ADVERTISEMENT

ಚಿಲ್ಲರೆಯ ಸಮಸ್ಯೆ ಆದರೆ.. ಸಮಸ್ಯೆ ಚಿಲ್ಲರೆಯಲ್ಲ!

ಸುಕೃತ ಎಸ್.
Published 1 ಏಪ್ರಿಲ್ 2019, 19:46 IST
Last Updated 1 ಏಪ್ರಿಲ್ 2019, 19:46 IST
   

ಚಿಲ್ಲರೆ ಕೊಟ್ಟು ಸಹಕರಿಸಿ.. ಎಲ್ಲೆಡೆ ಇದೇ ಗೋಳು. ಕೆಲವು ಕಡೆಗಳಲ್ಲಂತೂ ಹಾಗೆ ಬರೆದ ಬೋರ್ಡ್‌ ಕೂಡನೇತು ಹಾಕಿರುತ್ತಾರೆ. ಚಿಲ್ಲರೆ ಇಲ್ಲದಿದ್ದರೆ ವ್ಯವಹಾರವೇ ಇಲ್ಲ! ಎಂತಹ ದುರಂತ ನೋಡಿ; ಕೈಯಲ್ಲಿ ದುಡ್ಡಿದೆ. ಆದರೆ, ಉಪಯೋಗ ಇಲ್ಲ! ಸಮುದ್ರದ ಎದುರುನಿಂತು ಉಪ್ಪಿಗೆ ಪರದಾಡಿದಂತೆ. ಇದು ಚಿಲ್ಲರೆ ಸಮಸ್ಯೆ. ಆದರೆ ಸಮಸ್ಯೆ ಚಿಲ್ಲರೆ ಅಲ್ಲ!

‘ನನ್ನದೊಂದು ಸ್ವ ಅನುಭವ: ಇತ್ತೀಚೆಗೆ ಯಶವಂತಪುರ ರೈಲು ನಿಲ್ದಾಣಕ್ಕೆ ನನ್ನ ಅಕ್ಕನನ್ನು ಬಿಡಲು ಹೋಗಿದ್ದೆ. ಲಗೇಜ್‌ ಭಾರವಾಗಿತ್ತು. ಪ್ಲ್ಯಾಟ್‌ಫಾರ್ಮ್‌ವರೆಗೂ ಹೋಗಿ, ರೈಲು ಹತ್ತಿಸೋದು ನನ್ನ ಯೋಚನೆ ಆಗಿತ್ತು. ರೈಲು ಇದ್ದದ್ದು ಸಂಜೆ 5ಕ್ಕೆ. ನಾವು ನಿಲ್ದಾಣ ತಲುಪಿದ್ದು4ಕ್ಕೆ. ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ತೆಗೆದುಕೊಳ್ಳಲು ಕೌಂಟರ್‌ಗೆ ಹೋದೆ.ಹಲವರು ಸರತಿ ಸಾಲಿನಲ್ಲಿ ನಿಂತಿದ್ದರು. ನಾನೂ ನಿಂತೆ. ನೋಡ ನೋಡುತ್ತಲೇ ನನ್ನ ಹಿಂದೆ ಮುಂದೆ ಜನ ಸೇರ ತೊಡಗಿದರು. ಅದು ಕೇವಲ ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ಕೌಂಟರ್‌ ಆಗಿರಲಿಲ್ಲ. ರೈಲು ಪ್ರಯಾಣದ ಟಿಕೆಟ್‌ ಕೂಡ ಕೊಡುತ್ತಿದ್ದರು. ಅಷ್ಟರಲ್ಲಾಗಲೇ 4.30 ಆಗಿತ್ತು. ನನ್ನ ಸರತಿ ಬಂತು. ನನ್ನ ಕೈಯಲ್ಲಿದ್ದ ₹100ರ ನೋಟು ಕೊಟ್ಟೆ. ಚಿಲ್ಲರೆ ಇಲ್ಲ. ₹10 ಕೊಡಿ ಎಂದರು. ನನ್ನ ಬಳಿ ಇಲ್ಲ ಎಂದೆ. ‘ಚಿಲ್ಲರೆ ತೊಗೊಂಡು ಬನ್ನಿ’ ಎಂದರು ಅಸಹನೆಯಿಂದ. ನಾನು ಸರತಿ ಬಿಟ್ಟು ಚಿಲ್ಲರೆ ಹುಡುಕ ಹೊರಟೆ. ಎಲ್ಲರಿಗೂ ಚಿಲ್ಲರೆ ಬೇಕು. ಯಾರು ಚಿಲ್ಲರೆ ಕೊಡುತ್ತಾರೆ? ಅಂಗಡಿ, ಜನರೆಡೆ ಅಲೆದಾಡಿ ಅಂತೂ ಚಿಲ್ಲರೆ ಪಡೆದುಕೊಂಡೆ. ಅಷ್ಟರಲ್ಲಿ 4.45 ಆಗಿತ್ತು. ಓಡಿ ಹೋಗಿ ನೋಡಿದರೆ, ಸರತಿ ಗೂಡ್ಸ್‌ ಗಾಡಿಯಷ್ಟೇ ಉದ್ದ ಬೆಳೆದಿತ್ತು. ಸಾಲಲ್ಲಿ ನಿಂತೆ. ಆಗಲೇ ಚಿಲ್ಲರೆಯ ಬ್ರಹ್ಮಾಂಡ ದರ್ಶನ ಆದದ್ದು.

‘ಚಿಲ್ಲರೆ ಇಲ್ಲ’ ಎಂದು ಹೇಳಿದ್ದರಿಂದ ಒಬ್ಬರು ಸಿಟ್ಟಿನಿಂದಸಾಲಿನಿಂದ ಹೊರಬಂದು ತಮ್ಮ ಕೋಪ ತೋಡಿಕೊಂಡರು. ‘ನನಗೆ 5.30ಕ್ಕೆ ರೈಲಿದೆ. ಚಿಲ್ಲರೆ ಕೇಳುತ್ತಾರೆ ಅಂತಲೇ ನಾನು ನೂರು ರೂಪಾಯಿ ಇಟ್ಟುಕೊಂಡು ಬಂದಿದ್ದೆ. ನೂರು ರೂಪಾಯಿಗೂ ಚಿಲ್ಲರೆ ಇಲ್ಲ ಅಂತಾರೆ. ಎಟಿಎಂಗೆ ಹೋದರೆ ₹500 ತಪ್ಪಿದರೆ ₹2000 ನೋಟುಗಳು ಬರುತ್ತವೆ. ಎಲ್ಲಿಂದ ಚಿಲ್ಲರೆ ತರೋದು ಇವರಿಗೆ’ ಎಂದು ಗೋಳು ಹೇಳಿಕೊಂಡು ಚಿಲ್ಲರೆ ಹುಡುಕ ಹೊರಟರು.

ADVERTISEMENT

ಸಾಲಿನಲ್ಲಿ ನಿಂತಿದ್ದ ಮತ್ತೊಬ್ಬರು, ‘ಇದು ಕೇವಲ ಇಲ್ಲಿಯ ಸಮಸ್ಯೆ ಅಲ್ಲ. ಮೆಜೆಸ್ಟಿಕ್‌ ರೈಲು ನಿಲ್ದಾಣ, ಬಿಎಂಟಿಸಿ ಬಸ್‌ನಲ್ಲೂ ಇದೇ ಸಮಸ್ಯೆ. ಚಿಲ್ಲರೆ ಕೇಳುತ್ತಾರೆ. ಎಲ್ಲಿಂದ ಪ್ರತಿ ಬಾರಿ ಚಿಲ್ಲರೆ ತರೋದು? ಸರ್ಕಾರಿ ವ್ಯವಸ್ಥೆಯಲ್ಲಿಯೇ ಚಿಲ್ಲರೆ ಇಲ್ಲ ಅಂತಾದರೆ ಹೇಗೆ..’ ಎಂದು ಬೇಸರ ವ್ಯಕ್ತಪಡಿಸಿದರು.

*
ಚಿಲ್ಲರೆ ಇದ್ದರೆ ಖಂಡಿತ ಯಾರಾದರೂ ಕೊಡುತ್ತಾರೆ. ಚಿಲ್ಲರೆ ಇಲ್ಲವೆಂದಾಗ ನಮ್ಮ ಅವಕಾಶ ತಪ್ಪಿಸೋದು ಎಂದರೆ ತಪ್ಪಾಗುತ್ತದೆ. ಅದರಲ್ಲೂ ರೈಲು ನಿಲ್ದಾಣಗಳ ಕೌಂಟರ್‌ ಬಳಿ ಕಾದು ಸುಸ್ತಾಗಿ ಚಿಲ್ಲರೆ ಇಲ್ಲ ಎಂದು ಸರತಿಯಿಂದ ಹೊರ ನಡೆದಾಗ ಆಗುವ ತೊಂದರೆಗೆ ಹೊಣೆ ಯಾರು? ಸಾಲಿನಲ್ಲಿ ಇದ್ದ ಹಲವರ ಪ್ರಶ್ನೆ ಇದಾಗಿತ್ತು.

ಸಾರ್ವಜನಿಕರು ಚಿಲ್ಲರೆ ಕೊಟ್ಟು ಸಹಕರಿಸಬೇಕು. ಆಗ ಮಾತ್ರವೇ ನಾವು ಉತ್ತಮ ಸೇವೆ ನೀಡಲು ಸಾಧ್ಯ. ಹೆಚ್ಚಿನ ಹಣವನ್ನು ಕೌಂಟರ್‌ನಲ್ಲಿ ಇಟ್ಟುಕೊಳ್ಳಲು ನಮಗೆ ಕಾನೂನಿನಡಿ ಅವಕಾಶ ಇಲ್ಲ. ಆದ್ದರಿಂದ ಚಿಲ್ಲರೆ ನೀಡುವುದು ಕಷ್ಟ. ಈ ಸಂಬಂಧ ನಾವು ಎಲ್ಲಾ ಕಡೆ ಬೋರ್ಡ್‌ ಅನ್ನು ಸಹ ಹಾಕಿಸಿದ್ದೇವೆ.
-ಗುರುರಾಜ್‌, ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌, ಯಶವಂತಪುರ ರೈಲು ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.