ADVERTISEMENT

‘ಹೆದ್ದಾರಿ’ ಚೆಲುವೆ ಸಾಕ್ಷಿಯ ಪಥ್ಯ ಸತ್ಯ

ಸತೀಶ ಬೆಳ್ಳಕ್ಕಿ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ತಮಿಳುನಾಡಿನಲ್ಲಿ ಅರಳಿದ ಚೆಂಗುಲಾಬಿಯ ಕಂಪು ಈಗ ಕನ್ನಡ ನಾಡಿನಲ್ಲಿ ಪಸರಿಸುತ್ತಿದೆ. ಮೊದಲ ನೋಟದಲ್ಲೇ ಸೆಳೆವ ಕಂದು ಕಣ್ಣುಗಳು, ಬಳುಕುವ ಲತೆಯಂತಹ ದೇಹಸಿರಿಯ ಈ ಚೆಲುವೆ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಹೆಸರು ಸಾಕ್ಷಿ ಅಗರ್‌ವಾಲ್‌.

ಲೆಕ್ಕವಿಲ್ಲದಷ್ಟು ಶೋಗಳಿಗೆ ರಾ್ಯಂಪ್‌ವಾಕ್‌ ಮಾಡಿರುವ ಟಾಪ್‌ ಮಾಡೆಲ್‌ ಸಾಕ್ಷಿ ಅಗರ್‌ವಾಲ್‌ ಖ್ಯಾತ ಡಿಸೈನರ್‌ಗಳ ವಸ್ತ್ರವಿನ್ಯಾಸಕ್ಕೆ ಮೈಯೊಡ್ಡಿದವರು. ಹಾಗೆಯೇ ಜನಪ್ರಿಯ ವಿನ್ಯಾಸಕಾರರ ಶೋಗಳಿಗೆ ಶೋ ಸ್ಟಾಪರ್‌ ಆಗಿಯೂ ನಡು ಬಳುಕಿಸಿದವರು. ಈಗ ಕನ್ನಡದಲ್ಲಿ ಮೂಡಿಬರುತ್ತಿರುವ ‘ಹೆದ್ದಾರಿ’ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ‘ಚಂದನವನ’ಕ್ಕೆ ಕಾಲಿರಿಸಿದ್ದಾರೆ.

ಸಾಕ್ಷಿಗೂ ಮಾಡೆಲಿಂಗ್‌ ಕ್ಷೇತ್ರಕ್ಕೂ ಹಳೆಯ ನಂಟು. ಸಹಜವಾಗಿಯೇ ಮೊದಲಿನಿಂದಲೂ ಅವರಿಗೆ ಸೌಂದರ್ಯದ ಕಾಳಜಿ ಹೆಚ್ಚಾಗಿತ್ತು. ಅನುದಿನವೂ ಚೆಲುವಿನ ಬಗ್ಗೆ ಕಾಳಜಿ ತೋರುವ ಸಾಕ್ಷಿ ತಮ್ಮ ಸೌಂದರ್ಯದ ರಹಸ್ಯವನ್ನು ‘ಮೆಟ್ರೊ’ ಜತೆ ಹಂಚಿಕೊಂಡಿದ್ದಾರೆ.

ಸೂರ್ಯ ಮೂಡುವ ಮುನ್ನವೇ  ದಿನಚರಿ ಆರಂಭಿಸುವ ಸಾಕ್ಷಿ ಎದ್ದ ತಕ್ಷಣ ಹಾಸಿಗೆಯ ಮೇಲೆಯೇ ಕುಳಿತು ಮೈಯಲ್ಲಿನ ಆಲಸ್ಯವೆಲ್ಲವನ್ನು ಜಾಡಿಸುವಂತೆ ಮೈಮುರಿದು, ಬೆಳಗಿನ ಕುಳಿರ್ಗಾಳಿಗೆ ಮೈಯೊಡ್ಡಿ ಮನಸ್ಸು ಅರಳಿಸಿಕೊಳ್ಳುತ್ತಾರಂತೆ. ನಂತರ ಸುದೀರ್ಘಾವಧಿ ಸ್ನಾನ. ಆಮೇಲೆ ಕಸರತ್ತು ಮಾಡಲು ಅಣಿಯಾಗುತ್ತಾರೆ.

‘ನಾನು ಪ್ರತಿನಿತ್ಯ ಎರಡು ಗಂಟೆ ವ್ಯಾಯಾಮ ಮಾಡುತ್ತೇನೆ. ಬಾಲಿವುಡ್‌ ಏರೋಬಿಕ್ಸ್‌, ಕಿಕ್‌ ಬಾಕ್ಸಿಂಗ್‌ ಏರೋಬಿಕ್ಸ್‌ ಹಾಗೂ ಲ್ಯಾಟಿನ್‌ ಅಮೆರಿಕಾದಲ್ಲಿ ಪ್ರಚಲಿತದಲ್ಲಿರುವ ಜುಂಬಾ ಏರೋಬಿಕ್ಸ್‌ ಮಾಡುತ್ತಾ ದೇಹ ದಂಡಿಸುತ್ತೇನೆ. ಇದಾದ ನಂತರ ಒಂದು ಗಂಟೆ ಪವರ್‌ ಯೋಗ ಮಾಡುತ್ತೇನೆ. ಇವೆರಡನ್ನೂ ಅನುಕ್ರಮವಾಗಿ ನಡೆಸಿಕೊಂಡು ಹೋಗುತ್ತಿರುವುದರಿಂದ ನನ್ನ ದೇಹ ಚೆಂದವಾಗಿ ರೂಪುಗೊಂಡಿದೆ. ಉಳಿದಂತೆ ವಾರದಲ್ಲಿ ಕೆಲ ದಿನ ದೇಹದ ಅಗತ್ಯಕ್ಕೆ ಅನುಗುಣವಾಗಿ ಭಾರ ಎತ್ತುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ ಸಾಕ್ಷಿ.

ಕಸರತ್ತಿನ ಸಮಾಚಾರ ಆಯಿತು. ಚಿಮ್ಮುವ ದೇಹಕಾಂತಿಯ ರಹಸ್ಯವೇನು, ಆಹಾರ ಕ್ರಮವೇನು ಎಂದು ಪ್ರಶ್ನಿಸಿದರೆ, ಸಾಕ್ಷಿ ಉತ್ತರ ನೀಡುವುದು ಹೀಗೆ: ‘ನಾನು ದಿನಕ್ಕೆ ಆರು ಬಾರಿ ಊಟ ಮಾಡುತ್ತೇನೆ. ಅಂದರೆ, ಪ್ರತಿ ಎರಡು ಗಂಟೆಗೊಮ್ಮೆ ತಿನ್ನುವ ಕ್ರಮ ರೂಢಿಸಿಕೊಂಡಿದ್ದೇನೆ. ಬೆಳಗಿನ ವ್ಯಾಯಾಮಕ್ಕೂ ಮುನ್ನ ಮೂರು ಮೊಟ್ಟೆಗಳ ಬಿಳಿಯ ಭಾಗ ತಿನ್ನುತ್ತೇನೆ. ನಂತರ ಓಟ್ಸ್ ತಿಂದು ರಾಗಿ ಮಾಲ್ಟ್‌ ಕುಡಿಯುತ್ತೇನೆ. ಇವಿಷ್ಟು ತಿಂದರೆ ನನ್ನ ಬೆಳಗಿನ ಉಪಹಾರ ಮುಗಿಯಿತು. ಮಧ್ಯಾಹ್ನಕ್ಕೆ ಚಪಾತಿ, ಮೂಂಗ್ದಾಲ್‌ ಇರುತ್ತದೆ. ತಿಂಡಿ ಮತ್ತು ಊಟದ ನಡುವೆ ಹಣ್ಣು, ಹಣ್ಣಿನ ರಸ ಸೇವಿಸುವುದು ನನ್ನ ಅಭ್ಯಾಸ. ಸಂಜೆ ಬಿಡುವಿದ್ದರೆ ಮತ್ತೆ ವರ್ಕೌಟ್‌ ಮಾಡಿ ನಂತರ ಲಘು ಉಪಹಾರ ಸೇವಿಸುತ್ತೇನೆ.’

ಗ್ರೀನ್‌ ಟೀ ನನಗೆ ಅಚ್ಚುಮೆಚ್ಚು. ಗ್ರೀನ್‌ ಟೀ ಹೀರುತ್ತಾ ವಾಲ್‌ನಟ್ಸ್‌ ಮೆಲ್ಲುತ್ತೇನೆ. ಕೆಲವೊಮ್ಮೆ ಬ್ರೆಡ್‌ ಜಾಮ್‌ ರುಚಿ ನೋಡಿದ್ದೂ ಇದೆ. ರಾತ್ರಿ ಊಟಕ್ಕೆ ಸೂಪ್‌, ಗ್ರೀನ್‌ ಸಲಾಡ್‌, ಚಪಾತಿ ದಾಲ್‌ ಇರುತ್ತದೆ. ಊಟವಾದ ಮೇಲೆ ಒಂದು ಸೇಬು, ಅರ್ಧ ಪರಂಗಿ ಹಣ್ಣು ತಿಂದರೆ ನನ್ನ ಊಟ ಮುಗಿಯಿತು. ಒಂದು ವೇಳೆ ರಾತ್ರಿ ಏನಾದರೂ ಹಸಿವಾದರೆ ಹಣ್ಣಿನ ರಸ ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ’ ಎಂದು ತಮ್ಮ ನಿತ್ಯದ ಮೆನುವಿನ ಪಟ್ಟಿ ಹೇಳುವ ಸಾಕ್ಷಿ ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್ಸ್ ಇರುವ ಆಹಾರವನ್ನು ತ್ಯಜಿಸಿದವರು. ಕಡಿಮೆ ಕೊಬ್ಬಿನಂಶ ಇರುವ ಆಹಾರ ತಿನ್ನುವುದನ್ನು ರೂಢಿಸಿಕೊಂಡಿರುವುದೇ ಇವರ ಮೈಕಾಂತಿಯ ಗುಟ್ಟು’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.