ADVERTISEMENT

ಪದ್ಮಾಸನದಿಂದ ಸೊಂಟಕ್ಕೆ ಹೊಸ ಹುರುಪು

ಗೋಪಾಲಕೃಷ್ಣ ದೇಲಂಪಾಡಿ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಪದ್ಮಾಸನದಿಂದ ಸೊಂಟಕ್ಕೆ ಹೊಸ ಹುರುಪು
ಪದ್ಮಾಸನದಿಂದ ಸೊಂಟಕ್ಕೆ ಹೊಸ ಹುರುಪು   

ಇತ್ತೀಚಿನ ವರ್ಷಗಳಲ್ಲಿ ನೆಲದ ಮೇಲೆ ಕುಳಿತುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಧುನಿಕ ಜೀವನಶೈಲಿಯಿಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮುಂದುವರಿದ ಸಮಾಜದಲ್ಲಿ ಸೌಕರ್ಯಗಳು ಹೆಚ್ಚಾಗುತ್ತಿವೆ. ಕಾಲದ ವೇಗದೊಂದಿಗೆ ನಡೆಯಲು ಸೌಕರ್ಯಗಳ ಅಗತ್ಯವೂ ಇದೆಯೆನ್ನಿ. ಆದರೆ, ಸೌಕರ್ಯಗಳಿಂದ ಕೆಲವೊಮ್ಮೆ ವ್ಯಾಯಾಮದ ಕೊರತೆಯಾಗುತ್ತದೆ. ಇದರಿಂದ ಕೈ ಕಾಲುಗಳ ಸುಸ್ಥಿತಿಯನ್ನು ಕಾಪಾಡಲು ಕಷ್ಟವಾಗುತ್ತದೆ.

ದೈಹಿಕ ಚಟುವಟಿಕೆಯ ಕೊರತೆ ಇರುವವರಿಗೆ ಆರೋಗ್ಯ ಕಾಪಾಡಲು ಯೋಗ ಸಹಕಾರಿ. ಅದರಲ್ಲೂ ಪದ್ಮಾಸನ ಅಭ್ಯಾಸ ಮಾಡಿದರೆ ನೆಲದಲ್ಲಿ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ಪದ್ಮಾಸನ ಅಭ್ಯಾಸ ಮಾಡುವುದರಿಂದ ಕಾಲಿನ ನರ, ಸೊಂಟ, ಮಂಡಿ ಇತ್ಯಾದಿ ಅಂಗಗಳಿಗೆ ಹೊಸ ಹುರುಪು ಬರುತ್ತದೆ.

ಪದ್ಮಾಸನ ಸುಖಕರವಾದ ಕುಳಿತುಕೊಳ್ಳುವ ಭಂಗಿಯಾಗಿದೆ. ಈ ಆಸನವನ್ನು ಪ್ರಾಥಮಿಕ ಶಾಲಾ ವಯಸ್ಸಿನಲ್ಲಿಯೇ ಕಲಿತರೆ ಒಳ್ಳೆಯದು. ವಯಸ್ಸಾದಂತೆ ಪದ್ಮಾಸನ ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಒಮ್ಮೆ ಪದ್ಮಾಸನ ಕೈವಶವಾದರೆ ಪದ್ಮಾಸನ ಮುಂದುವರೆದ ಆಸನಗಳನ್ನು ಅಭ್ಯಾಸ ಮಾಡಲು ಸುಲಭವಾಗುತ್ತದೆ.

ADVERTISEMENT

ಅಭ್ಯಾಸ ಕ್ರಮ: ನೆಲದ ಮೇಲೆ ಹಾಸಿದ ಜಮಖಾನದಲ್ಲಿ ನೇರವಾಗಿ ಕುಳಿತು, ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಬೇಕು. ಈ ಸಂದರ್ಭದಲ್ಲಿ ಬೆನ್ನು ಕುತ್ತಿಗೆ ನೇರವಾಗಿರಲಿ. ಆಮೇಲೆ ಎರಡು ಕೈಗಳ ಸಹಾಯದಿಂದ ಬಲಕಾಲನ್ನು ಮೇಲೆತ್ತಿ ತಂದು ಎಡತೊಡೆಯ ಮೇಲೆ ಇಡಬೇಕು. ನಂತರ ಎಡಗಾಲನ್ನು ಮಡಚಿ ಬಲತೊಡೆಯ ಮೇಲೆ ಇರಿಸಬೇಕು. ಕೈಗಳನ್ನು ಆಯಾ ಮಂಡಿಗಳ ಮೇಲಿಟ್ಟು, ಹೆಬ್ಬೆಟ್ಟು ಮತ್ತು ತೋರು ಬೆರಳುಗಳ ತುದಿಗಳನ್ನು ತಗಲಿಸಿ ಚಿನ್ಮುದ್ರೆ ಭಂಗಿಯನ್ನು ಹಿಡಿಯಬೇಕು ಅಥವಾ ಕೈಗಳೆರಡನ್ನೂ ಹಿಮ್ಮಡಿಗಳೆರಡರ ಮಧ್ಯೆ ಇಡಬೇಕು.

ಅಂಗೈಗಳು ಮೇಲ್ಮೊಗವಾಗಿರಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಆರಂಭದಲ್ಲಿ ಸ್ವಲ್ಪ ಹೊತ್ತು, ಕ್ರಮೇಣ ಸಾಧ್ಯವಿದ್ದಷ್ಟು ಸಮಯದವರೆಗೆ ಮಾಡಬಹುದು. ಕಾಲುಗಳು ನೋವು ಅನಿಸಿದರೆ ಕೂಡಲೇ ವಿರಮಿಸಬೇಕು. ಅಭ್ಯಾಸ ಆದ ಅನಂತರ ಕಣ್ಣುಗಳನ್ನು ಮುಚ್ಚಿ ಗಮನವನ್ನು ಉಸಿರಾಟದಲ್ಲಿ ಅಥವಾ ಇಷ್ಟ ದೇವರಲ್ಲಿ ಇರಿಸಬೇಕು. ಇದರಿಂದಾಗಿ ಏಕಾಗ್ರತೆಯನ್ನು ಬಲುಬೇಗ ಸಾಧಿಸಬಹುದಾಗಿದೆ. ಪದ್ಮಾಸನದಲ್ಲಿ ಪರಿಣತಿ ಹೊಂದಿದ ನಂತರ ಧ್ಯಾನ ಮತ್ತು ಪ್ರಾಣಾಯಾಮವನ್ನು ಮಾಡಬಹುದು. ಈ ಸ್ಥಿತಿಯಲ್ಲಿ ದೃಷ್ಟಿಯನ್ನು ನಾಸಿಕಾಗ್ರ ಅಥವಾ ಭ್ರೂ ಮಧ್ಯದಲ್ಲಿ ಇರಿಸಬೇಕು.

ಪ್ರಯೋಜನಗಳು: ದೇಹದ ಶಕ್ತಿ ಕೇಂದ್ರಗಳನ್ನು ಜಾಗೃತಗೊಳಿಸಲು ಮತ್ತು ಮನಸ್ಸಿನಲ್ಲಿ ಶಾಂತತೆ ನೆಲೆಸಲು ಸಹಾಯಕವಾಗುವ ಸುಖಕರ ಭಂಗಿ ಪದ್ಮಾಸನ. ಒಮ್ಮೆ ಪದ್ಮಾಸನ ಅಭ್ಯಾಸ ಆದರೆ ಧ್ಯಾನ ಮತ್ತು ಪ್ರಾಣಾಯಾಮ ಮಾಡಲು ಈ ಆಸನವನ್ನು ಉಪಯೋಗಿಸಬಹುದು.

ನೆಲದಲ್ಲಿ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ಹೊಟ್ಟೆಯು ತೆಳ್ಳಗಾಗಿ ಶರೀರಕ್ಕೆ ಒಂದು ಬಗೆಯ ಸುಂದರತೆ ಕಂಡು ಬರುತ್ತದೆ
ಈ ಆಸನ ಅಭ್ಯಾಸದಿಂದ ಯಾವುದೇ ರೀತಿಯ ಕಾಲು ಸೆಳೆತ, ಮಂಡಿನೋವು ಬರುವುದಿಲ್ಲ.

ಕಾಲಿನ ನರ, ಮಂಡಿ ಇತ್ಯಾದಿ ಅಂಗಗಳು ಹೊಸ ಹುರುಪನ್ನು ಪಡೆದು ಚುರುಕಾಗುತ್ತವೆ. ಬುದ್ಧಿ ಚುರುಕಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ.
ಒತ್ತಡ ನಿವಾರಣೆಗೆ ಈ ಆಸನ ಸಹಕಾರಿ

ವಿಶೇಷ ಸೂಚನೆ: ತುಂಬಾ ಮಂಡಿನೋವು, ಸೊಂಟ ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ. ಪದ್ಮಾಸನ ಅಭ್ಯಾಸ ಮಾಡಲು ಕಷ್ಟವಾಗುವವರು ಆರಂಭದಲ್ಲಿ ಅರ್ಧ ಪದ್ಮಾಸನ ಮಾಡಬೇಕು. ಆರಂಭದಲ್ಲಿ ಕಾಲುಗಳನ್ನು ಮಡಚಿ, ಬಿಡಿಸುವ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು ಮತ್ತು ಬದ್ಧಕೋಣಾಸನವನ್ನು ಹೆಚ್ಚು ಅಭ್ಯಾಸ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.