ADVERTISEMENT

ಸ್ವಂತ ಮನೆಯ ಕನಸು ಬೇಗ ನನಸಾಗಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಸ್ವಂತ ಮನೆಯ ಕನಸು ಬೇಗ ನನಸಾಗಲಿ
ಸ್ವಂತ ಮನೆಯ ಕನಸು ಬೇಗ ನನಸಾಗಲಿ   

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಕನಕದಾಸರು ಬಹುಹಿಂದೆಯೇ ಸರಳ ಬದುಕಿನ ಸೂತ್ರವನ್ನು ಸಾರಿ ಹೇಳಿದರು. ಕನಕದಾಸರು ಮಾಡಿಕೊಟ್ಟ ಈ ಪಟ್ಟಿಗೆ ಸೇರಿಸಬಹುದಾದ ಮತ್ತೊಂದು ವಿಷಯ ಮನೆ. ಮನೆ ಎನ್ನುವುದು ಹಲವರ ಪಾಲಿಗೆ ಜೀವಮಾನದ ಕನಸು. ಈ ಕನಸು ಸಾಕಾರಗೊಳ್ಳಲು ಒದಗಿಬರುವ ಗೆಳೆಯನೇ ಗೃಹಸಾಲ.

ನಾನು ಅನೇಕ ಊರುಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದೇನೆ. ಕೆಲ ಗ್ರಾಹಕರು ‘ಸ್ವಾಮಿ, ಗೃಹಸಾಲ ಮಾಡೋಕೆ ಯಾವ ಸಮಯ ಸೂಕ್ತ’ ಎಂದು ಕೇಳುತ್ತಿದ್ದರು. ಅಂಥವರಿಗೆ ನಾನು ಕೊಡುತ್ತಿದ್ದ ಉತ್ತರ, ‘ಮನೆ ಕಟ್ಟಲು ಅಥವಾ ಕೊಳ್ಳಲು ಯಾವ ಸಮಯ ಸೂಕ್ತವೋ, ಗೃಹಸಾಲಕ್ಕೂ ಅದೇ ಸಮಯ ಸೂಕ್ತ’ ಎಂಬುದಾಗಿತ್ತು.

ನನ್ನ ಪ್ರಕಾರ ಇದು ಗೃಹಸಾಲ ಪಡೆದುಕೊಳ್ಳಲು ಸುಸಮಯ. ಬ್ಯಾಂಕುಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಟ್ಟಿರುವ ಸಾಲಗಳು ಅನುತ್ಪಾದಕ ಆಸ್ತಿಗಳು (ಎನ್‌ಪಿಎ– ನಾನ್ ಪರ್ಫಾಮಿಂಗ್ ಅಸೆಟ್) ಆಗುತ್ತಿವೆ. ಆದ್ದರಿಂದ ಹೆಚ್ಚಿನ ಬ್ಯಾಂಕುಗಳೂ ಗೃಹ ಸಾಲದಂತಹ ರೀಟೇಲ್ ಸಾಲಗಳಿಗೆ ಹೆಚ್ಚು ಒತ್ತು ಕೊಡುತ್ತಿವೆ. ಗೃಹ ಸಾಲಗಳು ಅನುತ್ಪಾದಕ ಆಸ್ತಿಯಾಗುವ ಸಂಭವ ಕಡಿಮೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗೃಹಸಾಲದ ಕ್ಷೇತ್ರದ ಅನುತ್ಪಾದಕ ಆಸ್ತಿ ಶೇ. 1ಕ್ಕಿಂತ ಕಡಿಮೆ ಇದೆ. ಈಗಿನ ಗೃಹಸಾಲದ ಸರಾಸರಿ ಬಡ್ಡಿದರ ಶೇ. 8.30 ಇದೆ. ಕೆಲಕಾಲ ಇದು ಸ್ಥಿರವಾಗಿ ನಿಲ್ಲಬಹುದು.

ADVERTISEMENT

ಈಚಿನ ದಿನಗಳಲ್ಲಿ ಬ್ಯಾಂಕುಗಳು ಕೊಡುವ ಹೆಚ್ಚಿನ ಜಾಹೀರಾತುಗಳು ಗೃಹಸಾಲದ ಬಗ್ಗೆಯೇ ಇರುತ್ತವೆ. ‘ನನಗೆ ಗೃಹಸಾಲದ ಅವಶ್ಯಕತೆ ಇದೆ’ ಎಂದು ನೀವು ಕೂಗು ಹಾಕಿದರೆ ಗೃಹಸಾಲ ಕೊಡುವ ಹತ್ತಾರು ಕಂಪೆನಿಗಳು ಹಾಗೂ ಬ್ಯಾಂಕುಗಳು ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತವೆ. ನೀವು ಮಾತ್ರ ಬಗೆಬಗೆ ಆಫರ್‌ಗಳಿಗೆ ಮಾರುಹೋಗದೆ ಜಾಣತನದಿಂದ ನೀವು ಮುಂದುವರಿಯಬೇಕು.

ಯಾವಾಗ ಸಾಲ ಮಾಡಬೇಕು: ನೀವು ಕೆಲಸಕ್ಕೆ ಸೇರಿದ ಹೊಸತರಲ್ಲಿ ಅಥವಾ ಸ್ವಂತ ದುಡಿಮೆ ಶುರುಮಾಡಿದ ಆರಂಭದಲ್ಲಿಯೇ ಮನೆಯನ್ನು ಕಟ್ಟುವ ಬಗ್ಗೆ ಚಿಂತಿಸುವುದು ಒಳ್ಳೆಯದು. ದುಡಿಮೆಯ ದಿನಗಳ ಆರಂಭದಲ್ಲೇ ಗೃಹಸಾಲ ಪಡೆದರೆ, ನಿಮಗೆ ಅತಿ ಹೆಚ್ಚು ಅಂದರೆ 30 ವರ್ಷಗಳ ಮರುಪಾವತಿಯ ಸಮಯ ದೊರೆಯುತ್ತದೆ.

ಸಣ್ಣ ವಯಸ್ಸಿನ ನೀವು ಅವಿವಾಹಿತರು ಅಥವಾ ನವವಿವಾಹಿತರು ಆಗಿರುತ್ತೀರಿ. ಮಕ್ಕಳ ಜವಾಬ್ದಾರಿ ಇರುವುದಿಲ್ಲ. ಅಪ್ಪ–ಅಮ್ಮನಿಗೂ ಇನ್ನೂ ಹೆಚ್ಚು ವಯಸ್ಸಾಗಿರುವುದಿಲ್ಲ. ಅವರ ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಕೆಲವು ಮನೆಗಳಲ್ಲಿ ಹೆತ್ತವರು ಇನ್ನೂ ನಿವೃತ್ತಿ ಆಗಿರುವುದಿಲ್ಲ. ಹೀಗಾಗಿ ಸಂಸಾರದ ಖರ್ಚು ನಿಮ್ಮ ಮೇಲೆ ಬೀಳುವುದು ಕಡಿಮೆ.

ಈ ಎಲ್ಲ ಕಾರಣಗಳಿಂದಾಗಿ ಸಣ್ಣ ವಯಸ್ಸಿನಲ್ಲಿ ನೀವು ಮನೆ ಸಾಲ ಮಾಡಿದರೆ ಅದನ್ನು ತೀರಿಸುವುದು ಸುಲಭವಾಗುತ್ತದೆ. ನಿಮ್ಮ ಆದಾಯದ ಶೇ. 70ರಷ್ಟು ಭಾಗವನ್ನು ಗೃಹಸಾಲಕ್ಕೆ ಮೀಸಲಿಡಬಹುದು. ಕೆಲವರ್ಷಗಳ ನಂತರ ಮನೆಯಲ್ಲಿ ಖರ್ಚು ಕೈಕಚ್ಚುವ ಹೊತ್ತಿಗೆ ನಿಮ್ಮ ಆದಾಯವೂ ಹೆಚ್ಚಾಗಿರುತ್ತದೆ. ಗೃಹಸಾಲದ ಕಂತುಗಳು ನಿಮ್ಮ ಆದಾಯದ ಶೇ. 20ರಷ್ಟಕ್ಕೆ ಇಳಿಯುತ್ತವೆ.

ಸಣ್ಣವಯಸ್ಸಿನಲ್ಲಿ, ಅಂದರೆ ನಿಮಗೆ 30 ವರ್ಷ ಆಗುವ ಮೊದಲು ಗೃಹಸಾಲ ಪಡೆದು ಮನೆ ಖರೀದಿಸುವುದು ಒಳ್ಳೆಯದು. ನಿಮಗೆ ಈಗಾಗಲೇ 30 ವರ್ಷ ದಾಟಿದ್ದರೆ ಚಿಂತೆಯಿಲ್ಲ. ಒಳ್ಳೆಯ ನಿರ್ಧಾರಕ್ಕೆ ವಯಸ್ಸಿನ ಹಂಗು ಎಂದಿಗೂ ಇರಬಾರದು. ತಡವಾದರೂ ಪರವಾಗಿಲ್ಲ, ಸ್ವಂತ ಮನೆಯ ಆಸೆ ಮತ್ತು ಸಾಲ ತೀರಿಸುವಷ್ಟು ದುಡಿಮೆ ಇದ್ದರೆ ಗೃಹಸಾಲ ಮಾಡಲು ಹಿಂಜರಿಯಬೇಡಿ.

ಎಷ್ಟು ಸಾಲ ಪಡೆಯಬೇಕು: ಬ್ಯಾಂಕುಗಳು ನಿಮ್ಮ ಮರುಪಾವತಿ ಸಮಾನ ಮಾಸಿಕ ಕಂತುಗಳನ್ನು (ಇಎಂಐ) ನಿಮ್ಮ ಆದಾಯದ ಮೇಲೆಯೇ ಲೆಕ್ಕ ಹಾಕುತ್ತವೆ. ಅದಕ್ಕೆ ಅನುಗುಣವಾಗಿ ನಿಮಗೆ ಎಷ್ಟು ಸಾಲ ಕೊಡಬಹುದು ಎಂಬುದನ್ನು ನಿರ್ಧರಿಸುತ್ತವೆ. ನಿಮ್ಮ ನಿವ್ವಳ ಸಾಲ ₹3 ಲಕ್ಷದ ಒಳಗೆ ಇದ್ದರೆ ನಿಮ್ಮ ಆದಾಯದ ಶೇ.50, ₹3ರಿಂದ 10 ಲಕ್ಷ ಇದ್ದರೆ ಆದಾಯದ ಶೇ60, ₹10 ಲಕ್ಷಕ್ಕೂ ಜಾಸ್ತಿ ಇದ್ದರೆ ಆದಾಯದ ಶೇ.70ರಷ್ಟು ಮೊತ್ತವನ್ನು ಸಾಲದ ಕಂತಿಗೆ ಪರಿಗಣಿಸುತ್ತವೆ.

ಉದಾಹರಣೆಗೆ ನಿಮ್ಮ ನಿವ್ವಳ ವಾರ್ಷಿಕ ಆದಾಯ ₹7 ಲಕ್ಷ ಇದೆ ಎಂದುಕೊಳ್ಳೋಣ. ಆಗ ನಿಮ್ಮ ಆದಾಯದ ಶೇ60 ರಷ್ಟನ್ನು ಸಾಲದ ಕಂತಿಗೆ ಪಡೆಯಬಹುದು. ತಿಂಗಳಿಗೆ ಗರಿಷ್ಠ ₹35,000 ಇಎಂಐ ಆಗುವಷ್ಟು ಸಾಲವನ್ನು ಬ್ಯಾಂಕುಗಳು ನಿಮಗೆ ಮಂಜೂರು ಮಾಡಬಹುದು. ಪ್ರಸ್ತುತ ಗೃಹಸಾಲದ ಬಡ್ಡಿದರ ವಿವಿಧ ಬ್ಯಾಂಕುಗಳಲ್ಲಿ ಸರಾಸರಿ ಶೇ8.30 ಇದೆ. ಈ ಬಡ್ಡಿದರದಲ್ಲಿ 30 ವರ್ಷದ ಅವಧಿಗೆ ಪಡೆದ ಸಾಲಕ್ಕೆ ₹1 ಲಕ್ಷಕ್ಕೆ ₹755ರ ಇಎಂಐ ಕಟ್ಟಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ನಿಮಗೆ ₹46 ಲಕ್ಷ ಸಾಲ ಸಿಗಬಹುದು.

ಸಾಲಕ್ಕೆ ಸತಾಯಿಸುತ್ತಾರೆ: ಇದು ತಪ್ಪು ಕಲ್ಪನೆ. ಬ್ಯಾಂಕಿನ ಸಿಬ್ಬಂದಿಗೂ ನಿಗದಿತ ಗುರಿಗಳು ಇರುತ್ತವೆ. ಅವರು ಕೇಳುವ ದಾಖಲೆಗಳನ್ನು ನೀವು ಸಕಾಲದಲ್ಲಿ ಒದಗಿಸಿದರೆ ಸಾಲದ ಪ್ರಕ್ರಿಯೆಗಳು ಬೇಗ ನಡೆಯುತ್ತವೆ. ಕೆಲವು ಬಾರಿ ನಿವೇಶನದ ಮೂಲ ದಾಖಲೆಗಳೇ ಸರಿ ಇರುವುದಿಲ್ಲ. ಶಾಖಾ ವ್ಯವಸ್ಥಾಪಕರು ಇಂಥ ದಾಖಲೆಗಳನ್ನು ಕೇಳಿದಾಗ ಗ್ರಾಹಕರು ಸರ್ಕಾರಿ ಕಚೇರಿಗಳು, ಮೂಲ ಮಾರಾಟಗಾರರಿಂದ ತಂದು ಒದಗಿಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ವ್ಯವಹಾರ ನೋಡಿ. ಶಾಖಾ ವ್ಯವಸ್ಥಾಪಕರಿಗೆ ಅವರದೇ ಆದ ಜವಾಬ್ದಾರಿಗಳು ಇರುತ್ತವೆ.

ದಾಖಲಾತಿಗಳು ತೃಪ್ತಿಕರ ಎನಿಸಿದರೆ ಬ್ಯಾಂಕ್ ನಿಮಗೆ ಸಾಲ ಮಂಜೂರು ಮಾಡುತ್ತದೆ. ನಂತರ ಬ್ಯಾಂಕಿಗೆ ಹೋಗಿ ಬ್ಯಾಂಕಿನ ದಾಖಲಾತಿಗಳ ಮೇಲೆ ಹಸ್ತಾಕ್ಷರ ಮಾಡಿ, ಮನೆ ಅಥವಾ ಫ್ಲಾಟನ್ನು ಅಡಮಾನ ಮಾಡಿದ ನಂತರ ಸಾಲವನ್ನು ಬಿಡುಗಡೆ ಮಾಡಲಾಗುತ್ತದೆ.

**

ಬಾಡಿಗೆ ಮನೆಯೋ, ಸ್ವಂತದ ಮನೆಯೋ...

ಇದು ಒಂದು ದೊಡ್ಡ ಯಕ್ಷಪ್ರಶ್ನೆ. ಬೆಂಗಳೂರಿನಲ್ಲಿ ನಿಮ್ಮ ಮನೆ ಬಾಡಿಗೆ ₹20,000 ಇದೆ ಅಂದುಕೊಳ್ಳೋಣ. ಮೂರು ವರ್ಷಕ್ಕೊಮ್ಮೆ ಶೇ10 ಬಾಡಿಗೆ ಹೆಚ್ಚಿಸುತ್ತಾರೆ. ಅಂದರೆ 30 ವರ್ಷಕ್ಕೆ ನೀವು ಕಟ್ಟುವ ಬಾಡಿಗೆ ಸುಮಾರು ₹1.15 ಕೋಟಿ ಆಗುತ್ತದೆ. ಬಾಡಿಗೆಗೆ ಕಟ್ಟುವ ₹20 ಸಾವಿರಕ್ಕೆ ಇನ್ನೂ 20 ಸಾವಿರ ನೀವು ಸೇರಿಸಬಲ್ಲಿರಾದರೆ ನಿಮಗೆ ₹50ಲಕ್ಷ ಗೃಹಸಾಲ ಪಡೆದು ಸ್ವಂತ ಮನೆಯನ್ನೇ ಕೊಳ್ಳಬಹುದು.

ಆದಾಯ ತೆರಿಗೆಯ ವಿನಾಯತಿಯಾಗಿ ಅಸಲಿನ ಮೇಲೆ ₹1.50 ಲಕ್ಷ ಹಾಗೂ ಬಡ್ಡಿಯ ಮೇಲೆ ₹2 ಲಕ್ಷದವರೆಗೆ ಸಿಗುತ್ತದೆ.  30 ವರ್ಷಗಳ ಅವಧಿಗೆ ಒಟ್ಟಾರೆ ನೀವು ₹1.03 ಕೋಟಿ ಕಟ್ಟಿರುತ್ತೀರಿ. 30 ವರ್ಷಗಳ ಅವಧಿಗೆ ನಿಮಗೆ ಆದಾಯ ತೆರಿಗೆಯ ವಿನಾಯತಿ ಸುಮಾರು ₹12 ಲಕ್ಷದವರೆಗೆ ಸಿಗುತ್ತದೆ. ಜೊತೆಗೆ ಸ್ವಂತಿಕೆಯ ನೆಮ್ಮದಿಯೂ ಇರುತ್ತದೆ.

ನಾನು ಯಾವುದೇ ಗ್ರಾಹಕರ ಮುಂದೆ ಈ ಲೆಕ್ಕಾಚಾರ ಇರಿಸಿದರೂ ಬಾಡಿಗೆ ಮನೆಗಿಂತ ಸ್ವಂತ ಮನೆಯೇ ಒಳಿತು ಎಂಬ ಅಭಿಪ್ರಾಯ ತಿಳಿಸುತ್ತಾರೆ.

(ಲೇಖಕರು ಕಾರ್ಪೊರೇಷನ್ ಬ್ಯಾಂಕ್ ಸಿಬ್ಬಂದಿ ತರಬೇತಿ ಮಹಾವಿದ್ಯಾಲಯದ ಫ್ಯಾಕಲ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.