟಿಸುವ ಪುಸ್ತಕವಾಗಿಯಷ್ಟೇ ಮುಖ್ಯವಾಗುವುದಿಲ್ಲ, ಬದಲಾಗಿ ಆಹಾರದ ವೈವಿಧ್ಯತೆಗಳ ಕುರಿತ ಜ್ಞಾನಾರ್ಜನೆ, ಅದರ ಸಂಸ್ಕೃತಿ, ಸಂಪ್ರದಾಯ ಹಾಗೂ ಆ ಆಹಾರ ಮೊದಲಿಗೆ ಸಿದ್ಧಗೊಂಡ ಬಗೆ ಮೊದಲಾದ ಅಂಶಗಳನ್ನೆಲ್ಲ ಕಟ್ಟಿಕೊಡುತ್ತದೆ ಎಂದು ಪ್ರೇಮಾ ಶ್ರೀನಿವಾಸನ್ ತಮ್ಮ ಕೃತಿ ಕುರಿತು ಹೇಳಿದರು.

‘ನನ್ನ ಅಜ್ಜಿಯನ್ನಂತೂ ಮರೆಯುವಂತೆಯೇ ಇಲ್ಲ. ಅಡುಗೆ ಮನೆ ವಿಚಾರಕ್ಕೆ ಬಂದಾಗ ಆಹಾರ ತಯಾರಿಕೆಯ ಪ್ರತಿ ಹಂತದಲ್ಲೂ ಸಣ್ಣ ವಿಚಾರಗಳಿಗೂ ಅದೆಷ್ಟು ಮಹತ್ವ ನೀಡಬೇಕು ಎಂಬುದನ್ನು ಕಲಿಸಿಕೊಟ್ಟವರು’ ಅಜ್ಜಿ ಎಂದು ನೆನಪಿಸಿಕೊಂಡರು ಪ್ರೇಮಾ ಶ್ರೀನಿವಾಸನ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.