ADVERTISEMENT

‘ಬ್ರಹ್ಮಾಸ್ತ್ರ’ದ ಬೆಡಗಿ ದೀಪಾ

ಗುರು ಪಿ.ಎಸ್‌
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ದೀಪಾ
ದೀಪಾ   

‘ನನಗ ಧಾರವಾಡ ಅಂದ್ರ ಭಾಳ ಪ್ರೀತಿ’ ಎಂದೇ ಮಾತಿಗೆ ಶುರುವಿಟ್ಟುಕೊಂಡರು ದೀಪಾ ಹಿರೇಮಠ. ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ದೀಪಾ, ಕನ್ನಡ ಕಿರುತೆರೆಯಲ್ಲಿ ಇಂದು ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜನವರಿ 22ರಿಂದ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಬ್ರಹ್ಮಾಸ್ತ್ರ’ ಧಾರಾವಾಹಿಯ ನಾಯಕಿಯಾಗಿ ಆಯ್ಕೆಯಾಗಿರುವುದು ಅವರ ಪ್ರತಿಭೆಗೆ ಸಂದ ಫಲ. ಧಾರಾವಾಹಿಯ ಪ್ರಚಾರ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ದೀಪಾ ಸಿಕ್ಕ ಚುಟುಕು ಸಮಯದಲ್ಲಿಯೇ 'ಮೆಟ್ರೊ'ದೊಂದಿಗೆ ಏನೆಲ್ಲಾ ಮಾತನಾಡಿದರು ಗೊತ್ತಾ?

ನಿಮಗೆ ಏನಿಷ್ಟ?

ಹುಬ್ಬಳ್ಳಿಯಲ್ಲಿ ಸಿಗೋ ಗೋಬಿ ಮಂಚೂರಿ
ನನಗೆ ತುಂಬಾ ಇಷ್ಟ.

ADVERTISEMENT

ನಿಮ್ಮಪ್ಪ, ಅಮ್ಮ, ವಿದ್ಯಾಭ್ಯಾಸ...

ಅಪ್ಪನ ಹೆಸರು ಜಗದೀಶ್ವರ ಹಿರೇಮಠ. ಧಾರವಾಡದ ಕರ್ನಾಟಕ ಹಾಲು ನಿಗಮದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ನಿರ್ಮಲಾ ಹಿರೇಮಠ ಗೃಹಿಣಿ. ನಾನು ಸದ್ಯ ಗದುಗಿನ ಹುಲಕೋಟಿಯಲ್ಲಿ ಕಾನೂನು ಪದವಿ ಓದುತ್ತಿದ್ದೇನೆ.

ಕಿರುತೆರೆಗೆ ಎಂಟ್ರಿ...

ನನಗೆ ಮೊದಲಿನಿಂದಲೂ ಪುನೀತ್‌ ರಾಜಕುಮಾರ್‌ ಎಂದರೆ ಇಷ್ಟ. ಅವರನ್ನು ನೋಡಬೇಕು, ಅವರೊಂದಿಗೆ ನಟಿಸಬೇಕು ಎನ್ನುವ ಹಂಬಲ ಇತ್ತು. ಹೀಗಾಗಿ, ಅಭಿನಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು. ನಾಗರತ್ನ ಹಡಗಲಿಯವರಿಂದ ಭರತನಾಟ್ಯ ಕಲಿತಿದ್ದೇನೆ. ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದೇನೆ.

ಉದಯ ವಾಹಿನಿಯಲ್ಲಿ ಪ್ರಸಾರವಾದ ‘ಮಹಾಸತಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದೆ. ಫೇಸ್‌ಬುಕ್‌ನಲ್ಲಿ ನನ್ನ ಫೋಟೊಗಳನ್ನು ನೋಡಿದ ದಿನೇಶ್‌ ಬಾಬು ಅವರು ‘ಇವತ್ತು’ ಚಲನಚಿತ್ರದಲ್ಲಿ ಎರಡನೇ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಝೀ ಕನ್ನಡದಲ್ಲಿ ಪ್ರಸಾರವಾದ ‘ವಾರಸ್ದಾರ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ.

‘ಬ್ರಹ್ಮಾಸ್ತ್ರ’ಕ್ಕೆ ಸಿದ್ಧತೆ...

ರವಿ ಗರಣಿಯವರು ‘ಬ್ರಹ್ಮಾಸ್ತ್ರ’ ಧಾರಾವಾಹಿಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ‘ಶಿವರಂಜಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ. ತೆಲುಗು ಮಾತನಾಡುವ ಹುಡುಗಿಯ ಪಾತ್ರ. ಇದಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ. ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಬೇರೆ ಯಾವುದೇ ಧಾರಾವಾಹಿಯನ್ನು ಸದ್ಯಕ್ಕೆ ಒಪ್ಪಿಕೊಂಡಿಲ್ಲ.

ಕಿರುತೆರೆಗೆ ಬರುವವರಿಗೆ ಏನು ಹೇಳಲು ಬಯಸುತ್ತೀರಿ ?

ಅಭಿನಯದಲ್ಲಿ ಆಸಕ್ತಿ ಇರಬೇಕು. ಇಲ್ಲಿಯೇ ನೆಲೆ ಕಂಡುಕೊಳ್ಳಬೇಕು ಎಂದರೆ ಕಠಿಣ ಪರಿಶ್ರಮ ಇರಲೇಬೇಕು. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತರೆ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.