ADVERTISEMENT

ಮನಸಿಗೆ ಬಲ ಕೊಡುವ ಮೃದು ಹಿತನುಡಿ ಬೇಕು

ಕೃಷ್ಣಿ ಶಿರೂರ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ಮನಸಿಗೆ ಬಲ ಕೊಡುವ ಮೃದು ಹಿತನುಡಿ ಬೇಕು
ಮನಸಿಗೆ ಬಲ ಕೊಡುವ ಮೃದು ಹಿತನುಡಿ ಬೇಕು   

ಕ್ಯಾನ್ಸರ್‌ ಇದೆ ಎಂಬುದು ಅರಿವಿಗೆ ಬಂದಾಗ ಮಾನಸಿಕವಾಗಿ ಕುಗ್ಗಿ ಹೋಗುವವರೇ ಹೆಚ್ಚು. ಎಷ್ಟೋ ರೋಗಿಗಳು ಕೊರಗಿನಲ್ಲೇ ಸಾವಿನ ಮನೆಯೆಡೆಗೆ ಸಾಗುತ್ತಾರೆ. ಆದರೆ ಆತ್ಮವಿಶ್ವಾಸ ಇದ್ದರೆ ಕ್ಯಾನ್ಸರ್‌ ಎಂಬ ಸಾವನ್ನೂ ಗೆಲ್ಲಬಹುದು. ಅದಕ್ಕಾಗಿ ಕ್ಯಾನ್ಸರ್‌ ರೋಗಿಗಳಿಗೆ ಆಪ್ತಸಮಾಲೋಚನೆ ಅತ್ಯಗತ್ಯ. ಕ್ಯಾನ್ಸರ್‌ ಬಂತು ಎನ್ನುವ ದುಗುಡದ ಜೊತೆಗೆ ಆರ್ಥಿಕ ಸಂಕಷ್ಟವೂ ಸೇರಿ ರೋಗಿ ಮಾನಸಿಕವಾಗಿ ಕುಗ್ಗುತ್ತಾನೆ. ಇಂಥ ಸಂದರ್ಭದಲ್ಲಿ ರೋಗಿಯ ಮನಸ್ಸಿಗೆ ಬಲ ನೀಡುವ ಆಪ್ತ ಹಿತನುಡಿಗಳು ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಲ್ಲದು.

ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಮೊದಲು ರೋಗಿಯ ಮನೋಬಲವನ್ನು ಬಲಪಡಿಸುವ ಕೆಲಸ ಮೊದಲಾಗಬೇಕಿದೆ. ಆದರೆ ಹೆಚ್ಚಿನ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳಲ್ಲಿ ರೋಗಕ್ಕೆ ಚಿಕಿತ್ಸೆ ಕೊಡಲೆಂದು ದೇಹಕ್ಕೆ ಚಿಕಿತ್ಸೆ ಕೊಡುತ್ತಾರೆಯೇ ಹೊರತು ಮನಸ್ಸಿಗೆ ಚಿಕಿತ್ಸೆ ನೀಡುವುದಿಲ್ಲ. ಅಗತ್ಯ ಪ್ರಮಾಣದ ಕಿಮೋಥೆರಪಿ, ರೇಡಿಯೇಶನ್‌ ಚಿಕಿತ್ಸೆ ನೀಡಲಾಗುತ್ತದೆ. ಅದರಿಂದ ಅಡ್ಡ ಪರಿಣಾಮಗಳು ಏನಾಗಲಿದೆ ಎಂಬುದನ್ನಷ್ಟೇ ವೈದ್ಯರು ಹೇಳುತ್ತಾರೆ.

ಆದರೆ ಕ್ಯಾನ್ಸರ್‌ ರೋಗಿ ಉಳಿದೆಲ್ಲ ರೋಗಿಗಳಿಗಿಂತ ಸೂಕ್ಷ್ಮ. ಏಕೆಂದರೆ ಚಿಕಿತ್ಸೆಯ ಅಡ್ಡಪರಿಣಾಮ. ಕ್ಯಾನ್ಸರ್‌ ಕೋಶಗಳನ್ನು ನಾಶಮಾಡಲು ನೀಡಲಾಗುವ ಒಂದೊಂದು ಕಿಮೋಥೆರಫಿ ರೋಗಿಯನ್ನು ನರಳುವಂತೆ ಮಾಡಿ ಇನ್ನಿಲ್ಲವೆಂಬಂಥ ಯಾತನೆಯನ್ನು ನೀಡಲಿದೆ. ಯಾಕಾದರೂ ಈ ರೋಗ ಬಂತಪ್ಪಾ. ಇದಕ್ಕಿಂತ ಸಾಯುವುದೇ ಉತ್ತಮ ಎಂಬ ಇಲ್ಲಸಲ್ಲದ ಯೋಚನೆಗಳೇ ತಲೆಯಲ್ಲಿ ತುಂಬಿಕೊಳ್ಳುತ್ತವೆ. ಕಿಮೋ ಇಂಜೆಕ್ಷನ್‌ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುವುದು ಇದಕ್ಕೆ ಕಾರಣ.

ADVERTISEMENT

ದೇಹವನ್ನೆಲ್ಲ ವ್ಯಾಪಿಸಿದ ಕಿಮೋ ನಂತರ ಕ್ಯಾನ್ಸರ್‌ ಕೋಶಗಳನ್ನಷ್ಟೇ ಅಲ್ಲ; ಒಳ್ಳೆಯ ಜೀವಕೋಶಗಳನ್ನೂ ನಾಶ ಮಾಡುತ್ತದೆ. ಅದರ ಪರಿಣಾಮವೇ ಅವರ್ಣನೀಯ ಯಾತನೆ.

ಕಿಮೋಥೆರಫಿಯ ಅಡ್ಡಪರಿಣಾಮದಿಂದ ಹೆಚ್ಚಿನವರಿಗೆ ಕೂದಲುದುರುವುದು ದೊಡ್ಡ ನೋವಿನ ಸಂಗತಿ. ತಮ್ಮ ಬೋಳು ತಲೆ, ರೆಪ್ಪೆ, ಹುಬ್ಬಿಲ್ಲದ ಕಣ್ಣುಗಳನ್ನು ನೋಡಿಕೊಳ್ಳುವುದು ಎಂಥವರಿಗೂ ಭಯ. ಎಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರೂ ಖಿನ್ನತೆಗೆ ಜಾರಿಹೋಗುವ ಮನವನ್ನು ಸಂತೈಸುವ ಹಿತನುಡಿಗಳು ಬೇಕು.

‘ಕ್ಯಾನ್ಸರ್‌ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಕ್ಯಾನ್ಸರ್‌ ವಿರುದ್ಧ ನಾನು ಗೆದ್ದೇ ಗೆಲ್ಲುವೆ, ನನ್ನ ಆತ್ಮವಿಶ್ವಾಸದ ಮುಂದೆ ಕ್ಯಾನ್ಸರ್‌ ಯಾವ ಲೆಕ್ಕ’ ಎಂಬ ಭಾವನೆಗಳು ರೋಗಿಯ ಮನದೊಳಗೆ ಸ್ವಯಂ ಮೂಡುವಂತಾಗುವ ಆಪ್ತ ಸಮಾಲೋಚನೆ ಬೇಕು. ಇಂಥ ಆತ್ಮವಿಶ್ವಾಸದ ಚೌಕಟ್ಟಿನೊಳಗೆ ಕ್ಯಾನ್ಸರ್‌ ರೋಗಿ ಒಮ್ಮೆ ಬಂದುಬಿಟ್ಟರೆ ಕ್ಯಾನ್ಸರ್‌ ವಿರುದ್ಧ ಗೆಲುವು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.