ADVERTISEMENT

ಪಯಣದ ಪಾಠ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
ಬಿಎಂಟಿಸಿ
ಬಿಎಂಟಿಸಿ   

ನನಗೂ ಈಬಿಎಂಟಿಸಿ ಬುಸ್ಸಿಗೂ ಹತ್ತು ವರ್ಷಕ್ಕೂ ಹೆಚ್ಚಿನ ನಂಟು. ಈ ಬಸ್ಸಿನಲ್ಲಿ ಕುಳಿತು ಆಫೀಸಿಗೆ ಹೋಗೋದು ಆಂದ್ರೆ ಏನೋ ಮಜಾ...
ಸ್ಕೂಲ್ ಮಕ್ಕಳು, ಕಾಲೇಜು ಮೆಟ್ಟಿಲು ಏರಿರುವ ಯುವಕ ಯುವತಿಯರು, ಮಧ್ಯ ವಯಸ್ಕರು, ಇಳಿ ವಯಸ್ಸಿನವರು, ಪುಟ್ಟ ಕಂದಮ್ಮಗಳು.. ವಿವಿಧ ಜೀವನಶೈಲಿಯ ಪರಿಚಯ ಬಸ್ಸಿನಲ್ಲಿ ಆಗುತ್ತದೆ. ಅವರ ಹಿಂದೆ ಅವರದೇ ಆದ ಕಥೆಗಳುಂಟು. ಬದುಕು ಸಾಗಿಸಲು ದುಡಿಯುವ ಕಾರ್ಮಿಕರು ಕೆಲವರಾದರೆ, ಸಂಭ್ರಮ ಪಡಲೆಂದು ಒಂದೆಡೆಯಿಂದ, ಇನ್ನೊಂದೆಡೆಗೆ ತೆರಳುವರು ಇನ್ನೂ ಕೆಲವರು. ಪ್ರಯಾಣದ ಉದ್ದೇಶ ಬೇರೆ ಬೇರೆ.

ನಾನು ಕಂಡ ಕೆಲ ದೃಶ್ಯಗಳು, ಎಂದೂ ಮರೆಯಲಾಗದ ಪಾಠವನ್ನು ಕಲಿಸಿವೆ. ಬಸ್ಸಿನಲ್ಲಿ ಕುಳಿತೊಡನೆ ಟಿಕೆಟ್‌ಗೆಂದು ದುಡ್ಡು ಕೊಟ್ಟು ಕಂಡಕ್ಟರ್ ಕಡೆ ತಿರುಗಿದೆ. ಆ ಬಸ್ಸಿನ ಕಂಡಕ್ಟರ್6–7 ತಿಂಗಳುಗಳ ಗರ್ಭಿಣಿ! ಗರ್ಭ ಧರಿಸಿದ ವಿಚಾರ ತಿಳಿದೊಡನೆ ಹಾಸಿಗೆ ಬಿಟ್ಟು ಇಳಿಯಲು ಹೆದರುವ ಮಹಿಳೆಯರನ್ನು ನೋಡಿರುವೆ. ಬಸ್ ಪ್ರಯಾಣ ಆಗಲ್ಲ ಕಣ್ರೀ ಎಂದು ದಿನನಿತ್ಯ ಟ್ಯಾಕ್ಸಿ ಅಲ್ಲಿ ಓಡಾಡುವವರಿದ್ದಾರೆ. ಬಸ್ಸಿನಲ್ಲಿ ಟಿಕೆಟ್ ಕೊಡಲು ಹಿಂದೆ ಮುಂದೆ ಓಡಾಡುವ ಈ ಮಹಿಳೆಯನ್ನು ಕಂಡು ಹೆಮ್ಮೆ ಎನಿಸಿತು.

* * *

ADVERTISEMENT

ಮಕ್ಕಳನ್ನು ಎತ್ತಿಕೊಂಡು ಬರುವ ತಾಯಂದಿರು, ಮಕ್ಕಳನ್ನು ಅತಿ ಜೋಪಾನ ಮಾಡುವದುಂಟು. ಬೆಚ್ಚನೆ ಉಡುಪುಗಳನ್ನು ಹೊತ್ತು ತರುವವರುಂಟು. ಒಂದು ಸಂಜೆ ನಾನು ಕಂಡದ್ದು ಇದೆಲ್ಲದಕ್ಕೂ ವಿರುದ್ಧ. ಪಕ್ಕದ ಸೀಟಿನಲ್ಲಿ ಒಬ್ಬ ತಾಯಿ ತನ್ನ ಎರಡು ಪುಟ್ಟ ಮಕ್ಕಳನ್ನು ಕೂಡಿಸಿಕೊಂಡು ಕುಳಿತಿದ್ದಳು. ಒಂದು ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಿದ್ದಳು. ಬೆಚ್ಚನೆ ಬಟ್ಟೆ ಹಾಕಿರದಿದ್ದರೂ ತಾಯಿಯ ಮಡಿಲಲ್ಲಿ ಮಗು ಬೆಚ್ಚಗೆ ಮಲಗಿತ್ತು. ಇನ್ನೊಂದು ಹೆಣ್ಣು ಮಗು ಸ್ವಲ್ಪ ದೊಡ್ದವಳು. ತಾಯಿಗೆ ಆ ಮಗುವಿನ ಕಡೆ ಗಮನವೇ ಇಲ್ಲ. ಚಳಿಯಾದರೂ ಸಹಿಸಿ ಸುಮ್ಮನೇ ಕಿಟಕಿಯಿಂದ ಹೊರ ನೋಡುತ್ತಿತ್ತು. ಸ್ವಲ್ಪ ಚಳಿ ಜಾಸ್ತಿಯಾಯ್ತೆನೊ ಇನ್ನೂ ಮುದುರಿಕೊಂಡಳೆ ಹೊರತು ತಕರಾರು ತೆಗೆಯಲಿಲ್ಲ. ಎಲ್ಲಾ ಸೌಲಭ್ಯಗಳಿದ್ದೂ ತೃಪ್ತಿ ಪಡದ ಮಕ್ಕಳನ್ನು ಸದಾ ನೋಡುವ ನನಗೆ ಇಂಥ ಮಗುವನ್ನು ಕಂಡು ಕಣ್ಣಾಲೆ ತೇವವಾಯ್ತು.

ಶ್ರುತಿ ಆಚಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.